ಲಖಿಂಪುರ್ ಖೇರಿ ಪ್ರಕರಣ: ಆಶಿಶ್ ಮಿಶ್ರಾಗೆ 8 ವಾರಗಳ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ಬಿಡುಗಡೆ ಬಳಿಕ ಉತ್ತರ ಪ್ರದೇಶ ಅಥವಾ ದೆಹಲಿಯಲ್ಲಿ ಮಿಶ್ರಾ ಇರುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ ಕೆ ಮಹೇಶ್ವರಿ ಅವರಿದ್ದ ಪೀಠ ಆದೇಶಿಸಿದೆ.
Ashish Mishra and Supreme Court
Ashish Mishra and Supreme Court

ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಕೃಷಿ ಕಾಯಿದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಸೇರಿದಂತೆ ಎಂಟು ಜನರ ಮೇಲೆ ವಾಹನ ಹರಿಸಿ ಅವರ ಸಾವಿಗೆ ಕಾರಣವಾಗಿದ್ದ ಪ್ರಕರಣದ ಪ್ರಮುಖ ಆರೋಪಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ಟೇನಿ ಅವರ ಪುತ್ರ ಆಶಿಶ್‌ ಮಿಶ್ರಾಗೆ ಸುಪ್ರೀಂ ಕೋರ್ಟ್‌ ಬುಧವಾರ ಮಧ್ಯಂತರ ಜಾಮೀನು ನೀಡಿದೆ [ಆಶಿಶ್‌ ಮಿಶ್ರಾ ಅಲಿಯಾಸ್‌ ಮೋನು ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಬಿಡುಗಡೆ ಬಳಿಕ ಉತ್ತರ ಪ್ರದೇಶ ಅಥವಾ ದೆಹಲಿಯಲ್ಲಿ ಮಿಶ್ರಾ  ಇರುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ ಕೆ ಮಹೇಶ್ವರಿ ಅವರಿದ್ದ ಪೀಠ ಆದೇಶಿಸಿದೆ. ಮಾರ್ಚ್ 14 ರಂದು ನ್ಯಾಯಾಲಯ ಮತ್ತೆ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿದೆ.

Also Read
ಲಖಿಂಪುರ್ ಖೇರಿ ಹಿಂಸಾಚಾರ: ವಿಚಾರಣೆಗೆ 5 ವರ್ಷ ಹಿಡಿಯಲಿದೆ ಎಂದು ವರದಿ, ನಿತ್ಯ ವಿಚಾರಣೆ ಕೋರಿದ ದೂರುದಾರರು

ಜಾಮೀನಿನ ಮೇಲೆ ಆಶಿಶ್ ಮಿಶ್ರಾ ಅವರನ್ನು 8 ವಾರಗಳ ಕಾಲ ಬಿಡುಗಡೆ ಮಾಡಬೇಕು. ಬಿಡುಗಡೆಯಾದ 1 ವಾರದೊಳಗೆ ಮಿಶ್ರಾ ಉತ್ತರ ಪ್ರದೇಶವನ್ನು ತೊರೆಯಬೇಕು. ಆತ ಉತ್ತರಪ್ರದೇಶ ಅಥವಾ ದೆಹಲಿಯಲ್ಲಿ ಇರುವಂತಿಲ್ಲ. ತಾನು ಇರುವ ಸ್ಥಳದ ಬಗ್ಗೆ ಮಿಶ್ರಾ ನ್ಯಾಯಾಲಯಕ್ಕೆ ತಿಳಿಸಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಲುವಾಗಿ ಮಿಶ್ರಾ ಅಥವಾ ಅವರ ಕುಟುಂಬದ ಸದಸ್ಯರು ಮಾಡುವ ಯಾವುದೇ ಯತ್ನ ಜಾಮೀನು ರದ್ದತಿಗೆ ಕಾರಣವಾಗುತ್ತದೆ. ವಿಚಾರಣೆ ವಿಳಂಬಗೊಳಿಸಲು ಮಿಶ್ರಾ ಯತ್ನಿಸುತ್ತಿರುವುದು ಕಂಡುಬಂದರೆ, ಜಾಮೀನು ರದ್ದುಗೊಳಿಸಬಹುದಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಅಲ್ಲದೆ ಸುಮೋಟೊ ಅಧಿಕಾರ ಬಳಿಸಿ ನಾಲ್ವರು ಸಹ ಆರೋಪಿಗಳಿಗೆ ಕೂಡ ಮಧ್ಯಂತ ಜಾಮೀನು ನೀಡಲಾಗುತ್ತಿದೆ. ಮಿಶ್ರಾ ತಾವಿರುವ ಸ್ಥಳದಲ್ಲಿರುವ ಪೊಲೀಸ್‌ ಠಾಣೆಗೆ ತೆರಳಿ ಸಹಿ ಹಾಕಬೇಕು ಎಂದಿರುವ ಪೀಠ ಸಾಕ್ಷಿಗಳ ಸ್ಥಿತಿಗತಿಯ ಕುರಿತಾದ ಮಾಹಿತಿ ಕುರಿತು ವಿಚಾರಣಾ ನ್ಯಾಯಾಲಯ ವರದಿ ಕಳುಹಿಸಿದ ನಂತರ ನಿರ್ದೇಶನ ನೀಡುವುದಕ್ಕಾಗಿ ಮತ್ತೆ ಪ್ರಕರಣವನ್ನು ಪಟ್ಟಿ ಮಾಡುವಂತೆ ರಿಜಿಸ್ಟ್ರಿಗೆ ಸೂಚಿಸಿದೆ.

ಮಿಶ್ರಾ ಪರವಾಗಿ ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ, ದೂರುದಾರರ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಮತ್ತು ಹಿರಿಯ ವಕೀಲ ದುಷ್ಯಂತ್ ದವೆ ಹಾಗೂ ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪ್ರಸಾದ್ ವಾದ ಮಂಡಿಸಿದ್ದರು.

Related Stories

No stories found.
Kannada Bar & Bench
kannada.barandbench.com