ಕೇಂದ್ರದ ‘ರೇರಾ’ ಕಾಯಿದೆಯೊಂದಿಗೆ ಸಂಘರ್ಷ: ಪಶ್ಚಿಮ ಬಂಗಾಳದ ವಸತಿ ಉದ್ಯಮ ನಿಯಂತ್ರಣ ಕಾಯಿದೆ ರದ್ದುಪಡಿಸಿದ ಸುಪ್ರೀಂ

ರಾಜ್ಯದಲ್ಲಿ ಕಾಯಿದೆ ಜಾರಿಗೆ ತರುವ ಮೂಲಕ ಪಶ್ಚಿಮ ಬಂಗಾಳ ಸರ್ಕಾರ ಸಂಸತ್ತಿನ ವ್ಯಾಪ್ತಿಯನ್ನು ಅತಿಕ್ರಮಿಸಿದೆ ಏಕೆಂದರೆ ರಾಜ್ಯ ಕಾಯಿದೆಯ ಬಹುತೇಕ ನಿಬಂಧನೆಗಳು ರೇರಾ ಕಾಯಿದೆಯನ್ನು ಅತಿಕ್ರಮಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ.
ಕೇಂದ್ರದ ‘ರೇರಾ’ ಕಾಯಿದೆಯೊಂದಿಗೆ ಸಂಘರ್ಷ: ಪಶ್ಚಿಮ ಬಂಗಾಳದ ವಸತಿ ಉದ್ಯಮ ನಿಯಂತ್ರಣ ಕಾಯಿದೆ ರದ್ದುಪಡಿಸಿದ ಸುಪ್ರೀಂ

ಪಶ್ಚಿಮ ಬಗಾಳದಲ್ಲಿ ಜಾರಿಗೆ ತಂದಿದ್ದ 2017ರ ಪಶ್ಚಿಮ ಬಂಗಾಳ ವಸತಿ ಉದ್ಯಮ ನಿಯಂತ್ರಣ ಕಾಯಿದೆಯನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯಿದೆಯೊಂದಿಗೆ (ರೇರಾ) ನೇರವಾಗಿ ಸಂಘರ್ಷಕ್ಕಿಳಿಯುವುದರಿಂ ಪಶ್ಚಿಮ ಬಂಗಾಳದ ಕಾಯಿದೆಯು ಅಸಾಂವಿಧಾನಿಕ ಎಂದು ಅದು ಹೇಳಿದೆ.

ಪಶ್ಚಿಮ ಬಂಗಾಳ ಜಾರಿಗೆ ತಂದಿರುವ ಕಾಯಿದೆಯನ್ನು ರದ್ದುಪಡಿಸುವಂತೆ ಕೋರಿ ʼಫೋರಂ ಫಾರ್‌ ಪೀಪಲ್ಸ್‌ ಕಲೆಕ್ಟೀವ್‌ ಎಫರ್ಟ್ಸ್‌ʼ ಎಂಬ ಸರ್ಕಾರೇತರ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಿತ್ತು.

ಪಶ್ಚಿಮ ಬಂಗಾಳ ವಸತಿ ಉದ್ಯಮ ನಿಯಂತ್ರಣ ಕಾಯಿದೆ (ಡಬ್ಲ್ಯೂಬಿಎಚ್‌ಐಆರ್‌ಎ) ಹಾಗೂ ರೇರಾ ಎರಡೂ ಸಮವರ್ತಿ ಪಟ್ಟಿಯಲ್ಲಿ ಒಂದೇ ಪಾತ್ರ ನಿರ್ವಹಿಸುವುದರಿಂದ ಹಾಗೂ ಡಬ್ಲ್ಯೂಬಿಎಚ್‌ಐಆರ್‌ಎ ನಿಬಂಧನೆಗಳು ರೇರಾ ಕಾಯಿದೆಯನ್ನು ಅತಿಕ್ರಮಿಸುವುದರಿಂದ ಕಾಯಿದೆ ಜಾರಿಗೆ ತರುವ ಮೂಲಕ ಪಶ್ಚಿಮ ಬಂಗಾಳ ಸರ್ಕಾರ ಸಂಸತ್ತಿನ ವ್ಯಾಪ್ತಿಯನ್ನು ಅತಿಕ್ರಮಿಸಿದೆ ಎಂದು ನ್ಯಾಯಾಲಯ ಹೇಳಿದೆ.

ನಮ್ಮ ವಿಶ್ಲೇಷಣೆ ಪ್ರಕಾರ ರೇರಾ ಮತ್ತು ಡಬ್ಲ್ಯೂಬಿಎಚ್‌ಐಆರ್‌ಎಗಳಲ್ಲಿ ಕಂಡುಬಂದ ಎರಡು ಮೂಲಭೂತ ಲಕ್ಷಣಗಳೆಂದರೆ ಡಬ್ಲ್ಯೂಬಿಎಚ್‌ಐಆರ್‌ಎ ರೇರಾವನ್ನು ಅತಿಕ್ರಮಿಸಿದೆ ಮತ್ತು ಅದರ ಪದ ಪದವನ್ನೂ ನಕಲು ಮಾಡಲಾಗಿದೆ. ಇದು ರೇರಾಗೆ ಪೂರಕವಾಗಿಲ್ಲ. ಎರಡೂ ಕಾಯಿದೆಗಳು ಸಮವರ್ತಿ ಪಟ್ಟಿಯಲ್ಲಿ ಒಂದೇ ಅಂಶವನ್ನು ಉಲ್ಲೇಖಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ.

ರೇರಾ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರ ಪರ್ಯಾಯ ಆಡಳಿತ ಸ್ಥಾಪಿಸಲು ಯತ್ನಿಸಿದ್ದು ಇದಕ್ಕೆ ಸಾಂವಿಧಾನಿಕವಾಗಿ ಅನುಮತಿ ನೀಡುವುದಿಲ್ಲಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಎಂ ಆರ್‌ ಶಾ ಅವರಿದ್ದ ಪೀಠ ಹೇಳಿದೆ. ಸಂಸತ್ತು ಒಂದು ವಿಷಯದ ಬಗ್ಗೆ ಕಾನೂನು ಜಾರಿಗೆ ತಂದ ನಂತರ, ಇದೇ ರೀತಿಯ ಕಾನೂನು ಜಾರಿಗೆ ತರಲು ಮತ್ತು ಅದರ ಪದ ಪದವನ್ನೂ ನಕಲಿಸಲು ರಾಜ್ಯ ಸರ್ಕಾರಕ್ಕೆ ಅವಕಾಶವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಕಾಯಿದೆಯನ್ನು ರದ್ದುಪಡಿಸಿದರೂ ಕೂಡ ತೀರ್ಪು ಜಾರಿಗೆ ಮುನ್ನ ಕಾಯಿದೆಯಡಿ ನೀಡಲಾಗಿರುವ ಅನುದಾನ, ಪರವಾನಗಿಗಳಿಗೆ ಅಡ್ಡಿ ಉಂಟಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸಂವಿಧಾನದ 254(2) ವಿಧಿಯನ್ವಯ ಸಮವರ್ತಿ ಪಟ್ಟಿಯಲ್ಲಿರುವ ವಿಷಯವೊಂದರ ಮೇಲೆ ರಾಜ್ಯವೊಂದು ಕಾಯಿದೆಯನ್ನು ರೂಪಿಸಿದರೆ ಆಗ ಅದೇ ವಿಷಯವಾಗಿ ಕೇಂದ್ರವು ರೂಪಿಸಿರುವ ಕಾಯಿದೆಯ ಎದುರು ರಾಜ್ಯದ ಕಾಯಿದೆಯ ಉಳಿವು ರಾಷ್ಟ್ರಪತಿಯವರ ಅಂಕಿತವನ್ನು ಆಧರಿಸಿರುತ್ತದೆ. ಪ್ರಸಕ್ತ ಪ್ರಕರಣದಲ್ಲಿ ರಾಜ್ಯದ ಕಾಯಿದೆಗೆ ರಾಷ್ಟ್ರಪತಿಯವರ ಅಂಕಿತ ದೊರೆತಿಲ್ಲ ಎನ್ನುವುದನ್ನು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದು ಅದರ ಆಧಾರದಲ್ಲಿ ಪ್ರಶ್ನಿಸಿದ್ದರು.

ಅಲ್ಲದೆ, ಕೇಂದ್ರ ಹಾಗೂ ರಾಜ್ಯಗಳೆರಡೂ ಸಮವರ್ತಿ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕಾಯಿದೆಯನ್ನು ರೂಪಿಸಬಹುದಾದರೂ, ಒಂದೊಮ್ಮೆ ಇವೆರಡರ ನಡುವೆ ಸಂಘರ್ಷ ಉದ್ಭವಿಸಿದರೆ ಆಗ ರಾಜ್ಯದ ಕಾಯಿದೆಯು ಕೇಂದ್ರದ ಕಾಯಿದೆಗೆ ಅನುವು ಮಾಡಿಕೊಡಬೇಕಾಗುತ್ತದೆ ಎನ್ನುವ ಅಂಶವನ್ನೂ ಸಹ ಅರ್ಜಿದಾರರು ಪ್ರತಿಪಾದಿಸಿದ್ದರು.

ರೇರಾ ಕಾಯಿದೆಯನ್ನು ಕೇಂದ್ರ ಸರ್ಕಾರ 2016ರಲ್ಲಿ ಜಾರಿಗೆ ತಂದಿತ್ತು. ಅದೇ ವರ್ಷ ಆಗಸ್ಟ್‌ನಲ್ಲಿ ಪಶ್ಚಿಮ ಬಂಗಾಳ ಸರ್ಕಾರ ರೇರಾ ಅಡಿ ಕರಡು ವಸತಿ ಉದ್ಯಮ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳ ಕುರಿತು ಅಧಿಸೂಚನೆ ಹೊರಡಿಸಿತ್ತು. ಈ ನಿಯಮಗಳನ್ನು ಅಂತಿಮಗೊಳಿಸಲು, 2017 ರಲ್ಲಿ ಭಾಗೀದಾರರ ಸಭೆಯನ್ನು ಕೂಡ ಏರ್ಪಡಿಸಲಾಗಿತ್ತು. ಇದರಲ್ಲಿ ಅರ್ಜಿದಾರ ಸಂಸ್ಥೆ ಕೂಡ ಭಾಗಿಯಾಗಿತ್ತು. ಆದರೆ, ನಂತರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬದಲಾಗಿ, 2017ರ ಡಬ್ಲ್ಯೂಬಿಎಚ್‌ಐಆರ್‌ ಕಾಯಿದೆಯನ್ನು 2018ರ ಮಾರ್ಚ್‌ನಲ್ಲಿ ಪರಿಚಯಿಸಿ ಅದೇ ವರ್ಷ ಜೂನ್‌ನಲ್ಲಿ ಕಾಯಿದೆಯ ನಿಯಮಗಳನ್ನು ಪ್ರಕಟಿಸಲಾಯಿತು. ಕಾಯಿದೆ ಕೇಂದ್ರ ಜಾರಿಗೆ ತಂದಿರುವ ರೇರಾದೊಂದಿಗೆ ಮುಖಾಮುಖಿಯಾಗುತ್ತದೆ ಎಂದು ವಾದಿಸಿ ಅರ್ಜಿದಾರರು ಸುಪ್ರೀಂಕೋರ್ಟ್‌ನಲ್ಲಿ ದೂರು ನೀಡಿದ್ದರು.

ಕಾಯಿದೆ ರದ್ದುಪಡಿಸಿರುವ ನ್ಯಾಯಾಲಯ ಈ ತೀರ್ಪಿನಿಂದಾಗಿ 1993ರ ಡಬ್ಲ್ಯೂಬಿಎಚ್‌ಐಆರ್‌ಎಗೆ ಪುನಶ್ಚೇತನ ನೀಡಿದಂತಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

No stories found.
Kannada Bar & Bench
kannada.barandbench.com