ಕುಣಿಗಲ್ ಶಾಸಕ ರಂಗನಾಥ್ ಆಯ್ಕೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಿಜೆಪಿ ಪರಾಜಿತ ಅಭ್ಯರ್ಥಿ
ಚುನಾವಣಾ ಅಕ್ರಮ ಆರೋಪದ ಹಿನ್ನೆಲೆಯಲ್ಲಿ 2023ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಕಾಂಗ್ರೆಸ್ ನಾಯಕ ಡಾ. ಎಚ್ ಡಿ ರಂಗನಾಥ್ ಆಯ್ಕೆ ಪ್ರಶ್ನಿಸಿ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹಾಗೂ ಬಿಜೆಪಿ ನಾಯಕ ಡಿ ಕೃಷ್ಣ ಕುಮಾರ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿ ಸಂಬಂಧ ರಂಗನಾಥ್ ಅವರಿಗೆ ನೋಟಿಸ್ ನೀಡಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಎರಡು ವಾರಗಳ ಬಳಿಕ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.
ರಂಗನಾಥ್ ಅವರ ಶಾಸಕ ಸ್ಥಾನ ರದ್ದುಗೊಳಿಸುವಂತೆ ಕೋರಿ ಕೃಷ್ಣಕುಮಾರ್ ಈ ಹಿಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರಾದರೂ ಜೂನ್ 21 ರಂದು ಅದನ್ನು ತಿರಸ್ಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಮೇಲ್ಮನವಿಯಲ್ಲಿ ವಾಸ್ತವಾಂಶಗಳ ಕೊರತೆ ಇದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಅಲ್ಲದೆ ವಿಚಾರಣೆಯ ವಿಷಯ ಅಥವಾ ಕ್ರಿಯೆಯ ಕಾರಣವನ್ನು ಬಹಿರಂಗಪಡಿಸುವುದಿಲ್ಲ. ಅರ್ಜಿದಾರರ ತಕರಾರುಗಳು ಮತ್ತು ಆರೋಪಗಳು ಊಹೆ ಇಲ್ಲವೇ ಕಲ್ಪನೆಯನ್ನು ಆಧರಿಸಿದ್ದು ಅವರ ಆಯ್ಕೆಯನ್ನು ಪ್ರಶ್ನಿಸಲು ಸಾಲದು ಎಂದಿತ್ತು.
ಮತದಾರರನ್ನು ಓಲೈಸಲು ರಂಗನಾಥ್ ಪಾತ್ರೆ, ಅಡುಗೆ ಸಾಮಾನು, ಪ್ರಿಪೇಯ್ಡ್ ಕಾರ್ಡ್ ವಿತರಿಸಿದ್ದರು ಎಂಬುದು ಕುಮಾರ್ ಅವರ ಆರೋಪವಾಗಿತ್ತು. ಇದಲ್ಲದೆ, ರಂಗನಾಥ್ ತಮ್ಮ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ಮತ್ತು ಹೊಣೆಗಾರಿಕೆ ಬಗ್ಗೆಯೂ ಸುಳ್ಳು ಹೇಳಿದ್ದಾರೆ ಎಂದು ಕೃಷ್ಣಕುಮಾರ್ ಆರೋಪಿಸಿದ್ದರು.
ಕೃಷ್ಣಕುಮಾರ್ ಪರ ಹಿರಿಯ ವಕೀಲರಾದ ನಳಿನಾ ಮಾಯೇಗೌಡ, ವಕೀಲರಾದ ಪ್ರಿಯದರ್ಶಿ ಬ್ಯಾನರ್ಜಿ, ಅನುಷಾ ಬಿ ರೆಡ್ಡಿ, ಸಂತೋಷ್ ಬಿ, ರಿಷಿಕೇಶ್ ಎಂ ಕೊಟ್ಟೂರುಶೆಟ್ಟರ್, ರಿಷಬ್ ಸಿಂಘ್ಲೆ ಮತ್ತು ಸುಜೋಯ್ ಚಟರ್ಜಿ ವಾದ ಮಂಡಿಸಿದರು.
ರಂಗನಾಥ್ ಪರವಾಗಿ ಹಿರಿಯ ವಕೀಲ ದೇವದತ್ ಕಾಮತ್, ವಕೀಲರಾದ ಮಯಾಂಕ್ ಜೈನ್, ಪರಮಾತ್ಮ ಸಿಂಗ್ ಹಾಗೂ ಮಧುರ್ ಜೈನ್ ವಾದ ಮಂಡಿಸಿದರು.