ಕೃಷ್ಣಾ ಜಲ ವಿವಾದ: ಕರ್ನಾಟಕ, ಮಹಾರಾಷ್ಟ್ರ ಕೋರಿಕೆ ಕುರಿತು ತೀರ್ಮಾನಿಸಲು ಎರಡು ವಾರಗಳ ಕಾಲಾವಕಾಶ ಕೋರಿದ ಕೇಂದ್ರ

ರಾಜ್ಯಗಳು ತಮ್ಮ ವಾದದ ಪ್ರಮುಖ ಅಂಶಗಳನ್ನು ಒಳಗೊಂಡ ಮೂರು ಪುಟದ ಟಿಪ್ಪಣಿಯನ್ನು ವಿಚಾರಣೆಗೆ 48 ಗಂಟೆಗಳಿಗೂ ಮುನ್ನ ಸಲ್ಲಿಸಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿದೆ.
Krishna river and Supreme Court
Krishna river and Supreme Court

ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ 2010 ಹಾಗೂ 2013ರಲ್ಲಿ ನೀಡಿದ್ದ ಅಂತಿಮ ಐತೀರ್ಪುಗಳನ್ನು ಕೇಂದ್ರ ಸರ್ಕಾರ ತನ್ನ ಅಧಿಕೃತ ಗೆಜೆಟ್‌ನಲ್ಲಿ ಕೂಡಲೇ ಪ್ರಕಟಿಸಬೇಕು ಎಂದು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಲು ತನಗೆ ಎರಡು ವಾರಗಳ ಕಾಲಾವಕಾಶ ನೀಡಬೇಕೆಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ.

ಕೇಂದ್ರ ಸರ್ಕಾರದ ಪರ ವಕೀಲ ವಾಸಿಂ ಖಾದ್ರಿ ಅವರು ಸೋಮವಾರ ನಡೆದ ವಿಚಾರಣೆ ವೇಳೆ ಕೇಂದ್ರ ಜಲಶಕ್ತಿ ಸಚಿವಾಲಯದಿಂದ ಸೂಚನೆಗಳನ್ನು ಪಡೆಯಲು ಎರಡು ವಾರಗಳ ಕಾಲಾವಕಾಶ ಕೋರಿದರು. ಪ್ರಕರಣ ಸರ್ಕಾರದ ಪರಿಗಣನೆಯಲ್ಲಿದೆ ಎಂದು ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ನ್ಯಾ. ಡಿ ವೈ ಚಂದ್ರಚೂಡ್‌ ನೇತೃತ್ವದ ಪೀಠ ಪ್ರಕರಣವನ್ನು ಡಿ. 13ಕ್ಕೆ ಮುಂದೂಡಿತು.

ಮುಂದಿನ ವರ್ಷ (2022) ಜೂನ್‌ನಿಂದ ತನ್ನ ಪಾಲಿನ 75 ಟಿಎಂಸಿಯಷ್ಟು ನೀರನ್ನು ಬಳಸಿಕೊಳ್ಳಲು ಹಾಗೂ ಆ ಮೂಲಕ ರಾಜ್ಯದ 5.94 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನ್ಯಾಯಮಂಡಳಿಯ ಅಂತಿಮ ಐತೀರ್ಪಿನ ಬಗ್ಗೆ ಅಧಿಸೂಚನೆ ಹೊರಡಿಸಬೇಕು ಎಂದು ಕರ್ನಾಟಕ ಸರ್ಕಾರದ ಪರವಾಗಿ ಹಿರಿಯ ನ್ಯಾಯವಾದಿ ಶ್ಯಾಮ್‌ ದಿವಾನ್‌ ಮನವಿ ಮಾಡಿದರು.

Also Read
ಮಧ್ಯಸ್ಥಿಕೆಗೆ ಆಂಧ್ರ ವಿರೋಧ: ಜಲ ವಿವಾದ ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಎನ್ ವಿ ರಮಣ

ಸುಪ್ರೀಂಕೋರ್ಟ್‌ ದಿನಾಂಕ 16.09.2011ರಂದು ನೀಡಿದ್ದ ತಡೆಯಾಜ್ಞೆಯಿಂದಾಗಿ ಕೇಂದ್ರ ಸರ್ಕಾರ ನ್ಯಾಯಮಂಡಳಿಯ ಆದೇಶಗಳನ್ನು ಗೆಜೆಟ್‌ನಲ್ಲಿ ಪ್ರಕಟಿಸಲು ಅಡ್ಡಿ ಉಂಟಾಗಿದೆ. ಆದರೆ ಅಂತರರಾಜ್ಯ ಜಲವಿವಾದ ಕಾಯಿದೆಯ ಕಲಂ 6ರ ಅಡಿಯಲ್ಲಿ ನ್ಯಾಯಮಂಡಳಿಯ ಅಂತಿಮ ತೀರ್ಪುಗಳು ಸುಪ್ರೀಂಕೋರ್ಟ್‌ ಡಿಕ್ರಿಗೆ ಸಮಾನವಾಗಿದ್ದು ತಕ್ಷಣ ಅವುಗಳನ್ನು ಗೆಜೆಟ್‌ನಲ್ಲಿ ಪ್ರಕಟಿಸಬೇಕಿದೆ. ಕಾವೇರಿ ನ್ಯಾಯ ಮಂಡಳಿಯ ಅಂತಿಮ ತೀರ್ಪು ಪ್ರಕಟಿಸಲು ಸುಪ್ರೀಂಕೋರ್ಟ್‌ ನೀಡಿದ್ದ ನಿರ್ದೇಶನದಂತೆ ಈ ಪ್ರಕರಣದಲ್ಲೂ ನಿರ್ದೇಶನ ನೀಡಿ ಗೆಜೆಟ್ ಪ್ರಕಟಣೆಗೆ ಅವಕಾಶ ಕಲ್ಪಿಸಬೇಕೆಂದು ಕೋರಿದರು.

ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ-2 (ಬ್ರಿಜೇಶ್ ಕುಮಾರ್ ಆಯೋಗ) ನೀಡಿದ ಅಂತಿಮ ತೀರ್ಪು 2050ನೇ ಇಸವಿಯವರೆಗೆ ಜಾರಿಯಲ್ಲಿ ಇರುತ್ತದೆ. ಈಗಾಗಲೇ ಒಂದು ದಶಕದಷ್ಟು ಅಮೂಲ್ಯ ಸಮಯ ಕಳೆದುಕೊಂಡಿದ್ದೇವೆ. 1205 ಕಿ.ಮೀ. ಉದ್ದದ ಕಾಲುವೆ ಜಾಲ ನಿರ್ಮಾಣ ಮಾಡಿದ್ದು, 13,321 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಆದರೆ ನೀರು ಮಾತ್ರ ವ್ಯರ್ಥವಾಗಿ ಬಂಗಾಳ ಕೊಲ್ಲಿ ಸೇರುತ್ತಿದೆ. ರೈತರು ಕಾಲುವೆಗಳಿಗೆ ನೀರು ಒದಗಿಸುವಂತೆ ಚಳುವಳಿ ಮಾಡುತ್ತಿದ್ದಾರೆ ಎಂದು ಅವರು ವಿವರಿಸಿದರು.

ತೆಲಂಗಾಣ ಪರವಾಗಿ ವಾದ ಮಂಡಿಸಿದ ನ್ಯಾಯವಾದಿ ಸಿ ಎಸ್ ವೈದ್ಯನಾಥನ್ ಪ್ರಕರಣದಲ್ಲಿ ವಿವರವಾದ ವಾದ ಮಂಡನೆಗೆ ಅವಕಾಶ ಕೋರಿದರು. ಸಂಬಂಧಪಟ್ಟ ರಾಜ್ಯಗಳು ತಮ್ಮ ವಾದ ಪ್ರತಿವಾದದ ಪ್ರಮುಖ ಅಂಶಗಳನ್ನು ಒಳಗೊಂಡ ಮೂರು ಪುಟದ ಟಿಪ್ಪಣಿಯನ್ನು ವಿಚಾರಣೆಗೆ 48 ಗಂಟೆಗಳಿಗೂ ಮುನ್ನ ಸಲ್ಲಿಸಬೇಕೆಂದು ಸೂಚಿಸಿದ ಸುಪ್ರೀಂಕೋರ್ಟ್‌ ಡಿಸೆಂಬರ್ 13ಕ್ಕೆ ಪ್ರಕರಣದ ವಿಚಾರಣೆ ನಿಗದಿಪಡಿಸಿತು.

Related Stories

No stories found.
Kannada Bar & Bench
kannada.barandbench.com