Justice M Nagaprasanna and Karnataka HC
Justice M Nagaprasanna and Karnataka HC

ಪೋಕ್ಸೊ ಪ್ರಕರಣ: ದ್ವಿತೀಯ ಪಿಯು ಪರೀಕ್ಷೆ ಬರೆಯಲು ಆರೋಪಿಗೆ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್‌

ದ್ವಿತೀಯ ಪಿಯು ಪರೀಕ್ಷೆಯು ಏಪ್ರಿಲ್‌ 23ರಿಂದ ಆರಂಭವಾಗುತ್ತಿದ್ದು, ಪರೀಕ್ಷೆ ಬರೆಯಲು ಅನುವಾಗುವಂತೆ ಜಾಮೀನು ನೀಡಬೇಕು ಎಂದು ಆರೋಪಿ ಸಲ್ಲಿಸಿದ್ದ ಮನವಿ ಪುರಸ್ಕರಿಸಿದ ಪೀಠ.

ಎಂಟನೇ ತರಗತಿ ಓದುತ್ತಿರುವ ಬಾಲಕಿಯನ್ನು ಆಕೆಯ ಪೋಷಕರ ಅನುಮತಿ ಇಲ್ಲದೆ ಪ್ರೇಮದ ನೆಪದಲ್ಲಿ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ಸುತ್ತಾಡಿಸಿಕೊಂಡು ಬಂದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ದ್ವಿತೀಯ ಪಿಯು ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಕರ್ನಾಟಕ ಹೈಕೋರ್ಟ್‌ ಬುಧವಾರ ಷರತ್ತು ಬದ್ಧ ಮಧ್ಯಂತರ ಜಾಮೀನು ನೀಡಿದೆ.

ದ್ವಿತೀಯ ಪಿಯು ಪರೀಕ್ಷೆಯು ಏಪ್ರಿಲ್‌ 23ರಿಂದ ಆರಂಭವಾಗುತ್ತಿದ್ದು, ಪರೀಕ್ಷೆ ಬರೆಯಲು ಅನುವಾಗುವಂತೆ ಜಾಮೀನು ನೀಡಬೇಕು ಎಂದು ಕೋರಿ ಮೊದಲನೇ ಆರೋಪಿ ಸಲ್ಲಿಸಿದ್ದ ಜಾಮೀನು ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಆದೇಶ ಮಾಡಿದೆ.

ಒಂದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಭದ್ರತೆಯ ಬಾಂಡ್, ಪರೀಕ್ಷೆ ಮುಗಿದ ನಂತರ ಅಂದರೆ 2022ರ ಮೇ 11ರ ಸಂಜೆ 6 ಗಂಟೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಆರೋಪಿ ಸ್ವಯಂ ಹಾಜರಾಗಿ ಶರಣಾಗಬೇಕು. ಪರೀಕ್ಷೆ ಬರೆಯಲು ಕಾಲೇಜು ಆಡಳಿತ ಮಂಡಳಿ ಅನುಮತಿ ನೀಡಬೇಕು. ಆರೋಪಿ ವಾಸ ಮಾಡುವ ವ್ಯಾಪ್ತಿ ಪ್ರದೇಶದ ಪೊಲೀಸ್‌ ಠಾಣೆಗೆ ತೆರಳಿ ಪ್ರತಿದಿನ ಸಂಜೆ 6 ಗಂಟೆಗೆ ಸಹಿ ಮಾಡಬೇಕು. ಸಾಕ್ಷಿ ನಾಶಕ್ಕೆ ಪ್ರಯತ್ನಿಸಬಾರದು. ನ್ಯಾಯಾಲಯದ ಅನುಮತಿ ಇಲ್ಲದೆ ವ್ಯಾಪ್ತಿ ಪ್ರದೇಶ ಬಿಟ್ಟು ಹೊರಗೆ ಹೋಗಬಾರದು. ಒಂದೊಮ್ಮೆ ಆರೋಪಿ ಷರತ್ತುಗಳನ್ನು ಉಲ್ಲಂಘಿಸಿರುವುದು ಕಂಡು ಬಂದರೆ ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್‌ ಆಕ್ಷೇಪಣೆ ಸಲ್ಲಿಸಬಹುದು ಎಂದು ಆದೇಶದಲ್ಲಿ ಷರತ್ತುಗಳನ್ನು ವಿಧಿಸಿಲಾಗಿದೆ.

ಪ್ರಕರಣದ ಹಿನ್ನೆಲೆ: ಎರಡು ವಾರಗಳ ಹಿಂದೆ ಮನೆಯಲ್ಲಿ ಅಪ್ಪ–ಅಮ್ಮ ಇಲ್ಲದ ವೇಳೆ ನನ್ನ ತಂಗಿಯ ಇಚ್ಛೆಗೆ ವಿರುದ್ಧವಾಗಿ ಆರೋಪಿಗಳು ಆಕೆಯನ್ನು ಹೊರಗೆ ಕರೆದುಕೊಂಡು ಹೋಗಿ ಸುತ್ತಾಡಿಸಿಕೊಂಡು ಬಂದಿದ್ದಾರೆ ಎಂದು ಸಂತ್ರಸ್ತೆಯ ಅಕ್ಕ ಏಪ್ರಿಲ್‌ 14ರಂದು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಪೊಲೀಸರು ಇಬ್ಬರು ಆರೋಪಿಗಳನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ–2012ರ (ಪೋಕ್ಸೊ) ಅಡಿಯಲ್ಲಿ ಬಂಧಿಸಿದ್ದರು.

Related Stories

No stories found.
Kannada Bar & Bench
kannada.barandbench.com