ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ ಸ್ನಾತಕೋತ್ತರ ಪರೀಕ್ಷೆಯನ್ನು (ನೀಟ್ ಪಿಜಿ 2024) ಮುಂದೂಡಬೇಕೆಂದು ಕೋರಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ನಾಳೆ (ಶುಕ್ರವಾರ, ಆಗಸ್ಟ್ 9 ) ವಿಚಾರಣೆ ನಡೆಸಲಿದೆ.
ಪರೀಕ್ಷೆ ಆಗಸ್ಟ್ 11ಕ್ಕೆ ನಿಗದಿಯಾಗಿದ್ದು ಅರ್ಜಿದಾರರ ಪರ ವಕೀಲರಾದ ಅನಾಸ್ ತನ್ವೀರ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರೆದುರು ಪ್ರಕರಣ ಪ್ರಸ್ತಾಪಿಸಿದರು. ಆಗ ನಾಳೆ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು.
ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳನ್ನು ತಲುಪಲು ತೊಂದರೆ ಇರುವಂತಹ ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ನೀಡಲಾಗಿದ್ದು ಅವರು ಪರೀಕ್ಷೆಗೆ ಹಾಜರಾಗಲು ಕಷ್ಟವಾಗುತ್ತಿದೆ ಎಂದು ವಿಶಾಲ್ ಸೊರೇನ್ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಿರುವ ನಗರಗಳ ಗುರುತಿಸುವಿಕೆ ಕಾರ್ಯ ಜುಲೈ 31ರಂದು ನಡೆದಿತ್ತು. ಇಂದು (ಆಗಸ್ಟ್ 8) ಆ ಕೇಂದ್ರಗಳನ್ನು ಘೋಷಿಸಲಾಗುತ್ತಿದೆ. ಹೀಗಾಗಿ, ಆಗಸ್ಟ್ 11 ರಂದು ನಡೆಯಲಿರುವ ಪರೀಕ್ಷೆಗೆ ಹಾಜರಾಗುವುದಕ್ಕಾಗಿ ಆಯಾ ಕೇಂದ್ರಗಳಿಗೆ ಪ್ರಯಾಣಿಸಲು ಕಡಿಮೆ ಸಮಯಾವಕಾಶ ಇದೆ ಎಂದು ಅರ್ಜಿದಾರರು ದೂರಿದ್ದಾರೆ.
ಇದಲ್ಲದೆ, ಪರೀಕ್ಷೆಯನ್ನು ಎರಡು ಬ್ಯಾಚ್‌ಗಳಲ್ಲಿ ನಡೆಸಲು ನಿರ್ಧರಿಸಲಾಗಿದ್ದು ಸಾಮಾನ್ಯೀಕರಣ ಸೂತ್ರವು ಅಭ್ಯರ್ಥಿಗಳಿಗೆ ತಿಳಿದಿಲ್ಲ. ಅರ್ಜಿ ಇತ್ಯರ್ಥವಾಗುವವರೆಗೆ ಪರೀಕ್ಷೆಗೆ ತಡೆ ನೀಡುವಂತೆ ಮನವಿ ಮಾಡಲಾಗಿದೆ.
ಮತ್ತೊಂದೆಡೆ ಸಾಮೂಹಿಕ ಪ್ರಶ್ನೆಪತ್ರಿಕೆ ಸೋರಿಕೆ, ವಿವಿಧ ಅಕ್ರಮಗಳಿಂದಾಗಿ ಪ್ರಸಕ್ತ ಸಾಲಿನ ನೀಟ್ ಪದವಿ ಪ್ರವೇಶ ಪರೀಕ್ಷೆ (ನೀಟ್ ಯುಜಿ 2024) ವಿವಾದದ ಕೇಂದ್ರ ಬಿಂದುವಾಗಿದ್ದನ್ನು ಅದಕ್ಕೆ ಸಂಬಂಧಿಸಿದಂತೆ ವಿವಿಧ ಅರ್ಜಿಗಳು ದೇಶದ ವಿವಿಧ ನ್ಯಾಯಾಲಯಗಳಿಗೆ ಸಲ್ಲಿಕೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.