ಅಪಘಾತವೆಸಗಿದವರು ವಾಹನ ಕದ್ದಿದ್ದರೂ, ಅನಧಿಕೃತ ಚಾಲನೆ ಮಾಡಿದ್ದರೂ ಸಂತ್ರಸ್ತರಿಗೆ ಪರಿಹಾರ ನೀಡಬೇಕು: ದೆಹಲಿ ಹೈಕೋರ್ಟ್

ವಿಮೆದಾರರ ಕಡೆಯಿಂದ ಪಾಲಿಸಿಯ ಉದ್ದೇಶಪೂರ್ವಕ ಉಲ್ಲಂಘನೆಯಾಗಿದೆ ಎಂದು ಸಾಬೀತುಪಡಿಸಲು ಸಾಧ್ಯವಾದಾಗ ಮಾತ್ರ ವಿಮಾ ಕಂಪೆನಿ ಹೊಣೆಗಾರನಾಗುವುದಿಲ್ಲ ಎಂದ ಪೀಠ.
Cars

Cars


Representative image

ಅಪಘಾತ ಎಸಗಿದ ಚಾಲಕ ಆ ವಾಹನವನ್ನು ಕಳವು ಮಾಡಿದ್ದರೂ ಇಲ್ಲವೇ ಅನಧಿಕೃತವಾಗಿ ಚಾಲನೆ ಮಾಡಿದ್ದರೂ ಕೂಡ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸುವುದು ವಿಮಾ ಕಂಪನಿಯ ಹೊಣೆ ಎಂದು ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ [ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂ. ಲಿಮಿಟೆಡ್ ಮತ್ತು ಶ್ರೀಮತಿ. ಅನಿತಾ ದೇವಿ ಇನ್ನಿತರರ ನಡುವಣ ಪ್ರಕರಣ].

ವಿಮೆದಾರರ ಕಡೆಯಿಂದ ಪಾಲಿಸಿಯ ಉದ್ದೇಶಪೂರ್ವಕವಾಗಿ ಉಲ್ಲಂಘನೆಯಾಗಿದೆ ಎಂದು ಸಾಬೀತುಪಡಿಸಲು ಸಾಧ್ಯವಾದಾಗ ಮಾತ್ರ ವಿಮಾ ಕಂಪೆನಿ ಹೊಣೆಗಾರನಾಗುವುದಿಲ್ಲ ಎಂದು ನ್ಯಾ. ಸಂಜೀವ್ ಸಚ್‌ದೇವ ತಿಳಿಸಿದರು.

“ವಿಮಾ ಕಂಪೆನಿಯ ವಾದವನ್ನು ಒಪ್ಪಿದರೆ ಅಪಘಾತದ ಸಂತ್ರಸ್ತರಿಗೆ ನೆರವಾಗುವಂತಹ ಕಾನೂನಿನ ಕಲ್ಪನೆಯ ವಿರುದ್ಧ ಸಂಘರ್ಷಕ್ಕಿಳಿದಂತಾಗುತ್ತದೆ. ಇದರಿಂದ ವಿಮೆ ಮಾಡಿಸಿದ, ಆದರೆ ಕಳುವಾದ ವಾಹನದ ಬಗ್ಗೆ ವಿಮಾ ಕಂಪೆನಿ ಹೊಣೆಗಾರಿಕೆಯಿಂದ ನುಣುಚಿಕೊಂಡಂತಾಗಿ ಕಳವು ಮತ್ತು ಅಪಘಾತಕ್ಕೆ ಪರಿಹಾರ ದೊರೆಯಲೆಂದು ತನ್ನ ವಾಹನಕ್ಕೆ ವಿಮೆ ಮಾಡಿಸಿದ ವಾಹನ ಮಾಲೀಕ ತನ್ನದಲ್ಲದ ತಪ್ಪಿಗೆ ಹೊಣೆಗಾರನಾಗುತ್ತಾನೆ. ಪರಿಣಾಮವಾಗಿ ಹಕ್ಕುದಾರರು ಯಾವುದೇ ಪರಿಹಾರ ದೊರೆಯದೇ ಉಳಿದುಬಿಡುತ್ತಾರೆ” ಎಂದು ಪೀಠ ವಿವರಿಸಿದೆ. ವಾಹನ ಚಾಲಕನಿಗೆ ಪರಿಹಾರದ ಹಕ್ಕನ್ನು ಒದಗಿಸುವಂತೆ ನ್ಯಾಯಮಂಡಳಿ ನೀಡಿದ್ದ ಆದೇಶ ಪ್ರಶ್ನಿಸಿ ಯುನೈಟೆಡ್ ಇನ್ಶೂರೆನ್ಸ್ (ಅಪೀಲುದಾರ) ಮಾಡಿದ ಮನವಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.

Also Read
ಪಾದಚಾರಿ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದ್ದರೆ, ವಾಹನ ಸವಾರರನ್ನು ಹೊಣೆ ಮಾಡುವಂತಿಲ್ಲ: ಮುಂಬೈ ನ್ಯಾಯಾಲಯ

“ವಾಹನವನ್ನು ಕಳವು ಮಾಡಲಾಗಿದ್ದು ವೃತ್ತಿಪರ ಕಳ್ಳ ಅದನ್ನು ಓಡಿಸುತ್ತಿದ್ದ. ಹೀಗಾಗಿ ಪರಿಹಾರ ಮೊತ್ತ ಪಾವತಿಸುವುದು ವಿಮಾ ಕಂಪನಿಯ ಹೊಣೆಯಲ್ಲ” ಎಂಬುದು ವಿಮಾ ಕಂಪನಿ ವಾದವಾಗಿತ್ತು. ಹಾಗಾಗಿ ಅನಧಿಕೃತವಾಗಿ ವಾಹನ ಚಲಾಯಿಸುತ್ತಿರುವಾಗ ವಿಮಾ ಕಂಪೆನಿ ಪರಿಹಾರ ನೀಡುವ ಜವಾಬ್ದಾರಿಯಿಂದ ಮುಕ್ತವೇ ಎಂಬುದು ನ್ಯಾಯಾಲಯದ ಎದುರಿದ್ದ ಪ್ರಶ್ನೆಯಾಗಿತ್ತು.

ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಮತ್ತು ಲೆಹ್ರು ಇನ್ನಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಅವಲಂಬಿಸಿದ ನ್ಯಾಯಾಲಯ “ವಿಮಾದಾರರು ಯಾವುದೇ ಉದ್ದೇಶಪೂರ್ವಕ ಉಲ್ಲಂಘನೆ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ವಿಮಾ ಕಂಪೆನಿ ವಿಫಲವಾಗಿದೆ” ಎಂದು ಅಭಿಪ್ರಾಯಪಟ್ಟಿತು.

ವಿಮಾ ಕಂಪೆನಿ ಪರ ವಕೀಲರು ಅವಲಂಬಿಸಿದ್ದ ಮದ್ರಾಸ್‌ ಹೈಕೋರ್ಟ್ ಆದೇಶವೊಂದನ್ನು ನ್ಯಾ.ಸಚ್‌ದೇವ ಅವರು ಒಪ್ಪಲಿಲ್ಲ. ಲೆಹ್ರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಮದ್ರಾಸ್‌ ಹೈಕೋರ್ಟ್‌ ಪರಿಗಣಿಸಿಲ್ಲ ಎಂದು ಅವರು ಹೇಳಿದರು. ಹಾಗಾಗಿ ನ್ಯಾಯಾಧಿಕರಣದ ಆದೇಶದಲ್ಲಿ ಯಾವುದೇ ನ್ಯೂನತೆ ಇಲ್ಲ ಎಂದು ಅಭಿಪ್ರಾಯಪಟ್ಟಪೀಠ ಮೇಲ್ಮನವಿಗಳನ್ನು ವಜಾಗೊಳಿಸಿತು.

Related Stories

No stories found.
Kannada Bar & Bench
kannada.barandbench.com