ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 15-10-2020

>> ಭೀಮಾ ಕೋರೆಗಾಂವ್ ಪ್ರಕರಣ >> ಟಿಆರ್‌ಪಿ ಹಗರಣ >> ಆನ್‌ಲೈನ್‌ ಸ್ಟ್ರೀಮಿಂಗ್ ತಾಣಗಳ ಮೇಲಿ ನಿಗಾಗೆ ಸ್ವಾಯತ್ತ ಸಂಸ್ಥೆ ಸ್ಥಾಪನೆ ಅರ್ಜಿ >> ವೊಡಾಫೋನ್ ತೆರಿಗೆ ಪ್ರಕರಣ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 15-10-2020

ಭೀಮಾ ಕೋರೆಗಾಂವ್: ವರವರ ರಾವ್ ಅವರನ್ನು ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಸುಪ್ರೀಂ ಕದತಟ್ಟಿದ ರಾವ್ ಪತ್ನಿ

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿ ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತ, ಕ್ರಾಂತಿಕಾರಿ ಕವಿ ಡಾ ಪಿ ವರವರ ರಾವ್ ಅವರನ್ನು ಜೈಲಿನ ಅಧಿಕಾರಿಗಳು ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದು, ವೈದ್ಯಕೀಯ ಆಧಾರದಲ್ಲಿ ಅವರಿಗೆ ತಾತ್ಕಾಲಿಕ ಜಾಮೀನು ನೀಡುವ ಮೂಲಕ ಬಿಡುಗಡೆಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ರಾವ್ ಅವರ ಪತ್ನಿ ಪೆಂಡ್ಯಾಲ ಹೇಮಲತಾ ಮನವಿ ಸಲ್ಲಿಸಿದ್ದಾರೆ.

Varavara Rao
Varavara Rao

ವಕೀಲ ಆರ್ ಸತ್ಯನಾರಾಯಣ ಅವರು ಸಿದ್ಧಪಡಿಸಿರುವ ಮನವಿಯನ್ನು ವಕೀಲ ಸುನಿಲ್ ಫರ್ನಾಂಡೀಸ್ ಸಲ್ಲಿಸಿದ್ದು, ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ರಾವ್ ಅವರನ್ನು ಪ್ರತಿನಿಧಿಸಿದ್ದು, “ರಾವ್ ಅವರನ್ನು ನಿರಂತರವಾಗಿ ಜೈಲಿನಲ್ಲಿಟ್ಟಿರುವುದು ಕ್ರೂರ ಮತ್ತು ಅಮಾನುಷ ನಡೆಗೆ ಸಮಾನವಾಗಿದ್ದು, ಇದು ಸಂವಿಧಾನದ 21ನೇ ವಿಧಿಯ ಅನ್ವಯ ಕಸ್ಟಡಿಯಲ್ಲಿ ಅವರ ಘನತೆಯ ಉಲ್ಲಂಘನೆಯಾಗಿದೆ. ಈ ಮೂಲಕ ಮಹಾರಾಷ್ಟ್ರ ಸರ್ಕಾರ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಗಳು ರಾವ್ ಅವರ ಹಕ್ಕುಗಳನ್ನು ಉಲ್ಲಂಘಿಸಿವೆ” ಎಂದು ವಾದಿಸಿದರು.

ಟಿಆರ್‌ಪಿ ಹಗರಣವನ್ನು ಮಾಧ್ಯಮ ಪ್ರಹಸನವನ್ನಾಗಿಸುತ್ತಿರುವ ರಿಪಬ್ಲಿಕ್ ಟಿವಿ: ಸುಪ್ರೀಂಗೆ ಮುಂಬೈ ಪೊಲೀಸ್ ಅಫಿಡವಿಟ್

ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ದಾಖಲಿಸಲಾಗಿರುವ ಪ್ರಥಮ ವರ್ತಮಾನ ವರದಿಯನ್ನು ಮಾಧ್ಯಮ ಪ್ರಹಸವನ್ನಾಗಿಸುವ ಕೆಲಸವನ್ನು ರಿಪಬ್ಲಿಕ್ ಟಿವಿ ಮಾಡುತ್ತಿದೆ. ಸಂವಿಧಾನದ ವಿಧಿ 19(1)(a) ಅಡಿ ಪ್ರಾಪ್ತವಾಗಿರುವ ಹಕ್ಕುಗಳನ್ನು ಅಪರಾಧಗಳನ್ನು ಮುಚ್ಚಿಕೊಳ್ಳಲು ಬಳಸಲಾಗದು ಎಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗಿರುವ ಅಫಿಡವಿಟ್‌ನಲ್ಲಿ ಮುಂಬೈ ಪೊಲೀಸರು ಉಲ್ಲೇಖಿಸಿದ್ದಾರೆ.

Republic, Arnab Goswami
Republic, Arnab Goswami

ಸುಪ್ರೀಂ ಕೋರ್ಟ್‌ ನಲ್ಲಿ ರಿಪಬ್ಲಿಕ್ ಟಿವಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ಕಾನೂನು ಪ್ರಕ್ರಿಯೆಯ ಉಲ್ಲಂಘನೆ ಎಂದಿರುವ ಮುಂಬೈ ಪೊಲೀಸರು, ಸೂಕ್ತ ದಂಡ ವಿಧಿಸಿ ಅರ್ಜಿಯನ್ನು ವಜಾಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ವೊಡಾಫೋನ್ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಎಜಿ ವೇಣುಗೋಪಾಲ್ ಉತ್ಸುಕರಾಗಿಲ್ಲ ಎಂಬ ವರದಿ ದೋಷಪೂರಿತ: ಹಣಕಾಸು ಇಲಾಖೆ ಸ್ಪಷ್ಟನೆ

ಟೆಲಿಕಾಂ ದೈತ್ಯ ವೊಡಾಫೋನ್ ತೆರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಶ್ವತ ಮಧ್ಯಸ್ಥಿಕೆ ನ್ಯಾಯಮಂಡಳಿ (ಪಿಸಿಎ) ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ವಿಚಾರದ ಪರ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಇಲ್ಲ ಎಂಬ ವರದಿಗಳನ್ನು ಕೇಂದ್ರ ಹಣಕಾಸು ಸಚಿವಾಲಯ ಅಲ್ಲಗಳೆದಿದೆ. ಅಂಥ ವರದಿಗಳು ದೋಷಪೂರಿತವಾಗಿದ್ದು, ವಾಸ್ತವಾಂಶಗಳಿಂದ ಕೂಡಿಲ್ಲ ಎಂದಿದೆ.

Attorney General KK Venugopal
Attorney General KK Venugopal

ಕಳೆದ ತಿಂಗಳು ಪಿಸಿಎ ನೀಡಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದನ್ನು ತಡೆಹಿಡಿಯುವುದು ಸೂಕ್ತ ಎಂಬ ವಿಚಾರವನ್ನು ವೇಣುಗೋಪಾಲ್ ಅವರು ಮೌಖಿಕವಾಗಿ ಕೇಂದ್ರ ಸರ್ಕಾರಕ್ಕೆ ವಿವರಿಸಿದ್ದಾರೆ ಎಂದು ಆಂಗ್ಲ ಪತ್ರಿಕೆ ಬಿಸಿನೆಸ್ ಸ್ಟ್ಯಾಂಡರ್ಡ್‌ ವರದಿ ಮಾಡಿತ್ತು.

ಆನ್‌ಲೈನ್ ಸ್ಟ್ರೀಮಿಂಗ್ ತಾಣಗಳಲ್ಲಿನ ವಸ್ತುವಿಷಯ ನಿಯಂತ್ರಿಸಲು ಸ್ವಾಯತ್ತ ಸಂಸ್ಥೆ ಹುಟ್ಟು ಹಾಕುವ ಮನವಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

ಆನ್‌ಲೈನ್ ಸ್ಟ್ರೀಮಿಂಗ್ ತಾಣಗಳಾದ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ಗಳನ್ನು ನಿಯಂತ್ರಿಸುವ ಸಂಬಂಧ ಸ್ವಾಯತ್ತ ಸಂಸ್ಥೆ ಸ್ಥಾಪಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮನವಿ (ಪಿಐಎಲ್) ವಿಚಾರಣೆಗೆ ಸುಪ್ರೀಂ ಕೋರ್ಟ್‌ ಗುರುವಾರ ಪರಿಗಣಿಸಿದೆ.

Representation picture
Representation picture

ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಶಶಾಂಕ್ ಶೇಖರ್ ಜಾ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿ ನೋಟಿಸ್ ಜಾರಿಗೊಳಿಸಿತು. ಈ ಸ್ವಾಯತ್ತ ಸಂಸ್ಥೆಯನ್ನು 'ಕೇಂದ್ರೀಯ ಆನ್‌ ಲೈನ್ ವಿಡಿಯೋಗಳ ವಸ್ತುವಿಷಯ ನಿಯಂತ್ರಣಾ ನಿಗಾ ಮಂಡಳಿ' ಎಂದು ಹೆಸರಿಸಬಹುದು ಎಂದು ಮನವಿದಾರರು ಸಲಹೆ ನೀಡಿದ್ದಾರೆ.

Related Stories

No stories found.