“ಕೋವಿಡ್‌ಗೆ ಚಿಕಿತ್ಸೆಯನ್ನು ವಾಣಿಜ್ಯ ಪದವೀಧರ ನಿರ್ಧರಿಸುವರೇ?” ಅರ್ಜಿದಾರರಿಗೆ ₹1 ಸಾವಿರ ದಂಡ ವಿಧಿಸಿದ ಸುಪ್ರೀಂ

ಅರ್ಜಿದಾರರಿಗೆ ಆರಂಭದಲ್ಲಿ ನ್ಯಾಯಾಲಯವು ₹10 ಲಕ್ಷ ದಂಡ ವಿಧಿಸಿತ್ತು. ಮನವಿದಾರ ನಿರುದ್ಯೋಗಿ, ಆತನ ಖಾತೆಯಲ್ಲಿ ಕೇವಲ ₹1 ಸಾವಿರ ಮಾತ್ರ ಇದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಒಂದು ಸಾವಿರ ರೂಪಾಯಿ ದಂಡ ವಿಧಿಸಿತು.
“ಕೋವಿಡ್‌ಗೆ ಚಿಕಿತ್ಸೆಯನ್ನು ವಾಣಿಜ್ಯ ಪದವೀಧರ ನಿರ್ಧರಿಸುವರೇ?” ಅರ್ಜಿದಾರರಿಗೆ ₹1 ಸಾವಿರ ದಂಡ ವಿಧಿಸಿದ ಸುಪ್ರೀಂ

ಕೋವಿಡ್‌ಗೆ ಚಿಕಿತ್ಸೆ ನೀಡುವ ಸಂಬಂಧ ಸಲಹೆಗಳನ್ನು ನೀಡಿ ಅದರ ಸಂಬಂಧ ನ್ಯಾಯಾಲಯವು ನಿರ್ದೇಶನ ನೀಡುವಂತೆ ಕೋರಿದ್ದ ವಾಣಿಜ್ಯ ಪದವೀಧರ ಅರ್ಜಿದಾರರೊಬ್ಬರಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ₹1 ಸಾವಿರ ದಂಡ ವಿಧಿಸಿದೆ.

ಅರ್ಜಿದಾರ ವಾಣಿಜ್ಯ ಪದವೀಧರರಾಗಿದ್ದು, ವೈದ್ಯಕೀಯ ವಿಷಯಗಳ ಮೇಲೆ ಅವರಿಗೆ ಯಾವುದೇ ಹಿಡಿತವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಎ ಎಸ್‌ ಬೋಪಣ್ಣ ಅವರಿದ್ದ ತ್ರಿಸದಸ್ಯ ಪೀಠ ಹೇಳಿದೆ.

“ಇದೊಂದು ಕ್ಷುಲ್ಲಕ ಮನವಿ. ಕಲ್ಕತ್ತಾ ಹೈಕೋರ್ಟ್‌ ಅರ್ಜಿ ವಜಾಗೊಳಿಸಿದ ಮೇಲೆ ನೀವು ಇಲ್ಲಿಗೆ ಬಂದಿದ್ದೀರಿ” ಎಂದು ನ್ಯಾಯಾಲಯವು ಅರ್ಜಿ ವಜಾಗೊಳಿಸುವಾಗ ಹೇಳಿತು.

ಅರ್ಜಿದಾರರಿಗೆ ಆರಂಭದಲ್ಲಿ ನ್ಯಾಯಾಲಯವು ₹10 ಲಕ್ಷ ದಂಡ ವಿಧಿಸಿತ್ತು. ಮನವಿದಾರ ನಿರುದ್ಯೋಗಿ, ಆತನ ಖಾತೆಯಲ್ಲಿ ಕೇವಲ ₹1 ಸಾವಿರ ಮಾತ್ರ ಇದೆ ಎಂಬ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ₹1 ಸಾವಿರ ದಂಡ ವಿಧಿಸಿತು. ಕೋವಿಡ್‌ಗೆ ಔಷಧ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ನಿರ್ದೇಶನ ನೀಡುವಂತೆ ಮನವಿದಾರ ಸುರೇಶ್‌ ಶಾ ಕೋರಿಕೆ ಸಲ್ಲಿಸಿದ್ದರು.

“ನೀವು ವೈದ್ಯರೇ?” ಎಂದು ಪೀಠ ಪ್ರಶ್ನಿಸಿತು. “ಇಲ್ಲ. ಆದರೆ, ವೈಜ್ಞಾನಿಕ ದಾಖಲೆಗಳನ್ನು ಆಧರಿಸಿ ಮನವಿ ಸಲ್ಲಿಸಲಾಗಿದೆ” ಎಂದು ಶಾ ಹೇಳಿದರು. “ನೀವು ವೈದ್ಯರಲ್ಲ ಅಥವಾ ವೈದ್ಯಕೀಯ ವಿದ್ಯಾರ್ಥಿಯೂ ಅಲ್ಲ? ನಿಮ್ಮ ಶೈಕ್ಷಣಿಕ ಅರ್ಹತೆ ಏನು?” ಎಂದು ಪೀಠ ಪ್ರಶ್ನಿಸಿತು. ಇದಕ್ಕೆ ಅರ್ಜಿದಾರ “ನಾನು ವಾಣಿಜ್ಯ ಪದವೀಧರ” ಎಂದು ಉತ್ತರಿಸಿದರು. ಇದಕ್ಕೆ ಪೀಠವು “ಕೋವಿಡ್‌ಗೆ ಹೇಗೆ ಚಿಕಿತ್ಸೆ ನೀಡಬೇಕು ಎಂದು ವಾಣಿಜ್ಯ ಪದವೀಧರ ಹೇಳುತ್ತಿದ್ದಾರೆ” ಎಂದು ಚಾಟಿ ಬೀಸಿತು.

Also Read
ವೈದ್ಯಕೀಯ ಉಪಕರಣ, ರೆಮ್‌ಡಿಸಿವಿರ್‌ ಒಳಗೊಂಡು ಕೋವಿಡ್‌ ಔಷಧಗಳಿಗೆ ಜಿಎಸ್‌ಟಿ ವಿನಾಯಿತಿ ಕೋರಿ ಸುಪ್ರೀಂನಲ್ಲಿ ಮನವಿ

ಅಂತಿವಾಗಿ ಪೀಠವು, ಕ್ಷುಲ್ಲಕ ಮನವಿ ಸಲ್ಲಿಸಲಾಗಿದೆ ಎಂದು ₹10 ಲಕ್ಷ ದಂಡ ವಿಧಿಸುವುದಾಗಿ ಹೇಳಿತು. ಆಗ ಶಾ ಅವರು “ನಾನು ನಿರುದ್ಯೋಗಿ” ಎಂದು ಅಲವತ್ತುಕೊಂಡರು.

ಅದಕ್ಕೆ ಪೀಠವು “ ಹಾಗಾದರೆ ನಿಮಗೆ ಎಷ್ಟು ದಂಡ ವಿಧಿಸಬೇಕು ಎಂದು ಹೇಳುತ್ತೀರಿ” ಎಂದು ಪ್ರಶ್ನಿಸಿತು. “ನನ್ನ ಬ್ಯಾಂಕ್‌ ಖಾತೆಯಲ್ಲಿ ಒಂದು ಸಾವಿರ ರೂಪಾಯಿ ಇದೆ” ಎಂದು ಅರ್ಜಿದಾರರು ತಿಳಿಸಿದರು. ಅರ್ಜಿ ವಜಾಗೊಳಿಸಿದ ಪೀಠವು ಕಾನೂನು ಸೇವೆಗಳ ಪ್ರಾಧಿಕಾರದ ಖಾತೆಗೆ ಒಂದು ಸಾವಿರ ರೂಪಾಯಿ ದಂಡದ ಮೊತ್ತ ಪಾವತಿಸುವಂತೆ ಸೂಚಿಸಿತು.

No stories found.
Kannada Bar & Bench
kannada.barandbench.com