ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |03-4-2021

>> ಏಪ್ರಿಲ್‌ 9ರವರೆಗೆ ನಿಯಮಿತ ವಿಚಾರಣೆ ಮಿತಿಗೊಳಿಸಿದ ಅಲಾಹಾಬಾದ್‌ ಹೈಕೋರ್ಟ್‌ >> ಬಿಜೆಪಿ ಮಾಜಿ ಸಂಸದನ ವಿರುದ್ಧ 100 ಕೋಟಿ ರೂಪಾಯಿ ಮಾನಹಾನಿ ಮೊಕದ್ದಮೆ ದಾಖಲಿಸಿದ ಶಿವಸೇನಾ ಶಾಸಕ ಹಾಗೂ ಪತ್ನಿ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |03-4-2021

ಏಪ್ರಿಲ್‌ 9ರವರೆಗೆ ನಿಯಮಿತ ವಿಚಾರಣೆ ಮಿತಿಗೊಳಿಸಿದ ಅಲಾಹಾಬಾದ್‌ ಹೈಕೋರ್ಟ್‌, ತುರ್ತು ಪ್ರಕರಣಗಳು ಮಾತ್ರ ವಿಚಾರಣೆಗೆ ನಿಗದಿ

ಕೋವಿಡ್‌ ಪ್ರಕರಣಗಳು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಅಲಾಹಾಬಾದ್‌ ಹೈಕೋರ್ಟ್‌ ಲಖನೌ ಮತ್ತು ಅಲಾಹಾಬಾದ್‌ ಪೀಠದಲ್ಲಿ ಪ್ರಕರಣಗಳ ವಿಚಾರಣೆಗೆ ಮಿತಿ ನಿಗದಿಗೊಳಿಸಲು ನಿರ್ಧರಿಸಿದೆ. ತುರ್ತು ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠಗಳನ್ನು ನಿಯುಕ್ತಿಗೊಳಿಸಲಾಗುವುದು. ಹೊಸ ಮಾರ್ಗಸೂಚಿಯನ್ನು ರಿಜಿಸ್ಟ್ರಾರ್‌ ಜನರಲ್‌ ಹೊರಡಿಸಲಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಗೋವಿಂದ್‌ ಮಾಥೂರ್‌ ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿ ನಿರ್ದೇಶನ ನೀಡಿದ್ದಾರೆ ಎಂದು ಅಲಾಹಾಬಾದ್‌ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಪತ್ರದಲ್ಲಿ ತಿಳಿಸಿದ್ದಾರೆ.

Allahabad high court
Allahabad high court

“ಪ್ರಯಾಗರಾಜ್‌ ಮತ್ತು ಲಖನೌನಲ್ಲಿ ಕೋವಿಡ್‌ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಆಡಳಿತಾತ್ಮಕ ಸಮಿತಿಯು ಏಪ್ರಿಲ್‌ 5ರಿಂದ 9ರವರೆಗೆ ನಿಯಮಿತ ವಿಚಾರಣೆ ನಡೆಸುವುದಿಲ್ಲ. ಈ ಅವಧಿಯಲ್ಲಿ ತುರ್ತು ಪ್ರಕರಣಗಳ ವಿಚಾರಣೆ ನಡೆಸಲು ವಿಶೇಷ ಪೀಠಗಳನ್ನು ರಚಿಸಲಾಗುವುದು” ಎಂದು ಹೇಳಿದೆ.

ಬಿಜೆಪಿ ಮಾಜಿ ಸಂಸದನ ವಿರುದ್ಧ 100 ಕೋಟಿ ರೂಪಾಯಿ ಮಾನಹಾನಿ ಮೊಕದ್ದಮೆ ದಾಖಲಿಸಿದ ಶಿವಸೇನಾ ಶಾಸಕ ರವೀಂದ್ರ ವಾಯ್ಕರ್ ಹಾಗೂ ಪತ್ನಿ

ಶಿವಸೇನಾ ಶಾಸಕ ರವೀಂದ್ರ ವಾಯ್ಕರ್ ಮತ್ತು ಅವರ ಪತ್ನಿ ಮನೀಶಾ ವಾಯ್ಕರ್‌ ಅವರು ಬಿಜೆಪಿ ಮಾಜಿ ಸಂಸದ ಕಿರೀಟ್‌ ಸೋಮಯ್ಯ ವಿರುದ್ಧ 100 ಕೋಟಿ ರೂಪಾಯಿ ಮಾನಹಾನಿ ಮೊಕದ್ದಮೆ ದಾಖಲಿಸಿದ್ದಾರೆ. ತಮ್ಮ ಪಕ್ಷದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಸೋಮಯ್ಯ ಅವರು ಪರೋಕ್ಷವಾಗಿ ನಮ್ಮ ನಾಯಕತ್ವದ ಮೇಲೆ ದಾಳಿ ನಡೆಸುವ ಉದ್ದೇಶದಿಂದ ನಮ್ಮ ಮೇಲೆ ನಿರಂತರವಾಗಿ ನಿರಾಧಾರ ಆರೋಪ ಮಾಡುತ್ತಿದಾರೆ ಎಂದು ವಾಯ್ಕರ್‌ ದಂಪತಿ ಆರೋಪಿಸಿದ್ದಾರೆ.

Bombay High Court
Bombay High Court

“ರಾಜಕೀಯ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಸೋಮಯ್ಯ ಅವರು ಕಾನೂನುಬಾಹಿರವಾಗಿ ವಾಯ್ಕರ್‌ ಅವರ ಮೂಲಕ ತಮ್ಮ ಉಪಸ್ಥಿತಿ ಕಾಯ್ದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಸೋಮಯ್ಯ ಅವರು ಆಧಾರರಹಿತವಾಗಿ ಮತ್ತು ಮಾನಹಾನಿಕರ ಆರೋಪಗಳನ್ನು ಮಾಡಿದ್ದು, ಅವೆಲ್ಲವೂ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಸಾರವಾಗಿದೆ ಎಂದು ವಾಯ್ಕರ್‌ ದಂಪತಿ ಹೇಳಿದ್ದಾರೆ. ಸೋಮಯ್ಯ ಅವರು 'ನಕಲಿ' ದೂರನ್ನು ದಾಖಲಿಸಿದ ಬಳಿಕ ವಾಯ್ಕರ್‌ ದಂಪತಿ ಮೊಕದ್ದಮೆ ಹೂಡಿರುವುದಾಗಿ ತಿಳಿಸಿದ್ದಾರೆ. ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹಾಗೂ ವಾಯ್ಕರ್ ಅವರು ಅಲಿಬಾಗ್‌ನಲ್ಲಿ ಆಸ್ತಿ ಖರೀದಿಸಿದ್ದು, ಅದನ್ನು ಪತ್ನಿಯರಾದ ರಶ್ಮಿ ಠಾಕ್ರೆ ಹಾಗೂ ಮನೀಶಾ ವಾಯ್ಕರ್ ಅವರ ಹೆಸರಿಗೆ ವರ್ಗಾಯಿಸಿದ್ದಾರೆ. 2014ರಲ್ಲಿ ಒಳಾಂಗಣ ವಿನ್ಯಾಸಕಾರರಾಗಿದ್ದ ದಿವಂಗತ ಅನ್ವಯ್‌ ನಾಯಕ್‌ ಅವರಿಂದಲೂ ಭೂಮಿಯನ್ನು ವಾಯ್ಕರ್‌ ದಂಪತಿ ವಶಪಡಿಸಿಕೊಂಡಿದ್ದಾರೆ ಎಂದು ಸೋಮಯ್ಯ ಈಚೆಗೆ ಆರೋಪಿಸಿದ್ದರು.

No stories found.
Kannada Bar & Bench
kannada.barandbench.com