ಕನ್ನಡಕ್ಕೂ, ಕಾನೂನಿಗೂ ಸಂದ ಕರಾವಳಿಯ ಕಣ್ಮಣಿ ಎ ಎಸ್‌ ಎನ್‌ ಹೆಬ್ಬಾರ್‌

ಕರಾವಳಿಯ ವಕೀಲ ವರ್ಗ ಹೆಬ್ಬಾರರನ್ನು ನೆನೆಯುವಂತೆಯೇ ಸಾಂಸ್ಕೃತಿಕ ಕ್ಷೇತ್ರವೂ ಅವರನ್ನು ಸ್ಮರಿಸುತ್ತದೆ. ಇದೇ ನ.2ಕ್ಕೆ ಅವರಿಗೆ ಭರ್ತಿ 80 ವರ್ಷ ತುಂಬಲಿದೆ. ʼಬಾರ್‌ ಅಂಡ್‌ ಬೆಂಚ್ʼ‌ ಜೊತೆ ಅವರು ಹಂಚಿಕೊಂಡ ಕಾನೂನು ಲೋಕದ ಪ್ರಸಂಗಗಳು ಇಲ್ಲಿವೆ
ಕನ್ನಡಕ್ಕೂ, ಕಾನೂನಿಗೂ ಸಂದ ಕರಾವಳಿಯ ಕಣ್ಮಣಿ ಎ ಎಸ್‌ ಎನ್‌ ಹೆಬ್ಬಾರ್‌
ASN Hebbar

ಎ ಎಸ್‌ ಎನ್‌ ಹೆಬ್ಬಾರ್ ಕುಂದಾಪುರ ಸೀಮೆಯ ಹಿರಿಯ ವಕೀಲರು. ವಕೀಲಿಕೆಯ ಜೊತೆಗೆ ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರದಲ್ಲೂ ಅಪಾರ ಸೇವೆ ಸಲ್ಲಿಸಿದವರು. ಕಥೆ, ಕವನ, ಹಾಸ್ಯ ಲೇಖನ, ಪ್ರಹಸನ, ಪ್ರವಾಸ ಕಥನ, ಪ್ರಬಂಧ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೈಯಾಡಿಸಿದವರು. ಜೊತೆಗೆ ʼಉದಯವಾಣಿʼ, ʼಪ್ರಜಾವಾಣಿʼ, ʼಡೆಕ್ಕನ್‌ ಹೆರಾಲ್ಡ್‌ʼ ಪತ್ರಿಕೆಗಳಿಗೆ ದಶಕಗಳ ಕಾಲ ಅನೇಕ ಗಮನಾರ್ಹ ಲೇಖನಗಳನ್ನು ಬರೆದವರು. ಎಂಬತ್ತರ ಆಸುಪಾಸಿನ ಅವರ ಬರೆಯುವ ಉತ್ಸಾಹ ಇಂದಿಗೂ ಬತ್ತಿಲ್ಲ. ಇದೇ ಭಾನುವಾರ, ನವೆಂಬರ್‌ 1ರಂದು ಬಿಡುಗಡೆಯಾಗಲಿರುವ ಅವರ 12 ಪುಸ್ತಕಗಳು ಇದಕ್ಕೆ ಸಾಕ್ಷಿ. ಕುಂದಾಪುರದ ಕಲಾಮಂದಿರದಲ್ಲಿ ಅವರ ಶಿಷ್ಯಂದಿರು ಸೇರಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ ಎನ್ನುವುದು ವಿಶೇಷ.

ಅಂದಹಾಗೆ 50ಕ್ಕೂ ಹೆಚ್ಚು ವರ್ಷಗಳ ಕಾಲ ತಾವು ಕಂಡ ವಕೀಲ ಜಗತ್ತಿನ ಕೆಲ ಪ್ರಸಂಗಗಳನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಅವರು ಹಂಚಿಕೊಂಡಿದ್ದಾರೆ. ನೆನಪಿನ ನಾವೆಯಿಂದ ಅವರು ಹೆಕ್ಕಿಕೊಟ್ಟ ಅನುಭವ ಕಥನ ಇಲ್ಲಿದೆ…

ಶವ ಪಡೆಯಲೊಂದು ಉಪಾಯ

ವಕೀಲಿ ವೃತ್ತಿಯ ಜೊತೆಗೆ ಕಾಲೇಜು ದಿನಗಳಿಂದಲೂ ಪತ್ರಿಕೆಗಳಿಗೆ ಬರೆಯವುದು ನನ್ನ ಹವ್ಯಾಸವಾಗಿತ್ತು. ʼಉದಯವಾಣಿʼ, ʼಪ್ರಜಾವಾಣಿʼ, ʼಡೆಕ್ಕನ್‌ಹೆರಾಲ್ಡ್‌ʼ ಪತ್ರಿಕೆಗಳಿಗೆ ವರದಿ ಮಾಡುತ್ತಿದ್ದೆ. ಕುಂದಾಪುರ ಸಮೀಪದ ಕೋಡಿ ಎಂಬಲ್ಲಿ ಸಮುದ್ರದಿಂದ ಯುವಕನ ಹೆಣವೊಂದು ತೇಲಿಬಂತು. ಪೊಲೀಸರು ಆತ್ಮಹತ್ಯೆ ಕೇಸು ದಾಖಲಿಸಿಕೊಂಡು ಯಾರಾದರೂ ವಾರಸುದಾರರಿರಬಹುದೇ ಎಂದು ಪತ್ತೆ ಮಾಡಲು ಆತನ ಭಾವಚಿತ್ರ ನೀಡಿ ಪತ್ರಿಕೆಯಲ್ಲಿ ಪ್ರಕಟಿಸುವಂತೆ ಕೋರಿದ್ದರು. ಹಾಗೆಯೇ ಮಾಡಿದ್ದೆ. ಆದರೆ ಯಾರೂ ಶವ ಸ್ವೀಕರಿಸಲು ಮುಂದೆ ಬಾರದ ಕಾರಣ ಕುಂದಾಪುರದ ಸ್ಮಶಾನವೊಂದರಲ್ಲಿ ಶವ ಹುಗಿದುಬಿಟ್ಟರು.

ಅದಾದ ಒಂದೆರಡು ದಿನಕ್ಕೆ ವ್ಯಕ್ತಿಯೊಬ್ಬ ಬಂದು ಶವ ತನ್ನಣ್ಣನದೆಂದೂ, ಶವದ ಮುಖ ನೋಡದೇ ಅಮ್ಮ ಊಟ ಮಾಡುವುದಿಲ್ಲವೆಂದು ಪಟ್ಟು ಹಿಡಿದು ಕೂತಿರುವುದಾಗಿಯೂ ಅಲವತ್ತುಕೊಂಡ. ನಾನು ಪೊಲೀಸರ ಬಳಿ ವಿಚಾರಿಸಿದರೆ ಅವರು ಹೂತಿದ್ದ ಶವ ಹೊರತೆಗೆಯಲು ಬಿಲ್‌ಕುಲ್‌ ಒಪ್ಪಲಿಲ್ಲ. ʼಕೊಲೆ ಕೇಸಾದರೆ ಮಾತ್ರ ಶವ ತೆಗೆಯಲು ಸಾಧ್ಯʼ ಎಂದು ತಮ್ಮ ಅಸಹಾಯಕತೆ ವಿವರಿಸಿದರು. ತಕ್ಷಣ ಯೋಚನೆಯೊಂದು ಮಿಂಚಿನಂತೆ ಹರಿಯಿತು. ʼಕೊಲೆ ಕೇಸಾದರೆ ಶವ ಹೊರಗೆ ತೆಗೆಯುತ್ತೀರಲ್ಲಾ?ʼ ಎಂದು ಪೊಲೀಸಿನವರನ್ನೇ ಕೇಳಿ ಖಾತ್ರಿ ಪಡಿಸಿಕೊಂಡು ಆ ಸಹೋದರನನ್ನು ಕರೆದುಕೊಂಡು ಕಚೇರಿಗೆ ಬಂದೆ. ಸಿಆರ್‌ಪಿಸಿ ವಿಧಿಯಂತೆ ಕುಂದಾಪುರದ ನ್ಯಾಯಾಲಯಕ್ಕೆ ಆ ಸಹೋದರನ ಹೆಸರಲ್ಲಿ ಒಂದು ಅರ್ಜಿ ಹಾಕಿದೆ. ʼನನ್ನ ಅಣ್ಣನನ್ನು ಯಾರೋ ಕೊಲೆ ಮಾಡಿ ಸಮುದ್ರಕ್ಕೆ ಎಸೆದ ಸಂಶಯ ಇದೆ. ಹಾಗಾಗಿ ಹೂತಿರುವ ಶವವನ್ನು ಮೇಲೆತ್ತಿ ಇನ್ನೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಬೇಕು' ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ನನ್ನ ಗುರುತಿನವರಾಗಿದ್ದ ನ್ಯಾಯಾಧೀಶರು ಶವ ಮೇಲೆತ್ತಲು ಆದೇಶ ನೀಡಿದರು.

ಲಂಚ ವಾಪಸ್‌ ಕೊಡಿ…

ಶ್ರೀಮಂತರೊಬ್ಬರ ಕಾರು ಅಪಘಾತಕ್ಕೀಡಾಗಿತ್ತು. ದೊಡ್ಡ ಸೆಕ್ಷನ್ನಿನ ಕೇಸು ಹಾಕದೆ ಸಣ್ಣ ಪ್ರಕರಣ ದಾಖಲಿಸುವಂತೆ ಕೋರಿ ಪೊಲೀಸರಿಗೆ ಆತ 500 ರೂ ಲಂಚ ಕೊಟ್ಟಿದ್ದರಂತೆ. ಆದರೆ ಲಂಚ ಪಡೆದ ಪೊಲೀಸರು ಅದು ಹೇಗೋ ದೊಡ್ಡ ಕೇಸನ್ನೇ ದಾಖಲಿಸಿದ್ದರಂತೆ. ಇದರಿಂದ ಸಿಟ್ಟಿಗೆದ್ದ ಅವರು ತನ್ನಿಂದ ಪಡೆದ ಲಂಚವನ್ನು ಬಡ್ಡಿ ಸಮೇತ ವಾಪಸ್‌ ಕೊಡಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು ಆ ಶ್ರೀಮಂತ. ಆದರೆ ತಾನು ಲಂಚ ಪಡೆದಿಲ್ಲ ಎಂಬುದು ಪೊಲೀಸ್‌ ಅಧಿಕಾರಿಯ ವಾದವಾಗಿತ್ತು.

ದೊಡ್ಡ ವಕೀಲರನ್ನೇ ಪೊಲೀಸ್‌ ಅಧಿಕಾರಿ ವಾದಕ್ಕೆಂದು ಗೊತ್ತು ಮಾಡಿಕೊಂಡಿದ್ದರು. ವಕೀಲರಿಗೋ ಇಸ್ಪೀಟಾಟದ ಚಟ. ಅದು ಊರಿಗೆಲ್ಲಾ ಗೊತ್ತಿದ್ದ ವಿಚಾರವೂ ಆಗಿತ್ತು. ಸಾಕ್ಷಿಯ ವಿಚಾರಣೆಯ ಸಮಯ ಬಂತು. ʼಬಸ್ರೂರಿನಿಂದ ಆ ದಿನ ನೀನು ಕುಂದಾಪುರಕ್ಕೆ ಬಂದಿದ್ದು ಯಾಕೆ?ʼ ವಕೀಲರ ಪ್ರಶ್ನೆ. ʼಸಿನಿಮಾ ನೋಡಲಿಕ್ಕೆʼ ಎಂದು ಸಾಕ್ಷಿ ಉತ್ತರಿಸಿದರು. ಅಷ್ಟಕ್ಕೇ ಸುಮ್ಮನಿದ್ದರೆ ಚೆನ್ನಾಗಿತ್ತು ವಕೀಲರು ಮುಂದುವರೆದು, ʼಓಹೋ ನಿನಗೆ ಸಿನಿಮಾ ನೋಡೋ ಖಯಾಲಿ ಕೂಡ ಇದೆಯಾ?ʼ ಎಂದು ಲೇವಡಿ ಮಾಡಿದರು. ಸಾಕ್ಷಿ ತಾನೇನೂ ಕಡಿಮೆ ಇಲ್ಲ ಎಂಬಂತೆ ಹೀಗೆ ಉತ್ತರಿಸಿದ: ʼಹೌದು ಸ್ವಾಮಿ ಒಬ್ಬೊಬ್ಬರಿಗೆ ಒಂದೊಂದು ಖಯಾಲಿ. ನನಗೆ ಸಿನಿಮಾ ನೋಡೋ ಖಯಾಲಿ. ಕೆಲವರಿಗೆ ಇಸ್ಪೀಟಾಟದ ಖಯಾಲಿʼ ಎಂದು ಪ್ರತ್ಯುತ್ತರ ನೀಡಿದ. ವಕೀಲರ ಖಾಯಾಲಿ ಗೊತ್ತಿದ್ದವರೆಲ್ಲರೂ ಒಳಗೊಳಗೇ ನಕ್ಕರು. ಆದರೂ ವಿಚಲಿತರಾಗದೇ ವಾದ ಮಂಡಿಸಿದ ಅವರು ʼಶ್ರೀಮಂತ ಲಂಚ ಕೊಟ್ಟದೇ ತಪ್ಪುʼ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ಮೊದಲೇ ಕೆಂಪು- ಕೆಂಪಾಗಿದ್ದ ಮಂಗಳೂರು ಕಡೆಯ ಜಡ್ಜ್‌ ಸಾಹೇಬರು ಇನ್ನಷ್ಟು ಕೆಂಪು- ಕೆಂಪಾಗಿ ʼಇಂತಹ ದಾವೆಯೇ ಅನೈತಿಕ ಎಂದು ಕರೆದದ್ದಲ್ಲದೆ ಮೊಕದ್ದಮೆಯ ಖರ್ಚಿನ ಜೊತೆಗೆ ಸಾಹುಕಾರರಿಗೆ ದಂಡ ಹಾಕಿ ಕೇಸು ವಜಾ ಮಾಡಿದರು.

ಬೀಜ ಒಂದೇ!

ಪುರೋಹಿತರೊಬ್ಬರ ಪರ ನಾನು ವಕಾಲತ್ತು ವಹಿಸಿದ್ದೆ. ಅದು ಆಸ್ತಿ ವ್ಯಾಜ್ಯ. ಪ್ರತಿವಾದಿ ಪರ ವಕೀಲರು ಇವರನ್ನು ಪ್ರಶ್ನಿಸುವ ಸರದಿ ಬಂತು.

ʼನೀವು ನಿಮ್ಮ ದಾಯಾದಿಯನ್ನು ದುಷ್ಟ ಎಂದು ಕರೆದಿರಲ್ಲಾ?ʼ

ʼಹೌದುʼ- ಪುರೋಹಿತರ ಉತ್ತರ.

ಅಷ್ಟಕ್ಕೇ ಬಿಡದ ವಕೀಲರು ಪುರೋಹಿತರನ್ನು ಕುಟುಕುತ್ತಾ ʼಆದರೆ ನೀವೆಲ್ಲಾ ಒಂದೇ ಬೀಜ ಅಲ್ಲವಾ?ʼ ಎಂದು ಕೇಳಿದರು. ಪುರೋಹಿತರು ಏನು ಹೇಳುತ್ತಾರೋ ಎಂಬ ಆತಂಕ ನನ್ನೊಳಗೆ. ಆದರೆ ಆತ ಮಾತ್ರ ʼಹೌದು ವಕೀಲರೇ ಬೀಜ ಒಂದೇ ಕ್ಷೇತ್ರ ಬೇರೆ ಬೇರೆʼ ಎಂದು ಬಿಟ್ಟರು. ನ್ಯಾಯಾಲಯದಲ್ಲಿ ನಗೆಯ ಅಲೆ. ಅವರು ಹೇಳಿದ್ದು ಮಾತ್ರ ದಾಖಲೆಗೆ ಹೋಗಲಿಲ್ಲ.

ಮೇಲೆ ಕುಂತವ…

ನ್ಯಾಯಾಲಯದಲ್ಲಿ ಬ್ರಾಹ್ಮಣ ಕುಟುಂಬವೊಂದರ ಪಾಲಿಗೆ ಸಂಬಂಧಿಸಿದ ಮೊಕದ್ದಮೆಯ ವಿಚಾರಣೆ ನಡೆಯುತ್ತಿತ್ತು. ವ್ಯಕ್ತಿಯೊಬ್ಬ ತನ್ನ ಕುಟುಂಬದ ಆಸ್ತಿಯನ್ನೇ ಹೆಂಡತಿಯ ಹೆಸರಿಗೆ ಕ್ರಯ ದಸ್ತಾವೇಜು ಮಾಡಿಸಿದ್ದ. ವಕೀಲರೊಬ್ಬರು ಕಟಕಟೆಯಲ್ಲಿ ನಿಂತಿದ್ದ ಅವನನ್ನೇ ದಿಟ್ಟಿಸುತ್ತಾ ʼನೋಡಿ ನಾನು ಹೇಳ್ತಾ ಇದ್ದೇನೆ- ನೀವು ಕುಟುಂಬಕ್ಕೆ ಮೋಸ ಮಾಡಲೆಂದೇ ಈ ದಾಸ್ತಾವೇಜು ಮಾಡಿದ್ದೀರಿ. ಏನು ಹೇಳ್ತೀರಿ? ಎಂದು ಕೇಳಿಬಿಟ್ಟರು.

ಮೊದಲೇ ಏನೇನೋ ಆರೋಪಗಳಿಂದ ಸಿಟ್ಟಿಗೆದ್ದಿದ್ದ ಆತ ʼಹಾಗೆಲ್ಲಾ ಕುಟುಂಬಕ್ಕೆ ಮೋಸ ಮಾಡಲಿಕ್ಕೆ ನಾನು ನಿಮ್ಮ ಜಾತಿಯವನಲ್ಲʼ ಎಂದು ಬಿಟ್ಟ. ಕುಳಿತಿದ್ದ ವಕೀಲರೆಲ್ಲಾ ಮುಸಿಮುಸಿ ನಕ್ಕರು. ಆದರೆ ಪಾಟಿ ಸವಾಲು ಹಾಕುತ್ತಿದ್ದ ವಕೀಲರು ಮಾತ್ರ ಏನೂ ಆಗದವರಂತೆ ಬಂದು ಕುಳಿತರು.

ವಿಚಾರಣೆ ಮುಗಿದು ಹೊರಬಂದ ವಕೀಲರನ್ನು ನಾನು ತಡೆದು ಕೇಳಿದೆ ʼಅಲ್ಲಾ ಮಾರಾಯ್ರೆ ನಿಮ್ಮ ವಿರುದ್ಧ ಅಂವ ಹಾಗೆ ಹೇಳಿದರೂ ನೀವು ಸುಮ್ಮನೇ ಇದ್ದದ್ದಾ?ʼ

ವಕೀಲರು ಬಿದ್ದರೂ ಮೀಸೆ ಮಣ್ಣಾಗದವರಂತೆ ಉತ್ತರಿಸಿದರು: ನಿನಗೇನು ಗೊತ್ತುಂಟು? ಮೇಲೆ ಕೂತಿದ್ದವ ಬ್ರಾಹ್ಮಣ! ಅದಕ್ಕೋಸ್ಕರ ಸುಮ್ಮನೆ ಇದ್ದೆ!

ಸೀರೆ ಬದಲು Sorry !

ಯಾವುದೋ ಉದ್ದೇಶಕ್ಕೆ ಕಲ್ಕತ್ತೆಗೆ ಹೊರಟಿದ್ದೆ. ಆದರೆ ಅದೇ ದಿನ ತಮ್ಮ ಛೇಂಬರಿಗೆ ಬರುವಂತೆ ನ್ಯಾಯಾಧೀಶರೊಬ್ಬರಿಂದ ಬುಲಾವ್‌. ಲೋಕಾಭಿರಾಮದ ಮಾತುಗಳೆಲ್ಲಾ ಮುಗಿದ ಬಳಿಕ ಅವರು ತಮ್ಮ ಮೇಜಿನ ಮೇಲೆ ಪೇಪರ್‌ ವೇಟ್‌ ಇಲ್ಲ, ಹೂದಾನಿಯಿಲ್ಲ, ಕ್ಯಾಲೆಂಡರ್‌ ಇಲ್ಲ ಎಂದು ಲಿಸ್ಟ್‌ ಸಿದ್ಧಪಡಿಸಿದರು. ಸರ್ಕಾರ ಅದಕ್ಕೆಲ್ಲಾ ದುಡ್ಡು ಕೊಡುವುದಿಲ್ಲ. ವಕೀಲರುಗಳೇ ವ್ಯವಸ್ಥೆ ಮಾಡಬೇಕು ಎಂದರು. ನಾನು ಕಲ್ಕತ್ತೆಗೆ ಹೊರಡುವ ವಿಚಾರ ಪ್ರಸ್ತಾಪಿಸಿದೆ. ತಕ್ಷಣ ಆ ಮಹಾಶಯ ʼಕಲ್ಕತ್ತೆಯಿಂದ ನನಗೇನು ತರುತ್ತೀರಿ?ʼ ಎಂದು ಕೇಳಿದರು. ʼಕಲ್ಕತ್ತೆಯಲ್ಲಿ ಕಾಟನ್‌ ಸೀರೆ ಪ್ರಸಿದ್ಧʼ ಎಂದರು. ನಾನು ಹೊರಬಂದು ವಕೀಲರ ಸಮುದಾಯದತ್ತ ತಿರುಗಿ ʼನಮ್ಮ ನ್ಯಾಯಾಧೀಶರಿಗೆ ಪೇಪರ್‌ ವೇಟ್‌, ಕ್ಯಾಲೆಂಡರ್‌, ಹೂದಾನಿ, ‌ ಬೇಕಂತೆ- ಯಾರಾದರೂ ಕೊಡುವವರಿದ್ದರೆ ಕೊಡಬಹುದಂತೆʼ ಎಂದು ಕೂಗಿ ಹೇಳಿ ಹೊರಟೆ.

ಕಲ್ಕತ್ತೆಗೆ ಹೊರಡಲು ಮದ್ರಾಸ್‌ ವಿಜಯವಾಡದ ರೈಲು ಹಿಡಿದಿದ್ದೆವು. ಆದರೆ ಮಂಗಳೂರು ತಲುಪುವ ವೇಳೆಗಾಗಲೇ ನಮ್ಮ ಮಗುವಿಗೆ ನಾಯಿ ಕಚ್ಚಿದ ಸುದ್ದಿ ಬಂತು. ಕಲ್ಕತ್ತೆಗೆ ಹೋಗದೆ ವಾಪಸ್‌ ಕುಂದಾಪುರಕ್ಕೆ ಮರಳಿ ಮಗುವನ್ನು ಕೂನೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆಕೊಡಿಸಿಕೊಂಡು ಬಂದೆವು. ಮಾರನೇ ದಿನ ನ್ಯಾಯಾಧೀಶರು ನನ್ನನ್ನು ಛೇಂಬರಿಗೆ ಕರೆಸಿ ಕಲ್ಕತ್ತಾ ಕಾಟನ್‌ ಸೀರೆ ಎಲ್ಲಿ ಎಂದು ಕೇಳಿದರು. ನಾನು ಅವಾಕ್ಕಾದೆ. ಬಹುಶಃ ಅವರಿಗೆ ನಮಗುಂಟಾದ ಅನಾಹುತದ ಅರಿವು ಇರಲಿಲ್ಲ. ನಮಗೆ ಬಂದಿದ್ದ ಸಂಕಷ್ಟ ವಿವರಿಸಿ ʼSorryʼ ಎಂದೆ. ಅಲ್ಲಿಂದ ಹೊರಬರುವಾಗ ಅವರ ಮುಖ ಗಂಟಿಕ್ಕಿದ್ದು ನೋಡಿ ನನಗೋನೋ ಅನಾಹುತ ಕಾದಿದೆ ಅನ್ನಿಸಿತು.

Related Stories

No stories found.