ಮತ್ತಾರದೋ ಅಕ್ರಮ ಕೆಲಸವನ್ನು ಸುಪ್ರೀಂಕೋರ್ಟ್‌ ಪುರಸ್ಕರಿಸಿದೆ: ಅಯೋಧ್ಯೆ ತೀರ್ಪಿನ ಕುರಿತು ವಕೀಲ ಎಜಾಜ್ ಮಕ್ಬೂಲ್‌

ಅಯೋಧ್ಯೆ ವಿವಾದಿತ ಸ್ವತ್ತಿನ ಹಕ್ಕು ಕುರಿತ ಪ್ರಮುಖ ವಿಷಯದಲ್ಲಿ ಸುಪ್ರೀಂಕೋರ್ಟಿನ ಮುಂದೆ ಮನವಿ ಸಲ್ಲಿಕೆಯಾದ ಆರಂಭದಿಂದಲೂ ಮುಸ್ಲಿಂ ಪಕ್ಷಕಾರರನ್ನು ಪ್ರತಿನಿಧಿಸಿದವರು ವಕೀಲ ಎಜಾಜ್‌ ಮಕ್ಬೂಲ್‌.
Ejaz Maqbool
Ejaz Maqbool

ಅಯೋಧ್ಯೆ ವಿವಾದಿತ ಸ್ವತ್ತಿನ ಹಕ್ಕು ಕುರಿತ ಪ್ರಮುಖ ವಿಷಯದಲ್ಲಿ ಸುಪ್ರೀಂಕೋರ್ಟಿನ ಮುಂದೆ ಮನವಿ ಸಲ್ಲಿಕೆಯಾದ ಆರಂಭದಿಂದಲೂ ಮುಸ್ಲಿಂ ಪಕ್ಷಕಾರರನ್ನು ಪ್ರತಿನಿಧಿಸಿದವರು ವಕೀಲ ಎಜಾಜ್‌ ಮಕ್ಬೂಲ್‌. ಸುಪ್ರೀಂ ಕೋರ್ಟಿನ ಮುಂದೆ ಬಂದ ಅತ್ಯಂತ ಸೂಕ್ಷ್ಮ ಪ್ರಕರಣಗಳಲ್ಲಿ ಒಂದಾದ ಅಯೋಧ್ಯೆ ವಿವಾದವು, ಅರ್ಜಿಯು ದಾಖಲಾದ ಸರಿಸುಮಾರು ಹತ್ತುವರ್ಷಗಳ ನಂತರ ಇದೇ ನವೆಂಬರ್ 9ಕ್ಕೆ ತೀರ್ಪು ಹೊರಬೀಳುವ ಮೂಲಕ ಅಂತ್ಯ ಕಂಡಿದೆ.

ಬಾರ್ ಅಂಡ್ ಬೆಂಚ್ ಗೆ ನೀಡಿದ ಈ ಸಂದರ್ಶನದಲ್ಲಿ ಎಜಾಜ್‌ ಮಕ್ಬೂಲ್ ಅವರು ಈವರೆಗೆ ವಿಚಾರಣೆ ಸಾಗಿ ಬಂದ ಹಾದಿ, ತೀರ್ಪಿನ ಕುರಿತಾದ ತಮ್ಮ ಅಸಮ್ಮತಿ ಹಾಗೂ ಗೋಪ್ಯ ಮಧ್ಯಸ್ಥಿಕೆ ಪ್ರಕ್ರಿಯೆಯ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಮುಸ್ಲಿಂ ಪಕ್ಷಕಾರರ ಮುಂದೆ ಇರುವ ಕಾನೂನು ಆಯ್ಕೆಗಳ ಕುರಿತಾಗಿಯೂ ಅವರು ವಿವರಿಸಿದ್ದಾರೆ.

ನೀವು ಹೇಗೆ ಈ ಪ್ರಕರಣದ ಭಾಗವಾದಿರಿ ಎಂದು ವಿವರಿಸಬಹುದೇ?

ಈ ಪ್ರಕರಣದ ಮುಖ್ಯ ಅರ್ಜಿಯು ಎಂ ಸಿದ್ಧಿಕ್‌ ಅರ್ಜಿಯಾಗಿದ್ದು, ಜಾಮಿಯಾತ್‌ ಉಲೇಮಾ-ಎ-ಹಿಂದ್ ನ ಈ ಮನವಿಯನ್ನು ವಕೀಲರಾದ ದಿವಂಗತ ಶ್ರೀ ಅನಿರ್‌ ಸುಹ್ರವರ್ದೆ ಸಲ್ಲಿಸಿದ್ದರು. ಅಲಹಾಬಾದ್ ಹೈಕೋರ್ಟ್‌ ತೀರ್ಪಿನ ನಂತರ ದಾಖಲಾದ ಮೊದಲ ಅರ್ಜಿ ಇದಾಗಿತ್ತು. ಆನಂತರ ಇನ್ನೂ 7 ಪ್ರಕರಣಗಳು ಸುಪ್ರೀಂ ಕೋರ್ಟ್‌ ಮುಂದೆ ದಾಖಲಿಸಲ್ಪಟ್ಟವು. ಇದರಲ್ಲಿ ಪ್ರತ್ಯೇಕ ಮುಸ್ಲಿಂ ವ್ಯಕ್ತಿಗಳ ಅರ್ಜಿಗಳೂ ಇದ್ದವು. ಹೀಗೆ ಸಲ್ಲಿಸಲ್ಪಟ್ಟ ಮಿಸ್ಬಾಹುದೀನ್‌ ಎನ್ನುವ ವ್ಯಕ್ತಿಯೊಬ್ಬರ ಪರವಾಗಿ ನಾನು ಅಧಿಕೃತ ವಕೀಲನಾಗಿ ಈ ಪ್ರಕರಣದ ಭಾಗವಾದೆ. ಆನಂತರ, ಜಾಮಿಯಾತ್‌ ಉಲೇಮಾ-ಎ-ಹಿಂದ್‌ ನನ್ನನ್ನು ಎಂ ಸಿದ್ಧಿಕ್‌ ಮುಖ್ಯ ಪ್ರಕರಣವನ್ನು ಪ್ರತಿನಿಧಿಸಲು ಅಧಿಕೃತವಾಗಿ ನೇಮಿಸಿಕೊಂಡಿತು.

ಈ ಪ್ರಕರಣದಲ್ಲಿ ತೊಡಗಿದ ಅನುಭವ ಹೇಗಿತ್ತು? ಯಾವ ಸವಾಲುಗಳನ್ನು ನೀವು ಎದುರಿಸಿದಿರಿ?

ಪ್ರಮುಖವಾದ ಒಂದು ಸವಾಲೆಂದರೆ, ಪ್ರಕರಣದ ಕುರಿತಾದ ದಾಖಲೆಗಳ ವ್ಯಾಪಕತೆ. ನಾವೆಲ್ಲರೂ (ಹಿರಿಯ, ಕಿರಿಯ ವಕೀಲರು ಮತ್ತು ಪ್ರಕರಣವನ್ನು ಪ್ರತಿನಿಧಿಸುವ ಅಧಿಕೃತ ವಕೀಲರು (ಎಒಆರ್) ) ಸಾಕಷ್ಟು ಕೆಲಸ ಮಾಡಬೇಕಿತ್ತು.

ಡಾ.ರಾಜೀವ್ ಧವನ್‌ ಅವರು ಮುಂಚೂಣಿಯಲ್ಲಿ ನಿಂತು ಪ್ರಕರಣವನ್ನು ನಡೆಸಿದರು. ಹಾಗೆ ನೋಡಿದರೆ ಅವರು ನಮ್ಮ ತಂಡದ “ಅತ್ಯಂತ ಕಿರಿಯ ವ್ಯಕ್ತಿ”ಯಾಗಿ ಮೂಡಿ ಬಂದವರು, ಏಕೆಂದರೆ ಅವರ ಶಕ್ತಿ ಸಾಮರ್ಥ್ಯ ಮತ್ತು ಪ್ರಯತ್ನಗಳ ಮುಂದೆ ಕಿರಿಯ ಯುವ ವಕೀಲರೂ ಸರಿಸಮನಾಗುತ್ತಿರಲಿಲ್ಲ.

ನಾಲ್ವರು ಕಿರಿಯ ವಕೀಲರ ಸಹಿತ ನನ್ನ ಹತ್ತು ಸಿಬ್ಬಂದಿಗಳು ಡಾ.ರಾಜೀವ್ ಧವನ್‌ ಅವರ ಕಚೇರಿಗೆ ಸಂಪೂರ್ಣವಾಗಿ ಮುಡಿಪಾಗಿದ್ದರು. ಅವರೆಲ್ಲರೂ ತಡರಾತ್ರಿಯವರೆಗೂ ಅವರ ಕಚೇರಿಯಲ್ಲಿ ಕೆಲಸದಲ್ಲಿ ತೊಡಗಿರುತ್ತಿದ್ದರು. ರಾತ್ರಿ 2-3 ಗಂಟೆಯ ನಂತರವಷ್ಟೇ ಕಚೇರಿಯಿಂದ ಹೊರಡುತ್ತಿದ್ದರು. ನನ್ನ ಕಚೇರಿಯ ನಾಲ್ವರು ಕಿರಿಯ ವಕೀಲರು - ಆಕೃತಿ ಚೌಬೆ, ಖುರಾತುಲೇನ್‌, ಕುವರ್ ಆದಿತ್ಯ ಸಿಂಗ್‌ ಹಾಗೂ ಕೊಲ್ಕತ್ತಾ ಮೂಲದ ಈಶಾ ಮೆಹೆರ್‌ ಎಲ್ಲರೂ ಸಂಪೂರ್ಣವಾಗಿ ಡಾ.ಧವನ್‌ ಅವರ ಕಚೇರಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.

ಇದಲ್ಲದೆ, ಶಕೀಲ್‌ ಅಹಮದ್‌ ಸೈಯದ್‌ ಅವರ ಕಚೇರಿಯ ಇಬ್ಬರು ಕಿರಿಯ ವಕೀಲರಾದ ಪರ್ವೇಜ್‌ ದಬಾಸ್‌ ಮತ್ತು ಉಜ್ಮಿ ಜಮೀಲ್‌ ಅವರು ಸಹ ಈ ಪ್ರಕರಣದಲ್ಲಿ ಡಾ.ಧವನ್‌ ಅವರೊಂದಿಗೆ ಕೆಲಸ ನಿರ್ವಹಿಸಿದರು. ಅಲ್ಲದೆ, ಡಾ.ಧವನ್‌ ಅವರ ಕಿರಿಯ ಸಹೋದ್ಯೋಗಿ ಸಿದ್ಧಿ ಪಾದಿಯಾ ಸಹ ಪ್ರಮುಖ ತಂಡದ ಭಾಗವಾಗಿದ್ದರು.

ವಿಚಾರಣೆ ಶುರುವಾಗುವುದಕ್ಕೂ ಮುನ್ನ ಪ್ರಕರಣದ ತಯ್ಯಾರಿಗೆ ಎರಡು ತಿಂಗಳು ಹಿಡಿದವು. ನಿವೇದನೆಗಳನ್ನು ಡಾ.ಧವನ್‌ ಅವರು ಸಲ್ಲಿಸಬೇಕಾಗುತ್ತಿತ್ತು.

ಅನೇಕ ಬಾರಿ ರಾತ್ರಿ 2 ಗಂಟೆಗೆ ನಿವೇದನೆಗಳನ್ನು ಅಂತಿಮಗೊಳಿಸಲಾಗುತ್ತಿತ್ತು. ಆನಂತರ ನಾವು ಅವುಗಳ 35-40 ಪ್ರತಿಗಳನ್ನು ಬೆಳಗ್ಗೆ 10.30ರ ವೇಳೆಗೆ ಸಿದ್ಧಪಡಿಸುತ್ತಿದ್ದೆವು. ನನ್ನ 32 ವರ್ಷದ ವೃತ್ತಿ ಜೀವನದಲ್ಲಿ ಇಷ್ಟು ವ್ಯಾಪಕ ಮತ್ತು ವಿಸ್ತೃತ ಪರಿಮಾಣದ ಪ್ರಕರಣವನ್ನು ನಾನು ನಿರ್ವಹಿಸಿದ್ದಿಲ್ಲ.

ಅಷ್ಟೊಂದು ಸುದೀರ್ಘ ಪುಟಗಳ ದಾಖಲೆಗಳನ್ನು ಭಾಷಾಂತರಿಸುವ ಕೆಲಸ ಎಷ್ಟು ಕಠಿಣವಾಗಿತ್ತು?

ಮೂವರು ನ್ಯಾಯಮೂರ್ತಿಗಳ ತ್ರಿಸದಸ್ಯ ಪೀಠವು ಆರಂಭದಲ್ಲಿ ಭಾಷಾಂತರವನ್ನು ಅಧಿಕೃತ ಭಾಷಾಂತರಕಾರರಿಂದ ಮಾಡಿಸಲು ಯೋಚಿಸಿತ್ತು. ಆದರೆ, ಪ್ರಕರಣದ ಎಲ್ಲ ಪಕ್ಷಕಾರರೂ ಅಧಿಕೃತ ಭಾಷಾಂತರಕಾರರ ಸೇವೆಯನ್ನು ಬಿಟ್ಟುಬಿಡಲು ಮನವಿ ಮಾಡಿದರು. ಆನಂತರ ಸೆಕ್ರೆಟರಿ ಜನರಲ್‌ ಅವರಿಂದ ವರದಿಯೊಂದನ್ನು ಪೀಠವು ಕೇಳಿತು. ಒಂದು ವೇಳೆ ಅಧಿಕೃತ ಭಾಷಾಂತರಕಾರರು ಈ ಕೆಲಸದಲ್ಲಿ ತೊಡಗಿದ್ದರೆ ಅದನ್ನು ಪೂರ್ಣಗೊಳಿಸಲು ಎಷ್ಟು ಸಮಯ ಅಗತ್ಯವಿತ್ತು ಎಂದು ಅವರು ಒಂದು ಸ್ಥೂಲ ವರದಿಯನ್ನು ನೀಡಿದರು. ಅದರ ಆಧಾರದಲ್ಲಿ ನ್ಯಾಯಾಲವು ಅಧಿಕೃತ ಭಾಷಾಂತರಕಾರರ ಸೇವೆಯನ್ನು ಬಿಟ್ಟು ಉತ್ತರ ಪ್ರದೇಶ ಸರ್ಕಾರವನ್ನು ಸಮಗ್ರ ದಾಖಲೆಗಳನ್ನು ಭಾಷಾಂತರಿಸಲು ಅದೇಶಿಸಿತು.

ದಾಖಲೆಗಳನ್ನು ಭಾಷಾಂತರಿಸುವುದು ದೊಡ್ಡ ಸವಾಲಾಗಿತ್ತು. ಹಿಂದಿಯಿಂದ ಇಂಗ್ಲಿಷ್‌ ಗೆ ಭಾಷಾಂತರಿಸುವುದು ಸುಲಭವಾಗಿತ್ತು. ಆದರೆ ಈ ವಿಷಯದಲ್ಲಿ, ಅನೇಕ ದಾಖಲೆಗಳು ಇತರ ಭಾಷೆಯಲ್ಲಿದ್ದವು. ಉರ್ದುವಿನ ಭಾಷಾಂತರಕ್ಕಾಗಿ ನಾವು ಅರೇಬಿಕ್‌ ಹಾಗೂ ಪರ್ಷಿಯನ್‌ ಭಾಷೆಯೂ ತಿಳಿದಿರುವ ಓರ್ವ ವ್ಯಕ್ತಿಯನ್ನು ಗುಜರಾತ್‌ ನಲ್ಲಿ ಹುಡುಕಿದೆವು. ಸುಪ್ರೀಂ ಕೋರ್ಟ್‌ ನಲ್ಲಿರುವ ಖಾಸಗಿ ಭಾ‍ಷಾಂತರಕಾರರಿಂದ ನಾವು ಸಾಕಷ್ಟು ಸಮಸ್ಯೆಯನ್ನು ಎದುರಿಸಿದೆವು. ಅವರಲ್ಲಿ ಬಹುತೇಕರು ನಮ್ಮ ಸಾಮಾನ್ಯ ಪ್ರಕರಣಗಳಲ್ಲಿ ಭಾಷಾಂತರ ಮಾಡುವವರು. ಆದರೆ ಈ ಪ್ರಕರಣದಲ್ಲಿ, ಅವರಲ್ಲಿ ಬಹುತೇಕರು, ಭಾಷೆಯ ಕಾಠಿಣ್ಯತೆಯ ಕಾರಣದಿಂದಾಗಿ ತಮಗೆ ಭಾ‍ಷಾಂತರ ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದರು.

ವಿಚಾರಣೆ ವೇಳೆ ರಾಜೀವ್ ಧವನ್‌ ಮತ್ತು ಸಿ ಎಸ್‌ ವೈದ್ಯನಾಥನ್‌ ಅವರ ನಡುವೆ ಸ್ವಲ್ಪ ತಿಕ್ಕಾಟವಿತ್ತು. ಅದು ಪ್ರಕಣವನ್ನೇನಾದರೂ ಬಾಧಿಸಿತೇ?

ಖಂಡಿತವಾಗಿಯೂ ಇಲ್ಲ, ನಾವೆಲ್ಲರೂ ತರಬೇತಿಯುಕ್ತ ವೃತ್ತಿಪರರು. ನಾವೆಲ್ಲರೂ ಮಾತಿನ ಭರದಲ್ಲಿ ಏನಾದರೂ ಹೇಳುತ್ತೇವೆ, ಅದರೆ ಅದಾವುದೂ ವೈಯಕ್ತಿಕ ನೆಲೆಗಟ್ಟಿನಲ್ಲಿ ಅಲ್ಲ ಅಥವಾ ಯಾರನ್ನಾದರೂ ಉದ್ದೇಶಿಸಿ ಅಲ್ಲ. ಅದರಿಂದ ಪ್ರಕರಣಕ್ಕೆ ಯಾವುದೇ ರೀತಿಯಲ್ಲಿಯೂ ಅಡ್ಡಿಯಾಗಲಿಲ್ಲ.

“ನ್ಯಾಯಾಲಯದಲ್ಲಿ ವಿರೋಧಿಗಳು ಹೇಗೆ ವರ್ತಿಸುತ್ತಾರೆಯೋ ಹಾಗೆಯೇ ವರ್ತಿಸಿ, ಗಂಭೀರವಾಗಿ ದಾಳಿ ಮಾಡಿ, ಆದರೆ ಹೊರಗೆ ಗೆಳೆಯರ ಹಾಗೆ ಒಗ್ಗೂಡಿ ತಿನ್ನಿರಿ, ಕುಡಿಯಿರಿ,” ಎನ್ನುವ ತತ್ವವೇನಿದೆ ಅದನ್ನೇ ನಾವು ಪಾಲಿಸಿದೆವು.

ಪ್ರಕರಣದ ವೇಳೆ ಡಾ. ಧವನ್‌ ಅವರು ಬೆದರಿಕೆಗಳನ್ನು ಎದುರಿಸಿದ್ದರು. ಅವರ ಕ್ಲರ್ಕ್‌ ಕೂಡ ಪ್ರಕರಣದಲ್ಲಿ ಮುಸ್ಲಿಂ ಪಕ್ಷಕಾರರ ಜೊತೆಯಲ್ಲಿ ಇರುವುದಕ್ಕೆ ಬೆದರಿಕೆಗಳನ್ನು ಎದುರಿಸಿದರು. ಇಂತಹ ಘಟನೆಗಳು ವಿಚಾರಣೆಯ ಮೇಲೆ ಪ್ರಭಾವ ಬೀರಿದವೇ?

ಡಾ.ರಾಜೀವ್‌ ಧವನ್‌ ಅವರು ಬಂಡೆಯಂತೆ ಗಟ್ಟಿಯಾಗಿ ನಿಂತರು. ಅನೇಕ ಬಾರಿ ಅವರನ್ನು ಬೆದರಿಸಲಾಯಿತು. ಅಂತಹ ಒಂದು ಪ್ರಕರಣದಲ್ಲಿ ಪ್ರೊಫೆಸರ್‌ ಒಬ್ಬರಿಂದ ಅವರಿಗೆ ಬೆದರಿಕೆ ಬಂದಿತ್ತು, ಅವರ ವಿರುದ್ಧ ನಿಂದನಾ ಅರ್ಜಿಯನ್ನು ನಾವು ಸಲ್ಲಿಸಿದೆವು. ಅವರು (ಪ್ರೊಫೆಸರ್) ನ್ಯಾಯಾಲಯದ ಮುಂದೆ ಕ್ಷಮೆಯನ್ನು ಕೇಳಿದರು, ನ್ಯಾಯಾಲಯ ಮತ್ತು ಡಾ.ಧವನ್‌ ಅವರ ಕ್ಷಮಾಪಣೆಯನ್ನು ಒಪ್ಪಿಕೊಂಡರು, ಅಲ್ಲಿಗೆ ಆ ಪ್ರಕರಣ ಅಂತ್ಯ ಕಂಡಿತು. ಅವರ ಕ್ಲರ್ಕ್‌ ಮೊಬೈಲ್‌ ಗೆ ಕೂಡ ಕೆಲ ಬೆದರಿಕೆ ಕರೆಗಳು ಬಂದಿದ್ದಾಗಿ ನಾನು ಕೇಳಲ್ಪಟ್ಟೆ.

Rajeev Dhavan
Rajeev Dhavan

ಈ ಪ್ರಕರಣದಲ್ಲಿ ಮುಸ್ಲಿಂ ವಕೀಲನಾಗಿರುವ ಕಾರಣಕ್ಕೆ ನನಗಾಗಲಿ, ನನ್ನ ಕಚೇರಿಯ ಸಹೋದ್ಯೋಗಿಗಳಿಗಾಗಲಿ ಒಂದೇ ಒಂದು (ಬೆದರಿಕೆಯ) ಕರೆಯೂ ಬರಲಿಲ್ಲ. ಆದರೆ, ಡಾ.ರಾಜೀವ್‌ ಧವನ್‌ ಅವರಿಗೆ ಅನೇಕ ಕರೆಗಳು ಬಂದವು, ಹಾಗಿದ್ದರೂ ಅವರು ರಕ್ಷಣೆಯನ್ನು ಕೇಳಲಿಲ್ಲ.

ನಿಜಕ್ಕೂ ಕೆಟ್ಟ ಸಂಗತಿ ಎಂದರೆ, ಒಮ್ಮೆ ಅವರಿಗೆ ಓರ್ವ ವ್ಯಕ್ತಿ ಕರೆ ಮಾಡಿ, “ನಿಮ್ಮ ಮೆರವಣಿಗೆಯಲ್ಲೂ (ಅಂತ್ಯಸಂಸ್ಕಾರ) ರಾಮ್‌ ನಾಮ್ ಸತ್ಯ ಹೈ, ಎನ್ನುವುದನ್ನೇ ಹೇಳಲಾಗುತ್ತದೆ,” ಎಂದಿದ್ದ.

ಆದರೆ, ಈ ಸಂಗತಿಗಳು ನಮ್ಮ ಧೃತಿಗೆಡಿಸಲಿಲ್ಲ. ಧವನ್‌ ಅವರು ಹೇಳಿದ್ದರು,

“ನಾನು ಇಲ್ಲಿ ಯಾವುದೇ ನಿರ್ದಿಷ್ಟ ಪಕ್ಷವನ್ನು ವಹಿಸಿ ವಕಾಲತು ಮಾಡುತ್ತಿಲ್ಲ. ನಾನು ನನ್ನ ಧ್ಯೇಯಕ್ಕಾಗಿ ಹೋರಾಡುತ್ತಿದ್ದೇನೆ. ನಾನು ಸಂವಿಧಾನದ ಸಾರ್ವಭೌಮತ್ವಕ್ಕಾಗಿ ಹೋರಾಡುತ್ತಿದ್ದೇನೆ” ಎಂದು.

ತೀರ್ಪಿನ ವಿಷಯಕ್ಕೆ ಬರುವುದಾದರೆ, ಅದು ಸಮತೋಲಿತವಾಗಿದೆ ಎಂದು ನಿಮಗೆ ಅನಿಸಿದೆಯೇ?

ಇಲ್ಲ. ಈ ತೀರ್ಪು ಸಂಪೂರ್ಣವಾಗಿ ವೈರುಧ್ಯದಿಂದ ಕೂಡಿದೆ. ನನ್ನ ಕಕ್ಷೀದಾರರ ಪರವಾದ ಅನೇಕ ಅಂಶಗಳನ್ನು ಅದು ಒಳಗೊಂಡಿದೆ. ಆದರೆ ಅಂತಿಮವಾಗಿ, ನ್ಯಾಯಾಲಯವು ಭೂಮಿಯನ್ನು ಎಲ್ಲ ಅಕ್ರಮಗಳನ್ನೂ ಮಾಡಿರುವ ಮತ್ತೊಬ್ಬರಿಗೆ ನೀಡಿದೆ.

ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ ಎಂದರೆ, 1934ರಲ್ಲಿ ಮಸೀದಿಯನ್ನು ವಿರೂಪಗೊಳಿಸಲಾಯಿತು ಎನ್ನುವುದನ್ನು ಹಾಗೂ ಬ್ರಿಟಿಷರು ಅದನ್ನು ದುರಸ್ತಿಗೊಳಿಸಿ, ನಿರ್ವಹಣೆ ಮಾಡಲು ಕ್ರಮ ಕೈಗೊಂಡಿದ್ದರು ಎನ್ನುವುದನ್ನು ತೀರ್ಪು ಗುರುತಿಸುತ್ತದೆ. ಅಲ್ಲದೆ ರಾಮಲಲ್ಲಾನ ಮೂರ್ತಿಗಳನ್ನು ಕಾನೂನಿಗೆ ವಿರುದ್ಧವಾಗಿ, ಬಲವಂತವಾಗಿ ಬಾಬ್ರಿ ಮಸೀದಿಯ ಗುಮ್ಮಟದ ಒಳಗೆ 1949ರ 22 ಮತ್ತು 23ರ ನಡುವಿನ ರಾತ್ರಿಯಲ್ಲಿ ಇರಿಸಲಾಯಿತು ಎನ್ನುವುದನ್ನು ಗುರುತಿಸಿದೆ.

ಅಲ್ಲದೆ, ಸುಪ್ರೀಂಕೋರ್ಟ್‌ ಗೆ ಮುಚ್ಚಳಿಕೆಯನ್ನು ಬರೆದುಕೊಟ್ಟ ನಂತರವೂ, ಮುಚ್ಚಳಿಕೆಯನ್ನು ರಾಜಾರೋಷವಾಗಿ ಉಲ್ಲಂಘಿಸಿ 1992ರಲ್ಲಿ ಮಸೀದಿಯನ್ನು ಧ್ವಂಸಗೊಳಿಸಲಾಯಿತು ಎನ್ನುವುದನ್ನು ಎತ್ತಿಹಿಡಿದಿದೆ.

ನಮಗೆ ಸುಪ್ರೀಂಕೋರ್ಟ್‌ ಹಾಗೂ ಅದರ ನ್ಯಾಯಮೂರ್ತಿಗಳ ಬಗ್ಗೆ ಅಗಾಧ ಗೌರವವಿದೆ. ಆದರೆ, ನನಗೆ ಇಲ್ಲಿ ಒಂದು ಉಕ್ತಿ ನೆನಪಾಗುತ್ತಿದೆ. ಅದೆಂದರೆ, “ಸುಪ್ರೀಂಕೋರ್ಟ್‌ ಅಂತಿಮವೇ ಹೊರತು ದೋಷಾತೀತವಲ್ಲ,” ಎನ್ನುವುದು. ಹಾಗಾಗಿ ನಾನು ನನ್ನನ್ನೇ ಈ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿದ್ದೇನೆ, ಒಂದು ವೇಳೆ 1992ರ ಡಿಸೆಂಬರ್‌ 6ರಂದು ಬಾಬರಿ ಮಸೀದಿಯನ್ನು ಧ್ವಂಸಗೊಳಿಸದೆ ಹೋಗಿದ್ದರೆ, ಆಗಲೂ ಇದೇ ತೀರ್ಪನ್ನು ಮಾನ್ಯ ಸುಪ್ರೀಂ ಕೋರ್ಟ್‌ ನೀಡುತ್ತಿತ್ತೇ? ಅದೂ, 1934, 1949 ಮತ್ತು 1992ರ ಅಕ್ರಮಗಳ ಆಧಾರದಲ್ಲಿ ಮಂದಿರದ ಪರವಾದ ಪಕ್ಷಕಾರರು ತಮ್ಮ ಹಕ್ಕನ್ನು ಪ್ರತಿಪಾದಿಸಿದ್ದಾರೆ ಎನ್ನುವುದನ್ನು ಗುರುತಿಸಿದ ನಂತರವೂ ಈ ತೀರ್ಪನ್ನು ನೀಡುತ್ತಿತ್ತೇ?

ನ್ಯಾಯಾಲಯವು ಹೆಚ್ಚು ಸಾಕ್ಷ್ಯಗಳು ಬೆರಳು ಮಾಡುವ ಅಧಿಕ ಸಂಭವನೀಯತೆ (ಪ್ರಿಪಾಂಡರೆನ್ಸ್‌ ಆಫ್‌ ಪ್ರೊಬೆಬಿಲಿಟಿ) ಮೇಲೆ ಅವಲಂಬಿತವಾಗಿದ್ದು, ತನ್ನ ಬಹುತೇಕ ಶೋಧನೆಗಳಿಗೆ ಮೌಖಿಕ ಮತ್ತು ದಾಖಲೆಗಳ ಸಾಕ್ಷ್ಯಗಳನ್ನು ಆಧರಿಸಿದೆ. ಇದನ್ನು ನೀವು ಎಷ್ಟು ಒಪ್ಪುತ್ತೀರಿ?

ಅದರಲ್ಲಿಯೇ ಅನೇಕ ವೈರುಧ್ಯಗಳಿವೆ. ಮಂದಿರ ಪರವಾದ ಪಕ್ಷಕಾರರು ಬಾಬರಿ ಮಸೀದಿಯ ಕೆಳಗೆ ಮಂದಿರವೊಂದಿತ್ತು. ಬಾಬರ್ ಆ ಮಂದಿರವನ್ನು - ಅದು 12ನೇ ಶತಮಾನದ ಮಂದಿರ - ಧ್ವಂಸ ಮಾಡಿ ಮಸೀದಿಯನ್ನು ನಿರ್ಮಿಸಿದ ಎಂದಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ಹೇಳಿರುವಂತೆ,‌ ಎಎಸ್‌ಐ ವರದಿಯ (ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ವರದಿ) ಅನುಸಾರ, 12ನೇ ಶತಮಾನದ ಮಂದಿರವನ್ನು, ಅಲ್ಲಿಂದಾಚೆಗೆ 400 ವರ್ಷಗಳ ನಂತರವೂ ಅಂದರೆ ಬಾಬರಿ ಮಸೀದಿಯನ್ನು ನಿರ್ಮಿಸುವ ವೇಳೆಯೂ ಅಲ್ಲಿತ್ತೆಂದು ವಿವರಿಸುವಲ್ಲಿ ಹಿಂದೂಗಳು ವಿಫಲರಾಗಿದ್ದಾರೆ. ಹಾಗಾಗಿ, ನ್ಯಾಯಾಲಯವು ಮಸೀದಿಯನ್ನು ನಿರ್ಮಿಸುವ ಸಲುವಾಗಿ ಮಂದಿರವನ್ನು ಧ್ವಂಸ ಮಾಡಲಾಯಿತು ಎನ್ನುವ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎನ್ನುವುದನ್ನು ಎತ್ತಿ ಹಿಡಿದಿದೆ.

ಸಾಕ್ಷ್ಯಾಧಿಕ ಸಂಭವನೀಯತೆಯ (ಪ್ರಿಪಾಂಡರೆನ್ಸ್‌ ಆಫ್‌ ಪ್ರೊಬೊಬಿಲಿಟಿ) ಬಗ್ಗೆ ಹೇಳುವುದಾದರೆ, ಅದು ಹೊರಗಿನ ಪ್ರಾಂಗಣಕ್ಕೆ ಸಂಬಂಧಿಸಿದಂತೆ ಮಾತ್ರವೇ ಸಾಕ್ಷ್ಯವಾಗುತ್ತದೆ. ಅವರೇ ಒಪ್ಪಿಕೊಂಡಿರುವಂತೆ, 1994ರ ಡಿಸೆಂಬರ್ 16‌ರಂದು, ಮುಸಲ್ಮಾನರು ಶುಕ್ರವಾರದ ಪ್ರಾರ್ಥನೆಯನ್ನು ಮಸೀದಿಯೊಳಗೆ, ಒಳಗಿನ ಪ್ರಾಂಗಣದಲ್ಲಿ ಮಾಡಿದ್ದಾರೆ. ಹಾಗಾಗಿ, ಸಾಕ್ಷ್ಯಾಧಿಕ ಸಂಭವನೀಯತೆಯ ಸುಪ್ರೀಂ ಕೋರ್ಟ್‌ನ ಈ ಶೋಧನೆಯು ಹಿಂದೂಗಳು ಹೊರಗಿನ ಪ್ರಾಂಗಣದ ಮೇಲೆ ಮಾತ್ರವೇ ದೀಘಕಾಲೀನ ಬಳಕೆಯ ಕಾರಣದಿಂದಾಗಿ ಬರುವ ಹಕ್ಕನ್ನು (ಪ್ರಿಸ್ಕ್ರಿಪ್ಟಿವ್‌ ರೈಟ್‌) ಹೊಂದಿದ್ದಾರೆ ಎನ್ನುವ ತೀರ್ಮಾನಕ್ಕೆ ಮಾತ್ರ ಬರಲು ಸಾಧ್ಯ.

ಸುಪ್ರೀಂ ಕೋರ್ಟೇ ಹೇಳಿರುವಂತೆ, ಹಿಂದೂಗಳು ಅಕ್ರಮವನ್ನು ಎಸಗಿ, ಮಂದಿರದೊಳಗೆ ವಿಗ್ರಹಗಳನ್ನಿರಿಸಿದ್ದಾರೆ. ಈ ತೀರ್ಪಿನಿಂದಾಗಿ, ಯಾರು ಎಲ್ಲ ಅಕ್ರಮಗಳನ್ನು ಎಸಗಿದ್ದಾರೆಯೋ ಅವರು ನೆಲದ ಮಾಲೀಕರಾಗಿದ್ದಾರೆ, ನೆಲದ ನಿಜವಾದ ಮಾಲೀಕನನ್ನು ಹೊರದಬ್ಬಲಾಗಿದೆ.

ಪರ್ಯಾಯವಾಗಿ ನೀಡಲಾಗಿರುವ ಐದು ಎಕರೆ ಜಾಗವು ಯಾವುದೇ ಮೌಲ್ಯವನ್ನು ಹೊಂದಿಲ್ಲ. ಮುಸ್ಲಿಂ ಪಕ್ಷಕಾರರು ಹೋರಾಟ ಮಾಡಿದ್ದು ಮಸೀದಿಗಾಗಿಯೇ ಹೊರತು ತುಂಡು ಭೂಮಿಗಾಗಿ ಅಲ್ಲ.

ಮುಸ್ಲಿಂ ಪಕ್ಷಕಾರರು ಒಳ ಪ್ರಾಂಗಣದ ಮೇಲೆ ಅಬಾಧಿತವೂ, ವಿಶೇಷವೂ ಆದ ಅಧಿಕಾರ ಹೊಂದಿದ್ದರು ಎನ್ನುವುದನ್ನು ನಿರೂಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸುಪ್ರೀಂಕೋರ್ಟ್‌ ತೀರ್ಮಾನಿಸಿದೆ. ಮುಸ್ಲಿಂ ಪಕ್ಷಕಾರರು (ಹಿಂದೂ ಪಕ್ಷಕಾರರ ವಿರುದ್ಧ) ಮಂಡಿಸಿದ ಅತಿಕ್ರಮಣದ ಮೂಲಕ ಹಕ್ಕುಸಾಧಿಸುವ (ಅಡ್ವರ್ಸ್‌ ಪೊಸೆಷನ್‌) ವಾದವು ಅವರಿಗೇ ಮುಳುವಾಯಿತೇ?

ಅದು ಕೇವಲ ಒಂದು ಪರ್ಯಾಯ ವಾದವಾಗಿತ್ತು. ನಮ್ಮ ಮುಖ್ಯವಾದವು ಇದು 1528ರಲ್ಲಿ ನಿರ್ಮಿಸಿದ ಒಂದು ಮಸೀದಿಯಾಗಿದ್ದು, ನಾಲ್ಕು ಶತಮಾನಗಳ ಕಾಲ ಆ ಮಸೀದಿಯು ಅಲ್ಲಿ ನಿಂತಿತ್ತು ಎನ್ನುವುದಾಗಿತ್ತು. ಭಾರತವು ತನ್ನ ಸಂವಿಧಾನವನ್ನು ಅಂಗೀಕರಿಸಿದ ದಿನದಂದು ಮಸೀದಿಯು ಅಲ್ಲಿತ್ತು ಎನ್ನುವುದು.

ಹಿಂದೂ ಪಕ್ಷಕಾರರೇ ತಿಳಿಸಿರುವಂತೆ ಅವರು ಅಲ್ಲಿನ ಸರಳುಗಳ ಕಟಾಂಜನದ (ರೈಲಿಂಗ್) ಹೊರಗೆ ನಿಂತು ಪ್ರಾರ್ಥನೆ ಸಲ್ಲಿಸುತ್ತಿದ್ದರು. 1949ರ ನವೆಂಬರ್‌ ನಲ್ಲಿ ಕೆ ಕೆ ನಾಯರ್‌ ಅವರು ಬರೆದಿದ್ದ ಪತ್ರದಲ್ಲಿ ಹಿಂದೂ ಮುಸ್ಲಿಮರ ನಡುವಿನ ವಿವಾದದ ಕುರಿತು ಪ್ರಸ್ತಾಪಿಸುತ್ತಾರೆ. ಮುಸ್ಲಿಮರು ಒಳ ಪ್ರಾಂಗಣದಲ್ಲಿ ನಮಾಝ್ ಮಾಡುತ್ತಿದ್ದರು, ಆದರೆ ಚಪ್ಪಲಿಗಳನ್ನು ತೆಗೆದು ಹೊರಗಿನ ಪ್ರಾಂಗಣವನ್ನು ಪ್ರವೇಶಿಸುತ್ತಿರಲಿಲ್ಲ. ಇದೆಲ್ಲವೂ ಒಳ ಪ್ರಾಂಗಣವು ಕೇವಲ ಮುಸ್ಲಿಮರಿಂದ ಮಾತ್ರವೇ ವಿಶೇಷವಾಗಿ ಬಳಸಲ್ಪಡುತ್ತಿತ್ತು ಎನ್ನುವುದನ್ನು ತಿಳಿಸುತ್ತದೆ. ಅಲ್ಲದೆ, ಹಿಂದೂಗಳು ಸಂಪೂರ್ಣ ಒಡೆತನ ಹೊಂದಿದ್ದರು ಎನ್ನುವ ಶೋಧನೆಯನ್ನು ಸಮರ್ಥಿಸಲಾಗದು, ಏಕೆಂದರೆ ಒಳಾಂಗಣ ಪ್ರಾಂಗಣವನ್ನು ಹೊರ ಪ್ರಾಂಗಣವನ್ನು ದಾಟದೆ ತಲುಪಲು ಸಾಧ್ಯವಿಲ್ಲ.

ಸುಪ್ರೀಂ ಕೋರ್ಟ್‌ ನಮ್ಮ ದಾವೆಯು ಚೌಕಟ್ಟಿನ ಒಳಗೇ ಇದೆ ಎನ್ನುವುದನ್ನು ಎತ್ತಿಹಿಡಿದಿದೆ. ಅಲ್ಲದೆ ಎದುರು ಪಕ್ಷದವರು ಸುಪ್ರೀಂ ಕೋರ್ಟ್‌ ನ ಆದೇಶಗಳನ್ನು ಉಲ್ಲಂಘಿಸಿರುವುದೂ ಸೇರಿದಂತೆ ಎಲ್ಲ ಅಕ್ರಮಗಳನ್ನೂ ಎಸಗಿರುವ ಆಕ್ರಮಣಕಾರರು ಎನ್ನುವುದನ್ನೂ ಎತ್ತಿಹಿಡಿದಿದೆ. ಆದರೆ, ಯಾರು ಅಕ್ರಮವನ್ನು ಎಸಗಿದ್ದಾರೋ ಅವರಿಗೆ ಸಂಪೂರ್ಣ ಭೂಮಿಯನ್ನು ಒಪ್ಪಿಸಿದೆ.

ನಿಜ ಹೇಳಬೇಕೆಂದರೆ, ತೀರ್ಪನ್ನು ಓದುವುದನ್ನು ಕೇಳುತ್ತಿದ್ದಾಗ, ನ್ಯಾಯಾಲಯವು ನಮ್ಮ ಪರವಾಗಿ ತೀರ್ಮಾನ ನೀಡುತ್ತಿದೆ ಎಂದು ಭಾವಿಸಿದೆವು, ಆದರೆ, ಒಮ್ಮೆ ಅಂತಿಮ ಆದೇಶ ಬಂದಾಗ ಅದು ತದ್ವಿರುದ್ಧವಾಗಿತ್ತು. ಆದರೆ, ನಾವೆಲ್ಲರೂ (ವಕೀಲರು) ನ್ಯಾಯಾಲಯದ ಅಧಿಕಾರಿಗಳಾಗಿದ್ದು ನ್ಯಾಯಾಲಯ ಹಾಗೂ ಅದರ ತೀರ್ಮಾನವನ್ನು ಗೌರವಿಸುತ್ತೇವೆ.

ಈ ಪ್ರಕರಣವು ಮಥುರಾ ಮತ್ತು ಕಾಶಿಯ ವಿವಾದಗಳು ಹೆಚ್ಚಲು ಅವಕಾಶ ಮಾಡಿಕೊಡಲಿದೆಯೇ?

ನನಗೆ ಹಾಗನಿಸುವುದಿಲ್ಲ, ಏಕೆಂದರೆ 1991ರ ಕಾಯಿದೆಯು (ಪೂಜಾಸ್ಥಳಗಳ ಕಾಯಿದೆ, 1991) ಈಗ ಜಾರಿಯಲ್ಲಿದೆ. ಈ ಕಾಯಿದೆಯನ್ನು ತೀರ್ಪಿನಲ್ಲಿಯೂ ಉಲ್ಲೇಖಿಸಲಾಗಿದೆ.

ಆದರೆ, ನನ್ನ ಚಿಂತೆ ಏನೆಂದರೆ, ನೀವು ಯಾವುದೇ ವಿರೂಪಗಳಿಸುವಿಕೆಗೆ ಕಾನೂನಿನ ವಸ್ತ್ರವನ್ನು ತೊಡಿಸಿದರೆ, ಅಗ ನಾಳೆ ಯಾರು ಕಾನೂನನ್ನು ಗೌರವಿಸುವುದಿಲ್ಲವೋ ಅವರು ಇಂತಹದ್ದನ್ನು ಮಾಡಲು ಪ್ರಯತ್ನಿಸಬಹುದು. ಈ ತೀರ್ಪು ಈ ದೇಶದ ಸಾಮರಸ್ಯವನ್ನು ಕದಡಲು, ಜಾತ್ಯತೀತತೆಯ ಕಟ್ಟಳೆಯನ್ನು ಉಲ್ಲಂಘಿಸಲು ಬಯಸುವ ಎಲ್ಲರಿಗೂ ಅದರಿಂದ ದೂರವಿರುವಂತೆ ಮಾಡುವ ಆಜ್ಞಾಪತ್ರವಾಗಲಿದೆ ಎಂದು ನಾನು ಬಯಸುತ್ತೇನೆ.

ಅಂತಾರಾಷ್ಟ್ರೀಯವಾಗಿ ಈ ತೀರ್ಪನ್ನು ಟೀಕಿಸಲಾಗುತ್ತದೆ, ಏಕೆಂದರೆ ನ್ಯಾಯಾಲಯವು ಅಕ್ರಮ ಎಸಗಿದವರಿಗೆ ಪುರಸ್ಕಾರ ನೀಡಿದೆ. ಮುಂದುವರೆದು, ತೀರ್ಪಿನಲ್ಲಿ ಇಡೀ ಪ್ರಕರಣವನ್ನು ಯಾರೊಬ್ಬರ ನಂಬಿಕೆಗಳ ಆಧಾರದಲ್ಲಿ ತೀರ್ಮಾನಿಸುವುದಿಲ್ಲ ಎಂದು ಪದೇಪದೇ ಹೇಳಿದ್ದರೂ ಅದು ಅಂತಿಮವಾಗಿ ಹಾಗೆಯೇ ಭಾಸವಾಗಬಹುದು.

ಪ್ರಕರಣವು ಈಗ ಇತ್ಯರ್ಥವಾಗಿರುವುದರಿಂದ, ಮಧ್ಯಸ್ಥಿಕೆಯ ಪ್ರಕ್ರಿಯೆಯಲ್ಲಿ ಏನು ನಡೆಯಿತು ಎಂದು ನಮಗೆ ತಿಳಿಸಬಹುದೇ?

ನಾನು ಮಧ್ಯಸ್ಥಿಕೆಯ ಪ್ರಕ್ರಿಯೆ ಭಾಗವಾಗಿದ್ದೆ. ಈ ಸಂಬಂಧ ನಾನು ಇಬ್ಬರು ಕಕ್ಷಿದಾರರನ್ನು ಪ್ರತಿನಿಧಿಸಿದ್ದೆ ಹಾಗೂ ಹಲವು ಕಲಾಪಗಳಿಗೆ ಹೋಗಿದ್ದೆ. ಇದರ ಸಂಪೂರ್ಣ ಗೋಪ್ಯತೆಯನ್ನು ಕಾಪಾಡಿಕೊಳ್ಳಬೇಕಿತ್ತು, ನಾವು ಕಾಪಾಡಿಕೊಂಡೆವು. ಆದರೆ ಕೆಲವು ಪಕ್ಷಕಾರರು ಅದನ್ನು ಉಲ್ಲಂಘಿಸಿದರು.

ಶ್ರೀ ಶ್ರೀ ರವಿಶಂಕರ್‌ ಅವರು ನನಗೆ ಮತ್ತು ನನ್ನ ಕಕ್ಷಿದಾರರಾದ ಅರ್ಷಾದ್‌ ರಶೀದಿ ಅವರಿಗೆ, “ನೀವು ದಯವಿಟ್ಟು ನಮಗೆ ಈ ಭೂಮಿಯನ್ನು ಕೊಡಿ, ನಾವು ಈ ಭೂಮಿ ಮುಸಲ್ಮಾನರಿಗೆ ಸೇರಿದ್ದಾಗಿದ್ದು, ಇದರಲ್ಲಿ ರಾಮಮಂದಿರವನ್ನು ನಿರ್ಮಿಸಲಿದ್ದೇವೆ ಎಂದು ಹೇಳುತ್ತೇವೆ. ಮುಸಲ್ಮಾನರು ಈ ಭೂಮಿಯನ್ನು ನೀಡಿದ್ದಾರೆ ಎಂದು ನಾವು ಅಲ್ಲಿ ಬರೆಯುತ್ತೇವೆ,” ಎಂದು ಹೇಳಿದ್ದರು.

ಯಾವ ಹಂತದವರೆಗೂ ಹೋಗಲಾಯಿತು ಎಂದರೆ, ಹತ್ತಿರದಲ್ಲಿಯೇ ಎಲ್ಲಾದರೂ ಮಸೀದಿಗಾಗಿ ಪ್ರತ್ಯೇಕ ಭೂಮಿಯನ್ನು ನೀಡುವುದಾಗಿ ಹೇಳಲಾಯಿತು. ಸುಪ್ರೀಂ ಕೋರ್ಟ್‌ ಕೂಡ ಈಗ ಅದನ್ನೇ ಹೇಳಿದೆ, ಅಲ್ಲದೆ, ಮತ್ತೊಂದು ಪ್ರಮುಖ ಪ್ರದೇಶದಲ್ಲಿ ಭೂಮಿಯನ್ನು ನೀಡಬೇಕು ಎಂದಿದೆ, ಆದರೆ, ಪಕ್ಕದಲ್ಲಿಯೇ ವಶಪಡಿಸಿಕೊಳ್ಳಲಾಗಿರುವ ಭೂಮಿಯಿಂದ ಇದನ್ನು ನೀಡಬೇಕು ಎಂದು ಹೇಳಿಲ್ಲ. ಈ ವಿವಾದವು ಆದೇಶ । ನಿಯಮ ೮ರ ಅಡಿಯ ವಿಚಾರಣೆಯಾಗಿದೆ. ಇದು ಎರಡು ಸಮುದಾಯಗಳ ನಡುವಿನ ವ್ಯಾಜ್ಯವಾಗಿದ್ದು, ಯಾವುದೇ ಖಾಸಗಿ ವ್ಯಕ್ತಿಯ ಖಾಸಗಿ ಸ್ವತ್ತಿನ ವಿವಾದವಲ್ಲ. ಹಾಗಾಗಿ, ಮುಸ್ಲಿಮ್‌ ಪಕ್ಷಕಾರರ ಪರವಾಗಿ ಎಲ್ಲ ಕಕ್ಷಿದಾರರೂ ಮಸೀಯನ್ನು ಮತ್ತೊಬ್ಬರಿಗೆ ನೀಡುವ ತೀರ್ಮಾನ ಕೈಗೊಳ್ಳಲು ಒಪ್ಪಿಕೊಳ್ಳುವ ಸಾಧ್ಯತೆ ಇರಲಿಲ್ಲ.

ಇದರಿಂದಾಗಿ, ನಾವು ಮಧ್ಯಸ್ಥಿಕೆಯ ಸಮಿತಿಗೆ, ಒಂದು ಸಮುದಾಯವನ್ನು ಪ್ರತಿನಿಧಿಸುವವರಾಗಿ ನಮಗೆ ಹಾಗೆ ಮಾಡುವ ಯಾವುದೇ ಅಧಿಕಾರವಿಲ್ಲ ಎಂದು ತಿಳಿಸಿದೆವು. ಇದು ನಮ್ಮ ಖಾಸಗಿ ಸ್ವತ್ತಾಗಲಿ ಅಥವಾ ಜಾಮಿಯತ್‌ ಉಲೇಮಾ-ಇ-ಹಿಂದ್‌ ನದ್ದಾಗಲಿ ಅಥವಾ ಎಐಎಂಪಿಎಲ್‌ ಬಿ ಯ ಸ್ವತ್ತಾಗಲಿ ಅಥವಾ ಮತ್ತಾರದೋ ಸ್ವತ್ತಾಗಲಿ ಅಲ್ಲ. ಹಾಗಾಗಿ, ಇದನ್ನು ಮತ್ತೊಂದರ ಸಲುವಾಗಿ ಕೊಡುಕೊಳ್ಳಲು ಯಾರಿಗೂ ಅಧಿಕಾರವಿಲ್ಲ ಎನ್ನುವುದನ್ನು ತಿಳಿಸಿದೆವು.

ಮೊದಲ ದಿನದಿಂದಲೂ ಮಧ್ಯಸ್ಥಿಕೆ ಸಮಿತಿಯು, ಮುಸಲ್ಮಾನರು ತಮ್ಮ ಹಕ್ಕನ್ನು ಬಿಟ್ಟುಕೊಡಬೇಕು ಹಾಗೂ ಪರ್ಯಾಯ ಭೂಮಿಯನ್ನು ಪಡೆಯಬೇಕು ಎಂದು ಹೇಳುತ್ತಿತ್ತು. ಆದರೆ ಅದಕ್ಕೆ ನಾವು ಒಪ್ಪಲಿಲ್ಲ. ದೇಶದಲ್ಲಿರುವ ಎಲ್ಲ ಮಸೀದಿಗಳೂ ಪೂಜಾಸ್ಥಳಗಳ ಕಾಯಿದೆ, 1991ರ ಅಡಿ ರಕ್ಷಣೆ ಪಡೆದಿರುವುದರಿಂದ ಈ ಸಂಬಂಧ ಒಂದು ಆಧ್ಯಾದೇಶವನ್ನು ಎಲ್ಲ ಮಸೀದಿಗಳಿಗೂ ಅನುವಾಗುವಂತೆ ಹೊರಡಿಸಬೇಕು.

ನ್ಯಾಯಾಲಯವು ಈ ಪ್ರಕರಣವನ್ನು ಶುದ್ಧ ಹಕ್ಕುಸ್ವಾಮ್ಯದ ಮೊಕದ್ದಮೆಯಾಗಿ ಪರಿಗಣಿಸಿ, ಸತ್ಯಾಸತ್ಯತೆಗಳ ಆಧಾರದಲ್ಲಿ ತೀರ್ಮಾನಿಸಬೇಕಿತ್ತು. ಸಾಕ್ಷ್ಯಾಧಿಕ್ಯತೆಯು (ಪ್ರಿಪಾಂಡರೆನ್ಸ್‌ ಆಫ್‌ ಎವಿಡೆನ್ಸ್‌) ಮುಸ್ಲಿಮರ ಪರವಾಗಿಯೇ ಇತ್ತು. ಸುಪ್ರೀಂ ಕೋರ್ಟ್‌ ಗಂಭೀರ ತಪ್ಪನ್ನು ಎಸಗಿದೆ, ಆದರೆ ನಾವು ಕೋರ್ಟಿನ ತೀರ್ಮಾನವನ್ನು ಗೌರವಿಸುತ್ತೇವೆ.

ಮಂದಿರವನ್ನು ನಿರ್ಮಿಸಲು ಹಾಗೂ ಮುಸಲ್ಮಾನರಿಗೆ ಪರ್ಯಾಯ ಭೂಮಿಯನ್ನು ನೀಡುವುದನ್ನು ಸುಗಮವಾಗಿಸಲು ಕೇಂದ್ರ ಸರ್ಕಾರವು ಯೋಜನೆಯೊಂದನ್ನು ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಜಾತ್ಯತೀತ ದೇಶವೊಂದರಲ್ಲಿ ನ್ಯಾಯಾಲಯವೊಂದು ಇಂತಹ ಆದೇಶವನ್ನು ನೀಡಬಹುದೇ?

ಮೊದಲಿಗೆ ನಾನು ಐದು ಎಕರೆ ಭೂಮಿಯ ಕುರಿತು ಅನಿಸಿಕೆಗಳನ್ನು ಹಂಚಿಕೊಳ್ಳುತ್ತೇನೆ. ವ್ಯಾಪ್ತಿಯ ವಿಚಾರವಾಗಿ ಸುಪ್ರೀಂ ಕೋರ್ಟ್ ಈ ಹಿಂದೆ‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಬದಿಗಿರಿಸಿದೆ. ಮೊಕದ್ದಮೆಯು ನಿಶ್ಚಿತ ವ್ಯಾಪ್ತಿಗನುಗುಣವಾಗಿಯೇ ಇದ್ದು ಆ ಕಾರಣಕ್ಕಾಗಿಯೇ ಮೊಕದ್ದಮೆಯ ಕುರಿತ ಆಂಶಿಕ ಆಜ್ಞೆಯನ್ನು ನೀಡಿದೆ. 142ನೇ ವಿಧಿಯನ್ವಯ ಅಧಿಕಾರವನ್ನು ಬಳಸಿ, ಮೊಕದ್ದಮೆಯ ಆಂಶಿಕ ಆಜ್ಞೆಯನ್ನು ನೀಡುತ್ತಿರುವುದಾಗಿ ನ್ಯಾಯಾಲಯವು ಹೇಳಿದ್ದು, ಐದು ಎಕರೆ ಭೂಮಿಯನ್ನು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರವು ಒಂದು ಪ್ರಮುಖ ಸ್ಥಳದಲ್ಲಿ ನೀಡಬೇಕು ಎಂಬುದಾಗಿ ನಿರ್ದೇಶನ ನೀಡಿದೆ. ನನ್ನ ಪ್ರಕಾರ ಇದು ನ್ಯಾಯದಾನದ ಅಣಕವಾಗಿದೆ. ಮುಸ್ಲಿಂ ಸಮುದಾಯವು, ಯಾವುದೇ ರೀತಿಯಲ್ಲಿಯೂ ಇದನ್ನು ಒಪ್ಪುವುದಿಲ್ಲ.

142ನೇ ವಿಧಿಯನ್ವಯ, ವಿವಾದಿತ ಭೂಮಿಯನ್ನು ಪರಿಗಣಿಸಿದಾಗ ಅವರು ಬಾಬರಿ ಮಸೀದಿಯು ಮುಸಲ್ಮಾನರಿಗೆ ಸೇರಿದ್ದಾಗಿತ್ತು ಹಾಗಾಗಿ ಮಸೀದಿಯು ನಿಂತಿದ್ದ ಸ್ಥಳವು ಮುಸಲ್ಮಾನರಿಗೆ ನೀಡಲ್ಪಡುತ್ತದೆ ಎನ್ನಬೇಕಿತ್ತು. 142ನೇ ವಿಧಿಯು ಸಂಪೂರ್ಣ ನ್ಯಾಯದಾನವನ್ನು ನೀಡುತ್ತಿತ್ತು. ಆದರೆ, ಈ ಪ್ರಕರಣದಲ್ಲಿ ನ್ಯಾಯಾಲಯವು ಈ ಕಾನೂನು ವ್ಯಾಪ್ತಿಯನ್ನು ಬಳಸಿದ್ದರೂ ಪೂರ್ಣ ನ್ಯಾಯದಾನವನ್ನು ಮಾಡಲಾಗಿಲ್ಲ.

ಹೊರಗಿನ ಪ್ರಾಂಗಣದ ವಿಚಾರಕ್ಕೆ ಬರುವುದಾದರೆ, ಹಿಂದೂಗಳು ದೀರ್ಘಕಾಲೀನ ಬಳಕೆಯಿಂದ ಬರುವ ಹಕ್ಕುಗಳನ್ನು ಉಪಯೋಗಿಸುತ್ತಿದ್ದರು. ಹಾಗಾಗಿ ನ್ಯಾಯಾಲಯವು 142ನೇ ವಿಧಿಯನ್ನು ಬಳಸುವ ಮೂಲಕ ಇದನ್ನು ಹಿಂದೂಗಳಿಗೆ ನೀಡಬಹುದಾಗಿತ್ತು. ಆ ಮೂಲಕ ಎರಡೂ ಸಮುದಾಯಗಳು ಜೊತೆಯಾಗಿ ಇರುವಂತೆ ನಿರ್ದೇಶನ ನೀಡಬಹುದಿತ್ತು.

ಮಧ್ಯಸ್ಥಿಕೆಯ ಪ್ರಕ್ರಿಯೆಗಳ ವೇಳೆ, ಮುಸಲ್ಮಾನರು ಹೊರಗಿನ ಪ್ರಾಂಗಣವನ್ನು ಬಿಟ್ಟು ಕೊಡಲು ತಯ್ಯಾರಿದ್ದರು. ಈ ವರದಿಯನ್ನು ಮಧ್ಯಸ್ಥಿಕೆಯ ಸಮಿತಿಯಿಂದ ಸುಪ್ರೀಂ ಕೋರ್ಟ್ ಪಡೆದುಕೊಂಡಿತ್ತು. ಅದು ಹೊರಗಿನ ಪ್ರಾಂಗಣದ ಜೊತೆಗೆ ಐದು ಎಕರೆ ಭೂಮಿಯನ್ನು ಹಿಂದೂಗಳಿಗೆ ನೀಡಬಹುದಿತ್ತು.

ಮಂದಿರವನ್ನು ಕಟ್ಟಲು ನ್ಯಾಯಾಲಯವು ಸುಗಮ ನಿರ್ದೇಶನವನ್ನು ನೀಡಿದ್ದರ ಬಗ್ಗೆ ಏನು ಹೇಳುತ್ತೀರಿ…

ಈ ಬಗ್ಗೆ ನಾನು ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ. 1993ರ ಆಯೋದ್ಯಾ ವಿಧಿಯ 6 ಮತ್ತು 7ನೇ ಸೆಕ್ಷನ್‌ ಅನುಸಾರ ಈ ನಿರ್ದೇಶನವನ್ನು ನೀಡಿದ್ದಾರೆ.

ಮುಸ್ಲಿಮರು ಪರ್ಯಾಯ ಜಾಗವನ್ನು ಒಪ್ಪುವುದಿಲ್ಲ ಎಂದು ನಿಮಗನಿಸುತ್ತದೆಯೇ?

ಹೌದು. ಏಕೆಂದರೆ ನಾವು ತುಂಡು ಭೂಮಿಗಾಗಿ ಹೋರಾಡುತ್ತಿರಲಿಲ್ಲ. ನಮ್ಮಿಂದ ಕಸಿದುಕೊಳ್ಳಲಾದ ಮಸೀದಿಗಾಗಿ ಹೋರಾಡುತ್ತಿದ್ದೆವು. ನಮ್ಮ ಪ್ರಕಾರ ಇದು ತಪ್ಪಾದ ತೀರ್ಪು. ಎಲ್ಲ ಅಕ್ರಮಗಳನ್ನೂ ಎಸಗಿದ ಪಕ್ಷದವರ ಪರವಾಗಿ ನ್ಯಾಯಾಲಯವು ಮುಂದುವರೆಯಿತು.

ಈ ತೀರ್ಪನ್ನು ಯಾವುದೇ ಒಬ್ಬರು ನ್ಯಾಯಮೂರ್ತಿಗಳು ಬರೆದಿರುವುದಾಗಿ ಎಲ್ಲಿಯೂ ಹೆಸರನ್ನು ಉಲ್ಲೇಖಿಸಿರಲಿಲ್ಲ. ಇದು ವಿಶೇಷ ಎಂದು ನಿಮಗನಿಸುತ್ತದೆಯೇ?

ಇದರಲ್ಲಿ ಯಾವುದೇ ಅಕ್ರಮ ಇಲ್ಲ. ಇದು ವಿಶೇಷ ಎನ್ನುವುದು ನಿಜ. ತುಂಬಾ ಮಹತ್ವದ ತೀರ್ಪೊಂದನ್ನು ಅತ್ಯಂತ ಕಡಿಮೆ ಅವದಿಯಲ್ಲಿ ಬರೆಯಬೇಕಾದುದು ಇದಕ್ಕೆ ಕಾರಣವಾಗಿರಬಹುದು. ವಿಚಾರಣೆಯು ಮುಗಿದ ನಂತರ ತೀರ್ಪನ್ನು ಬರೆಯುವ ಸಲುವಾಗಿ ಐವರು ನ್ಯಾಯಮೂರ್ತಿಗಳು ತುಂಬಾ ದಿನಗಳ ಕಾಲ ಕುಳಿತುಕೊಳ್ಳಲಿಲ್ಲ. ಅವರೆಲ್ಲರೂ ತೀರ್ಪನ್ನು ಬರೆಯುವ ಸಲುವಾಗಿ ಒಗ್ಗೂಡಿ ಸಮಯ ಕಳೆದಿರುವಂತಿದೆ. ಮತ್ತೊಂದು ಆಸಕ್ತಿಕರ ವಿಷಯವೆಂದರೆ ಒಬ್ಬರು ನ್ಯಾಯಮೂರ್ತಿಗಳು ಅನುಬಂಧವನ್ನು ಬರೆದಿದ್ದಾರೆ, ಆದರೆ, ಆ ಅನುಬಂಧವನ್ನು ಬರೆದ ನ್ಯಾಯಮೂರ್ತಿಗಳು ಯಾರು ಎನ್ನುವುದನ್ನೂ ಹೊರಗೆಡಹಿಲ್ಲ. ಇದೊಂದು ವಿಶೇಷ ಪ್ರಯೋಗ. ನನ್ನ ಪ್ರಕಾರ ಸಮಯಾಭಾವದಿಂದಾಗಿ ಅವರು ಹೀಗೆ ಮಾಡಿದ್ದಾರೆ. ಮತ್ತೊಂದು ವಿಶೇಷ ಎಂದರೆ ಅವರು ಈ ತೀರ್ಪನ್ನು ಶನಿವಾರ ನೀಡಿದ್ದಾರೆ ಎನ್ನುವುದು.

ಪ್ರಕರಣವು ಮಾಧ್ಯಮದ ವಿಶೇಷ ಗಮನವನ್ನು ಸೆಳೆದ ಬಗ್ಗೆ ಏನು ಹೇಳುತ್ತೀರಿ? ವಿಚಾರಣೆಯ ವೇಳೆ ಹಾಗೂ ತೀರ್ಪಿನ ಸಂದರ್ಭದಲ್ಲಿ ಮಾಧ್ಯಮವು ಹೊಣೆಗಾರಿಕೆಯಿಂದ ನಡೆದುಕೊಂಡಿದೆ ಎಂದು ನಿಮಗನಿಸಿದೆಯೇ?

ಮಾಧ್ಯಮಗಳು ಹೆಚ್ಚು ವಸ್ತುನಿಷ್ಠವಾಗಿರಬಹುದಿತ್ತು. ಅವು ಪಕ್ಷಪಾತಿಗಳಾಗಬಾರದು. ಆದರೆ, ನಾವು ಸ್ವತಂತ್ರವಾದ ದೇಶದಲ್ಲಿ ಜೀವಿಸುವವರಾಗಿದ್ದು ಮಾಧ್ಯಮವನ್ನು ಉಸಿರುಗಟ್ಟಿಸಲಾಗದು. ಅದು ನಾಲ್ಕನೇ ಅಂಗವಾಗಿಯೇ ಇರಬೇಕು.

ನ್ಯಾಯಾಲಯವು ತೀರ್ಪನ್ನು ಮರುಪರಿಶೀಲಿಸಬೇಕು ಎಂದು ನಿಮಗನಿಸುತ್ತದೆಯೇ?

ಹೌದು.

Related Stories

No stories found.
Kannada Bar & Bench
kannada.barandbench.com