[ನಾರದ ಪ್ರಕರಣ] ದಾಖಲೆಯಲ್ಲಿ ಅಫಿಡವಿಟ್‌ ಸ್ವೀಕರಿಸಲು ಕಲ್ಕತ್ತಾ ಹೈಕೋರ್ಟ್‌ ನಕಾರ: ಸುಪ್ರೀಂ ಕದ ತಟ್ಟಿದ ಮಮತಾ ಸರ್ಕಾರ

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಹೇಮಂತ್‌ ಗುಪ್ತ ಮತ್ತು ವಿ ರಾಮಸುಬ್ರಮಣಿಯನ್‌ ಅವರ ನೇತೃತ್ವದ ವಿಭಾಗೀಯ ಪೀಠವು ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಲಿದೆ.
[ನಾರದ ಪ್ರಕರಣ] ದಾಖಲೆಯಲ್ಲಿ ಅಫಿಡವಿಟ್‌ ಸ್ವೀಕರಿಸಲು ಕಲ್ಕತ್ತಾ ಹೈಕೋರ್ಟ್‌ ನಕಾರ: ಸುಪ್ರೀಂ ಕದ ತಟ್ಟಿದ ಮಮತಾ ಸರ್ಕಾರ

ನಾರದಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್ ಜೂನ್ 9ರಂದು ನೀಡಿದ್ದ ಆದೇಶ ಪ್ರಶ್ನಿಸಿ ಪಶ್ಚಿಮಬಂಗಾಳ ಸರ್ಕಾರ ಮತ್ತು ರಾಜ್ಯ ಕಾನೂನು ಸಚಿವ ಮೊಲೊಯ್‌ ಘಟಕ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ. ಪ್ರಕರಣವನ್ನು ವರ್ಗಾಯಿಸುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯಲ್ಲಿ ಇಬ್ಬರ ಪ್ರತಿಕ್ರಿಯಾ ಅಫಿಡವಿಟ್‌ಗಳನ್ನು ಅಧಿಕೃತವಾಗಿ ಸಲ್ಲಿಸಲು ನಿರಾಕರಿಸಿ ಹೈಕೋರ್ಟ್‌ ಆದೇಶ ಹೊರಡಿಸಿತ್ತು.

ಭಿನ್ನ ಹಂತಗಳಲ್ಲಿ ಸಿಬಿಐಗೆ ಹೆಚ್ಚುವರಿ ಅಫಿಡವಿಟ್‌ ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವಾಗ ರಾಜ್ಯ ಸರ್ಕಾರ ಮತ್ತು ಕಾನೂನು ಸಚಿವರ ಹಕ್ಕುಗಳನ್ನು ನಿರಾಕರಿಸಬಾರದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಇದರ ವಿಚಾರಣೆಯನ್ನು ಶುಕ್ರವಾರ ನ್ಯಾಯಮೂರ್ತಿಗಳಾದ ಹೇಮಂತ್‌ ಗುಪ್ತ ಮತ್ತು ವಿ ರಾಮಸುಬ್ರಮಣಿಯನ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಲಿದೆ.

ಪ್ರಕರಣದ ವಾದ-ಪ್ರತಿವಾದ ಮುಗಿಯುವವರೆಗೆ ಸಾಕಷ್ಟು ಕಾದಿದ್ದ ಮುಖ್ಯಮಂತ್ರಿ, ಕಾನೂನು ಸಚಿವರು ಮತ್ತು ಸರ್ಕಾರ ಬಳಿಕ ತಮ್ಮ ಕೋರಿಕೆಯ ಪ್ರತಿಕ್ರಿಯೆಯನ್ನು ದಾಖಲೆಯಲ್ಲಿ ಸಲ್ಲಿಸಲು ಮುಂದಾಗಿದ್ದಾರೆ ಎಂದು ಜೂನ್‌ 9ರ ಆದೇಶದಲ್ಲಿ ಕಲ್ಕತ್ತಾ ಹೈಕೋರ್ಟ್‌ ಹೇಳಿತ್ತು. “ಇದು ಆರೋಪಿಗಳ ಲೋಪವನ್ನು ಸರಿಪಡಿಸುವುದು ಮತ್ತು ಅವರಿಗೆ ಬೆಂಬಲಿಸುವುದನ್ನು ಬಿಟ್ಟು ಬೇರೇನೂ ಅಲ್ಲ. ಆರೋಪಿಗಳನ್ನು ಪ್ರತಿನಿಧಿಸುತ್ತಿರುವ ವಕೀಲರೂ ರಾಜ್ಯ ಸರ್ಕಾರ ತಡವಾಗಿ ಸಲ್ಲಿಸುತ್ತಿರುವ ಅಫಿಡವಿಟ್‌ ಒಪ್ಪಿಕೊಳ್ಳುವಂತೆ ಕೋರಿರುವುದನ್ನು ಬೆಂಬಲಿಸುತ್ತಿದ್ದಾರೆ” ಎಂದಿತ್ತು.

ರಾಜ್ಯ ಸರ್ಕಾರದ ಅಫಿಡವಿಟ್‌ ಸ್ವೀಕರಿಸಲು ನಿರಾಕರಿಸಿದರೆ ಅದು ನ್ಯಾಯದಾನ ಮೇಲೆ ಪ್ರಭಾವ ಬೀರಲಿದೆ ಎಂದು ಕಲ್ಕತ್ತಾ ಹೈಕೋರ್ಟ್‌ನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ರಾಕೇಶ್‌ ದ್ವಿವೇದಿ ಹೇಳಿದ್ದರು. “ಅನಾನುಕೂಲ ಉಂಟು ಮಾಡುತ್ತಿರುವುದಕ್ಕೆ ಕ್ಷಮೆ ಕೋರುತ್ತೇವೆ. ಆದರೆ, ಇದು ನ್ಯಾಯದಾನದ ಪ್ರಶ್ನೆಯಾಗಿದೆ. ಅಫಿಡವಿಟ್‌ ಸ್ವೀಕರಿಸಲು ನಿರಾಕರಿಸಿದರೆ ನ್ಯಾಯದಾನ ಸರಿಯಾಗಿ ಮಾಡಿದಂತಾಗದು. ಸಿಬಿಐ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದು, ಅವರು ಅವುಗಳನ್ನು ಸಾಬೀತುಪಡಿಸಬೇಕು. ವಾಸ್ತವಿಕ ಅಂಶಗಳನ್ನು ಹೊರಗೆಡವಲು ಸಿಬಿಐ ಏಕೆ ಹಿಂಜರಿಯುತ್ತಿದೆ?” ಎಂದು ಅವರು ಪ್ರಶ್ನಿಸಿದ್ದರು.

Also Read
[ನಾರದ ಪ್ರಕರಣ] ಹೈಕೋರ್ಟ್ ಘನತೆಗೆ ತಕ್ಕಂತೆ ನಮ್ಮ ನಡವಳಿಕೆ ಇಲ್ಲ: ಹಂಗಾಮಿ ಸಿಜೆಗೆ ಪತ್ರ ಬರೆದ ಹಾಲಿ ನ್ಯಾಯಮೂರ್ತಿ

ತಮ್ಮ ವಾದ ಪೂರ್ಣಗೊಂಡ ಬಳಿಕ ರಾಜ್ಯ ಸರ್ಕಾರ ಅಫಿಡವಿಟ್‌ ಸಲ್ಲಿಸುತ್ತಿರುವುದರಿಂದ ಅದನ್ನು ಸ್ವೀಕರಿಸಬಾರದು ಎಂದು ನ್ಯಾಯಾಲಯದ ಮುಂದೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಬಲವಾಗಿ ವಿರೋಧಿಸಿದರು. ಇದಕ್ಕೆ ನ್ಯಾಯಾಲಯ ಸಮ್ಮತಿಸಿತ್ತು.

“ಸೂಕ್ತ ಸಂದರ್ಭದಲ್ಲಿ ಅಫಿಡವಿಟ್‌ ಸಲ್ಲಿಸದೆ ಪ್ರತಿವಾದಿಗಳು ಅಳೆದು ತೂಗಿ ಒತ್ತಡ ಮೈಮೇಲೆ ಎಳೆದುಕೊಂಡಿದ್ದಾರೆ. ಹೀಗಾಗಿ, ಅವರಿಗೆ ಇಷ್ಟ ಬಂದಾಗ ಸಲ್ಲಿಸುವ ಅಫಿಡವಿಟ್‌ ಸ್ವೀಕರಿಸಲಾಗದು. ಕಸ್ಟಡಿಯಲ್ಲಿದ್ದ ಆರೋಪಿಗಳ ಪರವಾಗಿ ತುರ್ತು ವಿಚಾರಣೆಯನ್ನು ಪರಿಗಣಿಸಬಹುದು. ಆದರೆ, ರಾಜ್ಯ ಸರ್ಕಾರದ ಪರವಾಗಿ ಖಂಡಿತವಾಗಿಯೂ ಅಲ್ಲ. ಸಿಬಿಐ ಮನವಿಯಲ್ಲಿ ಸೇರಿಸಿರುವ ರಾಜ್ಯ ಸರ್ಕಾರ ಅಥವಾ ಇತರೆ ವ್ಯಕ್ತಿಗಳು ಪ್ರತಿಕ್ರಿಯೆ ಸಲ್ಲಿಸಲು ಬಯಸಿದರೆ ಸಮಯಾವಕಾಶ ಕೋರಬಹುದಾಗಿತ್ತು. ಹಾಗೆಂದು, ವಿಚಾರಣೆಯು ಮಹತ್ವದ ಘಟ್ಟದಲ್ಲಿ ಕಾಲಾವಕಾಶ ಕೋರುವುದಲ್ಲ” ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿತ್ತು.

Related Stories

No stories found.