ಕಳ್ಳನೊಬ್ಬ ಕಂಡ ಕೊಲೆಯ ಕತೆ: ಅಭಯಾ ನನ್ನ ಕೂಸು ಇದ್ದಂಗೆ. ಅವಳಿಗೆ ನ್ಯಾಯ ಸಿಕ್ತು. ಇವತ್ತು ಖುಷಿಯಿಂದ ಕುಡಿತೀನಿ…

ಸಿಸ್ಟರ್ ಅಭಯಾ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಶಿಕ್ಷೆ ನಿಗದಿಪಡಿಸಲು ಅನೇಕ ಅಂಶಗಳು ಕಾರಣವಾಗಿದ್ದರೂ ಸಣ್ಣ ಕಳ್ಳನೊಬ್ಬ ನುಡಿದ ಸಾಕ್ಷ್ಯ ದೊಡ್ಡ ಪರಿಣಾಮ ಬೀರಿತು.
ಕಳ್ಳನೊಬ್ಬ ಕಂಡ ಕೊಲೆಯ ಕತೆ: ಅಭಯಾ ನನ್ನ ಕೂಸು ಇದ್ದಂಗೆ. ಅವಳಿಗೆ ನ್ಯಾಯ ಸಿಕ್ತು. ಇವತ್ತು ಖುಷಿಯಿಂದ ಕುಡಿತೀನಿ…
Raju

1992ರ ಮಾರ್ಚ್ 27 ರಂದು ಕೇರಳದ ಕೊಟ್ಟಾಯಂ ಜಿಲ್ಲೆಯ ಕಾನ್ವೆಂಟ್‌ನಲ್ಲಿ (ಸನ್ಯಾಸಿನಿಯರು ಉಳಿದುಕೊಳ್ಳುವ ಧಾರ್ಮಿಕ ನಿವಾಸ) ಸಿಸ್ಟರ್ ಅಭಯಾ ಕೊಲೆಯಾಗಿದ್ದರು. ಈ ಪ್ರಕರಣದ ಆರೋಪಿಗಳನ್ನು ಅಪರಾಧಿ ಎಂದು ಪರಿಗಣಿಸಲು ಬರೋಬ್ಬರಿ ಇಪ್ಪತ್ತೆಂಟು ವರ್ಷಗಳು ಬೇಕಾದವು. ಈ ಅವಧಿಯಲ್ಲಿ ನಾಲ್ಕು ಬಾರಿ ಪ್ರಕರಣವನ್ನು ಮುಚ್ಚಿಹಾಕಿದ ವರದಿಗಳು ಬಂದರೆ, ಐದು ಮರುತನಿಖೆಗಳು ನಡೆದವು.

ಪಾದ್ರಿ ಥಾಮಸ್ ಕೊಟ್ಟೂರ್ ಮತ್ತು ಸನ್ಯಾಸಿನಿ ಸಿಸ್ಟರ್‌ ಸೆಫಿ ಎಂಬ ಇಬ್ಬರು ಆರೋಪಿಗಳಿಗೆ ಶಿಕ್ಷೆಯನ್ನು ನಿಗದಿಪಡಿಸಲು ಅನೇಕ ಅಂಶಗಳು ಕಾರಣವಾಗಿದ್ದರೂ ಕಟ್ಟಕಡೆಗೆ ಸಣ್ಣ ಕಳ್ಳನೊಬ್ಬ ನುಡಿದ ಸಾಕ್ಷ್ಯ ದೊಡ್ಡ ಪರಿಣಾಮ ಬೀರಿತು. ಆತ ನುಡಿದ ಸಾಕ್ಷ್ಯ, ಪ್ರಕರಣದ ಪ್ರಮುಖ ಕೀಲಿಯಾಯಿತು.

ಪ್ರಾಸಿಕ್ಯೂಷನ್‌ ಸಾಕ್ಷ್ಯ ಸಂಖ್ಯೆ 3, ರಾಜು, ಅಡಕ್ಕಾ (ಅಡಿಕೆ) ರಾಜು ಎಂದು ಕೂಡ ಕರೆಯಲಾಗುವ ಈತ ವೃತ್ತಿಯಿಂದ ಕಳ್ಳ. ಪ್ರಕರಣದ ನಿರ್ಣಾಯಕ ಪ್ರತ್ಯಕ್ಷದರ್ಶಿ. ಅಭಯಾ ಕೊಲೆ ನಡೆದ ರಾತ್ರಿ ಕಾನ್ವೆಂಟ್‌ನಲ್ಲಿ ಆರೋಪಿ ನಂಬರ್‌ 1, ಪಾದ್ರಿ ಥಾಮಸ್‌ ಕೊಟ್ಟೂರ್‌ ಇದ್ದರು ಎಂದು ಇವರು ನುಡಿದ ಸಾಕ್ಷ್ಯ ಪ್ರಾಸಿಕ್ಯೂಷನ್‌ ಪರವಾಗಿ ಪ್ರಕರಣವನ್ನು ಗೆಲ್ಲಿಸಿಕೊಟ್ಟಿದೆ.

ವಿಶೇಷ ಸೆಷನ್ಸ್‌ ನ್ಯಾಯಾಧೀಶರು ತೀರ್ಪಿನಲ್ಲಿ ಕಳ್ಳನು ಪಾತ್ರವನ್ನು ಉಲ್ಲೇಖಿಸಿದ್ದಾರೆ. “ಸಂದರ್ಭಗಳ ಕಾರಣಕ್ಕಾಗಿ ವೃತ್ತಿಯಿಂದ ಕಳ್ಳನಾದ ವ್ಯಕ್ತಿಯೊಬ್ಬ ಸತ್ಯದ ಮಾತುಗಳನ್ನಾಡಿದ್ದಾನೆ” ಎಂದು ಅವರು ಹೇಳಿದ್ದಾರೆ.

Also Read
ಅಭಯಾ ಹತ್ಯೆ: ಪಾದ್ರಿ ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿಗೆ ಜೀವಾವಧಿ ಶಿಕ್ಷೆ

ಆತನೇ ನುಡಿದ ಸಾಕ್ಷ್ಯದ ಪ್ರಕಾರ, ಸಿಸ್ಟರ್‌ ಅಭಯಾ ಸಾವನ್ನಪ್ಪಿದ ಸೇಂಟ್ ಪಿಯಸ್ ಎಕ್ಸ್ ಕಾನ್ವೆಂಟ್ ಹಾಸ್ಟೆಲ್‌ನ ಅಂಗಳ ಪ್ರವೇಶಿಸಿ ಕಟ್ಟಡದ ಛಾವಣಿ ಏರಿದ್ದ. ಸಿಡಿಲಿನ ಪ್ರತಿಬಂಧಕದ ಮೇಲಿರಿಸಲಾಗಿದ್ದ ತಾಮ್ರದ ಫಲಕಗಳನ್ನು ಕದಿಯುವುದಕ್ಕಾಗಿ ಆತ ಎರಡು ಬಾರಿ ಕಳ್ಳತನಕ್ಕೆ ಕೈ ಹಾಕಿದ್ದ. ಈ ಬಾರಿ ಅದರಲ್ಲಿ ಯಶಸ್ವಿಯೂ ಆಗಿದ್ದ.

ಕಳ್ಳನ ಕೈಚಳಕ ಹೀಗಿತ್ತು… ಕಾನ್ವೆಂಟ್‌ ಹಿಂಭಾಗಕ್ಕೆ ಆತ ಬರುತ್ತಾನೆ. ಬಂದವನೇ ಅದರ ಕಾಂಪೌಂಡಿನ ಹಿಂಬದಿಯಲ್ಲಿದ್ದ ಕೋಕೊ ಮರ ಏರುತ್ತಾನೆ. ಅಲ್ಲಿಂದ ಮೆಲ್ಲಗೆ ಕಾಂಪೌಂಡ್‌ನತ್ತ ಇಳಿದು ಅಂಗಳ ಹೊಕ್ಕುಬಿಡುತ್ತಾನೆ. ನಂತರ ಮೆಟ್ಟಿಲುಗಳನ್ನೇರಿ ಕಟ್ಟಡದ ಛಾವಣಿ ತಲುಪಿದ. ಸಿಡಿಲಿನ ಪ್ರತಿಬಂಧಕದಿಂದ ತಾಮ್ರದ ಫಲಕವನ್ನು ಮುರಿದು ಅದನ್ನು ಮಡಿಚಿಟ್ಟ. ನಂತರ ಆರು ಕೆಜಿಯಷ್ಟು ತೂಕದ ತಾಮ್ರದ ಫಲಕವನ್ನು ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದ. ಬಳಿಕ ಕದ್ದದ್ದನ್ನು ಅಲ್ಲಿಂದ 1 – 1.5 ಕಿ.ಮೀ ದೂರದಲ್ಲಿರುವ ಚರಂಡಿಯಲ್ಲಿ ಬಚ್ಚಿಟ್ಟು ಸರ್ಕಾರಿ ಆಸ್ಪತ್ರೆಯ ಅಂಗಳದಲ್ಲಿ ಮಲಗಿಬಿಡುವುದು ಅವನ ಎಣಿಕೆಯಾಗಿತ್ತು. ಬೆಳಿಗ್ಗೆ 6ರಿಂದ 7 ಗಂಟೆ ಹೊತ್ತಿಗೆ ಕದ್ದ ಮಾಲನ್ನು ಹತ್ತಿರದ ಅಂಗಡಿಗೆ ಮಾರಿ ಬಿಡಬೇಕೆಂದು ನಿರ್ಧರಿಸಿದ್ದ.

ಕಳ್ಳನ ಮೂರನೇ ಪ್ರಯತ್ನದ ಆ ವಿಧಿಲಿಖಿತ ರಾತ್ರಿ ಪ್ರಕರಣದ ಹಣೆಬರಹವನ್ನು ಬದಲಿಸಿತ್ತು. ಅಂದು ತಾಮ್ರದ ಫಲಕ ಕದಿಯಲು ಕಾನ್ವೆಂಟಿಗೆ ಹೋದಾಗ ಟಾರ್ಚ್‌ ಹಿಡಿದ ಇಬ್ಬರು ಮೆಟ್ಟಿಲುಗಳ ಬಳಿ ಬರುತ್ತಿರುವುದು ಕಂಡು ಬಂತು. ಅವರಲ್ಲಿ ಒಬ್ಬರು ಫಾದರ್‌ ಥಾಮಸ್‌ ಕೊಟ್ಟೂರ್‌ ಎನ್ನುತ್ತಾನೆ ರಾಜು.

‘ക്കോട്ടൂരച്ചമെന എനിറിയോം’ (ನನಗೆ ಫಾದರ್‌ ಕೊಟ್ಟೂರ್‌ ಗೊತ್ತು) ಎಂದು ತನ್ನ ವಿಚಾರಣೆ ವೇಳೆ ಆತ ಹೇಳಿದ್ದ. ನಂತರ ಆತ ತಾಮ್ರದ ಫಲಕಗಳನ್ನು ಕದ್ದು ಅದನ್ನು ಮಾರಲು ಅಂಗಡಿಯತ್ತ ತೆರಳಿದ.

ಖುದ್ದು ತೀರ್ಪಿನಲ್ಲಿ ಉಲ್ಲೇಖಿಸಿರುವಂತೆ “ರಾಜು ಮತ್ತು ಆತನ ಸಾಕ್ಷ್ಯ ಸರಿಯಿಲ್ಲ ಎಂದು ನಿರೂಪಿಸಲು ಆರೋಪಿಗಳ ಪರ ವಕೀಲರು ಇನ್ನಿಲ್ಲದಂತೆ ವಾದಿಸಿದರು. ಆತ ಪ್ರಾಮಾಣಿಕನಲ್ಲ, ವೃತಿಯಿಂದ ಕಳ್ಳನಾಗಿರುವುದರಿಂದ ನಂಬಲರ್ಹ ಸಾಕ್ಷಿಯಲ್ಲ. ಆತ ಹೇಳಿದ್ದನ್ನು ನಂಬಲಾಗದು. ಅವನದು ಕಳಂಕಿತ ಕಾರ್ಯ" ಎಂದು ಡಿಫೆನ್ಸ್‌ ವಕೀಲ ಬಿ ರಾಮನ್‌ ಪಿಳ್ಳೈ ಹೇಳಿದ್ದರು.

ಆದರೆ ತಾನು ಕದ್ದಿದ್ದ ವಸ್ತುಗಳನ್ನು ಮಾರುತ್ತಿದ್ದ ಅಂಗಡಿ ಮಾಲೀಕ ಸಾಕ್ಷ್ಯ ನಂ 8; ಶಮೀರ್‌ ಹೇಳಿದ ಮಾತುಗಳು ರಾಜು ಸಾಕ್ಷ್ಯಕ್ಕೆ ಬಲ ತಂದುಕೊಟ್ಟವು. ಆ ಮೂಲಕ ಡಿಫೆನ್ಸ್‌ ವಕೀಲರ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿತು.

“ಸಾಕ್ಷ್ಯ ನಂಬರ್‌ 8 (ಶಮೀರ್‌) ನೀಡಿರುವ ಪುರಾವೆಗಳು, ಸಾಕ್ಷ್ಯ ನಂಬರ್‌ 3 (ರಾಜು) ಹೇಳಿದ ʼನೀರಿನ ಮೀಟರ್‌ ಮತ್ತು ತಾಮ್ರದ ಫಲಕಗಳನ್ನು ಶಮೀರ್‌ಗೆ ಮಾರುವೆʼ ಎಂಬ ಮಾತನ್ನು ದೃಢೀಕರಿಸುತ್ತವೆ. ಸಿಸ್ಟರ್‌ ಅಭಯಾ ಸಾವಿಗೀಡಾದ ದಿನದಂದು ಸಾಕ್ಷ್ಯ ನಂಬರ್‌ 3 ಅಂಗಡಿಯವನೊಟ್ಟಿಗೆ ವಹಿವಾಟು ನಡೆಸಿದ್ದ” ಎಂದು ನ್ಯಾಯಾಲಯ ಹೇಳಿದೆ.

“ರಾಜುವನ್ನು (ಸಾಕ್ಷ್ಯ ನಂಬರ್‌ 3) ಇಬ್ಬರು ವಕೀಲರು ಎರಡು ದಿನಗಳ ಕಾಲ ನಿರಂತರವಾಗಿ ತೀವ್ರತರನಾದ ಕಠಿಣ ಪಾಟಿ ಸವಾಲಿಗೆ ಒಳಪಡಿಸಿದರು ಎಂಬುದು ಗಮನಾರ್ಹ. ಆದರೆ ಅವನು ಅನಕ್ಷರಸ್ಥ ಮತ್ತು ಅಶಿಸ್ತಿನ ವ್ಯಕ್ತಿಯಾಗಿದ್ದರೂ ಕೂಡ ಆತನ ಸಾಕ್ಷ್ಯ ನಿಲ್ಲಬಲ್ಲದು” ಎಂದು ನ್ಯಾಯಾಲಯ ತಿಳಿಸಿದೆ. “ಆತನಿಗೆ ಸಾಕಷ್ಟು ಹಣಕಾಸಿನ ಆಮಿಷ ಒಡ್ಡಲಾಯಿತಾದರೂ ಆತ ಅಂತಹ ಪ್ರಲೋಭನೆಗೆ ತುತ್ತಾಗಲಿಲ್ಲ” ಎಂದಿದೆ ನ್ಯಾಯಾಲಯ.

ರಾಜು ಸ್ಥಳದಲ್ಲಿಯೇ ಇದ್ದು ತಾಮ್ರದ ಫಲಕ ಕದ್ದ ಕಾರಣಕ್ಕೆ ಆತನನ್ನು ಕ್ರೈಂ ಬ್ರಾಂಚ್‌ ವಶಕ್ಕೆ ಪಡೆದು 58 ದಿನಗಳ ಕಾಲ ಕೊಟ್ಟಾಯಂನ ಈರೈಲ್ಕಡವದ ಕ್ರೈಂ ಬ್ರಾಂಚ್‌ ಠಾಣೆಯಲ್ಲಿ ಬಂಧಿಸಿಟ್ಟಿತ್ತು. ತಾನೇ ಅಭಯಾ ಕೊಲೆ ಮಾಡಿದ್ದು ಎಂದು ಒಪ್ಪಿಕೊಳ್ಳುವಂತೆ ಆತನಿಗೆ ಇನ್ನಿಲ್ಲದಂತೆ ಅಮಾನವೀಯ ಚಿತ್ರಹಿಂಸೆ ನೀಡಲಾಯಿತು. ಆದರೆ ತೀರ್ಪಿನಲ್ಲಿ ಉಲ್ಲೇಖಿಸಿರುವಂತೆ ʼಆತ ಒಂದಿಂಚೂ ಬಗ್ಗಲಿಲ್ಲʼ.

“ಆತನಿಗೆ ಭಾರಿ ಹಣ ನೀಡುವುದಾಗಿ ಹೆಂಡತಿಗೆ ಉದ್ಯೋಗ ಮತ್ತು ಮಕ್ಕಳ ಶೈಕ್ಷಣಿಕ ವೆಚ್ಚ ಭರಿಸುವುದಾಗಿ ಅಲ್ಲದೆ ಇರಲು ಮನೆ ಕೊಡಿಸುವುದಾಗಿ ಪ್ರಲೋಭನೆ ಒಡ್ಡಲಾಯಿತು. ಆದರೆ ಈ ಯಾವುದಕ್ಕೂ ಅವನು ತುತ್ತಾಗಲಿಲ್ಲ,” ಎನ್ನುತ್ತದೆ ತೀರ್ಪು.

ತೀರ್ಪು ಪ್ರಕಟಗೊಂಡ ದಿನ ರಾಜು ನೀಡಿದ ಪ್ರತಿಕ್ರಿಯೆ ಆತನ ಪುಟಿದೆದ್ದ ಮನಸ್ಥಿತಿಗೆ ಸಾಕ್ಷಿಯಾಗಿತ್ತು. “ನನ್ನ ಕೂಸಿಗೆ ನ್ಯಾಯ ಸಿಕ್ತು. ಅವಳಿಗೆ (ಅಭಯಾ) ನ್ಯಾಯ ಸಿಗಬೇಕಿತ್ತು. ಈಗ ಅದು ಸಿಕ್ಕಿತು. ನನಗೆ ಸಖತ್‌ ಸಂತೋಷ ಆಗ್ತಾ ಇದೆ. ನಾನಿವತ್ತು ಖುಷಿಯಿಂದ ಕುಡಿತೀನಿ,” ಎಂದು ಆತ ಹೇಳಿದ.

ತನಗೆ ಒಡ್ಡಿದ ಆಮಿಷಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡುತ್ತ “ನನಗೆ ಕೋಟ್ಯಂತರ ರೂಪಾಯಿ ಕೊಡೋಕೆ ಬಂದ್ರು. ನಾನದನ್ನ ಮುಟ್ಟಲಿಲ್ಲ. ಬರೀ ಮೂರು ಸೆಂಟ್‌ ಜಾಗದ ಕಾಲೋನಿಯೊಂದರಲ್ಲಿ ಬದುಕ್ತಾ ಇದ್ದೀನಿ. ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಯಾವುದಾದರೂ ಒಂದು ದಿನ ಅವರು ನನಗೇನಾದರೂ ಮಾಡಿದರೆ ಏನಾಗುತ್ತೆ? ಆ ಕೂಸು (ಅಭಯಾ) ನನ್ನ ಮಗಳ ಥರಾನೇ ಕಾಣ್ತಾ ಇದ್ದಳು,” ಎಂದಿದ್ದಾನೆ.

“ಸಾಕ್ಷ್ಯ ನಂ 3 ಕಳ್ಳ ಇರಬಹುದು. ಆತ ಪ್ರಾಮಾಣಿಕ ವ್ಯಕ್ತಿ ಆಗಿದ್ದ ಮತ್ತು ಆಗಿದ್ದಾನೆ. ತನ್ನ ಬಗ್ಗೆ ಕೊಚ್ಚಿಕೊಳ್ಳದ ಸಾದಾ ಮನುಷ್ಯ ಅವನು. ಸಂದರ್ಭದ ಕಾರಣಕ್ಕೆ ವೃತ್ತಿಯಿಂದ ಕಳ್ಳನಾದ ಈತ ಎಲ್ಲರಿಗಿಂತ ದೊಡ್ಡ ಸತ್ಯವಂತ” ಎಂದು ನ್ಯಾಯಾಲಯ ಹೇಳಿದೆ.

ಅಡಿಕೆ ಕದಿಯುವ ಒಲವಿದ್ದುದುದರಿಂದ ಆತನಿಗೆ ಬಂದಿದ್ದ ʼಅಡಕ್ಕಾ ರಾಜುʼ ಎಂಬ ಅಡ್ಡ ಹೆಸರನ್ನು ಈಗ ಜನರು, ಮಾಧ್ಯಮಗಳು ಅಳಿಸಿಹಾಕುತ್ತಿವೆ.

ಅವನೀಗ ʼನೀತಿಮಾನಾಯ ರಾಜುʼ (ನೀತಿವಂತ ರಾಜು.)

ಲೇಖನ: ಮುರಳಿ ಕೃಷ್ಣನ್. ಕನ್ನಡಕ್ಕೆ- ಡಿ. ಕೆ. ರಮೇಶ್‌

Related Stories

No stories found.
Kannada Bar & Bench
kannada.barandbench.com