ಶಾರ್ಜಿಲ್ ಇಮಾಮ್ ವಿರುದ್ಧ ದೆಹಲಿ ನ್ಯಾಯಾಲಯ ದೇಶದ್ರೋಹ, ಯುಎಪಿಎ ಅಡಿ ಆರೋಪ ನಿಗದಿಗೆ ಸೂಚಿಸಿದ್ದೇಕೆ?

ಜಾತ್ಯತೀತತೆ, ಪ್ರಜಾಪ್ರಭುತ್ವದ ಬಗ್ಗೆ ಇಮಾಮ್ ಸಂಶಯ ವ್ಯಕ್ತಪಡಿಸಿದ್ದು ರಾಷ್ಟ್ರಪಿತ ಮಹಾತ್ಮ ಗಾಂಧಿ ಸೇರಿದಂತೆ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಜಾತ್ಯತೀತತೆಯ ವಿಚಾರಗಳನ್ನು ನಿಂದಿಸಿದ್ದಾರೆ ಎಂದ ನ್ಯಾಯಾಲಯ.
Sharjeel Imam

Sharjeel Imam

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಶಾರ್ಜಿಲ್ ಇಮಾಮ್ ವಿರುದ್ಧ ಐಪಿಸಿ ಸೆಕ್ಷನ್ 124 ಎ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ದೇಶದ್ರೋಹ ಆರೋಪ ನಿಗದಿಪಡಿಸುವಂತೆ ದೆಹಲಿ ನ್ಯಾಯಾಲಯವು ಇತ್ತೀಚೆಗೆ ಹೇಳಿದೆ. 2019ರಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿಗೆ (ಎನ್‌ಆರ್‌ಸಿ) ಸಂಬಂಧಿಸಿದಂತೆ ಹಾಗೂ 2020ರಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಮಾಡಿದ ಪ್ರಚೋದನಕಾರಿ ಭಾಷಣದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇಮಾಮ್‌ ವಿರುದ್ಧ ಆರೋಪ ನಿಗದಿಪಡಿಸಲು ನ್ಯಾಯಾಲಯ ತನ್ನ ಆದೇಶದಲ್ಲಿ ನೀಡಿದ ಕಾರಣಗಳು ಹೀಗಿವೆ:

Also Read
[ಸಿಎಎ ವಿರೋಧಿ ಭಾಷಣ] ರಾಷ್ಟ್ರದ್ರೋಹ ಪ್ರಕರಣದಲ್ಲಿ ಶಾರ್ಜೀಲ್‌ ಇಮಾಮ್‌ಗೆ ಜಾಮೀನು ತಿರಸ್ಕರಿಸಿದ ದೆಹಲಿ ನ್ಯಾಯಾಲಯ
  • ಜಾತ್ಯತೀತತೆ, ಪ್ರಜಾಪ್ರಭುತ್ವದ ಬಗ್ಗೆ ಇಮಾಮ್ ಸಂಶಯ ವ್ಯಕ್ತಪಡಿಸಿದ್ದು ರಾಷ್ಟ್ರಪಿತ ಮಹಾತ್ಮ ಗಾಂಧಿ ಸೇರಿದಂತೆ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಜಾತ್ಯತೀತತೆಯ ವಿಚಾರಗಳನ್ನು ನಿಂದಿಸಿದ್ದಾರೆ.

  • ಇಮಾಮ್‌ ಭಾಷಣ ಹಾಗೂ ಕರಪತ್ರಗಳಿಗೆ ಹೋಲಿಸಿದರೆ ಸುಪ್ರೀಂಕೋರ್ಟ್‌ ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವ ಎತ್ತಿಹಿಡಿದಿದ್ದ 1962ರ ಕೇದಾರನಾಥ್ ಪ್ರಕರಣದಲ್ಲಿ ಕಡಿಮೆ ದೇಶದ್ರೋಹದ ಅಂಶಗಳಿದ್ದವು.

  • ಇಮಾಮ್‌ ಭಾಷಣಗಳು ಕೋಪ ಅಥವಾ ಉದ್ವಿಗ್ನತೆಯ ಫಲವಾದವಲ್ಲ. ಆರೋಪಿ ಹಲವು ಬಾರಿ ಅಂತಹ ಹೇಳಿಕೆಗಳನ್ನು ನೀಡಿದ್ದಾರೆ.

  • ಸಂವಿಧಾನ ಮತ್ತು ಅದರ ಶಿಲ್ಪಿಗಳು ಅಥವಾ ಅದನ್ನು ರಕ್ಷಿಸಬೇಕಾದವರಿಂದ ಮುಸ್ಲಿಮರು ಒಂದು ಸಮುದಾಯವಾಗಿ ವಂಚಿತರಾಗಿದ್ದಾರೆ ಎಂದು ಇಮಾಮ್ ತನ್ನ ಪ್ರೇಕ್ಷಕರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಗೋವಿನ ಹೆಸರಿನಲ್ಲಿ ನಡೆದ ಹತ್ಯೆ ಮತ್ತು ಮುಸ್ಲಿಮರಿಗೆ ಮೀಸಲಾತಿ ನೀಡದಿರುವ ಬಗ್ಗೆ ಹೇಳಿಕೆಗಳನ್ನು ನೀಡಲಾಗಿದೆ.

  • ಭಾಷಣಗಳು ಭಾರತದ ಸಮಗ್ರತೆಗೆ ಸವಾಲೆಸೆಯುವಂತಿದ್ದು ಹಿಂಸೆ ಪ್ರಚೋದಿಸುವ ಪ್ರವೃತ್ತಿಯಿಂದ ಕೂಡಿದ್ದವು.

  • ʼಕೋಳಿ ಕತ್ತು ಹಿಸುಕಿʼ ಎಂಬ ಇಮಾಮ್‌ ಮಾತು ಈಶಾನ್ಯ ಭಾರತವನ್ನು ದೇಶದೊಂದಿಗೆ ಜೋಡಿಸುವುದನ್ನು ತಡೆಯಿರಿ ಎಂಬುದನ್ನು ಸೂಚಿಸುತ್ತದೆ. ಅವರು ಧಾರ್ಮಿಕ ಗುಂಪುಗಳನ್ನು ಭಾವನಾತ್ಮಕ ವಿಚಾರಗಳ ಮೇಲೆ ವಿಭಜಿಸಲು ಕರೆ ನೀಡಿದ್ದಾರೆ.

  • ಭಿನ್ನಾಭಿಪ್ರಾಯ ಎಂಬುದು ಪ್ರಗತಿಪರ ದೇಶವೊಂದರ ಲಕ್ಷಣ. ಆದರೆ ಅದು ಲಕ್ಷ್ಮಣ ರೇಖೆ ದಾಟುವಂತಿಲ್ಲ. ಸರ್ಕಾರ ಅಥವಾ ಅಂತಹ ಸಂಸ್ಥೆಗಳ ನೀತಿ ಕುರಿತಾದ ಟೀಕೆ ಕೂಡ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲೆಯೊಳಗೆ ಇರಬೇಕು.

ಫೆಬ್ರವರಿ 4ರಂದು ಇಮಾಮ್ ವಿರುದ್ಧ ನ್ಯಾಯಾಲಯ ಔಪಚಾರಿಕವಾಗಿ ಆರೋಪಗಳನ್ನು ನಿಗದಿಪಡಿಸಲಿದೆ.

Related Stories

No stories found.
Kannada Bar & Bench
kannada.barandbench.com