ಐವತ್ತನೇ ಮುದ್ರಣ ಕಂಡ ʼಸಂವಿಧಾನ ಓದುʼ ಕೃತಿ: ಲೇಖಕ ನ್ಯಾ. ನಾಗಮೋಹನ್ ದಾಸ್ ಅವರ ವಿಶೇಷ ಸಂದರ್ಶನ

"ಸಂವಿಧಾನಕ್ಕೊಂದು ಸಿದ್ಧಾಂತ ಇದ್ದೇ ಇದೆ. ಅದು ಪಾಳೇಗಾರಿಕೆ, ಕೋಮುವಾದ, ಮೂಲಭೂತವಾದ ಹತ್ತಿಕ್ಕಿ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಬಹುತ್ವ, ಕಲ್ಯಾಣ ರಾಜ್ಯವನ್ನು ಎತ್ತಿ ಹಿಡಿಯುವ ಜೀವಪರವಾದ ಸಿದ್ಧಾಂತವಾಗಿದೆ" ಎನ್ನುತ್ತಾರೆ ಕೃತಿಕಾರರು.
ಐವತ್ತನೇ ಮುದ್ರಣ ಕಂಡ ʼಸಂವಿಧಾನ ಓದುʼ ಕೃತಿ: ಲೇಖಕ ನ್ಯಾ. ನಾಗಮೋಹನ್ ದಾಸ್ ಅವರ ವಿಶೇಷ ಸಂದರ್ಶನ

ಕನ್ನಡ ಪುಸ್ತಕ ಲೋಕದಲ್ಲಿ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿರುವ ʼಸಂವಿಧಾನ ಓದುʼ ಕೃತಿ 2021ರ ಏಪ್ರಿಲ್‌ನಲ್ಲಿ ಐವತ್ತನೇ ಮುದ್ರಣ ಕಂಡಿದೆ. 2018ರ ಆಗಸ್ಟ್‌ನಲ್ಲಿ ಲೋಕಾರ್ಪಣೆಗೊಂಡ ಮೊದಲ ದಿನವೇ ಪುಸ್ತಕದ 2000 ಪ್ರತಿಗಳು ಮಾರಾಟವಾದವು. ಅದಾದ ಎರಡು ದಿನಗಳಲ್ಲಿ ಅಷ್ಟೇ ಪ್ರತಿಗಳು ಖರ್ಚಾದವು. ಮುಂದಿನ ನಾಲ್ಕು ತಿಂಗಳಲ್ಲೇ ಕೃತಿ 25ನೇ ಮುದ್ರಣ ಕಂಡಿತು, ಇಂಗ್ಲಿಷ್‌, ಹಿಂದಿ ಹಾಗೂ ಮಲಯಾಳಂ ಭಾಷೆಗೆ ಅನುವಾದಗೊಂಡಿರುವುದು, ಕೃತಿಗೆ ಪೂರಕವಾಗಿ ಪ್ರಶ್ನೋತ್ತರವುಳ್ಳ ಇನ್ನೊಂದು ಕಿರುಹೊತ್ತಗೆ ಹೊರಬಂದಿರುವುದು ಮತ್ತೊಂದು ಹಿರಿಮೆ. ಕನ್ನಡ ಪುಸ್ತಕ ಮುದ್ರಣ ಲೋಕದ ಮಟ್ಟಿಗೆ ಇಷ್ಟೊಂದು ಆವೃತ್ತಿಗಳನ್ನು ಕಂಡ ಗ್ರಂಥ ಇನ್ನೊಂದಿಲ್ಲ. ಅದಷ್ಟೇ ಆಗಿದ್ದರೆ ವಿಶೇಷ ಎನಿಸುತ್ತಿರಲಿಲ್ಲ. ಕೃತಿ ಅತ್ಯಂತ ಕಡಿಮೆ ಅವಧಿಯಲ್ಲಿ ನಾಡಿನ ಮೂಲೆ ಮೂಲೆಯನ್ನು ತಲುಪಿದೆ, ಆಂದೋಲನವಾಗಿ ರೂಪುಗೊಂಡಿದೆ. ಜನ ಮಾನಸದಲ್ಲಿ ಆಳವಾಗಿ ಬೇರೂರಿದೆ. ಇದು ವಿದ್ಯಾರ್ಥಿ ಯುವಜನರಿಗಾಗಿ ಬರೆದ ಕೈಪಿಡಿಯಾದರೂ ಸಮಾಜದ ವಿವಿಧ ವರ್ಗಗಳ ಜನರನ್ನು ಸೆಳೆದಿದೆ. ನಾಟಕ ರೂಪದಲ್ಲಿ ಮೂಡಿಬಂದಿದೆ. ಜೊತೆಗೆ ಒಂದಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದೆ.

ಕೃತಿಕಾರರಾದ ನ್ಯಾ, ನಾಗಮೋಹನ್‌ ದಾಸ್‌ ನಾಡಿನ ಸಾಕ್ಷಿಪ್ರಜ್ಞೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ಅಖಿಲ ಭಾರತ ವಕೀಲರ ಸಂಘಟನೆ, ಯಂಗ್‌ ಅಡ್ವೊಕೇಟ್ಸ್ ಫೋರಂ ಮತ್ತು ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯಲ್ಲಿ ಸದಸ್ಯರಾಗಿ, ಕಾರ್ಯದರ್ಶಿಯಾಗಿ ಅವರದು ಸಕ್ರಿಯ ಪಾತ್ರ. ಎರಡೂವರೆ ದಶಕಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ ಬಳಿಕ 2004ರ ಅಕ್ಟೋಬರ್‌ನಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡರು. 2014ರಿಂದ ದೆಹಲಿಯಲ್ಲಿ ಸುಪ್ರೀಂಕೋರ್ಟ್‌ನ ಹಿರಿಯ ವಕೀಲರಾಗಿ ನೇಮಕಗೊಂಡರು. ರಾಜ್ಯ ಸರ್ಕಾರದ ಹಲವು ಆಯೋಗಗಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಕೀರ್ತಿ ಅವರದ್ದು. ʼಸಮಾಜವಾದʼ, ʼಕರ್ನಾಟಕದಲ್ಲಿ ನ್ಯಾಯಾಂಗʼ, ʼಅಸ್ಪೃಶ್ಯತೆ, ಸಮಾಜ ಮತ್ತು ಕಾನೂನುʼ, ʼಅರಿವು ಬೆಳಕುʼ, ʼಮಹಿಳಾ ಅಸಮಾನತೆʼ, ʼಚಾಲೆಂಜಸ್‌ ಅಂಡ್‌ ಪ್ರಾಬ್ಲಮ್ಸ್‌ ಬಿಫೋರ್‌ ಯಂಗ್‌ ಲಾಯರ್ಸ್‌ʼ, ʼಚಾಲೆಂಜಸ್‌ ಟು ದ ಕಾನ್‌ಸ್ಟಿಟ್ಯೂಷನ್‌ʼ, ʼಜಾಗತಿಕ ಧುರೀಣ ಡಾ. ಅಂಬೇಡ್ಕರ್‌ʼ, ʼಡಾ. ಅಂಬೇಡ್ಕರ್‌ ಮತ್ತು ಕಾರ್ಮಿಕ ಕಾನೂನುʼ, ʼಮಾಧ್ಯಮ ದಿಕ್ಕು ಎತ್ತʼ ಇವು ಅವರ ಪ್ರಮುಖ ಕೃತಿಗಳು. ʼಸಂವಿಧಾನ ಓದುʼ ಕೃತಿ ಐವತ್ತನೇ ಮುದ್ರಣ ಕಂಡಿರುವ ಸಂದರ್ಭದಲ್ಲಿ ʼಬಾರ್‌ ಅಂಡ್‌ ಬೆಂಚ್‌ʼ ನ್ಯಾ. ದಾಸ್‌ ಅವರನ್ನು ಸಂದರ್ಶಿಸಿದೆ. ಕೃತಿಯ ಕುರಿತು, ಅದರಲ್ಲಿಯೂ ಮುಖ್ಯವಾಗಿ ಸಂವಿಧಾನದ ಆಶೋತ್ತರಗಳ ಕುರಿತು ಅವರು ಅನೇಕ ಹೊಳಹುಗಳನ್ನು ಓದುಗರಿಗೆ ನೀಡಿದ್ದಾರೆ.

Q

ವಿದ್ಯಾರ್ಥಿ ಯುವಜನರಿಗಾಗಿಯೇ ʼಸಂವಿಧಾನ ಓದುʼ ಕೈಪಿಡಿ ಬರೆದ ಉದ್ದೇಶ ಏನು?

A

ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್‌, ವಾಣಿಜ್ಯ ಶಿಕ್ಷಣಕ್ಕೆ ಒದಗಿಸಿದ ಮಹತ್ವವನ್ನು ಕಾನೂನು ಶಿಕ್ಷಣಕ್ಕೆ ನೀಡಲಿಲ್ಲ. ಅದರಲ್ಲಿಯೂ ಬಹುಮುಖ್ಯವಾಗಿ ಸಂವಿಧಾನವನ್ನು ಸಾಮಾನ್ಯ ಜನರಿಗೆ ಹೇಳಿಕೊಡುವ ಕಾರ್ಯವನ್ನು ಸರ್ಕಾರವೂ ಮಾಡಲಿಲ್ಲ. ಜನರೂ ಆ ಬಗ್ಗೆ ಸ್ವಇಚ್ಛೆ ತೋರಲಿಲ್ಲ. ಹದಿನೈದು ಇಪ್ಪತ್ತು ವರ್ಷಗಳ ಬಳಿಕ ಕಾಲೇಜು ಶಿಕ್ಷಣದಲ್ಲಿ ಅಂಕಗಳು ಇರದ ಐಚ್ಛಿಕ ಪಠ್ಯವಾಗಿ ಸಂವಿಧಾನವನ್ನು ಪರಿಚಯಿಸಲಾಯಿತು. ನಂತರ ಅಂಕಗಳನ್ನು ನೀಡಲು ಆರಂಭಿಸಿದರೂ ವಸ್ತುನಿಷ್ಢ ಮಾದರಿಯ ಪ್ರಶ್ನೋತರಗಳಿಗೆ ವಿಷಯವನ್ನು ಸೀಮಿತಗೊಳಿಸಲಾಗಿತ್ತು. ತರಬೇತು ಪಡೆದ ಶಿಕ್ಷಕರು ಸಂವಿಧಾನವನ್ನು ಬೋಧಿಸುತ್ತಿರಲಿಲ್ಲ. ಫಿಸಿಕ್ಸ್‌, ಬಾಟನಿ ಪಾಠ ಮಾಡುತ್ತಿದ್ದವರು ಕೂಡ ಸಂವಿಧಾನ ಹೇಳಿಕೊಡುತ್ತಿದ್ದರು. ಈಗಲೂ ಸಂವಿಧಾನದ ಬಗ್ಗೆ ಶೈಕ್ಷಣಿಕವಾಗಿ ತಿಳಿಸುವ ಯತ್ನ ಚೇತೋಹಾರಿಯಾಗಿಲ್ಲ. ಆ ನಿಟ್ಟಿನಲ್ಲಿ ಯುವಜನರಿಗೆ, ವಿದ್ಯಾರ್ಥಿಗಳಿಗೆ ವಿಶ್ವವೇ ಕೊಂಡಾಡುವ ಭಾರತದ ಸಂವಿಧಾನದ ಆಶಯಗಳನ್ನು ಪರಿಚಯಿಸಲು ನಿರ್ಧರಿಸಿ ಕೃತಿ ಹೊರತಂದಿದ್ದೇನೆ.

Q

ಕೃತಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿದೆ. ಇಷ್ಟು ಜನಪ್ರಿಯತೆಗೆ ಕಾರಣವಾದ ಅಂಶಗಳು ಯಾವುವು?

A

ಭಾರತವನ್ನು ಅರ್ಥ ಮಾಡಿಕೊಂಡರಷ್ಟೇ ಭಾರತದ ಸಂವಿಧಾನವನ್ನು ಅರ್ಥಮಾಡಿಕೊಳ್ಳಬಹುದು ಎಂಬ ಸೂಕ್ಷ್ಮತೆಯನ್ನು ನಾನು ಪುಸ್ತಕದಲ್ಲಿ ಹೇಳಿದ್ದೇನೆ. ಅಷ್ಟೇ ಅಲ್ಲದೆ ಮನುಕುಲದ ಸಾಮಾಜಿಕ ವಿಕಾಸದ ಕತೆ ಅದರಲ್ಲಿದೆ. ಆದಿಕಾಲದ ಸಮುದಾಯ, ಗುಲಾಮಗಿರಿ, ಸಾಮಂತಶಾಹಿ, ಬಂಡವಾಳಶಾಹಿ ಸಮಾಜವಾದಿ ಸಮಾಜಗಳನ್ನು ಅರ್ಥ ಮಾಡಿಕೊಳ್ಳದೇ ಪ್ರಜಾಪ್ರಭುತ್ವದ ಸಮಾಜ ಅರ್ಥವಾಗುವುದಿಲ್ಲ. ಉದಾಹರಣೆಗೆ ಜಾತಿ, ಧರ್ಮಗಳು ಅರ್ಥವಾಗದೇ ಸಾಮಾಜಿಕ ನ್ಯಾಯ ಅರ್ಥವಾಗುವುದಿಲ್ಲ. ಬಹುತ್ವ, ಉಪಸಂಸ್ಕೃತಿಗಳನ್ನುಅರ್ಥ ಮಾಡಿಕೊಳ್ಳದೇ ಬಹುತ್ವದ ರಕ್ಷಣೆಯ ಮಹತ್ವ ಅರ್ಥವಾಗುವುದಿಲ್ಲ. ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಸಂವಿಧಾನ ಎದುರಿಸುತ್ತಿರುವ ಸವಾಲುಗಳಿಗೆ ಅದನ್ನು ಸರಿಯಾಗಿ ಅನುಷ್ಠಾನಗೊಳಿಸದಿರುವುದು ಕೂಡ ಒಂದು ಕಾರಣ.

ಈ ದೇಶದ ಹಾಲಿ ರಾಷ್ಟಪತಿ ದಲಿತ ಸಮುದಾಯದಿಂದ ಬಂದವರು. ಪ್ರಧಾನಿ ಶೂದ್ರ ಸಮುದಾಯಕ್ಕೆ ಸೇರಿದವರು. ಮಧ್ಯಮ ವರ್ಗದ ರೈತ ಕುಟುಂಬದಿಂದ ಬಂದ ನಾನು ಇಪ್ಪತ್ತೈದು ವರ್ಷ ವಕೀಲನಾಗಿ ನಂತರದ ಹತ್ತು ವರ್ಷಗಳ ಕಾಲ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದೆ. ಸುಪ್ರೀಂಕೋರ್ಟ್‌ನ ಡೆಸಿಗ್ನೇಟೆಡ್‌ ಸೀನಿಯರ್‌ ಕೌನ್ಸೆಲರ್‌ ಆಗಿ ಸೇವೆ ಸಲ್ಲಿಸಿದ್ದೇನೆ. ಇಷ್ಟಕ್ಕೆಲ್ಲಾ ಕಾರಣ ಸಂವಿಧಾನ. ಇಲ್ಲದಿದ್ದರೆ ರೈತರ ಮಗನಾಗಿದ್ದ ನಾನು ರೈತನಾಗಿಯೇ ಉಳಿಯಬೇಕಿತ್ತು. ಇಂತಹ ಅಂಶವನ್ನು ಪರಿಣಾಮಕಾರಿಯಾಗಿ ವಿವರಿಸಿದ್ದರಿಂದ ಕೃತಿಗೆ ಈ ಮಟ್ಟಿನ ಜನಪ್ರಿಯತೆ ದೊರೆತಿರಬಹುದು.

Q

ವಿದ್ಯಾರ್ಥಿ ಯುವಜನರಿಗಾಗಿ ಕೈಪಿಡಿ ರಚಿಸಲಾಗಿದ್ದರೂ ಅದು ಸಮಾಜದ ನಾನಾ ವಲಯಗಳನ್ನು ಆಕರ್ಷಿಸಿದ್ದು ಹೇಗೆ?

A

ಚಾಮರಾಜನಗರದ ದಲಿತ ಯುವಕ, ಮಂಡ್ಯದ ಮುಸ್ಲಿಂ ಯುವಕರೊಬ್ಬರು ತಮ್ಮ ಮದುವೆಯ ದಿನ ಈ ಕೃತಿಯನ್ನು ಕೊಂಡು ಹಂಚಿದ್ದಾರೆ. ಅನೇಕ ಹುಟ್ಟುಹಬ್ಬ, ಗೃಹಪ್ರವೇಶದ ಸಂದರ್ಭಗಳಲ್ಲಿ ಪುಸ್ತಕದ ವಿತರಣೆ ನಡೆದಿದೆ. ಕೋಲಾರ ಬಳಿಯ ನಿವೃತ್ತ ಅಧಿಕಾರಿಯೊಬ್ಬರು ತಮ್ಮ ತೋಟದ ಮನೆಯಲ್ಲಿ ಅಂಬೇಡ್ಕರ್‌ ಜಯಂತಿ ಏರ್ಪಡಿಸಿ ನೂರೈವತ್ತು ಜನರಿಗೆ ಪುಸ್ತಕಗಳನ್ನು ಹಂಚಿದ್ದಾರೆ. ಶಾಲಾ ಕಾಲೇಜುಗಳು ಸಂಘ ಸಂಸ್ಥೆಗಳು ಅಂತಹ ಕೆಲಸ ಮಾಡುವುದು ಸಾಮಾನ್ಯ. ಆದರೆ ವೈಯಕ್ತಿಕ ನೆಲೆಯಲ್ಲಿ ನಡೆದ ಪುಸ್ತಕ ವಿತರಣೆ ಕೆಲಸಗಳು ಖುಷಿ ನೀಡಿದವು. ಪುಸ್ತಕ ನಿರಂತರವಾಗಿ ಪ್ರಕಟವಾಗುತ್ತಲೇ ಇದೆ. ಇದರಿಂದ ಸಂವಿಧಾನದ ಬಗ್ಗೆ ತಿಳಿಯುವ ಹಸಿವು ಜನರಿಗೆ ಇದೆ ಎಂಬುದು ಗೊತ್ತಾಗುತ್ತದೆ. ಕೊರೊನಾ ಆವರಿಸಿಕೊಳ್ಳುವ ಮೊದಲು ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿಯೂ ಸಂಚರಿಸಿ ಉಪನ್ಯಾಸಗಳನ್ನು ನೀಡಿದ್ದೇನೆ. ಕೊರೊನಾ ಅವಧಿಯಲ್ಲಿ ಆನ್‌ಲೈನ್‌ ಮೂಲಕ ಸಂವಿಧಾನದ ಮಹತ್ವ ವಿವರಿಸಿದ್ದೇನೆ.

ರೈತಾಪಿ ಸಮುದಾಯಕ್ಕೆ ಸಂವಿಧಾನದ ಆಶಯಗಳನ್ನು ತಲುಪಿಸುವ ಉದ್ದೇಶದಿಂದ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಂಗಪ್ರಯೋಗಗಳನ್ನು ನಡೆಸಲಾಗಿದೆ. ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯದ ಅಪ್ಪಗೆರೆ ಸೋಮಶೇಖರ್‌ ಜಿಲ್ಲಾ ರಂಗಾಯಣದ ಸಹಯೋಗದಲ್ಲಿ ನಾಟಕ ಪ್ರದರ್ಶಿಸಿದ್ದಾರೆ. ಧಾರವಾಡದಲ್ಲೂ ನಾಟಕ ಪ್ರದರ್ಶನ ಮಾಡಲಾಗಿದೆ. ಸಮುದಾಯದ ಅಚ್ಯುತ ಮತ್ತು ಜೆ ಜೆ ನಾಗರಾಜ್‌ ಅವರು ನಾಟಕ ಪ್ರದರ್ಶನ ಏರ್ಪಡಿಸಿದ್ದಾರೆ.

ತಮ್ಮ ಮದುವೆ ಸಮಾರಂಭದಲ್ಲಿ ಚಿತ್ರನಟ  ಚೇತನ್‌ ಕುಮಾರ್‌ ಅಹಿಂಸಾ ಮತ್ತು ಮೇಘಾ ದಂಪತಿ ತಾರಾ ನಟ ಪುನೀತ್‌ ರಾಜಕುಮಾರ್‌ ಅವರಿಗೆ ಕೃತಿಯನ್ನು ಕಾಣಿಕೆಯಾಗಿ ನೀಡಿದ್ದು.
ತಮ್ಮ ಮದುವೆ ಸಮಾರಂಭದಲ್ಲಿ ಚಿತ್ರನಟ ಚೇತನ್‌ ಕುಮಾರ್‌ ಅಹಿಂಸಾ ಮತ್ತು ಮೇಘಾ ದಂಪತಿ ತಾರಾ ನಟ ಪುನೀತ್‌ ರಾಜಕುಮಾರ್‌ ಅವರಿಗೆ ಕೃತಿಯನ್ನು ಕಾಣಿಕೆಯಾಗಿ ನೀಡಿದ್ದು.Facebook
Q

ಕೈಪಿಡಿಯನ್ನು ಆಧರಿಸಿ ರಾಜ್ಯಾದ್ಯಂತ ʼಸಂವಿಧಾನ ಓದು ಅಭಿಯಾನʼ ನಡೆಯಿತು. ಅದರ ಅನುಭವಗಳನ್ನು ಹಂಚಿಕೊಳ್ಳಬಹುದೇ?

A

2018ರ ಆಗಸ್ಟ್‌ 25ರಂದು ಕೃತಿ ಮೊದಲು ಲೋಕಾರ್ಪಣೆಗೊಂಡಿತು. 150 ಜನರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಸೇರಿದ್ದು 500ಕ್ಕೂ ಹೆಚ್ಚು ಮಂದಿ. ತುಂಬಾ ಆಸಕ್ತಿ ಇದು. ಆಗ ದೆಹಲಿಯಲ್ಲಿ ನಾನು ಕಾರ್ಯ ನಿರ್ವಹಿಸುತ್ತಿದ್ದೆ. ಮುಂದಿನ ಮೂರು ತಿಂಗಳು ಪುಸ್ತಕದ ಪ್ರಕಾಶಕರಾದ ʼಸಹಯಾನʼದ ವಿಠ್ಠಲ ಭಂಡಾರಿ, ಸಮುದಾಯದ ಅಚ್ಯುತ ಹಾಗೂ ಜನವಾದಿ ಮಹಿಳಾ ಸಂಘಟನೆಯ ಕೆ ಎಸ್‌ ವಿಮಲಾ ಪುಸ್ತಕವನ್ನು ಪ್ರಚುರಪಡಿಸಿದರು. ಆದರೆ ಯಾವ ಕಾರ್ಯಕ್ರಮದಲ್ಲಿ ನೋಡಿದರೂ ನಾನು ಇರಬೇಕೆಂಬ ಬೇಡಿಕೆ ಬರುತ್ತಿತ್ತು. ಹಾಗೆಂದೇ ದೆಹಲಿ ತೊರೆದು ಬಂದೆ. 300ರಿಂದ 400 ಕಾರ್ಯಕ್ರಮಗಳಲ್ಲಿ ಖುದ್ದಾಗಿ ಭಾಗವಹಿಸಿದೆ. ಸಭಿಕರು ಅದ್ಭುತವಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಕಡೆಗೆ ಕೈಪಿಡಿಗೆ ಪೂರಕವಾಗಿ ʼಸಂವಿಧಾನ ಓದು 25 ಪ್ರಶ್ನೆ ಉತ್ತರ ಎಂಬ ಮತ್ತೊಂದು ಹೊತ್ತಗೆಯನ್ನು ಹೊರತಂದೆವು.

ಕೆಲ ಕಾರ್ಯಕ್ರಮಗಳಿಗೆ ಸರ್ಕಾರ, ಖಾಸಗಿ ಸಂಸ್ಥೆಗಳನ್ನು ಕೇಳಿಕೊಳ್ಳಲಾಗಿದ್ದರೂ ಪ್ರಾಯೋಜಕತ್ವ ದೊರೆತಿರಲಿಲ್ಲ. ಆಗ ಶಿಕ್ಷಕರು ವಿದ್ಯಾರ್ಥಿಗಳೇ ಹಣ ಹಾಕಿ ಕಾರ್ಯಕ್ರಮ ನಡೆಸಿದರು. ಕೆಲವು ಜಿಲ್ಲೆಗಳಲ್ಲಿ ಹತ್ತು ಕಾರ್ಯಕ್ರಮಗಳನ್ನು ನಡೆಸಿದ ಉದಾಹರಣೆಗಳಿವೆ. ಕಾರ್ಯಕ್ರಮದಲ್ಲಿ ಸರತಿ ಸಾಲಿನಲ್ಲಿ ನಿಂತು ಪ್ರಶ್ನೆಗಳನ್ನು ಕೇಳಿ ತಮ್ಮ ಅನುಮಾನಗಳನ್ನು ಪರಿಹರಿಸಿಕೊಂಡಿದ್ದಾರೆ. ಪತ್ರಕರ್ತರೊಬ್ಬರು “ಲೇಖಕರನ್ನು ಹಿಂದಿಟ್ಟುಕೊಂಡು ನಡೆಸಿದ ಪುಸ್ತಕ ಚಳವಳಿ ಇದು” ಎಂದು ಬಣ್ಣಿಸಿದ್ದಾರೆ. “ಚಳವಳಿಗಳು ಇಲ್ಲವಾದಾಗ ಇದೊಂದು ಆಂದೋಲನವಾಗಿ ಭಿನ್ನಾಭಿಪ್ರಾಯವಿದ್ದವರನ್ನು ಒಗ್ಗೂಡಿಸುತ್ತಿದೆ” ಎಂದು ಹಾಸನದ ದಲಿತ ಸಂಘಟನೆಯೊಂದು ಹೇಳಿಕೊಂಡಿದೆ. ಕನ್ನಡ ಸಾಹಿತ್ಯ ಪರಿಷತ್‌ ಕೂಡ ಪುಸ್ತಕವನ್ನು ಮುದ್ರಿಸಿದೆ. ಚಾಮಾರಾಜನಗರದ ಸಂಸದರಾದ ಶ್ರೀನಿವಾಸ್‌ ಪ್ರಸಾದ್‌ ಅವರು ಸಂಸದರ ನಿಧಿಯಿಂದ ಹಣ ವಿನಿಯೋಗಿಸಿ ಪಿಯು ವಿದ್ಯಾರ್ಥಿಗಳಿಗೆ ಪುಸ್ತಕ ಹಂಚಿದ್ದಾರೆ. ಇದೆಲ್ಲಾ ಒಂದು ರೀತಿಯಲ್ಲಿ ಆಶಾದಾಯಕ ಬೆಳವಣಿಗೆಗಳು. ನಾನು ನನ್ನ ಸೇವಾವಧಿಯಲ್ಲಿ ಗಳಿಸಲಾಗದಷ್ಟು ವಿಶಿಷ್ಟ ಅನುಭವಗಳನ್ನು, ಜನಪ್ರೀತಿಯನ್ನು ಈ ಕೃತಿಯೊಂದರಿಂದ ಪಡೆದಿದ್ದೇನೆ.

Q

ಸಂವಿಧಾನವನ್ನು ಸುಟ್ಟು ಹಾಕುವ ಯತ್ನಗಳು ಈ ಹಿಂದೆ ನಡೆದಿದ್ದವು. ಅದರ ಬಗ್ಗೆ ಏನು ಹೇಳುತ್ತೀರಿ?

A

ಯಾವುದೇ ಪುಸ್ತಕವನ್ನು ಓದದೆ, ಅದರ ಬಗ್ಗೆ ಚರ್ಚಿಸದೆ, ಸುಟ್ಟು ಹಾಕುವುದು ಅನಾಗರಿಕತೆ ಎಂದು ನಾನು ಭಾವಿಸುತ್ತೇನೆ. ಭಿನ್ನಾಭಿಪ್ರಾಯ ವ್ಯಕ್ತಪಡಿಸುವ, ಚರ್ಚೆ ಮಾಡುವ, ವಿಮರ್ಶಿಸುವ ಅಧಿಕಾರ ಪ್ರಜಾಪ್ರಭುತ್ವದಲ್ಲಿ ಇದೆ. ಮತ್ತೊಂದು ವಿಷಯ ಎಂದರೆ ಸಂವಿಧಾನವನ್ನು ಸುಟ್ಟು ಹಾಕುವುದು ಅಥವಾ ಅದಕ್ಕೆ ಅಪಮಾನ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಕಾಯಿದೆಯೊಂದು ಹೇಳುತ್ತದೆ.

ಅದಕ್ಕಿಂತಲೂ ಭಿನ್ನವಾದ ಇನ್ನೊಂದು ವಿಷಯ ಇದೆ. ಅದು ಸಂವಿಧಾನದ ಹೆಸರಿನಲ್ಲಿ ಅಧಿಕಾರ ಸ್ವೀಕರಿಸಿ, ಅದೇ ಸಂವಿಧಾನವನ್ನು ಬದಲಿಸಲು ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳಿಕೊಳ್ಳುವುದು. ಇದರ ಬಗ್ಗೆ ನಾವು ಆಲೋಚಿಸಬೇಕು. ನಾನು ಕೂಡ ವಿದ್ಯಾರ್ಥಿಯಾಗಿದ್ದಾಗ ಸಂವಿಧಾನವನ್ನು ಟೀಕಿಸಿದ್ದೆ ವಿಮರ್ಶಿಸಿದ್ದೆ. ಆದರೆ ಕಾರಣಗಳು ಬೇರೆ ಇದ್ದವು. ಶಿಕ್ಷಣದ ಹಕ್ಕು, ಉದ್ಯೋಗದ ಹಕ್ಕು, ಆರೋಗ್ಯದ ಹಕ್ಕನ್ನು ಸಂವಿಧಾನದಲ್ಲಿ ಮೂಲಭೂತ ಹಕ್ಕಾಗಿ ಅಳವಡಿಸಿಲ್ಲ ಎಂಬುದು ನನ್ನ ಅಸಮಾಧಾನಕ್ಕೆ ಕಾರಣವಾದ ವಿಚಾರವಾಗಿತ್ತು. ಸಂವಿಧಾನವನ್ನು ಉತ್ತಮ ಪಡಿಸಬೇಕು ಎಂಬ ನಿಟ್ಟಿನಲ್ಲಿ ವಿಮರ್ಶೆ ಚರ್ಚೆಗಳು ನಡೆದರೆ ಒಳಿತು. ಬದಲಿಗೆ ಸಂವಿಧಾನ, ಗಾಂಧೀಜಿ. ಅಂಬೇಡ್ಕರ್‌ ಅವರನ್ನು ಗೌರವಿಸುತ್ತಲೇ ಹಿಂದಿನಿಂದ ಅವರ ಆಶಯಗಳಿಗೆ ಚೂರಿ ಹಾಕುವುದು ಸರಿಯಲ್ಲ.

ಚಾಮರಾಜನಗರದಲ್ಲಿ ಕಳೆದ ಮಾರ್ಚ್‌ನಲ್ಲಿ ನಡೆದ ಪುಸ್ತಕ ವಿತರಣೆ ಸಮಾರಂಭದಲ್ಲಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌, ಸಚಿವರಾದ ಸುರೇಶ್‌ ಕುಮಾರ್‌. ಎಸ್‌ ಟಿ ಸೋಮಶೇಖರ್‌ ಮತ್ತಿತರರು ಭಾಗವಹಿಸಿದ್ದರು.
ಚಾಮರಾಜನಗರದಲ್ಲಿ ಕಳೆದ ಮಾರ್ಚ್‌ನಲ್ಲಿ ನಡೆದ ಪುಸ್ತಕ ವಿತರಣೆ ಸಮಾರಂಭದಲ್ಲಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌, ಸಚಿವರಾದ ಸುರೇಶ್‌ ಕುಮಾರ್‌. ಎಸ್‌ ಟಿ ಸೋಮಶೇಖರ್‌ ಮತ್ತಿತರರು ಭಾಗವಹಿಸಿದ್ದರು.Facebook
Q

ಇತ್ತೀಚೆಗೆ ಕೃತಿಯ ಕುರಿತು ವಿವಾದವೊಂದು ಎದ್ದಿತು. ʼಕೈಪಿಡಿಯಲ್ಲಿ ತುರ್ತು ಪರಿಸ್ಥಿತಿಯ ವಿಚಾರಗಳನ್ನು ಹೇಳಿಲ್ಲʼ, ಇಂತಹ ಕೃತಿಗಳು ʼಯಾವುದೋ ಸಿದ್ಧಾಂತವನ್ನು ತಿಳಿಸುವ ವಿಧಾನವಾಗಬಾರದುʼ ಎಂಬ ಮಾತುಗಳನ್ನು ರಾಜ್ಯದ ಸಚಿವರೊಬ್ಬರು ಹೇಳಿದರು. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

A

ನೋಡಿ, ನಾನು ತುರ್ತುಪರಿಸ್ಥಿತಿಯನ್ನು ವಿವರಿಸುತ್ತಾ ಹೋದರೆ ʼಅಘೋಷಿತ ತುರ್ತು ಪರಿಸ್ಥಿತಿʼ ಬಗ್ಗೆಯೂ ವಿವರಿಸಬೇಕಾಗುತ್ತದೆ. ಭಯೋತ್ಪಾದನೆ, ಮೂಲಭೂತವಾದ, ಕೋಮುವಾದ, ಜಾತಿಯತೆ, ಇವೆಲ್ಲವನ್ನೂ ಕೃತಿಯಲ್ಲಿ ಹೇಳಬೇಕಾಗುತ್ತದೆ. ಇದನ್ನೆಲ್ಲಾ ಹೇಳುತ್ತ ತುರ್ತು ಪರಿಸ್ಥಿತಿಯನ್ನು ವಿವರಿಸಲು ಯಾವುದೇ ಸಮಸ್ಯೆ ಇಲ್ಲ. ಆದರೆ ಸಂವಿಧಾನವನ್ನು, ಅದರ ಆಶಯಗಳನ್ನು ಪರಿಚಯಿಸುವುದು ನನ್ನ ಉದ್ದೇಶವಾಗಿತ್ತು.

ಅದರ ಜೊತೆಗೆ ಕೇಳಿಬಂದ ಇನ್ನೊಂದು ಅಪವಾದ ʼಯಾವುದೋ ಸಿದ್ಧಾಂತವನ್ನು ಹೇಳುತ್ತಿದ್ದೀರಿʼ ಎಂಬುದು. ಒಂದನ್ನು ನೆನಪಿಟ್ಟುಕೊಳ್ಳಬೇಕು; ಸಂವಿಧಾನಕ್ಕೊಂದು ಸಿದ್ಧಾಂತ ಇದ್ದೇ ಇದೆ. ಅದು ಪಾಳೇಗಾರಿ ಸಂಸ್ಕೃತಿ, ಕೋಮುವಾದ, ಮೂಲಭೂತವಾದವನ್ನು ಹತ್ತಿಕ್ಕುವ ಮತ್ತು ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಅನ್ಯಧರ್ಮ ಸಹಿಷ್ಣುತೆ, ಬಹುತ್ವವನ್ನು ಎತ್ತಿ ಹಿಡಿಯುತ್ತ ಕಲ್ಯಾಣ ರಾಜ್ಯವನ್ನು ಸ್ಥಾಪಿಸುವ ಜನಪರವಾದ ಜೀವಪರವಾದ ಮಾನವೀಯತೆಯ ಪರವಾದ ಸಿದ್ಧಾಂತವಾಗಿದೆ. ಅಂತಹ ಸಿದ್ಧಾಂತವನ್ನು ಅಂಬೇಡ್ಕರ್‌ ನಮಗೆ ಕೊಟ್ಟಿದ್ದಾರೆ. ಇದು ಸರ್ವರ ಏಳಿಗೆಗಾಗಿ ಇರುವ ಸಿದ್ಧಾಂತ.

Q

ನ್ಯಾಯಿಕ ಸಮುದಾಯಕ್ಕೆ ಸೇರಿದವರು ಕೃತಿ ಕುರಿತು ಹೇಗೆ ಪ್ರತಿಕ್ರಿಯಿಸಿದ್ದಾರೆ?

A

ಅನೇಕ ವಕೀಲರು, ನ್ಯಾಯಾಧೀಶರುಗಳು ಪುಸ್ತಕವನ್ನು ಕೊಂಡು ಓದಿ ಮೆಚ್ಚುಗೆ ಸೂಚಿಸಿದ್ದಾರೆ. ಎಲ್ಲಾ ಕಾನೂನುಗಳ ತಾಯಿ ಸಂವಿಧಾನ. ಪ್ರತಿ ಕಾನೂನು ಸಂವಿಧಾನದಿಂದಲೇ ಜನಿಸಿದೆ. ʼಸಂವಿಧಾನ ಓದುʼ ಕೃತಿ ಸಂವಿಧಾನದ ಇತರೆ ಅನೇಕ ಅಂಶಗಳನ್ನು ಹೆಚ್ಚು ಪ್ರಸ್ತಾಪಿಸಿದೆ. ಸಂವಿಧಾನವನ್ನು ಏಕೆ ಮತ್ತು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬುದನ್ನು ಪ್ರಧಾನವಾಗಿ ಹೇಳುತ್ತದೆ. ಕೃತಿಯಲ್ಲಿ ಸಂವಿಧಾನವನ್ನು ಯಥಾವತ್ತಾಗಿ ತರ್ಜುಮೆ ಮಾಡಿಲ್ಲ. ಇದು ಸಂವಿಧಾನವನ್ನು ಹೇಗೆ ಓದಬೇಕು ಎಂದು ವಿವರಿಸುವ ಮೆಥಡಾಲಜಿ ಅಷ್ಟೇ. ಕಾನೂನು ಓದುವವರಿಗಿಂತಲೂ ಮಿಗಿಲಾಗಿ ಜನಸಾಮಾನ್ಯರಿಗೆ ತಲುಪುವುದು ಮುಖ್ಯ ಎನ್ನುವ ನಿಟ್ಟಿನಲ್ಲಿ ಪುಸ್ತಕ ರೂಪುಗೊಂಡಿದೆ.

ಒಂದು ಕಾಯಿದೆ ಯಾಕೆ ಅಸ್ತಿತ್ವದಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಂಡು ವಾದ ಮಂಡಿಸಿದರೆ ಅಥವಾ ನ್ಯಾಯದಾನ ಮಾಡಿದರೆ ಅದನ್ನು ಎಲ್ಲಿಯೂ ಪ್ರಶ್ನಿಸುವ ಸಂಭವ ಉಂಟಾಗುವುದಿಲ್ಲ. ನಾನು ನ್ಯಾಯಮೂರ್ತಿಯಾಗಿ ಕೆಲಸ ಮಾಡಿದ 9.5 ವರ್ಷಗಳಲ್ಲಿ 40,000 ತೀರ್ಪುಗಳನ್ನು ನೀಡಿದ್ದೇನೆ. ಇದಕ್ಕೆ ಕಾರಣ ಕಾನೂನಿನ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡಿದ್ದು ಮತ್ತು ವಕೀಲರ ಸಹಕಾರ. ಕಾನೂನಿನ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳುವ ʼಸಾಂವಿಧಾನಿಕ ತತ್ವಜ್ಞಾನʼವನ್ನು ಕೃತಿ ಅಲ್ಲಲ್ಲಿ ಪರಿಚಯಿಸಿದೆ.

Q

ಪುಸ್ತಕ ವಿವಿಧ ಭಾಷೆಗಳಿಗೆ ಅನುವಾದವಾಗಿದೆ. ಆ ಭಾಷೆಗಳ ಓದುಗರ ಪ್ರತಿಕ್ರಿಯೆ ಎಂತಹುದು?

A

ಹಿಂದಿ, ಇಂಗ್ಲಿಷ್‌ ಹಾಗೂ ಮಲಯಾಳಂ ಭಾಷೆಗಳಲ್ಲಿ ಕೃತಿ ಸಿದ್ಧವಾಗಿದೆ. ಉತ್ತರ ಕನ್ನಡದ ಆಂಗ್ಲಭಾಷಾ ಪ್ರಾಧ್ಯಾಪಕರಾದ ಎಂ ಜಿ ಹೆಗಡೆ ಅವರು ಕೃತಿಯನ್ನು ಇಂಗ್ಲಿಷ್‌ಗೆ, ಬೆಂಗಳೂರಿನ ಪ್ರಾಧ್ಯಾಪಕಿ ಡಾ. ಉಮಾದೇವಿ ಅವರು ಹಿಂದಿಗೆ ಹಾಗೂ ವೃತ್ತಿಯಿಂದ ಆರ್ಕಿಟೆಕ್ಟ್‌ ಆದ ಬೆಂಗಳೂರಿನಲ್ಲಿ ನೆಲೆಸಿರುವ ಆಚಾರಿ ಅವರು ಮಲಯಾಳಂಗೆ ಅನುವಾದಿಸಿದ್ದಾರೆ. ಇವರಾರೂ ಸಂಭಾವನೆ ನಿರೀಕ್ಷಿಸದೆ ಪ್ರೀತಿ ಮತ್ತು ಉತ್ಸುಕತೆಯಿಂದ ಅನುವಾದ ಮಾಡಿಕೊಟ್ಟಿದ್ದಾರೆ. ಇಂಗ್ಲಿಷ್‌ ಭಾಷೆಯ ಕೃತಿಗಳು ಸಾಕಷ್ಟು ಜನರನ್ನು ತಲುಪಿವೆ. ಕೊರೊನಾ ಅಡ್ಡಿ ಬಂದದ್ದರಿಂದಾಗಿ ಹಿಂದಿ ಮತ್ತು ಮಲಯಾಳಂ ಕೃತಿಗಳನ್ನು ಜನರಿಗೆ ತಲುಪಿಸುವ ಕಾರ್ಯ ಸದ್ಯಕ್ಕೆ ನಿಂತಿದೆ.

Q

ಸಂವಿಧಾನದ ಆಶಯಗಳನ್ನು ಬದುಕಿನ ವಿಧಾನವಾಗಿಸಿಕೊಳ್ಳುವುದು ಹೇಗೆ ? ಅದರ ಪರಿಣಾಮಗಳು ಏನು?

A

ನ್ಯಾಯಾಂಗ ಅಧಿಕಾರಿಗಳಿಗೆ ತರಬೇತಿ ನೀಡಲೆಂದು ಭೋಪಾಲದ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ, ವಿವಿಧ ರಾಜ್ಯಗಳ ನ್ಯಾಯಾಂಗ ಅಕಾಡೆಮಿಗಳು ನನ್ನನ್ನು ಉಪನ್ಯಾಸ ನೀಡಲು ಆಹ್ವಾನಿಸುತ್ತಿರುತ್ತವೆ. ಅಲ್ಲಿ ನಾನು ಹೇಳುವುದು ಇಷ್ಟೇ. ಸಂವಿಧಾನದ ಆಶಯಗಳನ್ನು ಅರ್ಥ ಮಾಡಿಕೊಂಡರೆ ಮಾತ್ರ ನ್ಯಾಯದಾನ ಮಾಡುವಾಗ ಖಚಿತ ನಿಲುವು ತೆಗೆದುಕೊಳ್ಳುವುದು ಸುಲಭವಾಗುತ್ತದೆ ಎಂದು. ಅಮಾನವೀಯವಾದ ಸಂಗತಿಗಳನ್ನು ತೊಡೆದು ಹಾಕಿ, ಶತಮಾನಗಳಿಂದ ಶೋಷಣೆಗೆ ಒಳಗಾಗುತ್ತಿರುವ ಜನರ ಪರವಾಗಿ ನಿಂತರೆ ಸಮಸ್ಯೆ ಉದ್ಭವಿಸುವುದಿಲ್ಲ. ಅಧಿಕೃತವಾಗಿಯೇ ಆಗಲಿ, ವೈಯಕ್ತಿಕವಾಗಿಯೇ ಆಗಲಿ ಸಂವಿಧಾನ ಓದಿಕೊಂಡಿದ್ದರೆ ಅದು ಉಪಯೋಗಕ್ಕೆ ಬರುತ್ತದೆ. ಪ್ರತಿಯೊಂದನ್ನೂ ಪ್ರಜಾಸತ್ತಾತ್ಮಕ ದೃಷ್ಟಿಕೋನದಿಂದ ಗ್ರಹಿಸುವುದನ್ನು ಹೇಳಿಕೊಡುತ್ತದೆ. ಮಾನವೀಯವಾಗಿ ನಡೆದುಕೊಳ್ಳುವುದನ್ನು ಅರುಹುತ್ತದೆ. ನಮ್ಮ ಬದುಕಿನಲ್ಲಿ ಸಂವಿಧಾನದ ಆಶಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿದೆ ಮತ್ತು ಅಳವಡಿಸಿಕೊಳ್ಳಬೇಕು ಕೂಡ.

Kannada Bar & Bench
kannada.barandbench.com