ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 18-12-2020

>> ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಪ್ರಕರಣ >> ಟಿಆರ್‌ಪಿ ಹಗರಣ: ಬಾರ್ಕ್‌ ಮಾಜಿ ಸಿಒಒ ರೊಮಿಲಾ ರಾಮಗರಿಯಾ ಪೊಲೀಸ್‌ ವಶ ವಿಸ್ತರಣೆ >> ಶಬರಿಮಲೈ ದರ್ಶನ: ದಿನಕ್ಕೆ 5 ಸಾವಿರ ಭಕ್ತರಿಗೆ ಅನುಮತಿ >> ಶಾಸಕರ, ಸಂಸದರ ವಿರುದ್ಧದ ಪ್ರಕರಣ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 18-12-2020

ಆರೋಗ್ಯ ಸೇತು ಅಪ್ಲಿಕೇಶನ್‌ನಲ್ಲಿ ಬ್ಲೂಟೂತ್‌ ಆಟೊಮ್ಯಾಟಿಕ್‌ ಅಲ್ಲ, ಬಳಕೆದಾರರ ಒಪ್ಪಿಗೆ ಅಗತ್ಯ: ಕೇಂದ್ರ ಸರ್ಕಾರ

ಆರೋಗ್ಯ ಸೇತು ಮೊಬೈಲ್‌ ಅಪ್ಲಿಕೇಶನ್‌ ಬಳಸುವುದರಿಂದ ಆಟೊಮ್ಯಾಟಿಕ್‌ ಆಗಿ ಬ್ಲೂಟೂತ್‌ ವ್ಯವಸ್ಥೆ ಸಕ್ರಿಯಗೊಳ್ಳುವುದಿಲ್ಲ. ಇದಕ್ಕೆ ಬಳಕೆದಾರರ ಒಪ್ಪಿಗೆ ಅಗತ್ಯ ಎಂದು ಕೇಂದ್ರ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಬುಧವಾರ ವಿವರಿಸಿದೆ.

Aarogya Setu App
Aarogya Setu App

ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ನಾಲ್ಕು ದಿನಗಳ ಕಾಲ ವಿಚಾರಣೆ ನಡೆಸಿದ್ದು, ಆದೇಶ ಕಾಯ್ದಿರಿಸಿದೆ. ಬಳಕೆದಾರರ ಒಪ್ಪಿಗೆ ಪಡೆದ ಬಳಿಕವೇ ಅಪ್ಲಿಕೇಶನ್‌ನಲ್ಲಿನ ಬ್ಲೂಟೂತ್‌ ಸಕ್ರಿಯಗೊಳ್ಳಲಿದೆ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ ಬಿ ನರಗುಂದ ಹೇಳಿದರು. ಬ್ಲೂಟೂತ್‌ ಸಕ್ರಿಯವಾಗುವುದು ಆಟೊಮ್ಯಾಟಿಕ್‌ ಅಲ್ಲ ಎಂದು ಹೇಳಿದರು.

ಟಿಆರ್‌ಪಿ ಹಗರಣ: ಡಿಸೆಂಬರ್‌ 19ರ ವರೆಗೆ ಪೊಲೀಸ್‌ ವಶಕ್ಕೆ ಬಾರ್ಕ್‌ ಮಾಜಿ ಸಿಒಒ ರೊಮಿಲಾ ರಾಮಗರಿಯಾ

ಬಾರ್ಕ್‌ ಆಡಿಯನ್ಸ್‌ ರೀಸರ್ಚ್‌ ಕೌನ್ಸಿಲ್‌ (ಬಾರ್ಕ್‌) ಮಾಜಿ ಮುಖ್ಯ ನಿರ್ವಹಣಾ ಅಧಿಕಾರಿ (ಸಿಒಒ) ರೊಮಿಲಾ ರಾಮಗರಿಯಾ ಅವರು ಗುರುವಾರ ಬಂಧಿಸಲ್ಪಟ್ಟಿದ್ದು, ಅವರನ್ನು ಡಿಸೆಂಬರ್‌ 19ರ ವರೆಗೆ ಮುಂಬೈನ ಎಸ್ಪ್ಲನೇಡ್‌ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್ ಅವರು‌ ಪೊಲೀಸ್‌ ವಶಕ್ಕೆ ನೀಡಿದ್ದಾರೆ.

Mumbai Police, TRP scam
Mumbai Police, TRP scam

ಮುಂಬೈ ಪೊಲೀಸರು ಭೇದಿಸಿರುವ ನಕಲಿ ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್‌ ಹಗರಣದಲ್ಲಿ ಭಾಗಿಯಾಗಿದ್ದರು ಎನ್ನುವ ಆರೋಪದಲ್ಲಿ ರಾಮಗರಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್‌ 8ರಿಂದ ಹಲವು ಜನರನ್ನು ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಬರಿಮಲೈ ದರ್ಶನ: ದಿನಕ್ಕೆ ಐದು ಸಾವಿರ ಭಕ್ತರಿಗೆ ದೇವಸ್ಥಾನ ಪ್ರವೇಶಿಸಲು ಅನುಮತಿಸಿದ ಕೇರಳ ಹೈಕೋರ್ಟ್‌

ಶಬರಿಮಲೈ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಕಾತರರಾಗಿರುವ ಭಕ್ತರಿಗೆ ಕೇರಳ ಹೈಕೋರ್ಟ್‌ ಸಿಹಿ ಸುದ್ದಿ ನೀಡಿದೆ. ಡಿಸೆಂಬರ್‌ 20ರಿಂದ ಅನುವಾಗುವಂತೆ ದಿನವೊಂದಕ್ಕೆ ಐದು ಸಾವಿರ ಭಕ್ತರು ದೇವಸ್ಥಾನ ಪ್ರವೇಶಿಸಲು ಕೇರಳ ಹೈಕೋರ್ಟ್‌ ಅನುಮತಿ ನೀಡಿದೆ.

Saranam Ayyappa
Saranam Ayyappa

ಕೇರಳ ಸರ್ಕಾರವು ದೇವಸ್ಥಾನ ಪ್ರವೇಶದ ಮಿತಿಯನ್ನು ದಿನವೊಂದಕ್ಕೆ ಒಂದು ಸಾವಿರಕ್ಕೆ ಸೀಮಿತಗೊಳಿಸಿತ್ತು. ಇದನ್ನು ಹೆಚ್ಚಿಸುವಂತೆ ಕೋರಿ ಕೇರಳ ಹೈಕೋರ್ಟ್‌ ಗೆ ಮನವಿಗಳು ಸಲ್ಲಿಕೆಯಾಗಿದ್ದವು. ಶುಕ್ರವಾರ ಈ ಮನವಿಗಳ ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಸಾಂಕ್ರಾಮಿಕತೆಯ ಸನ್ನಿವೇಶವನ್ನು ಪರಿಗಣಿಸಿ ಪ್ರಸಕ್ತ ಪರಿಸ್ಥಿತಿಯಲ್ಲಿ ಅಯ್ಯಪ್ಪ ದರ್ಶನಕ್ಕೆ ಐದು ಸಾವಿರ ಮಂದಿಯವರೆಗೆ ಅನುಮತಿಸಬಹುದು ಎಂದು ಆದೇಶಿಸಿದೆ.

ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್‌ ಪ್ರಕರಣ: ಅಭಿಯೋಜಕರ ನೇಮಕಕ್ಕೆ ಪರಿಶೀಲನಾ ಪ್ರಕ್ರಿಯೆ ರೂಪಿಸಿ ಎಂದ ಕರ್ನಾಟಕ ಹೈಕೋರ್ಟ್‌

ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯಗಳಲ್ಲಿ ವಾದಿಸಲು ಅಭಿಯೋಜಕರ ನೇಮಕಕ್ಕೆ ಸೂಕ್ತ ಪರಿಶೀಲನಾ ಪ್ರಕ್ರಿಯೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ‌ ಆದೇಶಿಸಿದೆ.

Lawyers
Lawyers

ಜನಪ್ರತಿನಿಧಿಗಳ ವಿರುದ್ಧ ಬಾಕಿ ಇರುವ ಕ್ರಿಮಿನಲ್‌ ಪ್ರಕರಣಗಳನ್ನು ತ್ವರಿತವಾಗಿ ಅಲಿಸುವ ಸಂಬಂಧ ಕ್ರಿಯಾ ಯೋಜನೆಯೊಂದನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್ ಓಕಾ ಅವರ ನೇತೃತ್ವದ ವಿಭಾಗೀಯ ಪೀಠ ಪ್ರಕರಣವನ್ನು ಆಲಿಸುತ್ತಿತ್ತು. ವಿಶೇಷ ನ್ಯಾಯಾಲಯಗಳು ಆಲಿಸಲಿರುವ ಪ್ರಕರಣಗಳ ಗಹನತೆಯ ಹಿನ್ನೆಲೆಯಲ್ಲಿ ನಿಯುಕ್ತಿಗೊಳಿಸಲ್ಪಟ್ಟ ಅಭಿಯೋಜಕರು ಪರಿಣಾಮಕಾರಿಯಾಗಿ ಪ್ರಕರಣ ನಿರ್ವಹಿಸುವಂತಿರಬೇಕು. ಇದಕ್ಕಾಗಿ ಅಭಿಯೋಜಕರನ್ನು ನೇಮಿಸುವುದಕ್ಕೆ ಪರಿಶೀಲನಾ ಪ್ರಕ್ರಿಯೆಯನ್ನು ರೂಪಿಸುವುದು ಅಗತ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ‌

No stories found.
Kannada Bar & Bench
kannada.barandbench.com