ಗಡಿಯಲ್ಲಿ ಸಿಲುಕಿರುವ ವಲಸಿಗರ ಮಾಹಿತಿ ಒದಗಿಸಲು ಪ್ರಿಯಾಂಕ್ ಖರ್ಗೆಗೆ ಹೈಕೋರ್ಟ್ ಸೂಚನೆ

ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಗೋವಾದಲ್ಲಿ ಸಿಲುಕಿರುವ ವಲಸಿಗರಿಗೆ ಅಗತ್ಯ ಸಾರಿಗೆ ವ್ಯವಸ್ಥೆ ಮಾಡಲು ಸಂಬಂಧ ಪಟ್ಟ ಸಂಸ್ಥೆಗಳಿಗೆ ಸೂಚಿಸುವಂತೆ ಕೋರಿ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಮನವಿ ಸಲ್ಲಿಸಿದ್ದರು.
ಗಡಿಯಲ್ಲಿ ಸಿಲುಕಿರುವ ವಲಸಿಗರ ಮಾಹಿತಿ ಒದಗಿಸಲು ಪ್ರಿಯಾಂಕ್ ಖರ್ಗೆಗೆ ಹೈಕೋರ್ಟ್ ಸೂಚನೆ

ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಸಾರಿಗೆ ಅವ್ಯವಸ್ಥೆಯಿಂದ ವಿವಿಧ ರಾಜ್ಯಗಳಲ್ಲಿ ಸಿಲುಕಿ ಕರ್ನಾಟಕಕ್ಕೆ ಮರಳಲಾಗದಿರುವ ರಾಜ್ಯದ ವಲಸಿಗ ಕಾರ್ಮಿಕರ ಮಾಹಿತಿಯನ್ನೊಳಗೊಂಡ ಅಫಿಡವಿಟ್ ಸಲ್ಲಿಸುವಂತೆ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಅವರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಆಂಧ್ರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಮತ್ತು ಗೋವಾದಲ್ಲಿ ಸಿಲುಕಿರುವ ವಲಸಿಗರಿಗೆ ಅಗತ್ಯ ಸಾರಿಗೆ ವ್ಯವಸ್ಥೆ ಮಾಡಲು ಸಂಬಂಧ ಪಟ್ಟ ಸಂಸ್ಥೆಗಳಿಗೆ ಸೂಚಿಸುವಂತೆ ಕೋರಿ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಮೇಲಿನ ಆದೇಶ ಹೊರಡಿಸಿದೆ.

ರಾಜ್ಯಕ್ಕೆ ಮರಳಲಾಗದೆ ಗಡಿಯಲ್ಲಿಯೇ ವ್ಯಕ್ತಿಗಳು ಸಿಲುಕಿದ್ದಾರೆ ಎಂಬುದರ ಕುರಿತು ಮೊದಲು ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಡಿ ಎಂದು ಅರ್ಜಿದಾರರಿಗೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಹಾಗೂ ಅಶೋಕ್ ಎಸ್ ಕಿಣಗಿ ನೇತೃತ್ವದ ದ್ವಿಸದಸ್ಯ ಪೀಠ ಸೂಚಿಸಿತು.

“ಮೊದಲು ಇಂದಿಗೂ ಜನರು ಗಡಿಯಲ್ಲಿ ಸಿಲುಕಿದ್ದು, ಕರ್ನಾಟಕಕ್ಕೆ ಮರಳಲು ಕಾತರರಾಗಿದ್ದಾರೆ ಎಂಬುದನ್ನು ಕೋರ್ಟ್ ಗೆ ಮನದಟ್ಟು ಮಾಡಿಕೊಡಿ. ಈಗಲೂ ಈ ಮನವಿ ಪ್ರಸ್ತುತವೇ, ಎರಡು ವಾರಗಳೊಳಗೆ ಅಫಿಡವಿಟ್ ಸಲ್ಲಿಸಿ”.
ಕರ್ನಾಟಕ ಹೈಕೋರ್ಟ್

ನೆರೆಯ ರಾಜ್ಯಗಳಿಂದ ತವರಿಗೆ ಮರಳು ಗಡಿಯಲ್ಲಿ ಕಾತರರಾಗಿರುವರಲ್ಲಿ ವಲಸಿಗ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಇತರೆ ಹಿಂದುಳಿದ ವರ್ಗಗಳ ಜನರು ಸೇರಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ದರ್ಶನ್ ಎಲ್ ಕೋರ್ಟ್ ಗಮನಸೆಳೆದರು.

ಅರ್ಜಿದಾರ ಖರ್ಗೆ ಅವರು ನ್ಯಾಯಾಲಯದ ಮೆಟ್ಟಿಲೇರುವುದಕ್ಕೂ ಮುನ್ನ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (ಎನ್ ಇಕೆಆರ್ ಟಿಸಿ) ನೆರೆಯ ರಾಜ್ಯಗಳಿಗೆ ಬಸ್ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಿದ್ದು, ಇದರ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದ್ದರು ಎಂದು ದರ್ಶನ್ ಕೋರ್ಟ್ ಗೆ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, “ಮೇ ತಿಂಗಳಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಸಾಕಷ್ಟು ಬದಲಾವಣೆಯಾಗಿದೆ. ಭಾರತ ಸರ್ಕಾರದ ಪ್ರಮಾಣಿತ ಕಾರ್ಯಾಚರಣ ಪ್ರಕ್ರಿಯೆಗಳು (ಎಸ್‌ಒಪಿ) ಪ್ರಕಾರ ಗಡಿಗಳನ್ನು ಓಡಾಟಕ್ಕೆ ಮುಕ್ತಗೊಳಿಸಲಾಗಿದೆ” ಎಂದಿತು.

ಪ್ರಿಯಾಂಕ್ ಖರ್ಗೆ ಅವರ ಅರ್ಜಿಯಲ್ಲಿನ ಕೋರಿಕೆ ಇಂತಿದೆ:

“…ಕಲಬುರ್ಗಿ ವಲಯದ ವಲಸಿಗ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಇತರೆ ಹಿಂದುಳಿದ ವರ್ಗಗಳ ಜನರು ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಮತ್ತು ಗೋವಾದಲ್ಲಿ ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ತವರಿಗೆ ಕರೆತರುವ ವ್ಯವಸ್ಥೆಯನ್ನು ಮಾಡುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು”.

ಮುಖ್ಯ ನ್ಯಾಯಮೂರ್ತಿ ಓಕಾ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಸದರಿ ಅರ್ಜಿಯನ್ನು ಮಂಡಿಸುವಂತೆ ಹೈಕೋರ್ಟ್ ರಿಜಿಸ್ಟ್ರಿಗೆ ಪಿ ಬಿ ಭಜಂತ್ರಿ ನೇತೃತ್ವದ ಏಕಸದಸ್ಯ ಪೀಠ ಕಳೆದ ಜೂನ್ ನಲ್ಲಿ ಸೂಚಿಸಿತ್ತು.

Related Stories

No stories found.
Kannada Bar & Bench
kannada.barandbench.com