ಚುನಾವಣಾ ಬಾಂಡ್: ಮಾರ್ಚ್ ಮೂರನೇ ವಾರದಲ್ಲಿ ಅಂತಿಮ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠ ಮಂಗಳವಾರ ಈ ಕುರಿತು ಆದೇಶ ಹೊರಡಿಸಿದೆ.
Supreme Court and electoral bonds
Supreme Court and electoral bonds

ಸುದೀರ್ಘ ಸಮಯದಿಂದ ಬಾಕಿ ಇರುವ ವಿವಾದಿತ ಚುನಾವಣಾ ಬಾಂಡ್‌ ಯೋಜನೆ ಪ್ರಶ್ನಿಸಿ ದಾಖಲಿಸಿದ್ದ ಅರ್ಜಿಗಳ ಅಂತಿಮ ವಿಚಾರಣೆಯನ್ನು ಮಾರ್ಚ್‌ ಮೂರನೇ ವಾರದಲ್ಲಿ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತಿಳಿಸಿದೆ [ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತಿತರರು ಹಾಗೂ ಭಾರತ ಒಕ್ಕೂಟದ ಕ್ಯಾಬಿನೆಟ್ ಕಾರ್ಯದರ್ಶಿ ಇನ್ನಿತರರ ನಡುವಣ ಪ್ರಕರಣ].

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠ ಮಂಗಳವಾರ ಈ ಕುರಿತು ಆದೇಶ ಹೊರಡಿಸಿದೆ.

ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ ಕಾಯಿದೆ) ಅಡಿಯಲ್ಲಿ ತರಲು ಕೋರಿರುವ ಒಂದು ಅರ್ಜಿ ಮತ್ತು ರಾಜಕೀಯ ನಿಧಿಗಾಗಿ ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ ಅಡಿಯಲ್ಲಿ ಪ್ರಮಾಣೀಕರಣ ಕೋರಿರುವ ಇನ್ನೊಂದು ಅರ್ಜಿ ಈ ಎರಡೂ ಚುನಾವಣಾ ಬಾಂಡ್‌ ಪ್ರಕರಣಕ್ಕಿಂತಲೂ  ಭಿನ್ನವಾಗಿದ್ದು ಇವುಗಳನ್ನು ಪ್ರತ್ಯೇಕವಾಗಿ ಆಲಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿತು. ಈ ಅರ್ಜಿಗಳಿಗೆ ಸಂಬಂಧಿಸಿದಂತೆ ನೋಟಿಸ್‌ ಜಾರಿ ಮಾಡಿದ ನ್ಯಾಯಾಲಯ ಪ್ರಕರಣವನ್ನು ಏಪ್ರಿಲ್‌ನಲ್ಲಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.

ಚುನಾವಣಾ ಬಾಂಡ್‌ ಎಂಬುದು ಪ್ರಾಮಿಸರಿ ನೋಟಿನ ರೂಪದಲ್ಲಿದ್ದು, ಅದನ್ನು ಭಾರತೀಯತೆ ಇರುವ ಯಾವುದೇ ವ್ಯಕ್ತಿ, ಕಂಪೆನಿ, ಸಂಸ್ಥೆ ಅಥವಾ ಸಂಘಟನೆಯ ಖರೀದಿಸಬಹುದಾಗಿದೆ. ಚುನಾವಣಾ ಬಾಂಡ್‌ ವಿವಿಧ ಮೌಲ್ಯಗಳಲ್ಲಿ ಲಭ್ಯವಿದ್ದು, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ನಿರ್ದಿಷ್ಟ ಉದ್ದೇಶಕ್ಕಾಗಿ ಅವುಗಳನ್ನು ನೀಡಲಾಗುತ್ತದೆ. ಬಹುವರ್ಗೀಯ ಬಾಂಡ್‌ಗಳನ್ನು ನಿರ್ದಿಷ್ಟವಾಗಿ ದೇಶದ ರಾಜಕೀಯ ಪಕ್ಷಗಳಿಗೆ ನಿಧಿಯನ್ನು ಕೊಡುಗೆಯಾಗಿ ನೀಡುವ ಉದ್ದೇಶಕ್ಕಾಗಿ ಬಳಸಲಾಗುತ್ತದೆ.

Also Read
ವಿಧಾನಸಭಾ ಚುನಾವಣೆಗೂ ಮುನ್ನ ಚುನಾವಣಾ ಬಾಂಡ್‌ ಮಾರಾಟ ನಿಷೇಧ ಕೋರಿದ್ದ ಎಡಿಆರ್‌ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಹಣಕಾಸು ಕಾಯಿದೆ- 2017ರ ಮೂಲಕ ಚುನಾವಣಾ ಬಾಂಡ್‌ ಪರಿಚಯಿಸಲಾಯಿತು. ಬಾಂಡ್‌ ಜಾರಿಗೆ ತರಲೆಂದು  ಆರ್‌ಬಿಐ ಕಾಯಿದೆ, ಆದಾಯ ತೆರಿಗೆ ಕಾಯಿದೆ ಹಾಗೂ ಜನ ಪ್ರತಿನಿಧಿ ಕಾಯಿದೆಗಳಿಗೆ ತಿದ್ದುಪಡಿ ಮಾಡಲಾಗಿತ್ತು.

ಯಾವುದೇ ವರ್ಗೀಕೃತ ಬ್ಯಾಂಕ್‌ಗಳು ಬಾಂಡ್‌ ವಿತರಿಸಬಹುದು ಎಂಬ ವ್ಯವಸ್ಥೆಯನ್ನು 2017ರ ಹಣಕಾಸು ಕಾಯಿದೆ ಹೇಳುತ್ತದೆ. ಈ ಕಾಯಿದೆಯನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸಿದ್ದರಿಂದ ರಾಜ್ಯಸಭೆಯ ಒಪ್ಪಿಗೆ ಪಡೆಯುವ ಅಗತ್ಯ ಬಂದಿರಲಿಲ್ಲ.

ರಾಜಕೀಯ ಪಕ್ಷಗಳಿಗೆ ಮಿತಿರಹಿತ, ಪರಿಶೀಲನೆ ಇಲ್ಲದ ಹಣವು ಹರಿದು ಬರಲು ಹಣಕಾಸು ಕಾಯಿದೆ- 2017ರ  ಮೂಲಕ ಕನಿಷ್ಠ ಐದು ಕಾಯಿದೆಗಳಿಗೆ ತಿದ್ದಪಡಿ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ವಿವಿಧ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ.

ರಾಜ್ಯ ವಿಧಾನಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗ ಸಭೆಗೆ ಚುನಾವಣೆ ನಡೆಯುವ ವರ್ಷಗಳಲ್ಲಿ ಚುನಾವಣಾ ಬಾಂಡ್‌ಗಳ ಮಾರಾಟ ಅವಧಿಯನ್ನು15 ದಿನಗಳವರೆಗೆ ವಿಸ್ತರಿಸಬೇಕು ಎಂದು ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿರುವ ಅರ್ಜಿಗಳೊಂದಿಗೆ ಯೋಜನೆಯನ್ನು ಪ್ರಶ್ನಿಸಿರುವ ಅರ್ಜಿಗಳನ್ನೂ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಚುನಾವಣಾ ಬಾಂಡ್ ಯೋಜನೆ ಅತ್ಯಂತ ಪಾರದರ್ಶಕವಾಗಿದೆ ಎಂದು ಈ ಹಿಂದೆ ಕೇಂದ್ರ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ಹೇಳಿಕೊಂಡಿತ್ತು

Related Stories

No stories found.
Kannada Bar & Bench
kannada.barandbench.com