ಮಿಸೆಸ್ ಇಂಡಿಯಾ ಸ್ಪರ್ಧೆಯ ಸಂಘಟನೆಯೊಂದಿಗೆ ನಡೆಯುತ್ತಿರುವ ವ್ಯಾಜ್ಯ ಇತ್ಯರ್ಥಗೊಳ್ಳುವವರೆಗೆ 2023ರ "ಮಿಸೆಸ್ ಇಂಡಿಯಾ" ಸ್ಪರ್ಧೆಯ ವಿಜೇತರಾದ ಶೆರ್ರಿ ಸಿಂಗ್ ಅವರು ಯಾವುದೇ ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸದಂತೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ [ಮೋಹಿನಿ ಶರ್ಮಾ ಮತ್ತು ಪ್ರಿಯಾ ಸಗ್ಗಿ ಇನ್ನಿತರರ ನಡುವಣ ಪ್ರಕರಣ].
ಸಿಂಗ್ ಅವರು ಭಾಗವಹಿಸದಂತೆ ತಡೆಯುವ ನಕಾರಾತ್ಮಕ ಒಡಂಬಡಿಕೆ ಜಾರಿಗೆ ಆಕೆ ಯಾವುದೇ ಆಕ್ಷೇಪಣೆ ಸಲ್ಲಿಸದ ಕಾರಣ, ಕೋರಿರುವ ಮಧ್ಯಂತರ ಪರಿಹಾರ ನೀಡದಿರಲು ಯಾವುದೇ ಕಾರಣವಿಲ್ಲ ಎಂದು ನ್ಯಾಯಮೂರ್ತಿ ಆರಿಫ್ ಎಸ್ ಡಾಕ್ಟರ್ ತಿಳಿಸಿದರು.
ಸಾಕಷ್ಟು ಸಮಯಾವಕಾಶ ನೀಡಿದ್ದರೂ ಸಿಂಗ್ ಇನ್ನೂ ತನ್ನ ಮುಂದೆ ಹಾಜರಾಗಿಲ್ಲ ಅಥವಾ ಆಕೆಯ ವಿರುದ್ಧ ದಾಖಲಾದ ಮೊಕದ್ದಮೆಗೆ ಪ್ರತಿಕ್ರಿಯಿಸಿಲ್ಲ ಎಂದು ನ್ಯಾಯಾಲಯ ತಿಳಿಸಿತು.
ಅಕ್ಟೋಬರ್ 2ರಿಂದ 9ರವರೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಮಿಸೆಸ್ ಯೂನಿವರ್ಸ್ 2024 ಸ್ಪರ್ಧೆಯಲ್ಲಿ ಭಾಗವಹಿಸುವ ಇಂಗಿತವನ್ನು ಸಿಂಗ್ ವ್ಯಕ್ತಪಡಿಸಿದ್ದರು. ಆದರೆ ಇದನ್ನು ಪ್ರಶ್ನಿಸಿ "ಮಿಸೆಸ್ ಇಂಡಿಯಾ ಇಂಕ್" ನ ಏಕೈಕ ಮಾಲೀಕರಾದ ಮೋಹಿನಿ ಸತ್ಯೇಂದ್ರ ಶರ್ಮಾ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಐದು ವರ್ಷಗಳ ಕಾಲ ಮಿಸೆಸ್ ಇಂಡಿಯಾ ಸಂಸ್ಥೆಯ ಒಪ್ಪಿಗೆಯಿಲ್ಲದೆ ಉಳಿದ ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳದಂತೆ ಈ ಹಿಂದೆ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನು ಶೆರ್ರಿ ಸಿಂಗ್ ಉಲ್ಲಂಘಿಸಿದ್ದಾರೆ ಎಂದು ದೂರಿದ್ದರು. ಶರ್ಮಾ ಅವರ ಕಾನೂನು ಸಲಹೆಗಾರರು ಸಿಂಗ್ ವಿರುದ್ಧ ತುರ್ತು ಮಧ್ಯಂತರ ಪರಿಹಾರವನ್ನು ನೀಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.
ಸ್ಪರ್ಧಾ ಸಂಸ್ಥೆ ಮತ್ತು ಅದರ ಸ್ಪರ್ಧಿಗಳ ನಡುವಿನ ಒಪ್ಪಂದದ ನಿಯಮಗಳ ಪ್ರಕಾರ, ಸಂಸ್ಥೆಯು ಭಾಗವಹಿಸುವವರ ತರಬೇತಿ, ಸೌಂದರ್ಯವರ್ಧನೆ ಮತ್ತು ಮಾರ್ಗದರ್ಶನದಲ್ಲಿ ಗಮನಾರ್ಹ ಹೂಡಿಕೆ ಮಾಡಿದೆ. ಆದ್ದರಿಂದ, ಇತರ ಸ್ಪರ್ಧೆಗಳಲ್ಲಿ ಭವಿಷ್ಯದಲ್ಲಿ ಭಾಗವಹಿಸಲು ಮಿಸೆಸ್ ಇಂಡಿಯಾ ಸಂಸ್ಥೆಯ ಸ್ಪಷ್ಟ ಒಪ್ಪಿಗೆ ಪಡೆದಿರಬೇಕು ಎಂದು ವಾದಿಸಲಾಗಿತ್ತು.
ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಸಿಂಗ್ ಅವರಿಗೆ ನೋಟಿಸ್ ನೀಡಲಾಗಿದ್ದರೂ ತನ್ನ ವಿರುದ್ಧದ ಆರೋಪ ನಿರಾಕರಿಸಲು ಆಕೆ ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂದು ಶರ್ಮಾ ಪರ ವಕೀಲರು ತಿಳಿಸಿದರು.
ಮಧ್ಯಂತರ ಪರಿಹಾರವನ್ನು ನೀಡುವ ಪ್ರಾರ್ಥನೆಗೆ ಯಾವುದೇ ವಿರೋಧವಿಲ್ಲದ ಕಾರಣ ನ್ಯಾಯಾಲಯ ಶರ್ಮಾ ಅವರ ಮನವಿ ಪುರಸ್ಕರಿಸಿತು.