[ಹಿಜಾಬ್ ವಿವಾದ] "ನೀವು ಇದನ್ನು ರಾಷ್ಟ್ರಮಟ್ಟಕ್ಕೆ ತರಲು ಬಯಸುವಿರಾ? ನಾವು ಗಮನಿಸುತ್ತಿದ್ದೇವೆ" ಎಂದ ಸುಪ್ರೀಂ ಕೋರ್ಟ್

ಸಾಂವಿಧಾನಿಕ ಹಕ್ಕುಗಳು ಎಲ್ಲರಿಗೂ ಇವೆ. ಅದನ್ನು ಸುಪ್ರೀಂ ಕೋರ್ಟ್‌ ರಕ್ಷಿಸಲಿದೆ ಎಂದು ಸ್ಪಷ್ಟಪಡಿಸಿದ ಸಿಜೆಐ.
[ಹಿಜಾಬ್ ವಿವಾದ] "ನೀವು ಇದನ್ನು ರಾಷ್ಟ್ರಮಟ್ಟಕ್ಕೆ ತರಲು ಬಯಸುವಿರಾ? ನಾವು ಗಮನಿಸುತ್ತಿದ್ದೇವೆ" ಎಂದ ಸುಪ್ರೀಂ ಕೋರ್ಟ್

Supreme Court and Hijab Ban Case

ಹಿಜಾಬ್‌ ನಿಷೇಧದ ಕುರಿತಾದ ಪ್ರಕರಣದಲ್ಲಿ ಸೂಕ್ತ ಸಮಯದಲ್ಲಿ ಮಧ್ಯಪ್ರವೇಶಿಸುವುದಾಗಿ ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ. ಇದೇ ವೇಳೆ ಪಕ್ಷಕಾರರಿಗೆ ಅದು ವಿಷಯವನ್ನು ದೊಡ್ಡಮಟ್ಟದಲ್ಲಿ ವಿಸ್ತರಿಸದಂತೆ ಕಿವಿಮಾತು ಹೇಳಿದೆ [ಡಾ. ಜೆ ಹಳ್ಳಿ ಮಸೀದಿ, ಮದರಸಾ ಮತ್ತು ವಕ್ಫ್‌ ಸಂಸ್ಥೆಗಳ ಒಕ್ಕೂಟ].

ನ್ಯಾಯಾಲಯವು ಪ್ರಕರಣವನ್ನು ಗಮನಿಸುತ್ತಿರುವುದಾಗಿ ಹೇಳಿದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಅವರು ವಿವಾದವನ್ನು ಹಾಗೂ ಕರ್ನಾಟಕ ಹೈಕೋರ್ಟ್‌ ಮುಂದೆ ಇರುವ ವಿಚಾರಣೆಯನ್ನು ಗಮನಿಸುತ್ತಿರುವುದಾಗಿ ಹೇಳಿದರು. "ಈ ಸಂಗತಿಗಳನ್ನು ನೀವು ದೊಡ್ಡ ಮಟ್ಟದಲ್ಲಿ ವಿಸ್ತರಿಸಬೇಡಿ. ರಾಜ್ಯದಲ್ಲಿ ಏನಾಗುತ್ತಿದೆ ಹಾಗೂ ಹೈಕೋರ್ಟ್‌ನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ನಾವು ಗಮನಿಸುತ್ತಿದ್ದೇವೆ... ನೋಡೋಣ, ನಾವು ಸೂಕ್ತ ಸಮಯದಲ್ಲಿ ಮಧ್ಯಪ್ರವೇಶಿಸುತ್ತೇವೆ," ಎಂದು ಸಿಜೆಐ ಹೇಳಿದರು.

ಇದೇ ವೇಳೆ ಅವರು, ಸಾಂವಿಧಾನಿಕ ಹಕ್ಕುಗಳು ಎಲ್ಲರಿಗೂ ಇವೆ. ಅದನ್ನು ಸುಪ್ರೀಂ ಕೋರ್ಟ್‌ ರಕ್ಷಿಸಲಿದೆ ಎಂದು ಸ್ಪಷ್ಟಪಡಿಸಿದರು.

ಹಿರಿಯ ವಕೀಲ ದೇವದತ್‌ ಕಾಮತ್‌ ಅವರು ಪ್ರಕರಣದ ಕುರಿತಾಗಿ ಸಿಜೆಐ ಅವರ ಮುಂದೆ ಇಂದಿನ ಕಲಾಪದ ಆರಂಭದ ವೇಳೆ ಉಲ್ಲೇಖಿಸಿದರು. ಕರ್ನಾಟಕ ಹೈಕೋರ್ಟ್‌ನ ಮಧ್ಯಂತರ ಅದೇಶವು ಉಂಟು ಮಾಡುವ ಪರಿಣಾಮದ ಬಗ್ಗೆ ಗಮನಸೆಳೆದರು. ಪ್ರಕರಣ ಇತ್ಯರ್ಥವಾಗುವವರೆಗೆ ಯಾವುದೇ ವಿದ್ಯಾರ್ಥಿಗಳು ಧಾರ್ಮಿಕ ಸಂಕೇತಗಳನ್ನು ಪ್ರತಿನಿಧಿಸುವ ವಸ್ತ್ರಗಳನ್ನು ಧರಿಸದಂತೆ ಕರ್ನಾಟಕ ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶವು ಮುಸ್ಲಿಮರಿಗೆ ಮಾತ್ರವೇ ಅಲ್ಲದೆ ಎಲ್ಲ ಧರ್ಮದ ವ್ಯಕ್ತಿಗಳಿಗೂ ಅನ್ವಯಿಸುತ್ತದೆ ಎಂದರು. ರಾಜ್ಯವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಅವರು, ಹೈಕೋರ್ಟ್‌ನ ಆದೇಶ ಇನ್ನೂ ನ್ಯಾಯಾಲಯದ ಅಂತರ್ಜಾಲ ತಾಣದಲ್ಲಿ ಅಪ್‌ಲೋಡ್‌ ಅಗಿಲ್ಲ ಎಂದರು.

ಈ ಸಂದರ್ಭದಲ್ಲಿ ಕಾಮತ್‌ ಅವರು ಪ್ರಕರಣವನ್ನು ಸೋಮವಾರ ಪಟ್ಟಿ ಮಾಡುವಂತೆ ಸಿಜೆಐ ಅವರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, "ಸಾಂವಿಧಾನಿಕ ಹಕ್ಕುಗಳು ಎಲ್ಲರಿಗೂ ಇವೆ, ಅದನ್ನು ಈ ನ್ಯಾಯಾಲಯವು ರಕ್ಷಿಸಲಿದೆ. ಸೂಕ್ತ ಸಮಯದಲ್ಲಿ ನಾವು ಅದನ್ನು (ಪ್ರಕರಣವನ್ನು) ಪಟ್ಟಿ ಮಾಡುತ್ತೇವೆ" ಎಂದರು.

Related Stories

No stories found.