
ಪವನ ವಿದ್ಯುತ್ ಯೋಜನೆಯ ಸಾಮರ್ಥ್ಯ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಮಧ್ಯಪ್ರವೇಶಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.
ತೆಲಂಗಾಣ ಮೂಲದ ಎಸ್‌ಆರ್‌ಕೆ ಎನರ್ಜಿ ಪ್ರೈವೇಟ್ ಲಿಮಿಟೆಡ್ ಮತ್ತಿತರರ ಕಂಪೆನಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಮಾಡಿದೆ.
“ನಿಯಮಗಳಲ್ಲಿ ಲೋಪವಾಗಿದೆ ಎಂಬ ವಾದ ಮುಂದಿಟ್ಟುಕೊಂಡು ರಾಜ್ಯ ಸರ್ಕಾರವು ಸಾರ್ವಜನಿಕ ಹಿತಾಸಕ್ತಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಕೈಗೊಂಡಂತಹ ನಿರ್ಧಾರಗಳಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ” ಎಂದು ಪೀಠ ಹೇಳಿದೆ.
“ಪವನ ಸೇರಿದಂತೆ ನಾನಾ ರೂಪದ ನವೀಕರಿಸಬಹುದಾದ ಇಂಧನ ಮೂಲಗಳ ಸಾಮರ್ಥ್ಯವನ್ನು ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಅಂತಹ ಯೋಜನೆಗಳಿಗೆ 10 ಏಜೆನ್ಸಿಗಳನ್ನು ಸರ್ಕಾರ ಆಯ್ಕೆ ಮಾಡಿಕೊಂಡು ಅವುಗಳಿಗೆ ಆಧುನಿಕ ತಂತ್ರಜ್ಞಾನ ಹೊಂದಿರುವ ಘಟಕಗಳನ್ನು ಆರಂಭಿಸಲು ಉತ್ತೇಜನ ನೀಡುತ್ತಿದೆ. ಅದರಲ್ಲಿ ಅರ್ಜಿ ಸಲ್ಲಿಸಿರುವ ಕಂಪೆನಿಗಳು ಮತ್ತು ಪ್ರತಿವಾದಿಗಳು ಇಬ್ಬರೂ ಇದ್ದಾರೆ. ವಾಣಿಜ್ಯ ಮತ್ತು ಉದ್ಯಮಕ್ಕೆ ವಿದ್ಯುತ್ ಅಗತ್ಯವಿದೆ ಮತ್ತು ಅವುಗಳಿಂದ ವ್ಯಾಪಕ ಉದ್ಯೋಗಾವಕಾಶಗಳೂ ಸಹ ಸೃಷ್ಟಿಯಾಗುತ್ತಿವೆ” ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
2021ರ ಸೆಪ್ಟೆಂಬರ್ 4ರಂದು ರಾಜ್ಯ ಸರ್ಕಾರವು ಮೆಸರ್ಸ್ ಎಸ್‌ಎಂಎಲ್ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ಗೆ ನೀಡಿದ್ದ ಪವನ ವಿದ್ಯುತ್ ಯೋಜನೆಯನ್ನು ಅಯಾನ ಲಿಮಿಟೆಡ್‌ಗೆ ಹಸ್ತಾಂತರಿಸಲು ಮತ್ತು ಯೋಜನೆಯ ಸಾಮರ್ಥ್ಯವನ್ನು 10 ಮೆಗಾ ವ್ಯಾಟ್ ನಿಂದ 300 ಮೆಗಾ ವ್ಯಾಟ್‌ಗೆ ಹೆಚ್ಚಿಸಲು ಆದೇಶ ನೀಡಿತ್ತು. ಈ ಯೋಜನೆಗೆ 44 ಎಕರೆ ಭೂಮಿಯನ್ನು ಮೀಸಲಿಡಲಾಗಿತ್ತು.
ಪ್ರಕರಣದಲ್ಲಿನ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ಆದೇಶದ ವೇಳೆ ಶೇಕ್ಸ್‌ಪಿಯರ್ ರಚಿಸಿರುವ ‘ಮರ್ಚೆಂಟ್ ಆಫ್ ವೆನಿಸ್’ ನಾಟಕದ ನಿರ್ದಿಷ್ಟ ಭಾಗವನ್ನು ಪ್ರಸ್ತಾಪಿಸಿದರು. ದೂರುಗಳಿದ್ದರೆ ಅವುಗಳನ್ನು ಸರಿದೂಗಿಸಲು ಪ್ರಯತ್ನಿಸಬೇಕೆ ವಿನಾ ಬುದ್ದಿವಂತಿಕೆ ತೋರ್ಪಡಿಸಲು ವಾದ ಮಾಡಬಾರದು ಎಂದು ಹೇಳಿದರು. ನಾಟಕದಲ್ಲಿ ಲೇವಾದೇವಿಗಾರನಾದ ಶೈಲಾಕ್ ಸಾಲ ಮರುಪಾವತಿಸಲು ವಿಫಲವಾದರೆ ಆಂಟೊನಿಯೊ ತನ್ನ ದೇಹದ ಒಂದು ಪೌಂಡ್ ಮಾಂಸ ಕೊಡಬೇಕು ಎಂದು ಷರತ್ತು ವಿಧಿಸಿರುತ್ತಾನೆ.
ಪ್ರಕರಣವು ವಿಚಾರಣೆಯ ಹಂತ ತಲುಪಿ, ಆಂಟೊನಿಯೊನಿಂದ ಒಂದು ಪೌಂಡ್ ಮಾಂಸ ತೆಗೆದುಕೊಳ್ಳಲು ಶೈಲಾಕ್ ಸೂಚಿಸುತ್ತಾನೆ. ಪೊರ್ಷಿಯಾ (ಆಂಟೊನಿಯೊ ಸ್ನೇಹಿತನ ಪತ್ನಿ ಹಾಗೂ ಪ್ರಸಿದ್ಧ ವಕೀಲೆ) ಕರಾರಿನ ಪ್ರಕಾರ ಒಂದು ಪೌಂಡ್ ಮಾಂಸಕ್ಕೆ ಶೈಲಾಕ್ ಅರ್ಹನಾಗಿದ್ದಾನೆ. ಆದರೆ, ರಕ್ತ ಬಾರದಂತೆ ಒಂದು ಪೌಂಡ್ ಮಾಂಸವನ್ನು ತೆಗೆದುಕೊಳ್ಳಬೇಕು ಎಂದು ಹೇಳುತ್ತಾಳೆ. ಆಗ ಶೈಲಾಕ್ ದುಸ್ಸಾಧ್ಯವಾದ ಪರಿಸ್ಥಿತಿಗೆ ಸಿಲುಕುತ್ತಾನೆ. ಕೊನೆಗೆ ಆತ ಆಂಟೊನಿಯೊನನ್ನು ಬಿಟ್ಟುಬಿಡುತ್ತಾನೆ ಎಂದು ಪೀಠ ನಾಟಕದ ತಿರುಳನ್ನು ಪ್ರಸಕ್ತ ಪ್ರಕರಣದ ಹಿನ್ನೆಲೆಯಲ್ಲಿ ವಿವರಿಸಿತು.
“ಇಂಥ ಯೋಜನೆಗಳನ್ನು ಕೈಗೊಳ್ಳುವ ಉದ್ಯಮದ ಸ್ಪರ್ಧಿಗಳ ನಡುವೆ ಕೊಡುಕೊಳ್ಳುವಿಕೆ ಇರಬೇಕು” ಎಂದು ಪೀಠವು ತಿಳಿ ಹೇಳಿತು.