
ವಿಫಲ ಸಂಬಂಧಗಳು ಮತ್ತು ಅದರಿಂದ ಉಂಟಾಗುವ ಭಾವನಾತ್ಮಕ ವೇದನೆಗಳಿಂದ ಕ್ರಿಮಿನಲ್ ಕಾನೂನು ದುರ್ಬಳಕೆಯ ಹೆಚ್ಚಳವಾಗುತ್ತಿದೆ ಎಂದು ಈಚೆಗೆ ಅಲಾಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅತ್ಯಾಚಾರ ಆರೋಪ ಎದುರಿಸುತ್ತಿದ್ದ 42 ವರ್ಷದ ವ್ಯಕ್ತಿಗೆ ನ್ಯಾಯಮೂರ್ತಿ ಕೃಷ್ಣ ಪಹಲ್ ಅವರ ಏಕಸದಸ್ಯ ಪೀಠವು ಜಾಮೀನು ಮಂಜೂರು ಮಾಡಿದೆ.
“ವೈಯಕ್ತಿಕ ಸಂಬಂಧ ಹಳಸುವುದರಿಂದ ಭಾವನಾತ್ಮಕ ವೇದನೆ ಸೃಷ್ಟಿಯಾಗುತ್ತದೆ. ಆಪ್ತ ಸಂಬಂಧ ವಿಫಲವಾದುದರಿಂದ ದಂಡ ಸಂಹಿತೆ ಅನ್ವಯಿಸಿ ಅದಕ್ಕೆ ಕ್ರಿಮಿನಲ್ ಬಣ್ಣ ಹಚ್ಚಲಾಗುತ್ತಿದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.
“ಅರ್ಜಿದಾರರನು ಈ ಹಿಂದೆ ಮೂರು ಬಾರಿ ಮದುವೆಯಾಗಿರುವುದರ ಬಗ್ಗೆ ಅರಿವಿದ್ದರೂ ಆತನ ಜೊತೆ ಸಂತ್ರಸ್ತೆ ಸಂಬಂಧ ಹೊಂದಿದ್ದಾರೆ. ಈ ಸಂಬಂಧವು, ಅದರ ಅಸ್ತಿತ್ವದ ಸಮಯದಲ್ಲಿ ಪರಸ್ಪರ ಒಪ್ಪಿಗೆಯಿಂದ ಕೂಡಿದ್ದರೂ ಸಾಂಪ್ರದಾಯಿಕವಾಗಿ ಅಂಗೀಕರಿಸಲ್ಪಟ್ಟ ವಿವಾಹ ವ್ಯವಸ್ಥೆ ಅಥವಾ ಯಾವುದೇ ರೀತಿಯ ಕಾನೂನುಬದ್ಧವಾಗಿ ಗುರುತಿಸಲ್ಪಟ್ಟ ವ್ಯವಸ್ಥೆಗೆ ಅನುಗುಣವಾಗಿರಲಿಲ್ಲ. ಪಾರಂಪರಿಕವಾಗಿ ಹಲವು ಸಂಗಾತಿಗಳೊಂದಿಗೆ ಸಮ್ಮತಿಯೊಂದಿಗೆ ಹೊಂದುವ ಭಾವನಾತ್ಮಕ ಮತ್ತು ಪ್ರಣಯದ ಸ್ವರೂಪವು (ಪಾಲಿಅಮೋರಸ್) ಇಲ್ಲಿ ಇಲ್ಲದೆ ಹೋದರೂ ಪ್ರಸಕ್ತ ಸಂಬಂಧವು ಸಮ್ಮತಿಯಿಂದ ಕೂಡಿದ್ದು ಇಬ್ಬರು ಪ್ರಬುದ್ಧ ವ್ಯಕ್ತಿಗಳ ನಡುವಿನದಾಗಿದೆ – ಹಾಲಿ ಪ್ರಕರಣದಲ್ಲಿ ಸಂತ್ರಸ್ತೆಗೆ 25 ವರ್ಷ ಮತ್ತು ಅರ್ಜಿದಾರನಿಗೆ 42 ವರ್ಷವಾಗಿದೆ” ಎಂದು ನ್ಯಾಯಾಲಯ ಅವಲೋಕಿಸಿತು.
“ಸಾಮಾನ್ಯವಾಗಿ ಸ್ವಇಚ್ಛೆಯಿಂದ ಹುಟ್ಟವ ಹಾಗೂ ಕರಗುವ ಕ್ಷಣಿಕ ಮತ್ತು ಬದ್ಧತೆಯಿಲ್ಲದ ಸಂಬಂಧಗಳ ಇರುವಿಕೆಯು, ಅದರಲ್ಲಿಯೂ ಒಮ್ಮೆ ಈ ಸಂಬಂಧಗಳು ಹಳಸಿದ ನಂತರ ವೈಯಕ್ತಿಕ ಜವಾಬ್ದಾರಿ ಮತ್ತು ಕಾನೂನು ನಿಬಂಧನೆಗಳ ದುರುಪಯೋಗದ ಬಗ್ಗೆ ನಿರ್ಣಾಯಕ ಪ್ರಶ್ನೆಗಳು ಮೂಡುತ್ತವೆ” ಎಂದು ನ್ಯಾಯಾಲಯ ಹೇಳಿದೆ.
“ಹಾಲಿ ಪ್ರಕರಣವು ಅನೈತಿಕತೆ ವಿಭಾಗಕ್ಕೆ ಸೇರಬಹುದು. ಆದರೆ ಅದನ್ನು ದಂಡನೀಯ ಎಂದು ಕರೆಯಲಾಗದು. ಇದರರ್ಥ ಪ್ರಶ್ನಾರ್ಹ ಕೃತ್ಯವನ್ನು ಸಾಮಾಜಿಕ ಅಥವಾ ನೈತಿಕ ಮಾನದಂಡಗಳಿಂದ ಅನೈತಿಕ ಅಥವಾ ತಪ್ಪು ಎಂದು ಪರಿಗಣಿಸಬಹುದು. ಆದರೆ, ಇದು ಕಾನೂನನ್ನು ಉಲ್ಲಂಘಿಸುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.