[ದೆಹಲಿ ಗಲಭೆ ಪ್ರಕರಣ] ಹೈಕೋರ್ಟ್‌  ಆದೇಶವನ್ನು ಪೂರ್ವನಿದರ್ಶನವಾಗಿ ಪರಿಗಣಿಸಬಾರದು ಎಂದ ಸುಪ್ರೀಂ:   ಜಾಮೀನು ಅಬಾಧಿತ
Asif Iqbal Tanha, Devangana Kalita, Natasha Narwal, Supreme Court

[ದೆಹಲಿ ಗಲಭೆ ಪ್ರಕರಣ] ಹೈಕೋರ್ಟ್‌ ಆದೇಶವನ್ನು ಪೂರ್ವನಿದರ್ಶನವಾಗಿ ಪರಿಗಣಿಸಬಾರದು ಎಂದ ಸುಪ್ರೀಂ: ಜಾಮೀನು ಅಬಾಧಿತ

“ಜಾಮೀನು ಮನವಿಗೆ ಸಂಬಂಧಿಸಿದ 100 ಪುಟಗಳ ತೀರ್ಪಿನಲ್ಲಿ ದೆಹಲಿ ಹೈಕೋರ್ಟ್‌ ಎಲ್ಲಾ ಕಾನೂನುಗಳ ಬಗ್ಗೆ ಚರ್ಚಿಸಿರುವುದು ಆಶ್ಚರ್ಯ ಉಂಟುಮಾಡಿದೆ” ಎಂದು ಸುಪ್ರೀಂಕೋರ್ಟ್‌ ವಿಭಾಗೀಯ ಪೀಠ ಹೇಳಿದೆ.

ದೆಹಲಿ ಗಲಭೆಗೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯಿದೆ (ಯುಎಪಿಎ) ಅಡಿ ಬಂಧಿತರಾಗಿದ್ದ ಆಸೀಫ್‌ ಇಕ್ಬಾಲ್‌ ತನ್ಹಾ, ನತಾಶಾ ನರ್ವಾಲ್‌ ಮತ್ತು ದೇವಾಂಗನಾ ಕಲಿತಾ ಅವರಿಗೆ ಜಾಮೀನು ಮಂಜೂರು ಮಾಡಿದ್ದ ದೆಹಲಿ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ.

ಆರೋಪಿಗಳಿಗೆ ನೀಡಲಾಗಿರುವ ಜಾಮೀನು ಅಬಾಧಿತವಾಗಿರಲಿದ್ದು, ಆ ಸಂಬಂಧ ದೆಹಲಿ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಲಾಗದು ಎಂದು ನ್ಯಾಯಮೂರ್ತಿಗಳಾದ ಹೇಮಂತ್‌ ಗುಪ್ತ ಮತ್ತು ವಿ ರಾಮಸುಬ್ರಮಣಿಯನ್‌ ಅವರಿದ್ದ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.

ದೆಹಲಿ ಪೊಲೀಸರನ್ನು ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು “(ದೆಹಲಿ ಹೈಕೋರ್ಟ್‌ ತೀರ್ಪಿನಲ್ಲಿ) ಸಂವಿಧಾನದೊಟ್ಟಿಗೆ ಇಡೀ ಯುಎಪಿಎಯನ್ನು ತಿರುವು-ಮುರುವು ಮಾಡಲಾಗಿದೆ ” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಗುಪ್ತ ಅವರು “ಪ್ರಕರಣವು ಅತ್ಯಂತ ಮಹತ್ವವಾಗಿದ್ದು, ಇಡೀ ದೇಶದ ಮೇಲೆ ಪ್ರಭಾವ ಬೀರುವುದರಿಂದ ನೋಟಿಸ್‌ ಜಾರಿಗೊಳಿಸಿ, ಪಕ್ಷಕಾರರನ್ನು ಆಲಿಸುತ್ತೇವೆ” ಎಂದರು.

ಆಗ ಮೆಹ್ತಾ ಅವರು ದೆಹಲಿ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡುವಂತೆ ಕೋರಿದರು. “ಅಮೆರಿಕದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುತ್ತಿರುವಾಗ ಆ ಘಟನೆ ನಡೆದಿದ್ದು, ಆರೋಪಿಗಳು ಆ ಸಂದರ್ಭದಲ್ಲಿ ಗಲಭೆ ಸೃಷ್ಟಿಸಲು ಪ್ರಯತ್ನಿಸಿದ್ದರು ಎಂಬುದನ್ನು ಅತ್ಯಂತ ಗೌರವದಿಂದ ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ” ಎಂದರು.

ಭಯೋತ್ಪಾದನೆ ವ್ಯಾಖ್ಯಾನ ಕುರಿತಾದ ಯುಎಪಿಎ ಸೆಕ್ಷನ್‌ 15 ದ್ವಂದ್ವಾರ್ಥ ಉಂಟು ಮಾಡುವುದರಿಂದ ದೆಹಲಿ ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅಮನ್‌ ಲೇಖಿ ಕೂಡ ಮನವಿ ಮಾಡಿದರು.

ಈ ವೇಳೆ ನ್ಯಾ. ಗುಪ್ತ ಅವರು “ಯುಎಪಿಎ ಕುರಿತು ದೆಹಲಿ ಹೈಕೋರ್ಟ್‌ ವ್ಯಾಖ್ಯಾನವನ್ನು ಸುಪ್ರೀಂಕೋರ್ಟ್‌ ಪರಿಶೀಲಿಸುವ ಅಗತ್ಯವಿದೆ. ಜಾಮೀನು ಮನವಿಗೆ ಸಂಬಂಧಿಸಿದ 100 ಪುಟಗಳ ತೀರ್ಪಿನಲ್ಲಿ ಎಲ್ಲಾ ಕಾನೂನುಗಳ ಬಗ್ಗೆ ಚರ್ಚಿಸಿರುವುದು ಆಶ್ಚರ್ಯ ಉಂಟು ಮಾಡಿದೆ. ಆರೋಪಿಗಳಿಗೆ ಜಾಮೀನು ನೀಡಲಾಗಿದ್ದು, ಅದರ ವಿಚಾರಕ್ಕೆ ನಾವು ಹೋಗುವುದಿಲ್ಲ. ಆದರೆ, ಹೈಕೋರ್ಟ್‌ ಆದೇಶದ ಪರಿಣಾಮಕ್ಕೆ ತಡೆ ನೀಡುತ್ತೇವೆ” ಎಂದರು.

Also Read
ಯುವಕ, ಯುವತಿಯರನ್ನು ಪ್ರತಿಭಟಿಸಿದಂತೆ ಹೆದರಿಸುವಲ್ಲಿ ಸರ್ಕಾರಿ ಸಂಸ್ಥೆಗಳು ಯಶಸ್ವಿಯಾಗಿವೆ: ನ್ಯಾ. ದೀಪಕ್‌ ಗುಪ್ತ

ಇದಕ್ಕೆ ಸಹಮತ ವ್ಯಕ್ತಪಡಿಸಿದ ಎಸ್‌ಜಿ ಮೆಹ್ತಾ ಅವರು “ಮೂವರು ಆರೋಪಿಗಳಿಗೆ ಜಾಮೀನು ನೀಡಿರುವ ದೆಹಲಿ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದರೆ ಜಾಮೀನು ರದ್ದಾಗಲಿದೆ ಎಂಬುದಕ್ಕೆ ನನ್ನ ಸಹಮತವಿದೆ. ಆದರೆ, ಇದು ಪೂರ್ವನಿದರ್ಶನವಾಗಬಾರದು” ಎಂದರು.

ಆರೋಪಿಗಳ ಪರ ವಾದಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು “ಇದಕ್ಕೆ ತಡೆ ನೀಡುವುದೆಂದರೆ ಮೇಲ್ನೋಟಕ್ಕೆ ಆದೇಶಕ್ಕೆ ತಡೆ ನೀಡಲಾಗಿದೆ ಎಂದಾಗುತ್ತದೆ. ನಾವು ಕೂಡ ಸಾಕಷ್ಟು ವಿಚಾರಗಳನ್ನು ಪ್ರಸ್ತಾಪಿಸಬೇಕಿದೆ. ಹಾಗೆ ಮಾಡುವುದು ಸರಿಯಲ್ಲ… ಇದೇ ಸಂದರ್ಭದಲ್ಲಿ ಹೈಕೋರ್ಟ್‌ ಆದೇಶವನ್ನು ಪೂರ್ವನಿದರ್ಶನವಾಗಿ ಪರಿಗಣಿಸಬಾರದು” ಎಂದರು.

ಅಂತಿಮವಾಗಿ ಪೀಠವು “ನೋಟಿಸ್‌ ಜಾರಿಗೊಳಿಸಿ. ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ದಾಖಲಿಸಬೇಕು. ಜುಲೈ 19ರಿಂದ ಆರಂಭವಾಗುವ ಇತರೆ ಪ್ರಕರಣಗಳಿಲ್ಲದ ವಾರದಲ್ಲಿ (ನಾನ್‌ ಮಿಸಿಲೇನಿಯಸ್‌ ವೀಕ್‌) ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಿ. ಇದೇ ವೇಳೆ ದೆಹಲಿ ಹೈಕೋರ್ಟ್‌ ಆದೇಶವನ್ನು ಯಾವುದೇ ವ್ಯಕ್ತಿ ಅಥವಾ ನ್ಯಾಯಾಲಯ ಪೂರ್ವನಿದರ್ಶನವಾಗಿ ಪರಿಗಣಿಸಬಾರದು” ಎಂದು ಆದೇಶಿಸಿತು.

Related Stories

No stories found.
Kannada Bar & Bench
kannada.barandbench.com