ವಿವಾದಾತ್ಮಕ ನೂತನ ಕೃಷಿ ಕಾಯಿದೆಗಳನ್ನು ಹಿಂಪಡೆದ ಕೇಂದ್ರ ಸರ್ಕಾರ; ಪ್ರಧಾನಿ ಮೋದಿ ಘೋಷಣೆ

ದೇಶಾದ್ಯಂತ ಕೃಷಿ ವಲಯದಲ್ಲಿ ತಲ್ಲಣಕ್ಕೆ ಕಾರಣವಾಗಿದ್ದ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯಲು ಸೂಕ್ತ ಸಾಂವಿಧಾನಿಕ ಪ್ರಕ್ರಿಯೆಗಳಿಗೆ ಮಾಸಾಂತ್ಯದಲ್ಲಿ ಆರಂಭವಾಗಲಿರುವ ಸಂಸತ್‌ ಅಧಿವೇಶನಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದ ಪ್ರಧಾನಿ.
ವಿವಾದಾತ್ಮಕ ನೂತನ ಕೃಷಿ ಕಾಯಿದೆಗಳನ್ನು ಹಿಂಪಡೆದ ಕೇಂದ್ರ ಸರ್ಕಾರ; ಪ್ರಧಾನಿ ಮೋದಿ ಘೋಷಣೆ

ದೇಶಾದ್ಯಂತ ಕೃಷಿ ವಲಯದಲ್ಲಿ ತೀವ್ರ ತಳಮಳಕ್ಕೆ ಕಾರಣವಾಗಿದ್ದ, ರೈತರಿಂದ ಭಾರಿ ಪ್ರತಿರೋಧ ಎದುರಿಸುತ್ತಿದ್ದ ಮೂರು ನೂತನ ಕೃಷಿ ಕಾಯಿದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆದಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಘೋಷಿಸಿದ್ದಾರೆ.

ಗುರುನಾನಕ್‌ ಜಯಂತಿ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಕೃಷಿ ಕಾಯಿದೆಗಳನ್ನು ಹಿಂಪಡೆಯುವ ನಿರ್ಧಾರವನ್ನು ಪ್ರಕಟಿಸಿದರು. ಇದಕ್ಕೆ ಅಗತ್ಯವಾದ ಸಾಂವಿಧಾನಿಕ ಪ್ರಕ್ರಿಯೆಗೆ ಈ ತಿಂಗಳ ಅಂತ್ಯದಲ್ಲಿ ಆರಂಭವಾಗುವ ಚಳಿಗಾಲದ ಸಂಸತ್‌ ಅಧಿವೇಶನದಲ್ಲಿ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಉದ್ದೇಶ ಈ ಮೂರು ಕೃಷಿ ಕಾಯಿದೆಗಳ ಮೂಲಕ ಕೃಷಿ ಕ್ಷೇತ್ರದಲ್ಲಿ ಬೆಳವಣಿಗೆ ತರುವುದಾಗಿತ್ತು. ಈ ಹಿಂದಿನ ಸರ್ಕಾರಗಳೂ ಸಹ ಈ ಬಗ್ಗೆ ಚಿಂತಿಸಿದ್ದವು. ಈ ಮೂರು ಕಾಯಿದೆಗಳನ್ನು ಬೆಂಬಲಿಸಿ, ಸ್ವಾಗತಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Also Read
ವಿವಾದಿತ ಮೂರು ಕೃಷಿ ಕಾಯಿದೆಗಳ ಜಾರಿಗೆ ತಡೆ ನೀಡಿದ ಸುಪ್ರೀಂ; ರೈತರೊಂದಿಗಿನ ಮಾತುಕತೆಗೆ ನಾಲ್ವರು ಸದಸ್ಯರ ಸಮಿತಿ

ಬೆಲೆ ಭರವಸೆ ಮತ್ತು ಕೃಷಿ ಸೇವೆಗೆ ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಕಾಯಿದೆ-2020, ಕೃಷಿಕರ ಉತ್ಪನ್ನಗಳ ವ್ಯಾಪಾರ ಮತ್ತು ವಹಿವಾಟು (ನೆರವು ಮತ್ತು ಸರಾಗಗೊಳಿಸುವುದು) ಕಾಯಿದೆ ಮತ್ತು ಅಗತ್ಯ ಉತ್ಪನ್ನಗಳ ತಿದ್ದುಪಡಿ ಕಾಯಿದೆಗಳು ಹಿಂಪಡೆಯಲು ನಿರ್ಧರಿಸಲಾಗಿರುವ ನೂತನ ಕಾಯಿದೆಗಳಾಗಿವೆ. ಈ ಕಾಯಿದೆಗಳ ಜಾರಿಗೆ ಸುಪ್ರೀಂ ಕೋರ್ಟ್‌ ಇದೇ ವರ್ಷದ ಜನವರಿಯಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ದೇಶದ ವಿವಿಧ ಭಾಗಗಳ ರೈತರು ವಿಶೇಷವಾಗಿ ಉತ್ತರ ಭಾರತದ ಪಂಜಾಬ್‌, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ವ್ಯಾಪಕ ಪ್ರತಿಭಟನೆ ಕೈಗೊಂಡಿದ್ದರು.

Related Stories

No stories found.
Kannada Bar & Bench
kannada.barandbench.com