ಪರ ವಿರೋಧಕ್ಕೆ ಕಾರಣವಾಗಿರುವ ಬಿಬಿಎಂಪಿ ವಿಧೇಯಕದಲ್ಲೇನಿದೆ?

ಬಿಬಿಎಂಪಿ ಸದಸ್ಯರು ವಿಧಾನಸಭೆ, ವಿಧಾನಪರಿಷತ್, ರಾಜ್ಯಸಭೆಗೆ ಆಯ್ಕೆಯಾದರೆ ಆರು ತಿಂಗಳೊಳಗೆ ಒಂದು ಸ್ಥಾನವನ್ನು ಮಾತ್ರ ಉಳಿಸಿಕೊಳ್ಳುವ ಅಂಶ ಅಂಗೀಕಾರಗೊಂಡ ಮಸೂದೆಯಲ್ಲಿದೆ.
ಪರ ವಿರೋಧಕ್ಕೆ ಕಾರಣವಾಗಿರುವ ಬಿಬಿಎಂಪಿ ವಿಧೇಯಕದಲ್ಲೇನಿದೆ?

ಬೆಂಗಳೂರು ಪಾಲಿಕೆಗೆಂದೇ ಪ್ರತ್ಯೇಕ ಕಾಯಿದೆ, ಮೇಯರ್‌ ಅವಧಿ ವಿಸ್ತರಣೆ, ವಾರ್ಡ್‌ಗಳ ಹೆಚ್ಚಳ, ವಲಯಗಳ ಹೆಚ್ಚಳ, ಮುಖ್ಯ ಕಾರ್ಯದರ್ಶಿ ಮಾದರಿಯ ಆಯುಕ್ತರ ನೇಮಕ, ಸ್ಥಾಯಿ ಸಮಿತಿ ಸದಸ್ಯರ ಏರಿಕೆ, ಪ್ರತಿ ವಲಯಕ್ಕೆ ಅಧ್ಯಕ್ಷರ ನೇಮಕ ಇತ್ಯಾದಿ ಕಾರಣಗಳಿಗೆ ಮಹತ್ವ ಪಡೆದಿದ್ದ 2020ರ ಬೆಂಗಳೂರು ಮಹಾನಗರ ಪಾಲಿಕೆ ಮಸೂದೆಯು ಗುರುವಾರ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಅಂಗೀಕಾರವಾಗಿದೆ.

ಬೆಂಗಳೂರಿನ ಪ್ರಸ್ತುತ ಸ್ವರೂಪವನ್ನು ಆಧರಿಸಿ, ಅದು ಎದುರಿಸುತ್ತಿರುವ ಹಲವು ಸವಾಲುಗಳನ್ನು ಪರಿಗಣಿಸಿ ಪ್ರತ್ಯೇಕ ಕಾಯಿದೆಯೊಂದನ್ನು ಜಾರಿಗೆ ತರಬೇಕೆಂಬ ಹಂಬಲದಿಂದ ಮಸೂದೆಯ ರೂಪುರೇಷೆ ಸಿದ್ಧವಾಗಿತ್ತು. ಬೆಂಗಳೂರು ಮಹಾನಗರ ಪಾಲಿಕೆ ಉಳಿದ ನಗರಗಳ ಪಾಲಿಕೆಗಳಂತೆ ಇನ್ನೂ1976ರ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ಸ್ ಕಾಯಿದೆಯಡಿಯಲ್ಲಿಯೇ (ಕೆಎಂಸಿಎ) ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಕೆಎಂಸಿಎ ಕಾಯಿದೆಗೆ ಎಷ್ಟೇ ತಿದ್ದುಪಡಿಗಳನ್ನು ತಂದರೂ ಬೆಂಗಳೂರಿನ ಸವಾಲುಗಳದ್ದೇ ಒಂದು ತೂಕ, ಉಳಿದ ನಗರಗಳ ಸವಾಲುಗಳದ್ದೇ ಒಂದು ತೂಕ ಎಂಬಂತಾಗಿತ್ತು. ಹೀಗಾಗಿ ಈ ಕಾಯಿದೆಗೆ ಇನ್ನಿಲ್ಲದ ಮಹತ್ವ ದೊರೆತಿತ್ತು. ಕಳೆದ ಕೆಲವು ದಿನಗಳಿಂದ ಅಧ್ಯಯನ ನಡೆಸಿ ಜಂಟಿ ಆಯ್ಕೆ ಸಮಿತಿ ಸಲ್ಲಿಸಿದ್ದ ವರದಿಯನ್ನು ಆಧರಿಸಿ ಮಸೂದೆ ರೂಪುಗೊಂಡಿತ್ತು.

ಆದರೆ ವಿರೋಧ ಪಕ್ಷ ಕಾಂಗ್ರೆಸ್ ವಿಧೇಯಕವನ್ನು ಬಲವಾಗಿ ವಿರೋಧಿಸಿತ್ತು. ಮಸೂದೆಯನ್ನು ಪರಾಮರ್ಶಿಸುವುದರ ಜೊತೆಗೆ ತಜ್ಞರ ಅಭಿಪ್ರಾಯವನ್ನು ಕೂಡ ಪಡೆಯಬೇಕು ಎಂಬುದು ಅದರ ವಾದವಾಗಿತ್ತು. ʼಜನಾಗ್ರಹʼ ರೀತಿಯ ಸಂಘಟನೆಗಳು ಕೂಡ ಜನಾಭಿಪ್ರಾಯಕ್ಕೆ ಒತ್ತು ನೀಡದೆ ಮಸೂದೆ ಮಂಡಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದವು.

ವಿಧೇಯಕದ ಪ್ರಮುಖ ಅಂಶಗಳು ಹೀಗಿವೆ:

 • ಹಾಲಿ ಇದ್ದ 198 ವಾರ್ಡ್‌ಗಳ ಬದಲಿಗೆ ಅವುಗಳ ಸಂಖ್ಯೆ 243ಕ್ಕೆ ಹೆಚ್ಚಳ.

 • ಮೇಯರ್‌ ಉಪಮೇಯರ್‌ ಅಧಿಕಾರಾವಧಿ 12 ತಿಂಗಳ ಬದಲಿಗೆ 30 ತಿಂಗಳಿಗೆ ಏರಿಕೆ.

 • ಜಿಎಸ್‌ಟಿಯಿಂದಾಗಿ ಪಾಲಿಕೆಗೆ ತಪ್ಪಿ ಹೋಗಿದ್ದ ಜಾಹೀರಾತು ತೆರಿಗೆ ಮತ್ತು ಮನರಂಜನಾ ತೆರಿಗೆ ಸಂಗ್ರಹಿಸಲು ಅವಕಾಶ.

 • ಒಂದು ಕಿ.ಮೀನಷ್ಟು ಹಿಗ್ಗಲಿದೆ ಬಿಬಿಎಂಪಿ ವ್ಯಾಪ್ತಿ. 1 ಕಿ.ಮೀ ವ್ಯಾಪ್ತಿಯಿಂದ 200- 300 ಮೀ ಅಂತರದಲ್ಲಿ ಹಳ್ಳಿಗಳಿದ್ದರೆ ಅವುಗಳೂ ಬಿಬಿಎಂಪಿ ವ್ಯಾಪ್ತಿಗೆ.

 • ಬಿಬಿಎಂಪಿ ಸದಸ್ಯರು ವಿಧಾನಸಭೆ, ವಿಧಾನಪರಿಷತ್‌, ರಾಜ್ಯಸಭೆಗೆ ಆಯ್ಕೆಯಾದರೆ ಆರು ತಿಂಗಳೊಳಗೆ ಒಂದು ಸ್ಥಾನವನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶ.

 • ಸ್ಥಾಯಿ ಸಮಿತಿ ಸದಸ್ಯರ ಸಂಖ್ಯೆ 12ರಿಂದ 15ಕ್ಕೆ ಹೆಚ್ಚಳ.

 • ವಲಯಗಳ ಸಂಖ್ಯೆ 15ಕ್ಕೆ ಹೆಚ್ಚಳ.

 • ಮುಖ್ಯ ಕಾರ್ಯದರ್ಶಿ ಮಾದರಿಯಲ್ಲಿ ಬಿಬಿಎಂಪಿ ಆಯುಕ್ತರ ನೇಮಕ.

 • ಪ್ರತಿ ವಲಯದಲ್ಲಿ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಸಮಿತಿ ರಚನೆ. ವಲಯಕ್ಕೆ ಸೇರಿದ ಒಬ್ಬ ಶಾಸಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ.

 • ಕಾಮಗಾರಿಗಳ ಅನುಷ್ಠಾನಕ್ಕಾಗಿ ವಲಯ ಸಮಿತಿ ರಚನೆ.

 • ಅಪಾಯಕಾರಿ ಗಣಿಗಳ ತಡೆಗೆ ಅವಕಾಶ.

 • 40/60 ಮನೆ ನಿರ್ಮಿಸುವವರು ಮಳೆ ನೀರು ಸಂಗ್ರಹಿಸುವುದು ಕಡ್ಡಾಯ

ಕಾಯಿದೆಯಿಂದಾಗಿ ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಒತ್ತು ದೊರೆಯಲಿದೆ. ಪ್ರತಿ ವಲಯಕ್ಕೂ ಅಧ್ಯಕ್ಷರನ್ನು ನೇಮಕ ಮಾಡಿರುವುದಿಂದ ಬಿಬಿಎಂಪಿ ಆಯುಕ್ತರಿಗೆ ಅನಗತ್ಯ ಹೊರೆ ತಪ್ಪಲಿದೆ. ಸ್ಥಳೀಯ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಘನತ್ಯಾಜ್ಯ ನಿರ್ವಹಣೆಗೆ ಹೊಸ ಸ್ಪರ್ಶ ದೊರೆಯಲಿದೆ. ಮೇಯರ್‌ ಮತ್ತು ಉಪಮೇಯರ್‌ ಅಧಿಕಾರಾವಧಿ ವಿಸ್ತರಣೆಯಾಗಿರುವುದರಿಂದ ಪದೇ ಪದೇ ಗಾದಿ ಬದಲಾವಣೆಯ ತಲೆನೋವು ನಿವಾರಣೆಯಾಗಿದೆ. ವಾರ್ಡ್‌ಗಳ ಸಂಖ್ಯೆ ಹೆಚ್ಚಳವಾಗಿರುವುದರಿಂದ ಅವುಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಸರ್ಕಾರ ಹೇಳುತ್ತಿದೆ.

ಈ ಮಧ್ಯೆ ಸೆಪ್ಟೆಂಬರ್‌ನಲ್ಲಿಯೇ ಪಾಲಿಕೆ ಸದಸ್ಯರ ಅಧಿಕಾರಾವಧಿ ಮುಗಿದಿದ್ದು ಮಸೂದೆ ಮಂಡನೆಯಿಂದಾಗಿ ಪಾಲಿಕೆ ಚುನಾವಣೆಗಳು ಮತ್ತಷ್ಟು ಮುಂದೆ ಹೋಗಲಿದೆ. ಆರು ವಾರಗಳೊಳಗೆ ಚುನಾವಣಾ ದಿನಾಂಕವನ್ನು ಪ್ರಕಟಿಸುವಂತೆ ಹೈಕೋರ್ಟ್‌ ಸೂಚಿಸಿದ ನಂತರವೂ ಸರ್ಕಾರವು ಪಟ್ಟು ಹಿಡಿದಂತೆ ವಿಧೇಯಕ ಮಂಡಿಸಿರುವುದು ನ್ಯಾಯಾಂಗ ಮತ್ತು ಶಾಸಕಾಂಗಗಳ ನಡುವೆ ಬಿಗುವಿನ ವಾತಾವರಣಕ್ಕೆ ಕಾರಣವಾಗಬಹುದು ಎನ್ನುವ ಚರ್ಚೆಗಳೂ ಇವೆ. ಚುನಾವಣೆಯನ್ನು ಮುಂದೂಡುವ ತಂತ್ರದ ಭಾಗವಾಗಿಯೇ ಬಿಜೆಪಿ ತರಾತುರಿಯಿಂದ ಮಸೂದೆ ಮಂಡಿಸಿದೆ ಎಂದು ವಿರೋಧ ಪಕ್ಷಗಳು ಸೇರಿದಂತೆ ವಿವಿಧ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.

ಇದಲ್ಲದೆ, ನೂತನ ವಿಧೇಯಕವು ಅಧಿಕಾರವನ್ನು ವಿಕೇಂದ್ರೀಕರಣಗೊಳಿಸುವುದರ ಬದಲಿಗೆ ಶಾಸಕರಿಗೆ ಹೆಚ್ಚಿನ ಮನ್ನಣೆ, ಅಧಿಕಾರವನ್ನು ನೀಡಲಿದೆ. ಪ್ರತಿ ವಲಯಕ್ಕೂ ಶಾಸಕರೇ ಅಧ್ಯಕ್ಷರಾಗಿರುತ್ತಾರೆ. ಇದು ವಾರ್ಡ್‌ಗಳ ಅಭಿವೃದ್ಧಿ ಕಾರ್ಯದಲ್ಲಿ ಶಾಸಕರ ಹಸ್ತಕ್ಷೇಪ ಹೆಚ್ಚಳಕ್ಕೆ ಕಾರಣವಾಗಲಿದೆ ಎನ್ನುವ ಅಸಮಾಧಾನವೂ ಬಿಬಿಎಂಪಿ ಸದಸ್ಯರಾಗಿದ್ದವರಲ್ಲಿದೆ.

No stories found.
Kannada Bar & Bench
kannada.barandbench.com