ಪಾಕಿಸ್ತಾನದಿಂದ ಹೆರಾಯಿನ್‌ ಕಳ್ಳಸಾಗಣೆ ಮಾಡಿದ ಮೀನುಗಾರನಿಗೆ ಜಾಮೀನು ನಿರಾಕರಿಸಿದ ಸುಪ್ರೀಂ: ಕಾರಣವೇನು ಗೊತ್ತೆ?

ಅಧಿಕಾರಿಗಳು “ಮೊಹಮ್ಮದ್‌ ರಂಜಾನ್‌ ರಂಜಾನ್‌ʼ ಎಂಬ ಸಂಕೇತ ಭಾಷೆ ರವಾನಿಸಿದರು. ಅರ್ಜಿದಾರ ರಾಮ್‌ಜಾನ್‌ ಪಳನಿ “ರಂಜಾನ್‌ ಹಾ ಬೋಲೊ” ಎಂದು ಪ್ರತಿಕ್ರಿಯಿಸಿದ್ದ. ಹಾಗಾಗಿ ಅವನನ್ನು ಬಂಧಿಸಲಾಗಿತ್ತು.
Supreme Court
Supreme Court

ಪಾಕಿಸ್ತಾನದಿಂದ ಭಾರತಕ್ಕೆ ಮಾದಕವಸ್ತು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಯುಎಪಿಎ ಮತ್ತು ಎನ್‌ಡಿಪಿಎಸ್‌ ಕಾಯಿದೆಯಡಿ ಬಂಧಿತನಾಗಿರುವ ಗುಜರಾತ್‌ ಮೂಲದ ಮೀನುಗಾರನೊಬ್ಬನಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನಿರಾಕರಿಸಿದೆ [ರಾಮ್‌ಜಾನ್ ಪಳನಿ ಮತ್ತು ಎನ್‌ಐಎ ನಡುವಣ ಪ್ರಕರಣ].

ಭಾರತದ ಜಲವ್ಯಾಪ್ತಿಯಲ್ಲಿ ಮಾದಕವಸ್ತುಗಳನ್ನು ಎಸೆಯುತ್ತಿದ್ದ ಪಾಕಿಸ್ತಾನದ ಹಡಗು ಆ ನಂತರ ಈ ಬಗ್ಗೆ ಸಂಕೇತ ಭಾಷೆಯಲ್ಲಿ ಭಾರತದ ಸಹವರ್ತಿಗೆ ಮಾಹಿತಿ ನೀಡುತ್ತಿತ್ತು. ಅದಕ್ಕೆ ಸಂಕೇತ ಭಾಷೆಯಲ್ಲಿಯೇ ಭಾರತದ ಸಹವರ್ತಿಯು ಉತ್ತರಿಸಿ ಹೆಚ್ಚಿನ ಮಾಹಿತಿ ಪಡೆಯಬೇಕಿತ್ತು. ಇದನ್ನು ಅರಿತ ಭಾರತದ ಅಧಿಕಾರಿಗಳು ಪಾಕಿಸ್ತಾನಿ ಹಡಗುಗಳು ಬಳಸುತ್ತಿದ್ದ ಸಂಕೇತ ಭಾಷೆಯನ್ನೇ ಬಳಸಿ ಆರೋಪಿಯು ಸ್ಪಂದಿಸುವಂತೆ ಮಾಡಿತ್ತು. ಹೀಗೆ ಅಕ್ರಮ ಮಾದಕದ್ರವ್ಯ ಸಾಗಣೆ ಆರೋಪದಡಿ ಬಂಧನಕ್ಕೊಳಗಾಗಿದ್ದ ರಾಮ್‌ಜಾನ್ ಪಳನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಅರ್ಜಿದಾರ ತನ್ನದೇ ಬಲೆಯೊಳಗೆ ಸಿಕ್ಕಿಹಾಕಿಕೊಂಡಂತೆ ತೋರುತ್ತದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌ ಹಾಗೂ ಹಿಮಾ ಕೋಹ್ಲಿ ಅವರಿದ್ದ ಪೀಠವು ಪ್ರಕರಣವನ್ನು ಆಲಿಸಿದ ನಂತರ ಅಭಿಪ್ರಾಯಪಟ್ಟಿತು.

ವಿಚಾರಣೆ ವೇಳೆ ಮೀನುಗಾರಿಕಾ ದೋಣಿಯಲ್ಲಿ ತನ್ನ ಉಪಸ್ಥಿತಿ ಸಂಪೂರ್ಣ ಕಾಕತಾಳೀಯ ಎಂದು ಸಮರ್ಥಿಸಲು ಅರ್ಜಿದಾರನಿಗೆ ಅರ್ಹತೆ ಇರುತ್ತದೆ. 'ಮೊಹಮ್ಮದ್-ಮೊಹಮ್ಮದ್-ರಂಜಾನ್-ರಂಜಾನ್' ಕರೆಗೆ ಓಗೊಟ್ಟ ಬಗ್ಗೆ ವಿವರಣೆ ನೀಡಲೂ ಸಹ ಅವಕಾಶವಿರುತ್ತದೆ. ಆದರೆ ಸದ್ಯಕ್ಕೆ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಎನ್‌ಐಎ ಹೇಳಿರುವಂತೆ ಗೊಂದಲಮಯ ಸನ್ನಿವೇಶದ ಲಾಭ ಪಡೆಯಲು ಅರ್ಜಿದಾರರು ಮುಂದಾದಂತೆ ಕಾಣುತ್ತಿದ್ದು, ತನ್ನದೇ ಬಲೆಯೊಳಗೆ ಸಿಲುಕಿಂತೆ ತೋರುತ್ತದೆ” ಎಂದು ನ್ಯಾಯಾಲಯ ಹೇಳಿದೆ.

Also Read
ಮಾದಕ ವಸ್ತು ಪ್ರಕರಣ: ಆರ್ಯನ್‌ ಖಾನ್‌ಗೆ ಜಾಮೀನು ಭದ್ರತೆ ನೀಡಿದ ಬಾಲಿವುಡ್‌ ನಟಿ ಜೂಹಿ ಜಾವ್ಲಾ

ಎನ್‌ಐಎ ಆರೋಪಪಟ್ಟಿ ಸಲ್ಲಿಸಿ ತನಿಖೆ ನಡೆಸುತ್ತಿರುವ ಅವಧಿಯಲ್ಲಿಯೇ ಪ್ರಕರಣಕ್ಕೆ ಸಂಬಂಧಿಸಿದ ಒಂಬತ್ತು ಮಂದಿ ಪಾಕಿಸ್ತಾನಿ ಪ್ರಜೆಗಳು ತಲೆ ಮರೆಸಿಕೊಂಡಿದ್ದಾರೆ ಎಂಬ ಅಂಶವನ್ನು ಪೀಠ ಗಮನಿಸಿತು.

ಗಂಭೀರ ಅಪರಾಧಕ್ಕಾಗಿ ಅರ್ಜಿದಾರರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದ್ದು ಕನಿಷ್ಠ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿರುವುದರಿಂದ ಗುಜರಾತ್‌ ಹೈಕೋರ್ಟ್‌ ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸಿ ಅರ್ಜಿದಾರರ ಪರ ತೀರ್ಪು ನೀಡಲು ಒಲವು ತೋರುತ್ತಿಲ್ಲ ಎಂಬುದಾಗಿ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿತು.

ಘಟನೆಯ ಹಿನ್ನೆಲೆ

ಮಾದಕವಸ್ತುವಿದ್ದ ಚೀಲಗಳನ್ನು ಭಾರತದ ಜಲಪ್ರದೇಶದೊಳಗೆ ಎಸೆಯಲು ಬಂದಿದ್ದ ಹಡಗೊಂದು ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಕರಾವಳಿ ಕಾವಲುಪಡೆಗೆ ಸಿಕ್ಕಿಬಿದ್ದಿತ್ತು. ಘಟನೆಯಲ್ಲಿ ಒಟ್ಟು 236.622 ಕೆಜಿ ಹೆರಾಯಿನ್‌ ವಶಪಡಿಸಿಕೊಳ್ಳಲಾಗಿತ್ತು. ಸಮುದ್ರದ ನಿರ್ದಿಷ್ಟ ಜಾಗದಲ್ಲಿ 211 ಚೀಲಗಳಲ್ಲಿ ಮಾದಕ ವಸ್ತುವನ್ನು ಎಸೆಯಲಾಗಿತ್ತು. ಹಡಗಿನ ಕ್ಯಾಪ್ಟನ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಸುಳಿವೊಂದು ದೊರೆಯಿತು. ಹಡಗಿನಿಂದ ಹಡಗಿಗೆ ಸಂವಹನಕ್ಕಾಗಿ ಬಳಸುವ ವಿಎಚ್‌ಎಫ್‌ ಚಾನೆಲ್‌ಮೂಲಕ ಹಡಗಿನ ಕ್ಯಾಪ್ಟನ್‌ ʼಮೊಹಮ್ಮದ್‌ʼ ಎಂದು ಹೇಳಬೇಕಿತ್ತು. ಅದಕ್ಕೆ ಭಾರತದ ಕಡೆಯಿಂದ ʼರಂಜಾನ್‌ʼ ಎಂಬ ಉತ್ತರ ನೀಡಬೇಕಿತ್ತು.

ಇದೇ ಸಂಕೇತ ಭಾಷೆ ಬಳಸಿ ಅಧಿಕಾರಿಗಳು ವಿಎಚ್‌ಎಫ್‌ ಚಾನೆಲ್‌ ಮೂಲಕ “ಮೊಹಮ್ಮದ್‌ ರಂಜಾನ್‌ ರಂಜಾನ್‌ʼ ಎಂಬ ಸಂಕೇತ ಭಾಷೆ ರವಾನಿಸಿದರು. ಅರ್ಜಿದಾರ ರಾಮ್‌ಜಾನ್‌ ಪಳನಿ “ರಂಜಾನ್‌ ಹಾ ಬೋಲೊ” ಎಂದು ಪ್ರತಿಕ್ರಿಯಿಸಿದ್ದ. ಹಾಗಾಗಿ ಅವನನ್ನು ಬಂಧಿಸಲಾಗಿತ್ತು.

ಮೀನುಗಾರ ತಪ್ಪು ಸಮಯದಲ್ಲಿ ತಪ್ಪು ಸ್ಥಳದಲ್ಲಿ ಅಹಿತಕರ ಘಟನೆಗಳಿಗೆ ಬಲಿಯಾಗಿದ್ದಾರೆ. ಅವರಿಗೆ ಅಪರಾಧದ ಹಿನ್ನೆಲೆ ಇಲ್ಲ. ಹಡಗಿನಲ್ಲಿದ್ದ 12 ಸಿಬ್ಬಂದಿಯನ್ನು ಬಂಧಿಸದೆ ತನ್ನನ್ನು ಮಾತ್ರ ಬಂಧಿಸಲಾಗಿದೆ ಎಂದು ಪಳನಿ ಪರ ವಕೀಲರು ವಾದಿಸಿದ್ದರು. ಆದರೆ ರಾಮ್‌ಜಾನ್‌ ವಿರುದ್ಧ ಗಂಭೀರ ಆರೋಪಗಳಿದ್ದು ಆತನಿಗೆ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಷನ್‌ ಒತ್ತಾಯಿಸಿತು.

ಈ ಹಿನ್ನೆಲೆಯಲ್ಲಿ ಅರ್ಜಿದಾರನ ಮನವಿಯನ್ನು ಪುರಸ್ಕರಿಸದ ಸುಪ್ರೀಂ ಕೋರ್ಟ್‌ ಜಾಮೀನು ನಿರಾಕರಣೆಗೆ ಕಾರಣವಾಗುವ ಸಾಕಷ್ಟು ದಾಖಲೆಗಳು ಮೇಲ್ನೋಟಕ್ಕೆ ಲಭ್ಯ ಇವೆ ಎಂದು ತಿಳಿಸಿತು.

Related Stories

No stories found.
Kannada Bar & Bench
kannada.barandbench.com