ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 3-2-2021

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 3-2-2021

>> ಡಿಎನ್‌ಎ ಮಸೂದೆ ವರದಿ ಮಂಡನೆ >> ನಾಳೆ ಇ- ದಾಖಲ್‌ ಉದ್ಘಾಟನೆ >> ದೆಹಲಿ ಗಲಭೆ‌ ಫೇಸ್‌ಬುಕ್ ಪ್ರಕರಣ >> ಅರ್ನಾಬ್‌ ವಿರುದ್ಧ ಮಾನನಷ್ಟ ಮೊಕದ್ದಮೆ >>ವಾಟ್ಸಾಪ್‌ ಗೌಪ್ಯತಾ ನೀತಿ ಪ್ರಕರಣ

ಬಜೆಟ್‌ ಅಧಿವೇಶನದಲ್ಲಿ ಡಿಎನ್‌ಎ ಮಸೂದೆ ಕುರಿತ ವರದಿ ಮಂಡನೆ: ಸದನದ ಚರ್ಚೆಗೆ ಆಹ್ವಾನ

2019ರ ಡಿಎನ್‌ಎ ತಂತ್ರಜ್ಞಾನ (ಬಳಕೆ ಮತ್ತು ಅನ್ವಯ) ನಿಯಂತ್ರಣ ಮಸೂದೆ ಕುರಿತಂತೆ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿ ನೀಡಿರುವ ವರದಿಯನ್ನು ಬುಧವಾರ ಸಂಸತ್ತಿನ ಬಜೆಟ್‌ ಅಧಿವೇಶನದ ವೇಳೆ ಮಂಡಿಸಲಾಗಿದೆ. ಮಸೂದೆ ಪರಿಚಯಿಸಿದಾಗ ಡಿಎನ್‌ಎ ಪ್ರೊಫೈಲ್‌ಗಳು ವ್ಯಕ್ತಿಯ ಅತ್ಯಂತ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸಬಹುದು. ಅದರಿಂದ ಜಾತಿ / ಸಮುದಾಯ ಆಧಾರಿತ ಮಾಹಿತಿ ಜಾಹೀರಾಗಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅದನ್ನು ಪರಾಮರ್ಶಿಸಿ ವರದಿ ನೀಡಲು ಸ್ಥಾಯಿ ಸಮಿತಿಗೆ ಒಪ್ಪಿಸಲಾಗಿತ್ತು.

Parliament
Parliament

ಪ್ರಸ್ತುತ ಅಧಿವೇಶನದಲ್ಲಿ ಮಸೂದೆ ಕುರಿತು ಚರ್ಚಿಸಲು ಮತ್ತು ಸದನದ ಒಪ್ಪಿಗೆ ಪಡೆಯಲು ಅದನ್ನು ಪಟ್ಟಿ ಮಾಡಲಾಗಿದೆ. ಶಂಕಿತರು, ಅಪರಾಧಿಗಳು ಹಾಗೂ ಸಂತ್ರಸ್ತರ ಗುರುತನ್ನು ಪತ್ತೆಹಚ್ಚಲು ಡಿಎನ್‌ಎ ತಂತ್ರಜ್ಞಾನ ಬಳಸುವುದನ್ನು ಮಸೂದೆ ನಿಯಂತ್ರಿಸುತ್ತದೆ. ಡಿಎನ್‌ಎ ದತ್ತಾಂಶ ಮಂಡಳಿಗಳು ಮತ್ತು ಡಿಎನ್‌ಎ ಪ್ರಯೋಗಾಲಯಗಳ ಮೇಲ್ವಿಚಾರಣೆ ಮಾಡುವ ಡಿಎನ್‌ಎ ಪ್ರಯೋಗಾಲಯಗಳ ಸ್ಥಾಪನೆಗೆ ಮಸೂದೆ ಅವಕಾಶ ಮಾಡಿಕೊಡುತ್ತದೆ.

ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಗುರುವಾರ ಇ- ದಾಖಲ್‌ ಜಾಲತಾಣ ಉದ್ಘಾಟನೆ

ಗ್ರಾಹಕ ವ್ಯಾಜ್ಯಗಳ ವಿದ್ಯುನ್ಮಾನ ದಾಖಲೀಕರಣಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ನಾಳೆ (ಗುರುವಾರ) ʼಇ ದಾಖಲ್‌ʼ ಹೆಸರಿನ ಜಾಲತಾಣಕ್ಕೆ ಚಾಲನೆ ನೀಡುತ್ತಿದೆ. ಕಾರ್ಯಕ್ರಮವನ್ನು ಆಯೋಗದ ಅಧ್ಯಕ್ಷರಾದ ನ್ಯಾ. ಹುಲುವಾಡಿ ಜಿ ರಮೇಶ್‌ ಅವರು ಉದ್ಘಾಟಿಸಲಿದ್ದಾರೆ.

KSCDRC, Bangalore
KSCDRC, Bangalore

ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ ಎಚ್‌ ಅನಿಲ್‌ ಕುಮಾರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಿಗೆ 11-00 ಗಂಟೆಗೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸ್ಥಳ: ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, 4ನೇ ಮಹಡಿ, ನ್ಯಾಯಾಲಯ ಸಭಾಂಗಣ, ಬಸವ ಭವನ, ಬಸವೇಶ್ವರ ವೃತ್ತ, ಬೆಂಗಳೂರು.

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 3-2-2021
ರೈತರ ಪ್ರತಿಭಟನೆಗಳ ತಪ್ಪು ವರದಿಗಾರಿಕೆ ಆರೋಪ: ಎಫ್‌ಐಆರ್‌ ವಜಾ ಕೋರಿ ಸುಪ್ರೀಂ ಮೆಟ್ಟಿಲೇರಿದ ತರೂರ್‌, ರಾಜ್‌ದೀಪ್

ದೆಹಲಿ ದಂಗೆಯಲ್ಲಿ ಫೇಸ್‌ಬುಕ್‌ ಪಾತ್ರ: ಅಭಿಷೇಕ್‌ ಸಿಂಘ್ವಿ ವಾದ ಮಂಡನೆ, ವಿಚಾರಣೆ ಗುರುವಾರಕ್ಕೆ ಮುಂದೂಡಿಕೆ

ಫೇಸ್‌ಬುಕ್‌ನ ಯಾವುದೇ ಹಿರಿಯ, ಜವಾಬ್ದಾರಿಯುತ ಅಧಿಕಾರಿ ದೆಹಲಿ ವಿಧಾನಸಭೆಯ ಎದುರು ಹಾಜರಾಗಬಹುದು ಎಂದು ವಿಧಾನಸಭೆ ಪರ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಡಾ. ಅಭಿಷೇಕ್‌ ಮನು ಸಿಂಘ್ವಿ ಸ್ಪಷ್ಟಪಡಿಸಿದರು. 2020ರ ದೆಹಲಿ ಗಲಭೆಗಳ ತನಿಖೆಗಾಗಿ ದೆಹಲಿಯ ವಿಧಾನಸಭೆ ರಚಿಸಿದ್ದ ಶಾಂತಿ ಮತ್ತು ಸಾಮರಸ್ಯ ಸಮಿತಿಯ ಸಾಂವಿಧಾನಿಕತೆ ಪ್ರಶ್ನಿಸಿ ಫೇಸ್‌ಬುಕ್‌ನ ಭಾರತದ ಮುಖ್ಯಸ್ಥ ಅಜಿತ್‌ ಮೋಹನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದ್ದು ಬುಧವಾರ ದೆಹಲಿ ವಿಧಾನಸಭೆ ಪರವಾಗಿ ಡಾ. ಸಿಂಘ್ವಿ ವಾದ ಮಂಡಿಸಿದರು. ಆದರೆ ಅಜಿತ್‌ ಮೋಹನ್‌ ಅವರು ಹಾಜರಾಗುವ ಅನಿವಾರ್ಯತೆ ಇಲ್ಲ ಎಂಬುದನ್ನೂ ಅವರು ಇದೇ ವೇಳೆ ತಿಳಿಸಿದರು. ವಿಚಾರಣೆಯನ್ನು ನಾಳೆಗೆ (ಗುರುವಾರ) ಮುಂದೂಡಲಾಗಿದೆ.

Facebook
Facebook

ಮೋಹನ್‌ ಅವರು ವಿಧಾನಸಭೆಯಲ್ಲಿ ಹಾಜರಾಗಬೇಕಿಲ್ಲ ಎಂದು ಹಿರಿಯ ನ್ಯಾಯವಾದಿ ಹರೀಶ್‌ ಸಾಳ್ವೆ ಅವರು ಈ ಹಿಂದೆ ವಾದ ಮಂಡಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ಎಂಬಂತೆ ಸಿಂಘ್ವಿ ಬುಧವಾರ ವಾದ ಮಂಡಿಸಿದ್ದಾರೆ. ಸಮಿತಿ ಅಸಾಂವಿಧಾನಿಕವಾಗಿದೆ ಎಂದು ಕೇಂದ್ರ ಸರ್ಕಾರ ಮತ್ತು ಫೇಸ್‌ಬುಕ್ ಎರಡೂ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದವು.

ಅರ್ನಾಬ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಮುಂಬೈ ಪೊಲೀಸ್‌ ಅಧಿಕಾರಿ ಅಭಿಷೇಕ್‌ ತ್ರಿಮುಖೆ

ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ರಿಪಬ್ಲಿಕ್‌ ಟಿವಿ ನಿರೂಪಕ ಅರ್ನಾಬ್‌ ಗೋಸ್ವಾಮಿ, ಅವರ ಪತ್ನಿ ಸಾನಿಯಾ ಗೋಸ್ವಾಮಿ ಹಾಗೂ ವಾಹಿನಿಯ ಒಡೆತನ ಹೊಂದಿರುವ ಎಆರ್‌ಜಿ ಔಟ್ಲಯರ್‌ ವಿರುದ್ಧ ಮುಂಬೈ ಡಿಸಿಪಿ ಅಭಿಷೇಖ್‌ ತ್ರಿಮುಖೆ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ರಾಜ್ಯ ಗೃಹ ಇಲಾಖೆಯಿಂದ ಅನುಮತಿ ಪಡೆದ ನಂತರ ತ್ರಿಮುಖೆ ಮುಂಬೈನ ನ್ಯಾಯಾಲಯವೊಂದರಲ್ಲಿ ದೂರು ಸಲ್ಲಿಸಿದ್ದಾರೆ.

Arnab, Mumbai Police
Arnab, Mumbai Police

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಕುರಿತಾದ ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ರಿಪಬ್ಲಿಕ್ ಭಾರತ್‌ ವಾಹಿನಿಯ ಸುದ್ದಿ ಕಾರ್ಯಕ್ರಮವೊಂದರಲ್ಲಿ ಗೋಸ್ವಾಮಿ ತಮ್ಮ ಹಾಗೂ ನಟಿ ರಿಯಾ ಚಕ್ರವರ್ತಿ ಅವರ ಬಗ್ಗೆ ಕೆಲವು ಆಕ್ಷೇಪಾರ್ಹ ವಿಚಾರಗಳನ್ನು ಪ್ರಸಾರ ಮಾಡಿದ್ದರು ಎಂದು ತ್ರಿಮುಖೆ ಹೇಳಿದ್ದಾರೆ. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ ಅಡಿ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ನನ್ನ ಹೆಸರಿಗೆ ಕಳಂಕ ತರುವುದಕ್ಕೆ ಮುಂದಾಗಿದ್ದೇ ಅಲ್ಲದೆ ಮುಂಬೈ ಪೊಲೀಸರ ನಡವಳಿಕೆಯನ್ನು ಸಂಶಯಿಸುವಂತೆ ಕಾರ್ಯಾಕ್ರಮ ಪ್ರಸಾರ ಮಾಡಲಾಗಿತ್ತು. ಮುಂಬೈ ಪೊಲೀಸ್‌ ಸಂಸ್ಥೆ ವಿರುದ್ಧ ವ್ಯವಸ್ಥಿತ ಆರೋಪಗಳನ್ನು ಗೋಸ್ವಾಮಿ ಮಾಡಿದ್ದಾರೆ. ರಿಯಾ ಚಕ್ರವರ್ತಿ ಜೊತೆ ಪೊಲೀಸರು ಒಪ್ಪಂದ ಮಾಡಿಕೊಂಡಿದ್ದಾರೆ ಎಂಬರ್ಥ ಬರುವ ಹೇಳಿಕೆಗಳನ್ನು ಬಿತ್ತರಿಸಲಾಗಿತ್ತು. ಇದರಿಂದಾಗಿ ತಮ್ಮ ಕೀರ್ತಿ ಮತ್ತು ತಮ್ಮ ಬಗೆಗಿನ ಸದಾಶಯಗಳಿಗೆ ಧಕ್ಕೆಯಾಗಿದೆ. ಈ ಹಾನಿ ತುಂಬಿಕೊಳ್ಳಲು ಭಾರಿ ಸಮಯ ಬೇಕಾಗುತ್ತದೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 3-2-2021
ಯಥಾಸ್ಥಿತಿ ಆದೇಶ ಪ್ರಶ್ನಿಸಿ ದೆಹಲಿ ಹೈಕೋರ್ಟ್ ವಿಭಾಗೀಯ ಪೀಠದ ಮೊರೆ ಹೋದ ಫ್ಯೂಚರ್ ರಿಟೇಲ್: ನಾಳೆ ವಿಚಾರಣೆ

ನೂತನ ಗೌಪ್ಯತಾ ನೀತಿ ವಿರುದ್ಧದ ಪಿಐಎಲ್‌: ಪ್ರತಿಕ್ರಿಯೆ ನೀಡುವಂತೆ ಕೇಂದ್ರ, ವಾಟ್ಸಾಪ್‌ಗೆ ಸೂಚಿಸಿದ ದೆಹಲಿ ಹೈಕೋರ್ಟ್‌

ಸಾಮಾಜಿಕ ಮಾಧ್ಯಮ ದೈತ್ಯ ವಾಟ್ಸಾಪ್‌ನ ನೂತನ ಗೌಪ್ಯತಾ ನೀತಿಗೆ ಸಂಬಂಧಿಸಿದಂತೆ ಡಾ. ಸೀಮಾ ಸಿಂಗ್‌ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ಕೇಂದ್ರ ಸರ್ಕಾರ ಮತ್ತು ವಾಟ್ಸಾಪ್‌ ಸಂಸ್ಥೆಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ. ಪ್ರಕರಣದ ಸಂಬಂಧ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರು ಸಂಬಂಧಪಟ್ಟವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ನೂತನ ಗೌಪ್ಯತಾ ನೀತಿಯನ್ನು ಹಿಂಪಡೆಯಬೇಕು ಇಲ್ಲವೇ ಗೌಪ್ಯತಾ ನೀತಿಯಿಂದ ಹೊರಗುಳಿಯವ ಆಯ್ಕೆಯನ್ನು ಬಳಕೆದಾರರಿಗೆ ಒದಗಿಸಲು ನಿರ್ದೇಶನ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಪ್ಲಿಕೇಶನ್‌ಗಳು ಮತ್ತು ಸಂಸ್ಥೆಗಳಿಂದ ನಾಗರಿಕರ ಗೌಪ್ಯತೆ ಮತ್ತು ಮಾಹಿತಿ ಸಂರಕ್ಷಿಸಲು ನಿಯಮ/ ಮಾರ್ಗಸೂಚಿ/ ನಿಬಂಧನೆಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆಯೂ ಕೋರಲಾಗಿದೆ. ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಸಮಿತಿಯ ವರದಿಯನ್ನು ಆಧರಿಸಿ "ದತ್ತಾಂಶ ತತ್ವ ವಿಸ್ಮೃತಿ ಹಕ್ಕು" ಸೇರಿದಂತೆ ದತ್ತಾಂಶ ಸಂರಕ್ಷಣೆಗಾಗಿ ಕೆಲವು ಹಕ್ಕುಗಳ ಅಗತ್ಯವಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಮಾರ್ಚ್‌ 19ರಂದು ಪ್ರಕರಣ ವಿಚಾರಣೆಗೆ ಬರಲಿದೆ. ಈ ಮಧ್ಯೆ ನೂತನ ಗೌಪ್ಯತಾ ನೀತಿಯನ್ನು ಪ್ರಶ್ನಿಸಿ ವಕೀಲ ಚೈತನ್ಯ ರೋಹಿಲ್ಲಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಏಕಸದಸ್ಯ ಪೀಠದೆದುರು ಬಾಕಿ ಇದ್ದು, ಆ ಪ್ರಕರಣದಲ್ಲಿ ಯಾರಿಗೂ ಇನ್ನೂ ನೋಟಿಸ್‌ ನೀಡಿಲ್ಲ.

No stories found.
Kannada Bar & Bench
kannada.barandbench.com