ಕಿರಿಯ ವಕೀಲರಿಗೆ ನೆರವಾಗಲು ಇನ್ನಾದರೂ ಸಂಬಂಧಪಟ್ಟವರು ಕಣ್ಣು ತೆರೆಯಬೇಕು: ಯುವ ವಕೀಲ ಸಂಗಯ್ಯ ಎಂ ಹಿರೇಮಠ

"ವೃತ್ತಿಯ ಹಿರಿತನಕ್ಕೆ ಹೊರಳುತ್ತಿರುವ, ಅನುಭವಿಗಳಾದ ಕಿರಿಯ ವಕೀಲರಿಗೆ ಕೂಡ ಸಾಕಷ್ಟು ತೊಂದರೆಗಳು ಎದುರಾಗಿವೆ. ಅವರಿಗೆ ಹೊಸ ಕಚೇರಿ ರೂಪಿಸಿಕೊಳ್ಳಲಾಗುತ್ತಿಲ್ಲ. ಕಾರಣ ಕೊರೊನಾದಿಂದ ಉಲ್ಬಣಿಸಿರುವ ಆರ್ಥಿಕ ಮುಗ್ಗಟ್ಟು."
ಕಿರಿಯ ವಕೀಲರಿಗೆ ನೆರವಾಗಲು ಇನ್ನಾದರೂ ಸಂಬಂಧಪಟ್ಟವರು ಕಣ್ಣು ತೆರೆಯಬೇಕು: ಯುವ ವಕೀಲ ಸಂಗಯ್ಯ ಎಂ ಹಿರೇಮಠ

ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದು ಕಿರಿಯ ವಕೀಲ ಸಮುದಾಯ. ವೃತ್ತಿ ಜೀವನದ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಿದ್ದ ಅವರಿಗೆ ವೃತ್ತಿ ಸಂಬಂಧಿ ಸವಾಲುಗಳ ನಡುವೆ ಕೋವಿಡ್‌ ಕೂಡ ತೊಡರುಗಲ್ಲಾಗಿದೆ. ಮೊದಲ ಅಲೆಯನ್ನೇ ಎದುರಿಸಲಾಗದ ಆ ಸಮುದಾಯ ಈಗ ಎರಡನೇ ಅಲೆಯ ಸುಳಿಯಲ್ಲಿ ಸಿಲುಕಿದೆ. ಇಂತಹ ಕಿರಿಯ ವಕೀಲರ ಸಮಸ್ಯೆಗಳ ಬಗ್ಗೆ ಮೊದಲಿನಿಂದಲೂ ಧ್ವನಿ ಎತ್ತುತ್ತ ಬಂದವರು ಸಂಗಯ್ಯ ಎಂ ಹಿರೇಮಠ.

ಸಂಗಯ್ಯ ಅವರದು ಮೂಲತಃ ಬಾಗಲಕೋಟೆ ಜಿಲ್ಲೆಯ ಹೂವನೂರು. ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದು ವಾಣಿಜ್ಯಶಾಸ್ತ್ರದಲ್ಲಿ ಪದವಿ ಪಡೆದರು. ವಕೀಲನಾಗಬೇಕೆಂಬ ಚಿಕ್ಕಂದಿನ ಕನಸನ್ನು ನಗರದ ಪಂಚಮಿ ಕಾನೂನು ಕಾಲೇಜು ಸೇರಿ ಈಡೇರಿಸಿಕೊಂಡರು. ಮೂರು ವರ್ಷಗಳ ಹಿಂದೆ ವೃತ್ತಿಜೀವನ ಆರಂಭಿಸಿದ ಅವರ ಪಾಲಿಗೆ ಅನಿರೀಕ್ಷಿತವಾಗಿ ಎರಗಿದ್ದು ಕೊರೊನಾ ಬಿಕ್ಕಟ್ಟು. ಧೃತಿಗೆಡದೆ ಸರ್ಕಾರ ಸಂಘ ಸಂಸ್ಥೆಗಳ ನೆರವು ಕೋರುತ್ತ, ಹಿರಿಯ ವಕೀಲರ ಗಮನ ಸೆಳೆಯುತ್ತಾ ಕಿರಿಯ ವಕೀಲರಿಗೆ ತಮ್ಮದೇ ವಿಧಾನದಲ್ಲಿ ಅವರು ನೆರವಾಗಿದ್ದಾರೆ. ಕಿರಿಯ ವಕೀಲರು ಎದುರಿಸುತ್ತಿರುವ ಕೋವಿಡ್‌ ಬಿಕ್ಕಟ್ಟಿನ ಕುರಿತು ಅವರು ಬಾರ್‌ ಅಂಡ್‌ ಬೆಂಚ್‌ ಜೊತೆ ಹಂಚಿಕೊಂಡಿರುವ ಹಲವು ವಿಚಾರಗಳು ಇಲ್ಲಿವೆ:

Q

ಕೋವಿಡ್‌ ಎರಡನೇ ಅಲೆ ಕಿರಿಯ ವಕೀಲರ ಜೀವನ ಹಾಗೂ ಅವರ ವೃತ್ತಿ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ?

A

ರಾಜ್ಯದ ಮೂಲೆ ಮೂಲೆಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಕಿರಿಯ ವಕಿಲರು ಸಾಕಷ್ಟು ಮಂದಿ ಇದ್ದಾರೆ. ಅವರು ಕೆಲಸ ಮಾಡುವ ವಕೀಲರ ಕಚೇರಿಗಳಲ್ಲಿ ಹೆಚ್ಚೆಂದರೆ 500ರಿಂದ 1000 ರೂಪಾಯಿ ಪ್ರತಿದಿನ ದೊರೆಯುತ್ತಿದ್ದ ಸಂಭಾವನೆ. ಅವರೆಲ್ಲಾ ಪಿಜಿ ಅಥವಾ ಬಾಡಿಗೆ ಮನೆಯಲ್ಲಿ ಜೀವಿಸುತ್ತಿದ್ದರು. ಕೋವಿಡ್‌ ಮೊದಲನೇ ಅಲೆ ವೇಳೆ ಸಾಕಷ್ಟು ಹಿರಿಯ ನ್ಯಾಯವಾದಿಗಳು, ಯುವ ವಕೀಲರ ನೆರವಿಗೆ ಧಾವಿಸಿದರು. ತಮ್ಮ ಕೈಲಾದ ಸಹಾಯ ಮಾಡಿದರು. ಆದರೆ ಎರಡನೇ ಅಲೆ, ಯುವ ವಕೀಲರ ಜೀವನಕ್ಕೆ ದೊಡ್ಡಮಟ್ಟದಲ್ಲಿ ಮಾರಕವಾಗಿದೆ. ಏಕೆಂದರೆ ಹಿರಿಯ ವಕೀಲರು ಕೂಡ ಸಂಕಷ್ಟದಲ್ಲಿದ್ದಾರೆ. ನನಗೆ ಗೊತ್ತಿರುವ ಎಂಟು- ಹತ್ತು ಮಂದಿ ಹಿರಿಯ ವಕೀಲರು ಕೋವಿಡ್‌ ಎರಡನೇ ಅಲೆ ವೇಳೆ ಬಲಿಯಾಗಿದ್ದಾರೆ. ಸಹೋದ್ಯೋಗಿಗಳಲ್ಲಿ ಐದಾರು ಮಂದಿ ಜೀವ ತೆತ್ತಿದ್ದಾರೆ. ಕೆಲವರು ಊರಿಗೂ ಮರಳಲು ಸಾಧ್ಯವಾಗದೇ ಕೋವಿಡ್‌ ಉಲ್ಬಣಿಸಿರುವ ಬೆಂಗಳೂರಿನಲ್ಲಿಯೂ ಇರಲಾಗದೆ ಆತಂಕಕ್ಕೀಡಾಗಿದ್ದಾರೆ. ಅನೇಕರು ಬಾಡಿಗೆ ಕಟ್ಟುವುದು ಇರಲಿ ಊಟಕ್ಕೂ ಪರದಾಡುತ್ತಿದ್ದಾರೆ. ವಕೀಲ ವೃತ್ತಿಯಲ್ಲಿ ಎನ್‌ರೋಲ್‌ ಆದಮೇಲೆ ಬೇರೆ ವೃತ್ತಿ ಕೈಗೊಳ್ಳುವುದಿಲ್ಲ ಎಂದು ನಾವು ಅಫಿಡವಿಟ್‌ನಲ್ಲಿ ಬರೆದುಕೊಟ್ಟಿರುತ್ತೇವೆ. ಈಗ ಬೇರೆ ವೃತ್ತಿಯನ್ನೂ ಮಾಡುವಂತಿಲ್ಲ.

ವೃತ್ತಿಗೆ ಹೊಸದಾಗಿ ಬಂದವರಿಗಂತೂ ಮಹಾ ಹೊಡೆತ. ಏಕೆಂದರೆ ಇಲ್ಲಿ ನಿಗದಿತ ವೇತನ ಇರುವುದಿಲ್ಲ. ಹಿರಿಯ ವಕೀಲರು ನೀಡಿದಷ್ಟು ಸಂಭಾವನೆಯನ್ನು ಕಿರಿಯ ವಕೀಲರು ಪಡೆಯಬೇಕು. ಇಂತಿಷ್ಟೇ ಕೊಡಿ ಎಂದು ಆಗ್ರಹಿಸಲಾಗದು. ಈಗಂತೂ ನ್ಯಾಯಾಲಯಗಳಲ್ಲಿ ತುರ್ತು ಪ್ರಕರಣಗಳಿಗಷ್ಟೇ ಆದ್ಯತೆ ನೀಡಲಾಗುತ್ತಿದೆ. ಆ ಬಗೆಯ ಮಹತ್ವದ ಪ್ರಕರಣಗಳನ್ನು ಸಾಮಾನ್ಯವಾಗಿ ಹಿರಿಯ ವಕೀಲರೇ ನಿಭಾಯಿಸುವುದರಿಂದ ಯುವ ವಕೀಲರಿಗೆ ಹೆಚ್ಚು ಅವಕಾಶ ಸಿಗುವುದಿಲ್ಲ. ಕಿರಿಯರಿಗೆ ವೃತ್ತಿಯಲ್ಲಿ ಪರಿಪಕ್ವತೆ ಸಾಧಿಸಲು ತನ್ನದೇ ಆದ ಸಮಯ ಹಿಡಿಯುತ್ತದೆ. ಈಗಷ್ಟೇ ವೃತ್ತಿಗೆ ಕಾಲಿಟ್ಟವರು ಇನ್ನೂ ಕಲಿಕಾ ಹಂತದಲ್ಲಿರುತ್ತಾರೆ. ಆಗೆಲ್ಲಾ ನ್ಯಾಯಾಲಯಗಳಿಗೆ ಖುದ್ದು ಹೋಗಿ ಕಲಿಯಬೇಕಾದ; ಹಿರಿಯ ವಕೀಲರಿಂದ ತಿಳಿಯಬೇಕಾದ ಸಾಕಷ್ಟು ಸಂಗತಿಗಳಿರುತ್ತವೆ. ಅದಕ್ಕೆಲ್ಲಾ ಈಗ ಕುತ್ತು ಒದಗಿದೆ. ಉದಾಹರಣೆಗೆ ಮೂರು ವರ್ಷದ ನನ್ನ ವೃತ್ತಿ ಅನುಭವದಲ್ಲಿ ಒಂದು ವರ್ಷಕ್ಕೂ ಹೆಚ್ಚು ಅವಧಿಯನ್ನು ಕೋವಿಡ್‌ ಅನಿಶ್ಚಿತತೆಯಲ್ಲಿಯೇ ಕಳೆದಿದ್ದೇನೆ. ಮತ್ತೊಂದೆಡೆ ವೃತ್ತಿಯ ಹಿರಿತನಕ್ಕೆ ಹೊರಳುತ್ತಿರುವ, ಅನುಭವಿಗಳಾದ ಕಿರಿಯ ವಕೀಲರಿಗೆ ಕೂಡ ಸಾಕಷ್ಟು ತೊಂದರೆಗಳು ಎದುರಾಗಿವೆ. ಅವರಿಗೆ ಹೊಸ ಕಚೇರಿ ರೂಪಿಸಿಕೊಳ್ಳಲಾಗುತ್ತಿಲ್ಲ. ಕಾರಣ ಕೊರೊನಾದಿಂದ ಉಲ್ಬಣಿಸಿರುವ ಆರ್ಥಿಕ ಮುಗ್ಗಟ್ಟು. ಅಗತ್ಯ ಮಾನವ ಸಂಪನ್ಮೂಲದ ಕೊರತೆ ಎದುರಾಗಿದೆ. ಕೇಸ್‌ಗಳು ಚಾಲ್ತಿಯಲ್ಲಿದ್ದರೆ ಮಾತ್ರ ವಕೀಲರಿಗೆ ಬೆಲೆ. ಪ್ರಕರಣಗಳು ಇಲ್ಲದ ಅನಿಶ್ಚಿತತೆ ಮಾನಸಿಕವಾಗಿಯೂ ಯುವ ವಕೀಲರನ್ನು ಕುಗ್ಗಿಸಿದೆ.

Q

ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಯುವ ವಕೀಲರಿಗೆ ದೊರೆತ ವೈದ್ಯಕೀಯ ನೆರವು ಯಾವ ರೀತಿಯದು?

A

ಮೊದಲನೇ ಅಲೆ ವೇಳೆ ದಿಢೀರನೆ ಲಾಕ್‌ಡೌನ್‌ ಮಾಡಲಾಯಿತು. ಸರ್ಕಾರ ಹಾಗೂ ಸಂಬಂಧಪಟ್ಟವರು ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ ನಿಜ. ಆದರೆ ಆಗ ಕೋವಿಡ್‌ ಸೋಂಕಿತರ ಪ್ರಮಾಣ ಎರಡನೇ ಅಲೆಯಷ್ಟು ದೊಡ್ಡಮಟ್ಟದಲ್ಲಿಇರಲಿಲ್ಲ. ಸಾವಿನ ಪ್ರಮಾಣವೂ ವಿರಳವಾಗಿತ್ತು. ಆಗ ಜೀವನದ ಸಮಸ್ಯೆ ಮಾತ್ರ ಇತ್ತು. ಈಗ ಜೀವ ಮತ್ತು ಜೀವನ ಎರಡೂ ದೊಡ್ಡ ಪ್ರಶ್ನೆಯಾಗಿದೆ. ಈಗ ವಯಸ್ಸಿನ ನಿರ್ಬಂಧವಿಲ್ಲದೆ ಕೋವಿಡ್‌ ಎಲ್ಲರ ಮೇಲೂ ದಾಳಿ ಮಾಡುತ್ತಿದೆ. ಬೆಳಿಗ್ಗೆ ಮಾತನಾಡಿಸಿದ್ದವರು ಸಂಜೆಯೊಳಗೆ ಕೊನೆಯುಸಿರೆಳೆಯುತ್ತಿರುವ ಎಷ್ಟೋ ಘಟನೆಗಳನ್ನು ನೋಡುತ್ತಿದ್ದೇವೆ. ಚಿಕಿತ್ಸಾ ವ್ಯವಸ್ಥೆಯೂ ಅಯೋಮಯವಾಗಿದೆ. ಕೊರೊನಾವನ್ನು ನಿಯಂತ್ರಿಸಲು ಆಗದ ಸ್ಥಿತಿಗೆ ಸರ್ಕಾರ ತಲುಪಿದೆ. ವಕೀಲರುಗಳಿಗೆ ಎನ್‌ರೋಲ್‌ ಆದಾಗ ಒಂದು ವಿಮೆ ಸೌಲಭ್ಯ ಇರುತ್ತದೆ. ಅದು ವಕೀಲರು ಸಾವನ್ನಪ್ಪಿದಾಗ ಮಾತ್ರ ದೊರೆಯುತ್ತದೆ. ಕೋವಿಡ್‌ಗೆ ಸಂಬಂಧಿಸಿದಂತೆ ವಿಶೇಷ ವಿಮೆಗಾಗಿ ಒತ್ತಾಯಿಸಿದ್ದೆವು. ಅದು ಇನ್ನೂ ಕಾರ್ಯ ರೂಪಕ್ಕೆ ಬಂದಿಲ್ಲ. ಅಲ್ಲದೆ ನ್ಯಾಯಾಲಯದ ಆವರಣದಲ್ಲಿಯೇ ಕೋವಿಡ್‌ ಸೋಂಕು ತಗುಲಿದ ವಕೀಲರಿಗೆ ಪ್ರತ್ಯೇಕ ಚಿಕಿತ್ಸೆ ಒದಗಿಸಲು ಮನವಿ ಮಾಡಿದ್ದೆವು. ಅಲ್ಲಿಯೇ ತಾತ್ಕಾಲಿಕವಾಗಿ ಆಸ್ಪತ್ರೆ ಹಾಸಿಗೆಗಳಿಗೆ ಏರ್ಪಾಡು ಮಾಡುವಂತೆ ಕೋರಿದ್ದೆವು. ಅದು ಈವರೆಗೆ ಈಡೇರಿಲ್ಲ.

Q

ಮೊದಲನೆ ಅಲೆಯಲ್ಲಿ ತತ್ತರಿಸಿದ ಕಿರಿಯ ವಕೀಲರಿಗೆ ನೆರವಾಗಲು ರಾಜ್ಯ ಸರ್ಕಾರ ಅಥವಾ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಯಾವ ರೀತಿಯ ಕ್ರಮಗಳನ್ನು ಕೈಗೊಂಡಿತು?

A

ಕೆಎಸ್‌ಬಿಸಿ ಇದುವರೆಗೆ ತಲಾ ಐದು ಸಾವಿರ ರೂಪಾಯಿಯಂತೆ ರಾಜ್ಯದ 5000 ಮಂದಿಗೆ ಧನಸಹಾಯ ಮಾಡಿದೆ. ಆದರೆ ರಾಜ್ಯದ್ಯಂತ ಸುಮಾರು 90,000 ಕಿರಿಯ ವಕೀಲರಿದ್ದಾರೆ. ಬೆಂಗಳೂರೊಂದರಲ್ಲೇ ಅವರ ಸಂಖ್ಯೆ 20,000 ದಾಟುತ್ತದೆ. ಸಂಬಂಧಪಟ್ಟವರಿಗೆ ನಾವು ಮನವಿ ಸಲ್ಲಿಸಿದರೂ ಹೆಚ್ಚೇನೂ ಪ್ರಯೋಜನವಾಗಿಲ್ಲ. ಧನಸಹಾಯ ನೀಡಲು ಸಾಕಷ್ಟು ಗೊಂದಲಗಳಿದ್ದವು. ಎರಡು ವರ್ಷದವರಿಗಿಂತ ಕಡಿಮೆ ಅವಧಿಯ ಸೇವಾನುಭವ ಇರುವವರಿಗೆ ಮಾತ್ರ ಧನಸಹಾಯ ಎಂದು ಹೇಳಲಾಗಿತ್ತು. ನಂತರ ಐದು ವರ್ಷದವರೆಗೆ ಸೇವೆ ಸಲ್ಲಿಸಿದವರೂ ಆರ್ಥಿಕ ನೆರವು ಪಡೆಯಬಹುದು ಎಂದು ಕೆಲವರು ಹೇಳಿದರು. ಖುದ್ದಾಗಿ ಕಚೇರಿಗೆ ಬಂದು ಅರ್ಜಿ ಸಲ್ಲಿಸಿದವರಿಗಷ್ಟೇ ಸಹಾಯ ನೀಡಲಾಗುತ್ತದೆ ಎಂದು ಮೊದಲು ಹೇಳಲಾಗಿತ್ತು. ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಆ ನಿರ್ಧಾರ ಹಿಂದಕ್ಕೆ ಪಡೆದು ತದನಂತರ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು. ಕೆಎಸ್‌ಬಿಸಿಯಲ್ಲಿ ಕೋಟ್ಯಂತರ ರೂಪಾಯಿ ನಿಧಿಯಿದೆ. ಆದರೆ ಅದನ್ನು ಈಗ ತೆಗೆದರೆ ನಮಗೆ ಕೆಟ್ಟ ಹೆಸರು ಬರುತ್ತದೆ ಎಂದು ಸಂಬಂಧಪಟ್ಟವರು ಹೇಳುತ್ತಾರೆ. ಕೋವಿಡ್‌ನಂತಹ ಸಂಕಷ್ಟ ಎದುರಾದಾಗಲೂ ಹಣ ವಿನಿಯೋಗಿಸಲಿಲ್ಲ ಎಂದರೆ ಅರ್ಥವೇನು?

ಸರ್ಕಾರ ಆಗಷ್ಟೇ ವೃತ್ತಿಜೀವನಕ್ಕೆ ಕಾಲಿರಿಸಿದವರಿಗೆ ಸ್ಟೈಪೆಂಡ್‌ ನೀಡುತ್ತದೆ. ಎರಡರಿಂದ ನಾಲ್ಕು ಸಾವಿರ ರೂಪಾಯಿಗಳಷ್ಟು ಮೌಲ್ಯದ ತರಬೇತಿ ವೇತನ ಅದು. ಆದರೆ ಅದು ದೊರೆಯವುದು ಎಲ್ಲೋ ಕೆಲ ಕಿರಿಯ ವಕೀಲರಿಗೆ ಮಾತ್ರ. ಉದಾಹರಣೆಗೆ ಒಂದು ಜಿಲ್ಲೆಯಲ್ಲಿ ಹತ್ತು ಕಿರಿಯ ವಕೀಲರಿಗಷ್ಟೇ ಸ್ಟೈಪೆಂಡ್‌ ದೊರೆಯುತ್ತದೆ. ಇನ್ನೊಂದೆಡೆ ನಿಧಿಯಿಲ್ಲ ಎಂಬ ನೆಪವೊಡ್ಡಿ ಅದು ಎರಡು ಮೂರು ತಿಂಗಳಾದರೂ ಬಿಡುಗಡೆಯಾಗುವುದಿಲ್ಲ. ಸ್ಟೈಪೆಂಡ್‌ ಹಣವನ್ನು ಹದಿನೈದು ಸಾವಿರಕ್ಕೆ ಹೆಚ್ಚಿಸಿ, ಅದನ್ನು ದೊಡ್ಡ ಮಟ್ಟದಲ್ಲಿ ಕಿರಿಯ ವಕೀಲರಿಗೆ ಒದಗಿಸಿ ಎಂಬ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ.

Q

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕರ್ನಾಟಕ ರಾಜ್ಯ ಕಿರಿಯ ವಕೀಲರ ಸಂಘ ಯುವ ವಕೀಲರ ಏಳಿಗೆಗಾಗಿ ಹೇಗೆ ಶ್ರಮಿಸುತ್ತಿದೆ?

A

ಕಿರಿಯ ವಕೀಲರ ಸಂಘಕ್ಕೆ ಅಗತ್ಯ ನಿಧಿಗಳು ದೊರೆಯುತ್ತಿಲ್ಲ. ಹೀಗಾಗಿ ಸಹಜವಾಗಿಯೇ ಅದು ನಿಷ್ಕ್ರಿಯವಾಗಿದೆ. ಬೇರೆ ಯಾವುದೇ ಟ್ರಸ್ಟ್‌, ಸಂಘ ಸಂಸ್ಥೆಗಳಿಗೆ ಹಣದ ನೆರವು ಉದಾರವಾಗಿ ಹರಿದು ಬರುತ್ತದೆ. ಆದರೆ ವಕೀಲರ ಸಂಘಗಳ ವಿಚಾರದಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ.

Q

ಮುಂದೆಯೂ ಇಂತಹ ಸ್ಥಿತಿ ಉದ್ಭವಿಸಿದರೆ ಏನು ಮಾಡುವಿರಿ?

A

ಮುಂದೆಯೂ ಇದೇ ಸ್ಥಿತಿ ಮುಂದುವರೆದರೆ ನ್ಯಾಯಿಕ ವ್ಯವಸ್ಥೆಗೆ ದೊಡ್ಡ ಹೊಡೆತ ಕಟ್ಟಿಟ್ಟ ಬುತ್ತಿ. ಈಗಾಗಲೇ ವೃತ್ತಿಯನ್ನು ಅನೇಕರು ತೊರೆದಿದ್ದು ಹಲವರು ಅದೇ ದಾರಿ ಹಿಡಿಯುತ್ತಾರೆ. ಅಷ್ಟೇ ಅಲ್ಲದೆ ಕಕ್ಷೀದಾರರಿಗೂ ತೊಂದರೆ. ಇದೊಂದು ಶ್ರೇಷ್ಠ ವೃತ್ತಿಯಾಗಿದ್ದು ಯುವ ವಕೀಲರು ಧೃತಿಗೆಡದೆ ಕಷ್ಟಕಾಲವನ್ನು ಎದುರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಧನಸಹಾಯ ಒದಗಿಸಬೇಕು. ಕೋವಿಡ್‌ ಸಂದರ್ಭದಲ್ಲಿ ವಕೀಲರಿಗೆ ಇತರೆ ವೃತ್ತಿ ಮಾಡಲು ಅನುವಾಗುವಂತೆ ಈಗಿರುವ ನಿಯಮಗಳನ್ನು ಸಡಿಲಗೊಳಿಸಬೇಕು. ಕಿರಿಯ ವಕೀಲರಿಗೆ ನೆರವಾಗಲು ಇನ್ನಾದರೂ ಸಂಬಂಧಪಟ್ಟವರು ಕಣ್ಣುತೆರೆಯಬೇಕು. ಸಂಕಷ್ಟದಲ್ಲಿ ಇರುವ ವಕೀಯುವ ವಕೀಲರಿಗೆ ಬಸ್ ಪಾಸ್ ವ್ಯವಸ್ಥೆ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ವಕೀಲರ ಸಹಾಯಕ್ಕಾಗಿ ನಾನು ʼನವ ವಕೀಲರ ವೇದಿಕೆʼ ಮತ್ತು ʼವಕೀಲ ರಕ್ಷಣಾ ಕಾಯ್ದೆ ಹೋರಾಟʼ ಎಂಬ ಎರಡು ವಾಟ್ಸಪ್ ಮತ್ತು ಫೇಸ್ಬುಕ್ ಗ್ರೂಪ್ ಗಳನ್ನು ರಚಿಸಿದ್ದೇನೆ. ದಯವಿಟ್ಟು ಸಂಕಷ್ಟದಲ್ಲಿರುವ ಕಿರಿಯ ವಕೀಲರು ತಮ್ಮ ಕಷ್ಟಗಳನ್ನು ಅಲ್ಲಿ ಹೇಳಿಕೊಳ್ಳಬಹುದು. ಇದರಲ್ಲಿ ಹಲವು ಹಿರಿ ಕಿರಿಯ ವಕೀಲರುಗಳು ಇದ್ದು ತೊಂದರೆಯಲ್ಲಿರುವವರಿಗೆ ಸಹಾಯ ದೊರೆಯಲಿದೆ.

Related Stories

No stories found.
Kannada Bar & Bench
kannada.barandbench.com