ಕೆಐಐಎಫ್‌ಬಿ ವಿರುದ್ಧದ ತನಿಖೆ ಪ್ರಶ್ನಿಸಿ ಕೇರಳ ಹೈಕೋರ್ಟ್‌ಗೆ ಶಾಸಕರ ಮೊರೆ: ಇ ಡಿ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ

KK Shailaja , E Chandrashekharan, M Mukesh, Ramachandran Kadannappally, IB Satheesh and ED
KK Shailaja , E Chandrashekharan, M Mukesh, Ramachandran Kadannappally, IB Satheesh and ED ateniyamasabha.org

ಹಿಂದೆಂದೂ ಕಂಡಿರದ ಬೆಳವಣಿಗೆಯೊಂದರಲ್ಲಿ ಕೇರಳ ಮೂಲಸೌಕರ್ಯ ಹೂಡಿಕೆ ಮಂಡಳಿಯ ಹಣಕಾಸು ವಹಿವಾಟಿನ ಕುರಿತು ಜಾರಿ ನಿರ್ದೇಶನಾಲಯದ (ಇ ಡಿ) ತನಿಖೆ ಪ್ರಶ್ನಿಸಿ ಕೇರಳ ವಿಧಾನಸಭೆಯ ಐವರು ಸದಸ್ಯರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ ಡಾ. ಥಾಮಸ್‌ ಐಸಾಕ್‌ ಅವರ ವೈಯಕ್ತಿಕ ಆಸ್ತಿ ದಾಖಲೆಗಳನ್ನು ಕೇಳಿದ್ದೇಕೆ ಎಂದು ವಿವರಿಸುವಂತೆ ಕೇರಳ ಹೈಕೋರ್ಟ್‌ ನಿರ್ದೇಶನಾಲಯವನ್ನು ಕೇಳಿದೆ.

ತನಿಖೆ ಪ್ರಶ್ನಿಸಿ ಕೇರಳದ ಐವರು ಶಾಸಕರಾದ ಸಿಪಿಐಎಂನ ಕೆ ಕೆ ಶೈಲಜಾ, ಐ ಬಿ ಸತೀಶ್ ಮತ್ತು ಎಂ ಮುಖೇಶ್, ಸಿಪಿಐ ಶಾಸಕ ಇ ಚಂದ್ರಶೇಖರನ್ ಮತ್ತು ಕಾಂಗ್ರೆಸ್ (ಜಾತ್ಯತೀತ) ಶಾಸಕ ರಾಮಚಂದ್ರನ್ ಕಾಡನ್ನಪ್ಪಳ್ಳಿ ಅವರು ಪಿಐಎಲ್ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರಿದ್ದ ವಿಭಾಗೀಯ ಪೀಠ ಇಂದು ಪ್ರಕರಣದ ವಿಚಾರಣೆ ನಡೆಸಲಿದೆ.

ಇದೇ ವೇಳೆ ತನ್ನ ವಿರುದ್ಧ ಇ ಡಿ ಹೊರಡಿಸಿರುವ ಸಮನ್ಸ್‌ ಪ್ರಶ್ನಿಸಿ ಐಸಾಕ್‌ ಅವರು ಪ್ರತ್ಯೇಕ ಅರ್ಜಿ ಸಲ್ಲಿಸಿದರು. ಐಸಾಕ್‌ ಅವರ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ವಿ ಜಿ ಅರುಣ್‌ ಅವರಿದ್ದ ಏಕ ಸದಸ್ಯ ಪೀಠ “ಐಸಾಕ್‌ ಅವರಿಗೆ ಖಾಸಗಿತನದ ಹಕ್ಕಿದೆ" ಎಂದಿದೆ.

ಐಸಾಕ್‌ ಅವರಿಗೆ ಖಾಸಗಿತನದ ಹಕ್ಕಿದೆ. ಕಾನೂನಿನಿಂದ ರೂಪುಗೊಂಡಿರುವ ಕಾರ್ಯವಿಧಾನ ಅನುಸರಿಸದೆ ಇ ಡಿ ಅವರ ಹಕ್ಕನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ. ಮೊದಲ ನಿದರ್ಶನದಲ್ಲೇ ನೀವು ದಾಖಲೆಗಳನ್ನು ಕೇಳಬಹುದೇ ಎಂದು ಪೀಠ ಮೌಖಿಕವಾಗಿ ತರಾಟೆಗೆ ತೆಗೆದುಕೊಂಡಿತು.

Also Read
ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಐಸಾಕ್ ಅವರ ಆದಾಯ ತೆರಿಗೆ ರಿಟರ್ನ್ಸ್, ಹಣಕಾಸು ವ್ಯವಹಾರಗಳ ವಿವರಗಳು ಹಾಗೂ ಅವರ ಮತ್ತು ಕುಟುಂಬ ಸದಸ್ಯರಿಗೆ ಸೇರಿದ ಚರ ಮತ್ತು ಸ್ಥಿರ ಆಸ್ತಿಗಳ ವಿವರ ನೀಡುವಂತೆ ಜಾರಿ ನಿರ್ದೇಶನಾಲಯ ಕೇಳಿತ್ತು.

ಕೇಂದ್ರ ಸರ್ಕಾರದ ಪರ ವಾದಿಸಿದ ವಕೀಲ ಜೈಶಂಕರ್‌ ವಿ ನಾಯರ್‌ “ಐಸಾಕ್‌ ಅವರು ಹಾಜರಾಗಿ ತನ್ನ ದಾಖಲೆಗಳ ಅಗತ್ಯವಿಲ್ಲ ಎಂದು ತನಿಖಾಧಿಕಾರಿಗೆ ಮನವಿ ಮಾಡಿಕೊಡಬಹುದು ಎಂದರು. ಆದರೆ ಒಬ್ಬ ವ್ಯಕ್ತಿ ಶಂಕಿತ ಅಥವಾ ಆರೋಪಿಯಾಗುವ ಮುನ್ನವೇ ಪ್ರಾಥಮಿಕ ಹಂತದಲ್ಲಿ ಇಂತಹ ದಾಖಲೆಗಳನ್ನು ಕೋರಿದರೆ ಅದಕ್ಕೆ ವಿವರಣೆ ನೀಡಬೇಕಾಗುತ್ತದೆ ಎಂದು ನ್ಯಾಯಾಧೀಶರು ಹೇಳಿದರು. ಬಳಿಕ ನಾಯರ್‌ ಕೇಂದ್ರ ಸರ್ಕಾರದಿಂದ ಸೂಚನೆ ಪಡೆಯಲು ಸಮಯಾವಕಾಶ ಕೋರಿದರು. ಮುಂದಿನ ವಿಚಾರಣೆಗಾಗಿ ಆಗಸ್ಟ್ 17ಕ್ಕೆ ನ್ಯಾಯಾಲಯ ಪ್ರಕರಣವನ್ನು ಮುಂದೂಡಿತು.

ಕೆಐಐಎಫ್‌ಬಿಯಲ್ಲಿನ ತನ್ನ ಪಾತ್ರ ವಿವರಿಸಲು ಇ ಡಿ ಇಂದು ಆಗಸ್ಟ್ 11 ರಂದು ತನ್ನ ಮುಂದೆ ಹಾಜರಾಗುವಂತೆ ಕೇಳಿಕೊಂಡಿದೆ. ಸಮನ್ಸ್‌ನಲ್ಲಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಮತ್ತು ಆದಾಯ ತೆರಿಗೆ ಕಾಯ್ದೆಯ ನಿಬಂಧನೆಗಳನ್ನು ಉಲ್ಲೇಖಿಸಿದ್ದರೂ, ತನಿಖೆ ನಡೆಸುತ್ತಿರುವ ನಿಖರವಾದ ಉಲ್ಲಂಘನೆ ಏನು ಎಂಬುದನ್ನು ಅದು ಬಹಿರಂಗಪಡಿಸುವುದಿಲ್ಲ ಎಂದು ಐಸಾಕ್‌ ಮನವಿಯಲ್ಲಿ ಆರೋಪಿಸಿದ್ದಾರೆ.

ಐಸಾಕ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್‌ ದವೆ, ಕೆಐಐಎಫ್‌ಬಿಯಲ್ಲಿ ತನಿಖೆ ನಡೆಯುತ್ತಿದ್ದರೂ ಇ ಡಿ ಐಸಾಕ್ ಅಪರಾಧ ಎಸಗಿದಂತೆ ವರ್ತಿಸುತ್ತಿದೆ ಎಂದು ಹೇಳಿದರು. ವಿಚಾರಣೆ ಮುಂದುವರೆದಿದೆ.

ಕೆಐಐಎಫ್‌ಬಿಗೆ ಅಪಖ್ಯಾತಿ ತರಲು ಇ ಡಿ ಒಂದೊಕ್ಕೊಂದು ಸಂಬಂಧವಿಲ್ಲದ ತನಿಖೆ ನಡೆಸುತ್ತಿದೆ ಇದು ಹೂಡಿಕೆದಾರರನ್ನು ನಿರುತ್ಸಾಹಗೊಳಿಸುತ್ತದೆ ಎಂದು ಐಸಾಕ್‌ ಹಾಗೂ ಐವರು ಶಾಸಕರು ಸಲ್ಲಿಸಿರುವ ಅರ್ಜಿಗಳು ವಾದಿಸಿವೆ.

ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯ ನಾಯಕರನ್ನು ಗುರಿಯಾಗಿಸಿ ರಾಜ್ಯ ಸರ್ಕಾರಗಳನ್ನು ಉರುಳಿಸಲು ತನಿಖಾ ಸಂಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪದ ನಡುವೆ ಈ ಅರ್ಜಿಗಳು ಮಹತ್ವ ಪಡೆದಿವೆ.

ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ದೆಹಲಿ, ಜಾರ್ಖಂಡ್ ಹಾಗೂ ಕೇರಳದ ಹಾಲಿ ಮತ್ತು ಮಾಜಿ ಸಚಿವರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಇ ಡಿ ತನಿಖೆ ಎದುರಿಸುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಕಟ್ಟುನಿಟ್ಟಿನ ನಿಬಂಧನೆಗಳನ್ನು ಎತ್ತಿಹಿಡಿದು ಸುಪ್ರೀಂ ಕೋರ್ಟ್‌ ಇತ್ತೀಚಿಗೆ ನೀಡಿದ್ದ ತೀರ್ಪು ವಿರೋಧ ಪಕ್ಷದ ನಾಯಕರ ಟೀಕೆಗೆ ಗುರಿಯಾಗಿತ್ತು.

Related Stories

No stories found.
Kannada Bar & Bench
kannada.barandbench.com