ನ್ಯಾಯಾಲಯಗಳು ಮೊದಲಿನಂತೆ ಕೆಲಸ ಮಾಡುವುದೊಂದೇ ಈಗ ಉಳಿದಿರುವ ಪರಿಹಾರ: ವಕೀಲೆ ಪದ್ಮಶ್ರೀ ಬಿ ಎಲ್ ಬಿಳಿಯ

ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ವಕೀಲೆಯಾಗಿ ಸೇವೆ ಸಲ್ಲಿಸುತ್ತಿರುವ ಪದ್ಮಶ್ರೀ ನಗರದ ವಕೀಲರು ಕೋವಿಡ್‌ ದಿನಗಳಲ್ಲಿ ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದ್ದಾರೆ...
ನ್ಯಾಯಾಲಯಗಳು ಮೊದಲಿನಂತೆ ಕೆಲಸ ಮಾಡುವುದೊಂದೇ ಈಗ ಉಳಿದಿರುವ ಪರಿಹಾರ: ವಕೀಲೆ ಪದ್ಮಶ್ರೀ ಬಿ ಎಲ್ ಬಿಳಿಯ

ಕೋವಿಡ್‌ ದಾಳಿ ಮಾಡಿ ಲಾಕ್‌ಡೌನ್‌ ಆಯಿತು. ದೇಶದ ನ್ಯಾಯಾಲಯಗಳು ಕೆಲಸ ಮಾಡುವುದನ್ನು ನಿಲ್ಲಿಸಿದವು. ಮಾರ್ಚ್‌ ನಂತರ ಪ್ರಕರಣಗಳು ಎಂದಿನಂತೆ ವಿಲೇವಾರಿಯಾಗಲಿಲ್ಲ. ಸಾಂಕ್ರಾಮಿಕ ರೋಗ ತಂದಿತ್ತ ಈ ಸ್ಥಿತಿ ಆರೋಪಿಗಳು, ದಾವೆದಾರರು, ಸಾಕ್ಷಿಗಳು, ವಕೀಲರು, ಅಷ್ಟೇ ಏಕೆ ನೋಟರಿಯವರು, ಟೈಪಿಸ್ಟ್‌ಗಳು, ಕಡೆಗೆ ಕೋರ್ಟ್‌ ಅಂಗಳದಲ್ಲಿ ಕ್ಯಾಂಟಿನ್‌ ನಡೆಸುತ್ತಿದ್ದವರ ಮೇಲೂ ಕರಾಳ ಹಸ್ತ ಚಾಚಿತು. ʼಗೆದ್ದವರು ಸೋತರು, ಸೋತವರು ಸತ್ತರುʼ ಎಂಬಂತಹ ಸ್ಥಿತಿ ನಿರ್ಮಾಣವಾಯಿತು. ಕುಟುಂಬದ ಆಧಾರವಾಗಿದ್ದ ಮಹಿಳಾ ವಕೀಲರ ಸ್ಥಿತಿ ಹೇಳತೀರದಂತಾಯಿತು. ಗೊಂದಲದ ಗೂಡಾದ ಸರ್ಕಾರದ ನೀತಿಗಳು ಗಾಯದ ಮೇಲೆ ಬರೆ ಎಳೆದವು ಎಂಬುದು ಕುಂದಾಪುರ ಮೂಲದ ನ್ಯಾಯವಾದಿ ಪದ್ಮಶ್ರೀ ಬಿ ಎಲ್‌ ಬಿಳಿಯ ಅವರ ಮಾತು.

ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ವಕೀಲೆಯಾಗಿ ಸೇವೆ ಸಲ್ಲಿಸುತ್ತಿರುವ ಅವರು ಎಂಬಿಎ ಬಳಿಕ ಕಾನೂನು ಅಧ್ಯಯನ ಮಾಡಿದವರು. ಸಿವಿಲ್‌, ಕ್ರಿಮಿನಲ್‌, ಕೌಟುಂಬಿಕ ವ್ಯಾಜ್ಯಗಳು, ಆಸ್ತಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸಿದ ಅನುಭವ ಹೊಂದಿರುವವರು. ವಕೀಲ ಸಮುದಾಯ ನೋವು- ನಲಿವುಗಳನ್ನು ಹತ್ತಿರದಿಂದ ಬಲ್ಲವರು. ಕೋವಿಡ್‌ ಸಂದರ್ಭದಲ್ಲಿ ಬೆಂಗಳೂರಿನ ವಕೀಲ ಸಮುದಾಯ ಮತ್ತು ನ್ಯಾಯಾಂಗ ಜಗತ್ತನೇ ಆಧರಿಸಿ ಬದುಕುವವರು ಎದುರಿಸಿದ ಸಂಕಷ್ಟಗಳನ್ನು ಅವರು ʼಬಾರ್‌ ಅಂಡ್‌ ಬೆಂಚ್‌ʼ ಓದುಗರಿಗಾಗಿ ತೆರದಿಟ್ಟಿದ್ದಾರೆ.

Q

ಬೆಂಗಳೂರನ್ನೇ ನೆಚ್ಚಿಕೊಂಡು ವಕೀಲಿಕೆಯಲ್ಲಿ ತೊಡಗಿಕೊಂಡಿರುವ ಸಂಖ್ಯೆ ಗಣನೀಯವಾಗಿದೆ. ಕೋವಿಡ್‌ ಅಂತಹವರ ಮೇಲೆ ಬೀರಿದ ಪರಿಣಾಮ ಏನು?

A

ನಗರದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ, ಮೇಯೊಹಾಲ್‌ ನ್ಯಾಯಾಲಯ, ಸಿವಿಲ್‌ ನ್ಯಾಯಾಲಯಗಳ ಸಂಕೀರ್ಣ, ಹೈಕೋರ್ಟ್‌ ಮುಂತಾದೆಡೆ ಸಾವಿರಾರು ವಕೀಲರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜಧಾನಿಯಾಗಿರುವುದರಿಂದ ಸಹಜವಾಗಿಯೇ ಉಳಿದ ನಗರಗಳಿಗಿಂತಲೂ ಹೆಚ್ಚು ನ್ಯಾಯವಾದಿಗಳು ಇಲ್ಲಿ ಕೆಲಸ ಮಾಡುತ್ತಾರೆ. ಕೋವಿಡ್‌ಗೂ ಮೊದಲು ಸಣ್ಣ ಪುಟ್ಟ ವಕೀಲರಲ್ಲಿ ಕೂಡ ಒಂದಾದರೂ ಪ್ರಕರಣಗಳು ಇರುತ್ತಿದ್ದವು. ಪಾಲುದಾರಿಕೆಯಲ್ಲಿ ಅವರು ಕಚೇರಿಗಳನ್ನು ತೆರೆದುಕೊಂಡಿರುತ್ತಿದ್ದರು. ನ್ಯಾಯಾಲಯಗಳ ಅಂಗಳದಲ್ಲಿಯೇ ಪ್ರಕರಣಗಳನ್ನು ಹಿಡಿಯುತ್ತಿದ್ದ ವಕೀಲರ ಒಂದು ವರ್ಗವೇ ಇತ್ತು. ಕೋವಿಡ್‌ ಬರ ಸಿಡಿಲಿನಂತೆ ಎರಗಿದ ಮೇಲೆ ನ್ಯಾಯಾಲಯಗಳನ್ನೇ ನೆಚ್ಚಿಕೊಂಡವರ ಜೀವನ ಚಕ್ರ ನುಜ್ಜುಗುಜ್ಜಾಯಿತು. ಐದು ವರ್ಷಗಳಿಗಿಂತಲೂ ಕಡಿಮೆ ಅನುಭವ ಇರುವ ಕಿರಿಯ ವಕೀಲರು ಸಾಕಷ್ಟು ತೊಂದರೆಗಳಿಗೆ ಸಿಲುಕಿಕೊಂಡಿದ್ದಾರೆ. ಈಗಷ್ಟೇ ವೃತ್ತಿ ಪ್ರವೇಶಿಸಿದವರಿಗೆ ಯಾಕಾದರೂ ಕಾನೂನು ಅಧ್ಯಯನ ಮಾಡಿದೆವೋ ಎಂಬ ಭಾವ ಮೂಡಿದೆ.

Q

ಮಹಿಳಾ ವಕೀಲರ ಸ್ಥಿತಿಗತಿ ಹೇಗಿದೆ?

A

ಮಹಿಳಾ ವಕೀಲರಲ್ಲಿ ಎಲ್ಲರೂ ಉತ್ತಮ ಸ್ಥಿತಿಯಲ್ಲಿರುವುದಿಲ್ಲ. ವಿಚ್ಛೇದಿತರು, ವಿಧವೆಯರು, ಒಂಟಿಯಾಗಿ ಜೀವನ ನಡೆಸುತ್ತಿರುವ ಅನೇಕ ಮಂದಿ ಕೋವಿಡ್‌ನಿಂದ ಅತಂತ್ರ ಸ್ಥಿತಿ ಎದುರಿಸುತ್ತಿರುವುದನ್ನು ನಾನು ಕಂಡಿದ್ದೇನೆ. ಅನೇಕರ ಸಂಸಾರ ಊರುಗಳಲ್ಲಿದ್ದರೂ ವೃತ್ತಿಗಾಗಿ ಬೆಂಗಳೂರಿನಲ್ಲಿ ಅವರು ಇರುತ್ತಿದ್ದರು. ಪಿಜಿಗಳಲ್ಲೇ ಬದುಕುತ್ತಿದ್ದ ಅವರ ಜೀವನ ಈಗ ಮತ್ತಷ್ಟು ಕಗ್ಗಂಟಾಗಿದೆ. ಕೇಸುಗಳಿಲ್ಲದೇ ಅನೇಕರು ಸಂಕಷ್ಟ ಎದುರಿಸುತ್ತಿದ್ದಾರೆ. ಅಂತಹವರಿಗೆ ಏನಾದರೂ ಸಹಾಯ ಮಾಡಬೇಕಿರುವುದು ತುರ್ತು ಅಗತ್ಯ.

Q

ಕನ್ನಡ ಮಾಧ್ಯಮದಲ್ಲೇ ಓದಿ ವಕೀಲಿಕೆ ಮಾಡುತ್ತಿರುವವರ ಸ್ಥಿತಿ ಹೇಗಿದೆ?

A

ಶ್ರೀಮಂತ ಕಕ್ಷೀದಾರರು ದೊಡ್ಡ ದೊಡ್ಡ ಕಾರ್ಪೊರೇಟ್‌ ಕಾನೂನು ಸಂಸ್ಥೆಗಳ ಮೊರೆ ಹೋಗುತ್ತಾರೆ. ಅಲ್ಲಿ ಕೆಲಸ ಮಾಡುವ ವಕೀಲರ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಬೇರೆ ಇರುತ್ತದೆ. ಕೌಟುಂಬಿಕ ಹಿನ್ನೆಲೆ, ಬಡತನ ಇತ್ಯಾದಿ ಕಾರಣಗಳಿಗಾಗಿ ಎಲ್ಲರಿಗೂ ಇಂಗ್ಲಿಷ್‌ ಮಾಧ್ಯಮದಲ್ಲಿ ಅಧ್ಯಯನ ಮಾಡಲು ಆಗಿರುವುದಿಲ್ಲ. ಕೋವಿಡ್‌ನಿಂದ ಬದುಕು ದುರ್ಭರವಾದ ಹೆಚ್ಚಿನ ಸಂಖ್ಯೆಯ ವಕೀಲರು ಇಂತಹ ಹಿನ್ನೆಲೆಯಿಂದ ಬಂದವರು. ಬಡ ಅಥವಾ ಮಧ್ಯಮ ವರ್ಗಕ್ಕೆ ಸೇರಿದ ವಕೀಲರು ಹೆಚ್ಚು ಫೀಸ್‌ ಪಡೆಯುವುದಿಲ್ಲ ಎಂಬ ಕಾರಣಕ್ಕೆ ಅವರನ್ನೇ ನೆಚ್ಚಿಕೊಂಡ ಕಕ್ಷೀದಾರರ ಸಮೂಹ ಇದೆ. ಆದರೆ ಇಂತಹ ವಕೀಲರುಗಳು ಹೈಕೋರ್ಟ್‌ಗಳಲ್ಲಿ ವಾದ ಮಂಡಿಸುವುದು ಕನಸಿನ ಮಾತಾಗಿದೆ. ಕೌಟುಂಬಿಕ ನ್ಯಾಯಾಲಯಗಳಂತಹ ಕಡೆ ಕನ್ನಡದಲ್ಲೇ ಅವರು ಪ್ರಕರಣಗಳನ್ನು ಮಂಡಿಸುತ್ತಾರೆ. ಅವರಿಗೆ ಕಂಪ್ಯೂಟರ್‌ ಸಾಕ್ಷರತೆ ಒದಗಿಸುವುದು, ಕನಿಷ್ಠ ಸಂವಹನ ಸಾಧ್ಯವಾಗಬಲ್ಲ ಇಂಗ್ಲಿಷ್‌ ಜ್ಞಾನ ನೀಡುವುದು ಆದ್ಯತೆಯ ವಿಚಾರವಾಗಬೇಕು.

Q

ಕೋವಿಡ್‌ ಸಂಕಷ್ಟಕ್ಕೆ ಸಿಲುಕಿದವರಿಗೆಂದು ಸರ್ಕಾರ ಐದು ಕೋಟಿ ರೂಪಾಯಿ ನೆರವು ನೀಡಿದೆ ಅಲ್ಲವೇ?

A

ಹೌದು ನೀಡಿದೆ. ನನಗೂ ಐದು ಸಾವಿರ ರೂಪಾಯಿಯಷ್ಟು ಪರಿಹಾರಧನ ದೊರೆತಿದೆ. ಆದರೆ ಪ್ರಶ್ನೆ ಅದಲ್ಲ. ಲಕ್ಷಾಂತರ ವಕೀಲರು ರಾಜ್ಯದಲ್ಲಿದ್ದಾರೆ. ಆ ಎಲ್ಲರಿಗೂ ಅಂದರೆ ಆರ್ಥಿಕವಾಗಿ ಕಟ್ಟಕಡೆಯ ಸ್ಥಾನದಲ್ಲಿರುವ ವಕೀಲರಿಗೆ ನಿಜವಾಗಿಯೂ ಪರಿಹಾರ ಧನ ದೊರೆತಿದೆಯೇ ಎಂಬುದಕ್ಕೆ ಉತ್ತರ ಕಂಡುಕೊಳ್ಳಬೇಕು. ಪರಿಹಾರ ಧನ ಒದಗಿಸುವಲ್ಲಿ ಪಕ್ಷಪಾತ ಧೋರಣೆ ಅನುಸರಿಸಲಾಗಿದೆ. ಆಸ್ತಿ- ಆದಾಯದ ವಿಚಾರದಲ್ಲಿ ಸುಳ್ಳು ಘೋಷಣೆ ಮಾಡಿಕೊಂಡವರಿಗೆ ಕೂಡ ಪರಿಹಾರ ದೊರೆತಿದೆ ಎಂಬ ಆರೋಪಗಳಿವೆ.

Q

ವಕೀಲರ ಸಂಘದ ಸ್ಪಂದನೆ ಹೇಗಿತ್ತು?

A

ವಕೀಲರ ಸಂಘಗಗಳು ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸುತ್ತಿವೆ ನಿಜ. ಆದರೆ ರಾಜ್ಯ ಸರ್ಕಾರ ನೀಡಿದರೂ ಐದು ಕೋಟಿ ಮೊತ್ತ ಲಕ್ಷಾಂತರ ಸಂಖ್ಯೆಯಲ್ಲಿರುವ ವಕೀಲರ ಸಮುದಾಯಕ್ಕೆ ಸಾಕಾಗುತ್ತದೆಯೇ ಎಂಬುದನ್ನು ಗಂಭೀರವಾಗಿ ಪರಿಗಣಿಸಿಲ್ಲ. ತಮ್ಮ ಬೇಡಿಕೆಗಳನ್ನು ಪರಿಣಾಮಕಾರಿಯಾಗಿ ಸರ್ಕಾರಕ್ಕೆ ಮುಟ್ಟಿಸುವ ಕೆಲಸ ವಕೀಲರ ಸಂಘಗಳಿಂದ ನಡೆದಿಲ್ಲ. ಕಳೆದ ತಿಂಗಳು 40 ಮಂದಿ ವಕೀಲರು ಅನಾರೋಗ್ಯದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಸಾಮಾನ್ಯ ದಿನಗಳಿಗಿಂತಲೂ ಸಾವಿನ ಸಂಖ್ಯೆ ಹೆಚ್ಚಿದೆ. ಇವೆಲ್ಲಾ ಗಮನಿಸಬೇಕಾದಂತಹ ಗಂಭೀರ ವಿಚಾರಗಳು. ವಕೀಲರಿಗಷ್ಟೇ ಅಲ್ಲದೆ ವಕೀಲರನ್ನು ನೆಚ್ಚಿಕೊಂಡ ಅವರ ಕುಟುಂಬ ವರ್ಗಕ್ಕೂ ಆರೋಗ್ಯ ವಿಮೆಯ ಸೌಲಭ್ಯ ದೊರೆಯುವಂತಾಗಬೇಕು.

Q

ನ್ಯಾಯಾಲಯಗಳಲ್ಲಿ ಕೋವಿಡ್‌ ನಿಯಂತ್ರಿಸಲು ಹೊರಡಿಸಲಾದ ಎಸ್‌ಒಪಿ (ಪ್ರಮಾಣಿತ ಕಾರ್ಯಾಚರಣಾ ವಿಧಾನ) ಬೀರಿರುವ ಪರಿಣಾಮ ಎಂತಹುದು?

A

ಇದರಿಂದ ಕೆಲ ಪ್ರಯೋಜನಗಳು ಆಗಿವೆ. ಪ್ರಕರಣಗಳ ವಿಚಾರಣೆಯಲ್ಲಿ ಅನಗತ್ಯ ವಿಳಂಬ ತಪ್ಪಿದೆ. ಆದರೆ ಬಿಎಂಟಿಸಿ ಬಸ್ಸುಗಳಲ್ಲಿ ನಡೆಯದ ಕೋವಿಡ್‌ ತಪಾಸಣೆ ನ್ಯಾಯಾಲಯದಲ್ಲಿ ಮಾತ್ರ ನಡೆಯಬೇಕು ಎಂದು ನಿರೀಕ್ಷಿಸುವುದು ಸಲ್ಲದು. ಎಸ್‌ಒಪಿ ಮಾನದಂಡದ ಪರಿಣಾಮ ವಿಚಾರಣೆಗಾಗಿ ಕೈಗೆತ್ತಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ. ಕಕ್ಷಿದಾರರು, ಸಾಕ್ಷಿಗಳು ಕೋರ್ಟಿಗೆ ಬರಲು ಹಿಂಜರಿಯುತ್ತಿದ್ದಾರೆ. ನ್ಯಾಯಾಲಯಗಳಲ್ಲಿ ಕೋವಿಡ್‌ ಕಾರಣಕ್ಕಾಗಿ ಸಾಕ್ಷಿಗಳು ಹೊರಗೆಲ್ಲೋ ದೂರದಲ್ಲಿ ನಿಂತು ಸಾಕ್ಷಿ ನುಡಿಯಬೇಕಿದೆ. ನ್ಯಾಯಾಂಗ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ನ್ಯಾಯಾಧೀಶರು ಕಸರತ್ತು ಮಾಡುವಂತಾಗಿದೆ. ಮತ್ತೊಂದು ಗಮನಿಸಬೇಕಾದ ವಿಚಾರ ಎಂದರೆ ಕೋವಿಡ್‌ ಅವಧಿಯಲ್ಲಿ ಹೈಕೋರ್ಟ್‌ನಲ್ಲಿ ರಾಜಕಾರಣಿಗಳ ಪ್ರಕರಣಗಳಿಗೆ ಮಾತ್ರ ಹೆಚ್ಚಿನ ಆದ್ಯತೆ ದೊರೆತಿದೆ ಎಂಬುದು. ಇವೆಲ್ಲಾ ಯೋಚನೆ ಮಾಡಬೇಕಾದ ಸಂಗತಿಗಳು. ಮತ್ತೊಂದೆಡೆ ಪಾಟಿ ಸವಾಲುಗಳೇ ನಡೆಯುತ್ತಿಲ್ಲ ಎನ್ನುವಷ್ಟು ಅವುಗಳ ಸಂಖ್ಯೆ ಕಡಿಮೆ ಇದೆ. ಪಾಟಿ ಸವಾಲುಗಳಿಲ್ಲದಿದ್ದಾಗ ಸಹಜವಾಗಿಯೇ ವಕೀಲರಿಗೆ ಕೆಲಸ ಇಲ್ಲದಂತಾಗುತ್ತದೆ.

Q

ನ್ಯಾಯಿಕ ಲೋಕವನ್ನೇ ಅವಲಂಬಿಸಿಕೊಂಡಿದ್ದ ಕೆಲ ಸಮುದಾಯಗಳ ಸ್ಥಿತಿಗತಿ ಕುರಿತು ಹೇಳಬಹುದೇ?

A

ಆರೋಪಿಗಳು, ದಾವೆದಾರರು, ಸಾಕ್ಷಿಗಳು, ವಕೀಲರು, ಅಷ್ಟೇ ಏಕೆ ನೋಟರಿಯವರು, ಟೈಪಿಸ್ಟ್‌ಗಳು, ಕಡೆಗೆ ಕೋರ್ಟ್‌ ಅಂಗಳದಲ್ಲಿ ಕ್ಯಾಂಟಿನ್‌ ನಡೆಸುತ್ತಿದ್ದವರ ಮೇಲೂ ಕೋವಿಡ್‌ ಕರಾಳ ಹಸ್ತ ಚಾಚಿದೆ. ನನಗೆ ಗೊತ್ತಿರುವ ಮಹಿಳಾ ಟೈಪಿಸ್ಟ್‌ ಒಬ್ಬರಿಗೆ ಅರವತ್ತೈದು ವರ್ಷ. ಆರೋಗ್ಯದ ದೃಷ್ಟಿಯಿಂದ ಅವರು ಕೋರ್ಟ್‌ ಅಂಗಳದಲ್ಲಿ ಕೆಲಸ ಮಾಡದಂತೆ ತಿಳಿಸಲಾಗಿತ್ತು. ಆದರೆ ತಮ್ಮ ಬದುಕಿನ ಸ್ಥಿತಿಯನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟ ಬಳಿಕ ಅವರಿಗೆ ಕೆಲಸ ನಿರ್ವಹಿಸಲು ಮಾನವೀಯತೆ ದೃಷ್ಟಿಯಿಂದ ಅವಕಾಶ ನೀಡಲಾಯಿತು. ನೋಟರಿಯವರು, ಟೈಪಿಸ್ಟ್‌ಗಳು ರೊಟೇಷನ್‌ ಆಧಾರದಲ್ಲಿ (ಮೂರು ದಿನ ಕೆಲಸ ಇದ್ದರೆ ಮೂರು ದಿನ ಇರುವುದಿಲ್ಲ) ಕೆಲಸ ಮಾಡುತ್ತಿದ್ದಾರೆ. ನ್ಯಾಯಾಲಯಗಳ ಸಂಕೀರ್ಣದ ಬಳಿ ಕ್ಯಾಂಟೀನ್‌ಗಳಲ್ಲಿ ಕೆಲಸ ಮಾಡುತ್ತಿದ್ದವರು, ಜೆರಾಕ್ಸ್‌ ಅಂಗಡಿ ಇರಸಿಕೊಂಡಿದ್ದವರು, ಪಾರ್ಕಿಂಗ್‌ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ ವರ್ಗಗಳು ಕಂಗಾಲಾಗಿವೆ. ನ್ಯಾಯಾಲಯದ ವಿಚಾರಣೆ ಪ್ರಕ್ರಿಯೆ ಮೊದಲಿನಂತಾದಾಗ ಮಾತ್ರ ಎಲ್ಲವೂ ಸರಿ ಹೋಗುತ್ತದೆ. ಅದೊಂದೇ ಈಗ ಉಳಿದಿರುವ ಪರಿಹಾರ.

Related Stories

No stories found.
Kannada Bar & Bench
kannada.barandbench.com