ತಮ್ಮನ್ನು ಪೊಲೀಸ್ ವಶಕ್ಕೆ ಒಪ್ಪಿಸುವ ಪಟಿಯಾಲ ಹೌಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತ್ರಕರ್ತ, ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ವಕೀಲೆ ವೃಂದಾ ಗ್ರೋವರ್ ಅವರು ಇಂದು ಬೆಳಗ್ಗೆ ರಜಾಕಾಲೀನ ಪೀಠದ ನ್ಯಾಯಮೂರ್ತಿ ಸಂಜೀವ್ ನರುಲಾ ಅವರ ಮುಂದೆ ಮನವಿ ಪ್ರಸ್ತಾಪಿಸಿದರು. ಪ್ರಕರಣವನ್ನು ನಾಳೆ ಆಲಿಸಲು ನ್ಯಾಯಾಲಯ ಒಪ್ಪಿತು.
ಜುಬೈರ್ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿ ಜೂನ್ 28ರಂದು ಪಟಿಯಾಲ ಹೌಸ್ ನ್ಯಾಯಾಲಯ ಆದೇಶಿಸಿತ್ತು.
ಜುಬೈರ್ ಅವರು 2018ರಲ್ಲಿ ಮಾಡಿದ್ದ ಟ್ವೀಟ್ಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 153 ಎ (ಧಾರ್ಮಿಕ ಗುಂಪುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು) ಮತ್ತು 295 ಎ (ಧಾರ್ಮಿಕ ಭಾವನೆಗಳ ನಿಂದನೆ) ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು.
ನಿರ್ದಿಷ್ಟ ಧರ್ಮದ ದೇವರನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ಸಲುವಾಗಿ ಆಕ್ಷೇಪಾರ್ಹ ಚಿತ್ರ ಟ್ವೀಟ್ ಮಾಡಿದ್ದಾರೆ ಎಂದು ಟ್ವಿಟರ್ ಖಾತೆದಾರರೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ ಜುಬೈರ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.