ಅಪ್ರಾಪ್ತ ಸಂತ್ರಸ್ತೆ ಆಕ್ಷೇಪಿಸದಿದ್ದರೂ ಅತ್ಯಾಚಾರ ಆರೋಪಿಗೆ ಜಾಮೀನು ನೀಡಲಾಗದು: ಕರ್ನಾಟಕ ಹೈಕೋರ್ಟ್‌
Karnataka HC and POCSO

ಅಪ್ರಾಪ್ತ ಸಂತ್ರಸ್ತೆ ಆಕ್ಷೇಪಿಸದಿದ್ದರೂ ಅತ್ಯಾಚಾರ ಆರೋಪಿಗೆ ಜಾಮೀನು ನೀಡಲಾಗದು: ಕರ್ನಾಟಕ ಹೈಕೋರ್ಟ್‌

ಮೊಹಮ್ಮದೀಯ ಕಾನೂನಿನ ಪ್ರಕಾರ ಎರಡನೇ ವಿವಾಹಕ್ಕೆ ಅನುಮತಿಯಿದ್ದರೂ ಅಪ್ರಾಪ್ತೆಯ ಸಮ್ಮತಿ ಪಡೆದಿದ್ದರೂ ಆಕೆಯ ಜೊತೆ ವಿವಾಹ ಅಥವಾ ಸಂಭೋಗ ನಡೆಸುವುದು ಪೋಕ್ಸೊ ಮತ್ತು ಐಪಿಸಿ ಅಡಿ ಶಿಕ್ಷಾರ್ಹ ಅಪರಾಧ ಎಂದು ನ್ಯಾಯಾಲಯ ಹೇಳಿದೆ.

ಘೋರ ಅಪರಾಧಗಳಾದ ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಅಥವಾ ಬಾಲ್ಯ ವಿವಾಹ ತಡೆಗಾಗಿ ವಿಶೇಷವಾಗಿ ಜಾರಿ ಮಾಡಲಾಗಿರುವ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ನಿಯಂತ್ರಣ ಕಾಯಿದೆ (ಪೋಕ್ಸೊ), ಬಾಲ್ಯ ವಿವಾಹ ನಿಯಂತ್ರಣ ಕಾಯಿದೆ ಅಥವಾ ಭಾರತೀಯ ದಂಡ ಸಂಹಿತೆಯನ್ನು (ಐಪಿಸಿ) ವೈಯಕ್ತಿಕ ಕಾನೂನುಗಳು ಮೀರಲಾಗದು ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ತೀರ್ಪಿತ್ತಿದೆ.

ಮೊಹಮ್ಮದೀಯ ಕಾನೂನಿನ ಪ್ರಕಾರ ಎರಡನೇ ವಿವಾಹ ಸಿಂಧುವಾದರೂ ಅಪ್ರಾಪ್ತೆಯನ್ನು ಆಕೆಯ ಒಪ್ಪಿಗೆ ಪಡೆದು ವಿವಾಹವಾಗುವುದು ಅಥವಾ ಆಕೆಯೊಂದಿಗೆ ಸಂಭೋಗ ನಡೆಸುವುದು ಪೋಕ್ಸೊ ಮತ್ತು ಐಪಿಸಿ ಸೆಕ್ಷನ್‌ 375ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ನ್ಯಾಯಮೂರ್ತಿ ಕೆ ನಟರಾಜನ್‌ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ.

“ಮೊಹಮ್ಮದೀಯ ಕಾನೂನಿನ ಪ್ರಕಾರ ಎರಡನೇ ವಿವಾಹ ಸಿಂಧುವಾದರೂ ವಿಶೇಷವಾಗಿ ಜಾರಿ ಮಾಡಲಾಗಿರುವ ಪೋಕ್ಸೊ, ಬಾಲ್ಯ ವಿವಾಹ ನಿಯಂತ್ರಣ ಕಾಯಿದೆ ಅಥವಾ ಐಪಿಸಿಯನ್ನು ವೈಯಕ್ತಿಕ ಕಾನೂನುಗಳು ಮೀರಲಾಗದು. ಪಕ್ಷಕಾರರು ಮೊಹಮ್ಮದೀಯರು ಎಂದ ಮಾತ್ರಕ್ಕೆ ಅರ್ಜಿದಾರ ಮೊದಲ ಆರೋಪಿಯು ಅಪ್ರಾಪ್ತೆಯನ್ನು ಪ್ರಲೋಭನೆಗೊಳಪಡಿಸಿ ಮತ್ತು ಆಕೆಯನ್ನು ಅಪಹರಿಸಿ ಮದುವೆಯಾಗುವ ಹಕ್ಕು ಹೊಂದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಹೀಗಾಗಿ, ಅಪ್ರಾಪ್ತೆಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದ ಅರ್ಜಿದಾರ/ ಆರೋಪಿಗೆ ಜಾಮೀನು ನೀಡಲು ಆಗದು ಎಂದು ಪೀಠ ತಿಳಿಸಿದೆ. ನೆರೆ ಮನೆಯವನಾದ ಆರೋಪಿಯು 15 ವರ್ಷದ ಅಪ್ರಾಪ್ತೆಯನ್ನು ಅಪಹರಿಸಿ, ಮೂರು ದಿನಗಳ ಕಾಲ ಕಾನೂನುಬಾಹಿರವಾಗಿ ಒತ್ತಿ ಇಟ್ಟುಕೊಂಡಿದ್ದ ಎನ್ನಲಾಗಿದೆ.

ಬಳಿಕ, ಸಂತ್ರಸ್ತೆಯಿಂದ ಆರೋಪಿ ಮತ್ತು ಆತನ ಪತ್ನಿ ಖಾಲಿ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದರು. ಅದರ ಸಹಾಯದಿಂದ ಸಂತ್ರಸ್ತೆಗೆ 19 ವರ್ಷವಾಗಿದೆ ಎಂದು ದಾಖಲೆ ತಿರುಚಿ ವಿವಾಹ ಪ್ರಮಾಣ ಪತ್ರ ಪಡೆದಿದ್ದರು. ಆನಂತರ, ಅತ್ಯಾಚಾರ ಎಸಗಿದ್ದ ಸ್ಥಳಕ್ಕೆ ಸಂತ್ರಸ್ತೆಯನ್ನು ತಂದುಬಿಟ್ಟು ಆರೋಪಿಯ ಪತ್ನಿ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿತ್ತು. ಆರೋಪಿಯಿಂದ ಪಾರಾಗಿ ಬಂದಿದ್ದ ಅಪ್ರಾಪ್ತೆ ಆತನ ವಿರುದ್ಧ ದೂರು ದಾಖಲಿಸಿದ ಪರಿಣಾಮ, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಅತ್ಯಾಚಾರದಂತಹ ಪೈಶಾಚಿಕ ಕೃತ್ಯ ಎಸಗಿದ್ದ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 363 (ಅಪಹರಣ), 342 (ಕಾನೂನುಬಾಹಿರವಾಗಿ ಒತ್ತೆ ಇಟ್ಟುಕೊಳ್ಳುವುದು), 506 (ಬೆದರಿಕೆ), 376 (ಅತ್ಯಾಚಾರ), ಪೋಕ್ಸೊ ಮತ್ತು ಬಾಲ್ಯ ವಿವಾಹ ನಿಯಂತ್ರಣ ಕಾಯಿದೆಯ ವಿವಿಧ ಸೆಕ್ಷನ್‌ಗಳಡಿ ದೂರು ದಾಖಲಿಸಲಾಗಿತ್ತು. ಸೆಷನ್ಸ್‌ ನ್ಯಾಯಾಧೀಶರು ಜಾಮೀನು ನಿರಾಕರಿಸಿದ್ದರಿಂದ ಆರೋಪಿ ನಿರಾಕರಿಸಿದ್ದರಿಂದ ಹೈಕೋರ್ಟ್‌ನಲ್ಲಿ ಆರೋಪಿ ಜಾಮೀನಿಗೆ ಮನವಿ ಮಾಡಿದ್ದರು.

ಪರಸ್ಪರ ಪ್ರೀತಿಸುತ್ತಿದ್ದ ಆರೋಪಿ ಮತ್ತು ಸಂತ್ರಸ್ತೆಯು ಪರಾರಿಯಾಗಿದ್ದರು. ಆನಂತರ ಮುತಾವಲ್ಲಿ ಎದುರು ಮದುವೆಯಾಗಿದ್ದು, ವಿವಾಹದ ನೋಂದಣಿ ಮಾಡಿಸಲಾಗಿದೆ. ಹೀಗಾಗಿ ಜಾಮೀನು ನೀಡಬೇಕು ಎಂದು ಆರೋಪಿಯ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದಕ್ಕೆ ಸರ್ಕಾರಿ ವಕೀಲರು ತೀವ್ರ ವಿರೋಧ ವ್ಯಕ್ತಪಡಿಸಿ, ಜಾಮೀನು ಮಂಜೂರು ಮಾಡಬಾರದು ಎಂದು ಕೋರಿದ್ದರು.

ಸಂತ್ರಸ್ತೆಗೆ ಕೇವಲ 15 ವರ್ಷ ಮಾತ್ರ ಆಗಿದ್ದು, ಅತ್ಯಾಚಾರಕ್ಕೆ ಆರೋಪಿಯ ಪತ್ನಿ ಸಹಾಯ ಮಾಡಿದ್ದಾರೆ. ಸಂತ್ರಸ್ತೆಯು ಅಪ್ರಾಪ್ತೆಯಾಗಿದ್ದರೂ ಆಕೆ ತನ್ನ ಅಪಹರಣ ಅಥವಾ ವಿವಾಹ ಅಥವಾ ಸಂಭೋಗಕ್ಕೆ ಅನುಮತಿಸಿದ್ದರು ಎಂದಿಟ್ಟುಕೊಂಡರೂ ಆಕೆಯ ವಯೋಮಾನವನ್ನು ಪರಿಗಣಿಸಿದಾಗ ಇದ್ಯಾವುದೂ ಮುಖ್ಯವಾಗುವುದಿಲ್ಲ ಎಂದು ಪೀಠ ಹೇಳಿದೆ.

Also Read
ಅತ್ಯಾಚಾರ ಪ್ರಕರಣ: ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಯಾದ ಮಾತ್ರಕ್ಕೆ ಜಾಮೀನು ನೀಡಲಾಗದು ಎಂದ ಕರ್ನಾಟಕ ಹೈಕೋರ್ಟ್‌

“ಸಂತ್ರಸ್ತೆಯು ಅಪ್ರಾಪ್ತೆಯಾಗಿರುವುದರಿಂದ ತನ್ನ ಅಪಹರಣ ಅಥವಾ ವಿವಾಹ ಅಥವಾ ಲೈಂಗಿಕ ಸಂಪರ್ಕಕ್ಕೆ ಆಕೆ ಅನುಮತಿಸಿದ್ದರೂ ಅದು ಮುಖ್ಯವಾಗುವುದಿಲ್ಲ. ಅಲ್ಲದೇ, ಎರಡನೇ ಪ್ರತಿವಾದಿಗೂ ನೋಟಿಸ್‌ ಜಾರಿ ಮಾಡಲಾಗಿದೆ. ದೂರುದಾರೆ ಮತ್ತು ವಾಸ್ತವಿಕ ದೂರುದಾರರು ವಕೀಲರ ಮೂಲಕ ಸಂತ್ರಸ್ತೆಯ ಅಫಿಡವಿಟ್‌ ಸಲ್ಲಿಸಿದ್ದು, ಅದರಲ್ಲಿ ಸಂತ್ರಸ್ತೆಯು ಸ್ವಯಂಪ್ರೇರಿತವಾಗಿ ಆರೋಪಿಯ ಜೊತೆ ತೆರಳಿ, ವಿವಾಹವಾಗಿದ್ದಾರೆ. ಅಲ್ಲದೇ, ಅರ್ಜಿದಾರ ಆರೋಪಿಯ ಜೊತೆ ಆಕೆ ನೆಲೆಸಿದ್ದಾರೆ ಎಂದು ಹೇಳಲಾಗಿದೆ. ಇದನ್ನು ಸಂತ್ರಸ್ತೆಯ ಒಪ್ಪಿಗೆ ಎಂದು ಆಧರಿಸಿ ಜಾಮೀನು ನೀಡಲಾಗದು. ʼಯಾವುದೇ ಅಭ್ಯಂತರವಿಲ್ಲʼ ಎಂದು ಅಪ್ರಾಪ್ತೆ ಹೇಳಿದ್ದರೂ ಕೂಡ ಆಕೆ ಅಪ್ರಾಪ್ತೆಯಾಗಿರುವುದರಿಂದ ಅದನ್ನು ಜಾಮೀನು ಮಂಜೂರಾತಿಗೆ ಪರಿಗಣಿಸಲಾಗದು. ಏಕೆಂದರೆ ಅದು ಕಾನೂನುಬಾಹಿರವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದಕ್ಕೆ ಸಂಬಂಧಿಸಿದಂತೆ ಆರೋಪಿಯ ಬಿಡುಗಡೆಗೆ ತನ್ನ ಯಾವುದೇ ಆಕ್ಷೇಪಣೆ ಇಲ್ಲ ಎಂದು ಸಂತ್ರಸ್ತೆ ಒಪ್ಪಿದರೂ ಆರೋಪಿಗೆ ಜಾಮೀನು ಮಂಜೂರು ಮಾಡುವುದು ಅಂಥದ್ದೇ ಅಪರಾಧ ಎಸಗಲು ಪರವಾನಗಿ ನೀಡುವುದಲ್ಲದೆ ಮತ್ತೇನೂ ಅಲ್ಲ. ಹೀಗೆ ಮಾಡುವುದರಿಂದ ಸಂಸತ್‌ ಜಾರಿಗೊಳಿಸಿರುವ ಪೋಕ್ಸೊ ಮತ್ತು ಬಾಲ್ಯ ವಿವಾಹ ನಿಯಂತ್ರಣ ಕಾಯಿದೆಯ ಸೆಕ್ಷನ್‌ಗಳಾದ 9 ಮತ್ತು 10 ಮತ್ತು ಐಪಿಸಿ ಸೆಕ್ಷನ್‌ 375ರ ನಿಬಂಧನೆಗಳನ್ನು ಉಲ್ಲಂಘಿಸಿದಂತಾಗುತ್ತದೆ. ಅಲ್ಲದೇ, ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಹೀಗಾಗಿ, ವಿಶಾಲವಾದ ಸಾರ್ವಜನಿಕ ಹಿತಾಸಕ್ತಿ ಮತ್ತು ಲೈಂಗಿಕ ಅಪರಾಧಗಳನ್ನು ನಿಯಂತ್ರಿಸುವ ಕಾರಣಕ್ಕಾಗಿ ಆರೋಪಿಗೆ ಜಾಮೀನು ಮಂಜೂರು ಮಾಡಲು ಅಪ್ರಾಪ್ತೆಯಾದ ಸಂತ್ರಸ್ತೆ ʼಯಾವುದೇ ತಕರಾರು ಎತ್ತುವುದಿಲ್ಲʼ ಎಂಬ ಒಪ್ಪಿಗೆಯನ್ನು ನ್ಯಾಯಾಲಯ ನಿರ್ಲಕ್ಷಿಸುತ್ತದೆ ಎಂದು ಅದು ತಿಳಿಸಿತು. ಇಂಥ ಘೋರ ಅಪರಾಧಗಳನ್ನು ದೃಢವಾಗಿ ಎದುರಿಸಬೇಕು ಎಂದ ನ್ಯಾಯಾಲಯ ಜಾಮೀನು ಮನವಿಯನ್ನು ವಜಾ ಮಾಡಿತು.

Related Stories

No stories found.
Kannada Bar & Bench
kannada.barandbench.com