ಅರೆ ನ್ಯಾಯಿಕ ಅಧಿಕಾರ ಹೊಂದಿರುವವರು ಮಾತ್ರವೇ ಅದನ್ನು ಚಲಾಯಿಸಬೇಕೇ ಹೊರತು ಬೇರೆ ಅಧಿಕಾರಿಗಳಲ್ಲ: ಹೈಕೋರ್ಟ್‌

ಆಯುಕ್ತರ ಪರವಾಗಿ ಕಾನೂನು ಘಟಕದ ಮುಖ್ಯಸ್ಥರು ಪ್ರಕರಣವನ್ನು ಆಲಿಸಲಾಗದು ಎಂದು ಸ್ಪಷ್ಟವಾಗಿ ಹೇಳಿದ ನ್ಯಾಯಾಲಯ. ಪ್ರಕರಣವನ್ನು ನಿರ್ಧರಿಸುವವರು ಅದನ್ನು ಆಲಿಸಬೇಕು ಎನ್ನುವ ನ್ಯಾಯದಾನದ ಮೂಲತತ್ವ ನೆನಪಿಸಿದ ಪೀಠ.
Karnataka High Court
Karnataka High Court

ಅರೆ ನ್ಯಾಯಿಕ ಅಧಿಕಾರ ಹೊಂದಿರುವ ಅಧಿಕಾರಿಗಳು ಮಾತ್ರವೇ ಅದನ್ನು ಚಲಾಯಿಸಬಹುದೇ ಹೊರತು, ತಮ್ಮ ಪರವಾಗಿ ಅದನ್ನು ಬೇರೆಯವರು ಚಲಾಯಿಸಲು ಅಧಿಕಾರವನ್ನು ವರ್ಗಾಯಿಸುವಂತಿಲ್ಲ ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಪುನರುಚ್ಚರಿಸಿದೆ.

ಅರೆ ನ್ಯಾಯಿಕ ಅಧಿಕಾರ ಹೊಂದಿರುವ ಬಿಬಿಎಂಪಿ ಆಯುಕ್ತರು ಆ ಅಧಿಕಾರವನ್ನು ಚಲಾಯಿಸಬೇಕೆ ವಿನಾ ಆ ಅಧಿಕಾರವನ್ನು ಮತ್ತೊಬ್ಬರಿಗೆ ವರ್ಗಾಯಿಸಲಾಗದು ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಸ್ಪಷ್ಟವಾಗಿ ಹೇಳಿದೆ.

“ಕಾಯಿದೆಯ ಅನುಸಾರ ಆಯುಕ್ತರಿಗೆ ಅನೇಕ ಅಧಿಕಾರ, ಕರ್ತವ್ಯ ಮತ್ತು ಕಟ್ಟುಪಾಡುಗಳನ್ನು ವಿಧಿಸಲಾಗಿದೆ. ಅವುಗಳಲ್ಲಿ ಕೆಲವು ಅರೆ ನ್ಯಾಯಿಕ ಸ್ವರೂಪದ್ದಾಗಿದ್ದು, ಪಕ್ಷಕಾರರ ವಿಚಾರಗಳಲ್ಲಿ ತೀರ್ಪು ನೀಡಲು ಆಯುಕ್ತರಿಗೆ ಅಧಿಕಾರವಿದೆ. ಪಕ್ಷಕಾರರ ಹಕ್ಕುಗಳ ಕುರಿತು ನ್ಯಾಯ ನಿರ್ಣಯ ಅಧಿಕಾರವು ಅರೆ ನ್ಯಾಯಿಕ ಸ್ವರೂಪದಲ್ಲಿರುತ್ತವೆ. ಹೀಗಾಗಿ, ಅರೆ ನ್ಯಾಯಿಕ ಅಧಿಕಾರ ಹೊಂದಿರುವ ಅಧಿಕಾರಿಗಳು ಮಾತ್ರ ಅದನ್ನು ಚಲಾಯಿಸಬೇಕಿದ್ದು, ಬೇರೆಯವರು ಅದನ್ನು ಚಲಾಯಿಸಲಾಗದು” ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಪ್ರಸಕ್ತ ಪ್ರಕರಣದಲ್ಲಿ ಅರ್ಜಿದಾರರ ವಾದವನ್ನು ನಿರಾಕರಿಸಿದ್ದಲ್ಲದೇ, ತನ್ನ ವಸತಿ ಪ್ರದೇಶದ ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಬಿಬಿಎಂಪಿ ಆಯುಕ್ತರು 2019ರಂದು ಮಾರ್ಚ್‌ 16ರಂದು ಹೊರಡಿಸಿದ್ದ ಆದೇಶವನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಈ ಸಂಬಂಧ 2018ರ ಸೆಪ್ಟೆಂಬರ್‌ 30ರಂದು ತನಗೆ ನೀಡಿದ ನೋಟಿಸ್‌ ಆಧರಿಸಿ ಅರ್ಜಿದಾರೆ ರಿಟ್‌ ಮನವಿ ಸಲ್ಲಿಸಿದ್ದರು.

ಅರ್ಜಿದಾರೆ ತಮಗೆ ಸೇರಿದ ಪ್ರದೇಶದಲ್ಲಿ ಕೈಗೊಂಡಿದ್ದ ಚಟುವಟಿಕೆಯು 2015ರ ಮಾರ್ಚ್‌ 20ರ ಅಧಿಸೂಚನೆಯ ಅನ್ವಯ ಅನುಮತಿಗೆ ಅರ್ಹವಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿದ್ದ ನ್ಯಾಯಾಲಯವು ರಿಟ್‌ ಮನವಿಯನ್ನು ವಿಲೇವಾರಿ ಮಾಡಿತ್ತು.

ಇದರ ಬೆನ್ನಿಗೇ, ಅರ್ಜಿದಾರರು ಮತ್ತು ಸ್ಥಳ ಪರಿಶೀಲನೆ ನಡೆಸಿದ್ದ ಮೂರನೇ ಪ್ರತಿವಾದಿಯಾದ ಆರೋಗ್ಯ ಅಧಿಕಾರಿಯನ್ನು ಆಲಿಸಿದ್ದ ಕಾನೂನು ಘಟಕದ ಮುಖ್ಯಸ್ಥರು ನ್ಯಾಯಿಕ ಪ್ರಕ್ರಿಯೆ ಆರಂಭಿಸಿದ್ದರು. ಕಾನೂನು ಘಟಕದ ಮುಖ್ಯಸ್ಥರು ಪ್ರಕರಣವನ್ನು ಆಲಿಸಿದ ಬಳಿಕ 2019ರ ಮಾರ್ಚ್‌ 16ರಂದು ಆಯುಕ್ತರು ಹೊರಡಿಸಿದ್ದ ಆದೇಶದಲ್ಲಿ ತನಗೆ ಸೇರಿದ ಸ್ಥಳದಲ್ಲಿ ಚಟುವಟಿಕೆ ನಡೆಸುತ್ತಿದ್ದ ಅರ್ಜಿದಾರೆಗೆ ಅನುಮತಿ ನಿರಾಕರಿಸಿದ್ದರು. ಈ ಆದೇಶವನ್ನು ಅರ್ಜಿದಾರೆ ಪ್ರಶ್ನಿಸಿದ್ದರು.

ಅರ್ಜಿದಾರೆ ಪರ ವಕೀಲರಾದ ಸುನಿಲ್‌ ರಾವ್‌ ಅವರು “ಆಯುಕ್ತರ ಪರವಾಗಿ ಕಾನೂನು ಘಟಕದ ಮುಖ್ಯಸ್ಥರು ಪ್ರಕರಣ ಆಲಿಸಿ, ಅರ್ಜಿದಾರೆಗೆ ಅನುಮತಿ ನಿರಾಕರಿಸಲಾಗದು. ಇದು ಕಾನೂನಿಗೆ ವಿರುದ್ಧ” ಎಂದು ವಾದಿಸಿದ್ದರು.

ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ಅಮಿತ್‌ ದೇಶಪಾಂಡೆ ಅವರು “ಕರ್ನಾಟಕ ನಗರಾಡಳಿತ ಕಾಯಿದೆಯ ಸೆಕ್ಷನ್‌ 66ರ ಪ್ರಕಾರ ಆಯುಕ್ತರಿಗೆ ನೀಡಲಾಗಿರುವ ಅಧಿಕಾರವನ್ನು ಅವರು ಕಾನೂನು ಘಟಕದ ಮುಖ್ಯಸ್ಥರಿಗೆ ವರ್ಗಾಯಿಸಬಹುದಾಗಿದೆ” ಎಂದು ವಾದಿಸಿದ್ದರು.

ಅರೆ ನ್ಯಾಯಿಕ ಅಧಿಕಾರಿಗಳನ್ನು ಮತ್ತೊಬ್ಬರಿಗೆ ವರ್ಗಾಯಿಸಲಾಗದು.
ಕರ್ನಾಟಕ ಹೈಕೋರ್ಟ್‌

ಎಲ್ಲಾ ವಾಸ್ತವಾಂಶಗಳು ಮತ್ತು ವಾದವನ್ನು ಆಲಿಸಿದ ಪೀಠವು ಬಿಬಿಎಂಪಿ ಆಯುಕ್ತರು ಪ್ರಕರಣವನ್ನು ಆಲಿಸದೆ ಅದನ್ನು ನಿರ್ಧರಿಸಿದ್ದಾರೆ. ಇದು ಮೂಲಭೂತ ತತ್ವವಾದ “ಪ್ರಕರಣವನ್ನು ನಿರ್ಧರಿಸುವವರು ಅದನ್ನು ಆಲಿಸಬೇಕು” ಎಂಬುದಕ್ಕೆ ವಿರುದ್ಧವಾಗಿದೆ ಎಂದು ಹೇಳಿತು.

Also Read
ಕಾನೂನಿಗೆ ವಿರುದ್ಧ ₹1 ಶುಲ್ಕ ಸಂಗ್ರಹಕ್ಕೂ ಅನುಮತಿ ಇಲ್ಲ; ಕಟ್ಟಡ ಸಂಬಂಧಿ ಬಿಬಿಎಂಪಿ ಶುಲ್ಕ ರದ್ದುಪಡಿಸಿದ ಹೈಕೋರ್ಟ್‌

“ಕಾಯಿದೆಯ ಸೆಕ್ಷನ್‌ 66ರ ಪ್ರಕಾರ ಸಾಮಾನ್ಯ ಅಧಿಕಾರ, ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ವರ್ಗಾಯಿಸಬಹುದೇ ವಿನಾ ಅರೆ ನ್ಯಾಯಿಕ ಅಧಿಕಾರಗಳನ್ನಲ್ಲ. ಶಾಸನಬದ್ಧವಾಗಿ ಕರ್ತವ್ಯ ಮತ್ತು ಬಾಧ್ಯತೆಗೆ ವಿರುದ್ಧವಾಗಿ ಅರೆ ನ್ಯಾಯಿಕ ಅಧಿಕಾರಗಳನ್ನು ವರ್ಗಾಯಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.

ಹೀಗಾಗಿ, ನ್ಯಾ. ನಾಗಪ್ರಸನ್ನ ಅವರಿದ್ದ ಪೀಠವು 2019ರ ಮಾರ್ಚ್‌ 16ರ ಆದೇಶವನ್ನು ಬದಿಗೆ ಸರಿಸಿದ್ದು, ಕಾನೂನಿನ ಅನ್ವಯ ಪ್ರಕರಣವನ್ನು ಹೊಸದಾಗಿ ಆಲಿಸಿ ಆದೇಶ ಮಾಡುವಂತೆ ಆಯುಕ್ತರಿಗೆ ಮರಳಿಸಿದೆ. ಆಯುಕ್ತರ ಆದೇಶವನ್ನು ಬದಿಗೆ ಸರಿಸಿದ ಮಾತ್ರಕ್ಕೆ ಅರ್ಜಿದಾರರು ತಮ್ಮ ಸ್ಥಳದಲ್ಲಿ ಚಟುವಟಿಕೆ ಮುಂದುವರಿಸಬಹುದು ಎಂದು ಭಾವಿಸುವಂತಿಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ. “ಚಟುವಟಿಕೆಗೆ ಅವಕಾಶ ನೀಡುವುದು ಅಥವಾ ಬಿಡುವುದು, ಈಗ ಕಳುಹಿಸಿದ ಪ್ರಕ್ರಿಯೆಯಲ್ಲಿ ಆಯುಕ್ತರ ಆದೇಶಗಳನ್ನು ಅವಲಂಬಿಸಿರುತ್ತದೆ” ಎಂದು ನ್ಯಾಯಾಲಯ ಹೇಳಿದೆ.

Related Stories

No stories found.
Kannada Bar & Bench
kannada.barandbench.com