ತಂದೆ ಎರಡನೇ ಮದುವೆಯಾಗಿದ್ದರೂ ಮೊದಲ ಮದುವೆಯಿಂದ ಜನಿಸಿದ ಮಗುವಿನ ಸ್ವಾಭಾವಿಕ ಪಾಲಕನಾಗಿರುತ್ತಾನೆ: ದೆಹಲಿ ಹೈಕೋರ್ಟ್

ಪ್ರಥಮ ವಿವಾಹದಿಂದ ಜನಿಸಿದ ಮಗುವಿನ ಸೀಮಿತ ಭೇಟಿ ಹಕ್ಕುಗಳನ್ನು ತಂದೆಗೆ ನೀಡುವಾಗ ನ್ಯಾಯಾಲಯ ಈ ವಿಚಾರ ತಿಳಿಸಿದೆ.
Delhi High Court
Delhi High Court

ಮೊದಲ ಹೆಂಡತಿಯನ್ನು ಕಳೆದುಕೊಂಡ ವ್ಯಕ್ತಿ ಎರಡನೇ ಮದುವೆಯಾದಾಗ ತನ್ನ ಪ್ರಥಮ ವಿವಾಹದಿಂದ ಜನಿಸಿದ ಮಗುವಿನ ಸ್ವಾಭಾವಿಕ ರಕ್ಷಕ ಎಂಬ ಸ್ಥಾನದಿಂದ ಅನರ್ಹಗೊಳ್ಳುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಮೊಹಮ್ಮದ್‌ ಇರ್ಷಾದ್‌ ಮತ್ತಿತರರು ಹಾಗೂ ನದೀಮ್‌ ನಡುವಣ ಪ್ರಕರಣ].

ಪ್ರಥಮ ವಿವಾಹದಿಂದ ಜನಿಸಿದ ಮಗುವಿನ ಸೀಮಿತ ಭೇಟಿ ಹಕ್ಕುಗಳನ್ನು ತಂದೆಗೆ ನೀಡುವಾಗ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ಮೊದಲ ಹೆಂಡತಿಯ ವರದಕ್ಷಿಣೆ ಸಾವಿನ ಕಾರಣಕ್ಕೆ 2010ರಲ್ಲಿ ಪತಿ ಬಂಧಿತನಾಗಿದ್ದ. 2012ರಲ್ಲಿ ಆತನನ್ನು ಖುಲಾಸೆಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ಹೈಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ.

ಈ ಮಧ್ಯೆ ಮಗುವಿನ ತಾಯಿ ಕಡೆಯ ತಾತ- ಅಜ್ಜಿ ತಮಗೇ ಮಗುವಿನ  ಶಾಶ್ವತ ಪಾಲನೆಗೆ ಅವಕಾಶ ನೀಡಬೇಕು ಮತ್ತು ತಾವೇ ಮಗುವಿನ ಪೋಷಕರು ಎಂದು ಘೋಷಿಸಬೇಕು ಎಂದು ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಮನವಿ ವಜಾಗೊಂಡಿದ್ದರಿಂದ ಅವರು ಹೈಕೋರ್ಟ್‌ಗೆ ಪ್ರಸ್ತುತ ಅರ್ಜಿ ಸಲ್ಲಿಸಿದ್ದರು.

ಆದರೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈತ್‌ ಮತ್ತು ನ್ಯಾಯಮೂರ್ತಿ ನೀನಾ ಬನ್ಸಾಲ್ ಶರ್ಮಾ ಅವರಿದ್ದ ವಿಭಾಗೀಯ ಪೀಠ ಕ್ರಿಮಿನಲ್ ವಿಚಾರಣೆ ಹೊರತುಪಡಿಸಿ ಮಗುವಿನ ತಂದೆ ವಿರುದ್ಧ ಯಾವುದೇ ಅನರ್ಹತೆ ದಾಖಲಾಗಿಲ್ಲ ಎಂದು ಹೇಳಿದೆ.

“ಎದ್ದಿರುವ ಮತ್ತೊಂದು ವಿಚಾರ ಎಂದರೆ ಆತ (ಮೊದಲನೇ ಮದುವೆಯಿಂದ ಜನಿಸಿದ ಮಗುವಿನ ತಂದೆ) ಮರುಮದುವೆಯಾಗಿದ್ದು, ಎರಡನೇ ವಿವಾಹದಿಂದ ಮಗುವನ್ನು ಪಡೆದಿದ್ದಾನೆ. ಹೀಗಾಗಿ ಅವನನ್ನು ಸ್ವಾಭಾವಿಕ ರಕ್ಷಕ ಎಂದು ಕರೆಯಲಾಗದು ಎಂಬುದಾಗಿದೆ. ಆದರೂ ಮೊದಲ ಹೆಂಡತಿಯನ್ನು ಕಳೆದುಕೊಂಡಿರುವ ವೇಳೆ ತಂದೆ ಎರಡನೇ ಮದುವೆಯಾಗಿದ್ದಾನೆಂದ ಮಾತ್ರಕ್ಕೆ ಆತ (ಮಗುವಿನ) ಸ್ವಾಭಾವಿಕ ರಕ್ಷಕನಾಗಿ ಮುಂದುವರೆಯುವುರಿಂದ ಅನರ್ಹನಾಗಲಾರ” ಎಂದು ನ್ಯಾಯಾಲಯ ನುಡಿದಿದೆ.

ಮಗುವಿಗೆ ಕೇವಲ1.5 ವರ್ಷ ವಯಸ್ಸಾಗಿದ್ದರಿಂದ ತಾಯಿಯ ಕಡೆಯ ಅಜ್ಜ- ಅಜ್ಜಿಯಂದಿರು ಮಗುವಿನ ಪಾಲನೆ ಮಾಡುತ್ತಿದ್ದು ತಂದೆಯು ಮಗುವಿನೊಂದಿಗೆ ನಂಟು ಬೆಳೆಸಿಕೊಳ್ಳಲು ಯತ್ನಿಸಿದನಾದರೂ ಅದು ಹೆಚ್ಚಿನ ಫಲಿತಾಂಶ ನೀಡಲಿಲ್ಲ ಎಂಬ ವಿಚಾರವನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು. ಪ್ರಸಕ್ತ ಆ ಬಾಲಕನಿಗೆ ಹದಿನೈದು ವರ್ಷ ವಯಸ್ಸಾಗಿದೆ.

ನ್ಯಾಯಾಲಯವು ಮಗುವಿನ ಮನಸ್ಸನ್ನು ಅರಿಯಲು ಪ್ರತ್ಯೇಕವಾಗಿ ಅದರೊಂದಿಗೆ ಸಂಭಾಷಿಸಿದಾಗಲೂ ಸಹ ಬಾಲಕನು ತಾನು ತಂದೆಯೊಂದಿಗೆ ಇರುವಾಗ ಪರಕೀಯತೆ ಅನುಭವಿಸುವ ಅನಿಸಿಕೆಯನ್ನು ವ್ಯಕ್ತಪಡಿಸಿದ್ದ. ಅಲ್ಲದೆ, ತಾನು ಅಜ್ಜಿ, ತಾತನೊಂದಿಗೆ ಸಂತಸದಿಂದಿದ್ದು ಅವರು ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದ.

ತಾಯಿಯ ಅಜ್ಜ ಅಜ್ಜಿಯಂದಿರು ಮಗುವಿನ ಬಗ್ಗೆ ಪ್ರೀತಿ ಮತ್ತು ವಾತ್ಸಲ್ಯ ಹೊಂದಿರುವುದರಲ್ಲಿ ಯಾವುದೇ ಸಂದೇಹವಿಲ್ಲವಾದರೂ ಸ್ವಾಭಾವಿಕ ಪೋಷಕರ ಪ್ರೀತಿ ಮತ್ತು ವಾತ್ಸಲ್ಯವನ್ನು ಅದು ಬದಲಿಸಲು ಸಾಧ್ಯವಿಲ್ಲ ಎಂದು ಪೀಠ ವಿವರಿಸಿತು. ಹಣಕಾಸಿನ ವಿಚಾರದಲ್ಲಿ ಉತ್ತಮ ಸ್ಥಿತಿಯಲ್ಲಿಲ್ಲ ಎಂಬ ವಿಚಾರ ಕೂಡ ಮಗುವಿನ ಸ್ವಾಭಾವಿಕ ಪೋಷಕರಿಗೆ ಮಗುವಿನ ಪಾಲನೆಯ ಅವಕಾಶ ನಿರಾಕರಿಸುವ ಅಂಶವಾಗದು ಎಂದು ಅದು ಹೇಳಿತು.

ಆದಾಗ್ಯೂ ನ್ಯಾಯಾಲಯವು, "ಪಾಲಕತ್ವ ಹಾಗೂ ಸುಪರ್ದಿಗೆ ಸಂಬಂಧಿಸಿದಂತೆ ನಮ್ಮ ಮುಂದೆ ದ್ವಂದ್ವ ಇದೆ. ಅದೇನೆಂದರೆ, ತಾರ್ಕಿಕ ನೋಟವು ಮಗುವು ತಂದೆಯ ಸುಪರ್ದಿನಲ್ಲಿ ಇರಬೇಕು ಎಂದು ಹೇಳಿದರೆ, ಸನ್ನಿವೇಶಗಳು ಹಾಗೂ ಮಗುವಿನ ಜಾಣ ಆಯ್ಕೆಗಳ ವಿಚಾರ ಬಂದಾಗ ಅದು ಬೇರೆಯದನ್ನೇ ಹೇಳುತ್ತದೆ. ಮಗುವಿಗೆ ಒಂದೂವರೆ ವರ್ಷ ಇರುವಾಗಿನಿಂದಲೂ ಅದು ಯಾವ ಕುಟುಂಬದಲ್ಲಿ ಸಂತೋಷವಾಗಿ ಸೇರ್ಪಡಣೆಗೊಂಡಿದೆಯೋ ಆ ಕುಟುಂಬದಿಂದ ಅದನ್ನು ಬೇರ್ಪಡಿಸುವುದು ಮಗುವಿನ ಹಿತಾಸಕ್ತಿಗೆ ವಿರುದ್ಧವಾಗಬಹುದು" ಎಂದು ನ್ಯಾಯಾಲಯವು ತನ್ನ ಅದೇಶದಲ್ಲಿ ಹೇಳಿತು.

ಕೌಟುಂಬಿಕ ನ್ಯಾಯಾಲಯ ತಾಯಿಯ ಕಡೆಯವರ ಹಕ್ಕುಗಳನ್ನು ನಿರಾಕರಿಸಿದ ವೇಳೆ ದುರಾದೃಷ್ಟವಶಾತ್‌ ಪಾಲನೆಯ ಅಂಶವನ್ನು ಪರಿಗಣಿಸಲಿಲ್ಲ ಎಂದಿರುವ ಪೀಠ ಮಗುವನ್ನು ಅದರ ಪಾಲಕರಾದ ಅಜ್ಜಿ, ತಾತನೊಂದಿಗೆ ಇರಿಸಲು ಸೂಚಿಸಿತು. ಅಲ್ಲದೆ, ತಂದೆಗೆ ಒಂದು ವರ್ಷಕ್ಕೆ ಸೀಮಿತವಾಗಿ ಭೇಟಿಯ ಹಕ್ಕುಗಳನ್ನು ನೀಡಿತು. ಬಳಿಕ ತಂದೆ ಅರ್ಜಿ ಸಲ್ಲಿಸಿದರೆ ಪಾಲನೆಯ ವಿಚಾರವನ್ನು ಮತ್ತೆ ಪರಿಶೀಲಿಸಬಹುದು ಎಂದಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Mohd_Irshad___Anr_versus_Nadeem.pdf
Preview

Related Stories

No stories found.
Kannada Bar & Bench
kannada.barandbench.com