ಉತ್ತರಪ್ರದೇಶದ ಗಾಜಿಯಾಬಾದ್ ನ್ಯಾಯಾಲಯದಲ್ಲಿ ವಕೀಲರ ಮೇಲೆ ಇತ್ತೀಚೆಗೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಬಗ್ಗೆ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸುವಂತೆ ಕೋರಿ ಗಾಜಿಯಾಬಾದ್ ವಕೀಲರ ಸಂಘ ಅಲಾಹಾಬಾದ್ ಹೈಕೋರ್ಟ್‌ಗೆ ಮನವಿ ಮಾಡಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಅಕ್ಟೋಬರ್ 29ರಂದು ನ್ಯಾಯಾಧೀಶರು ಮತ್ತು ವಕೀಲರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಆ ಬಳಿಕ ಪೊಲೀಸರು ಮತ್ತು ವಕೀಲರ ನಡುವೆ ಘರ್ಷಣೆ ಸಂಭವಿಸಿತ್ತು.
ಘಟನೆ ಕುರಿತು ಹೈಕೋರ್ಟ್ ನೇರ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆ ನಡೆಸಬೇಕೆಂದು ವಕೀಲ ಜವಾಹಿರ್ ಯಾದವ್ ಮೂಲಕ ಸಲ್ಲಿಸಿದ ಮನವಿಯಲ್ಲಿ ಕೋರಲಾಗಿದೆ.
ಸಂವಿಧಾನದ 215ನೇ ವಿಧಿಯಡಿ (ಹೈಕೋರ್ಟ್ ಎಂಬುದು ನ್ಯಾಯಾಂಗ ನಿಂದನೆಗಾಗಿ ಶಿಕ್ಷೆ ವಿಧಿಸುವ ಅಧಿಕಾರ ಹೊಂದಿರುವ ರೆಕಾರ್ಡ್ ನ್ಯಾಯಾಲಯ ಎಂದು ಈ ವಿಧಿ ಹೇಳುತ್ತದೆ) ಜಿಲ್ಲಾ ನ್ಯಾಯಾಧೀಶರಿಗೆ ಶೋಕಾಸ್ ನೋಟಿಸ್ ನೀಡುವಂತೆ ಮನವಿ ಕೋರಿದೆ.
ಇದಲ್ಲದೆ, ಘರ್ಷಣೆಯ ಸಿಸಿಟಿವಿ ದೃಶ್ಯಗಳನ್ನು ಸಂರಕ್ಷಿಸಬೇಕು ಮತ್ತು ಘಟನೆ ಕುರಿತು ವಿವಿಧ ವಕೀಲರ ವಿರುದ್ಧ ದಾಖಲಾಗಿರುವ ಎರಡು ಕ್ರಿಮಿನಲ್ ದೂರುಗಳ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಪೊಲೀಸರಿಗೆ ನಿರ್ಬಂಧ ವಿಧಿಸಬೇಕು ಎಂದು ಅದು ಒತ್ತಾಯಿಸಿದೆ.
ಆಸ್ತಿ ಅತಿಕ್ರಮಣ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರುದಾರರ ನಿರೀಕ್ಷಣಾ ಜಾಮೀನು ಅರ್ಜಿ ಆಲಿಸಲು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿಲ್ ಕುಮಾರ್ ಅವರು ನಿರಾಕರಿಸಿದ್ದೇ ಘಟನೆಗೆ ಕಾರಣ ಎಂದು ಸಂಘದ ಮನವಿ ಹೇಳಿದೆ.
ಪ್ರಕರಣ ಆಲಿಸಲು ಬಯಸದಿದ್ದರೆ ಮತ್ತೊಂದು ನ್ಯಾಯಾಲಯಕ್ಕೆ ಅದನ್ನು ವರ್ಗಾಯಿಸುವಂತೆ ವಕೀಲರು ಮನವಿ ಮಾಡಿದಾಗ ನ್ಯಾಯಾಧೀಶರು ಕೋಪಗೊಂಡು ಅವಾಚ್ಯವಾಗಿ ನಿಂದಿಸಲು ಪ್ರಾರಂಭಿಸಿದರು. ನಂತರ ಪೊಲೀಸರನ್ನು ಕರೆಸಿದರು. ಇದು ಪೊಲೀಸರು ಮತ್ತು ವಕೀಲರ ಘರ್ಷಣೆಗೆ ಕಾರಣವಾಯಿತು.
ವಕೀಲರ ಸಂಘದ ಮಾಜಿ ಅಧ್ಯಕ್ಷ ನಹರ್ ಸಿಂಗ್ ಯಾದವ್ ಸೇರಿದಂತೆ ಸುಮಾರು 50 ವಕೀಲರ ವಿರುದ್ಧ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯಿದೆ 1984ರ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಾನು ನ್ಯಾಯಾಂಗ ವ್ಯವಸ್ಥೆಯ ಘನತೆ ಕಾಪಾಡಲು ಮನವಿ ಸಲ್ಲಿಸುತ್ತಿರುವುದಾಗಿ ಸಂಘ ತಿಳಿಸಿದೆ.