[ಅನುಸಂಧಾನ] ರೆಬೆಲ್ ಸ್ವಭಾವದ ನನಗೆ ವಕೀಲಿಕೆ ಒಗ್ಗುವುದಿಲ್ಲ ಅನ್ನಿಸಿತ್ತು: ʼದಿನಗೂಲಿಗಳ ದಿನಕರʼ ಡಾ. ಕೆ ಎಸ್ ಶರ್ಮ

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರೊಂದಿಗಿನ ಮಾತುಕತೆಯೇ ಈ 'ಅನುಸಂಧಾನ'.
[ಅನುಸಂಧಾನ] ರೆಬೆಲ್ ಸ್ವಭಾವದ ನನಗೆ ವಕೀಲಿಕೆ ಒಗ್ಗುವುದಿಲ್ಲ ಅನ್ನಿಸಿತ್ತು: ʼದಿನಗೂಲಿಗಳ ದಿನಕರʼ ಡಾ. ಕೆ ಎಸ್ ಶರ್ಮ

ಅವರು ಕಾಲೇಜುಗಳಲ್ಲಿ ಪಾಠ ಹೇಳಿಕೊಟ್ಟ ಮಾಸ್ತರು. ಆದರೆ ಅವರ ಬದುಕೇ ಒಂದು ಪಾಠ. ಅವರು ಪಿಎಚ್‌ಡಿ ಅಧ್ಯಯನ ಮಾಡಿದ್ದಾರೆ. ಆದರೆ ಅವರ ಬಗ್ಗೆಯೇ ಸಂಶೋಧನೆಗಳು ನಡೆದಿವೆ. ಮನಸ್ಸು ಮಾಡಿದ್ದರೆ ನೂರಾರು ಕೋಟಿಗಳ ಒಡೆಯನಾಗಬಹುದಿತ್ತು. ಆದರೆ ಹೊರಟದ್ದು ಶ್ರಮಜೀವಿಗಳ ಬದುಕು ಹಸನು ಮಾಡಲು. ರಾಜಕಾರಣಿಯಾಗುವ ಅವಕಾಶಗಳಿದ್ದವು. ಬದಲಿಗೆ ಅನೇಕ ರಾಜಕೀಯ ನಾಯಕರ ಗುರುಗಳಾದರು. ಒಂದೆಡೆ ಕಾರ್ಲ್‌ಮಾರ್ಕ್ಸ್‌ ಚಿಂತನೆ, ಮತ್ತೊಂದೆಡೆ ಬೇಂದ್ರೆಯವರ ಆರಾಧನೆ…

ಅವರು ಡಾ. ಕುವಲಯ ಶ್ಯಾಮ ಶರ್ಮ ಅಥವಾ ಕೆ ಎಸ್‌ ಶರ್ಮ. ಜನಸಮುದಾಯದ ಪಾಲಿನ ʼಶರ್ಮಾಜಿʼ ಅವರದು ಅವಿವಾಹಿತ ಜೀವನ. ವಕೀಲ, ಪ್ರಾಧ್ಯಾಪಕ, ಸಾಹಿತಿ, ಪ್ರಕಾಶಕ, ಪತ್ರಕರ್ತ, ಸಂಘಟಕ, ಹಲವು ಸಂಸ್ಥೆಗಳ ಸೃಷ್ಟಿಕರ್ತ, ಹೋರಾಟಗಾರ… ಹೀಗೆ ಅವರು ಹಬ್ಬಿನಿಂತ ಬಗೆ ವಿಸ್ಮಯ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸುಮಾರು ನಲವತ್ತು ಕೃತಿಗಳನ್ನು ಶರ್ಮ ಅವರು ರಚಿಸಿದ್ದಾರೆ. ಬೇಂದ್ರೆ ಸಾಹಿತ್ಯ ಪರಿಚಾರಿಕೆಯಲ್ಲಿ ತೊಡಗಿರುವ ಶರ್ಮ ಅವರಿಗೆ ಸೋವಿಯತ್‌ ಲ್ಯಾಂಡ್‌ ನೆಹರೂ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. ರೈತ ಆಂದೋಲನದ ನಂತರ ನಾಡಿನಲ್ಲಿ ನಡೆದ ಅತಿ ದೀರ್ಘಾವಧಿಯ ಹೋರಾಟ ದಿನಗೂಲಿ ನೌಕರರದ್ದು. ಆ ಚಳವಳಿಯ ದಿಕ್ಕು ದೆಸೆ ರೂಪಿಸಿ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದವರು ಶರ್ಮ. ಪ್ರಸ್ತುತ ಅವರ ಕನಸೆಲ್ಲಾ ಗುತ್ತಿಗೆ ನೌಕರರ ಕಣ್ಣೊರೆಸುವತ್ತ. ಎಂಬತ್ತೇಳು ವರ್ಷದ ಈ ಸ್ಫೂರ್ತಿಯ ಚಿಲುಮೆ ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಮಾತಿಗಿಳಿದಾಗ…

ಹೋರಾಟಗಾರರೊಂದಿಗೆ ಪ್ರೊ. ಶರ್ಮ
ಹೋರಾಟಗಾರರೊಂದಿಗೆ ಪ್ರೊ. ಶರ್ಮ
Q

ವಿದ್ಯಾರ್ಥಿ ಜೀವನದಲ್ಲಿ ಕಾನೂನು ಶಿಕ್ಷಣದ ಅಧ್ಯಯನ ಮಾಡಬೇಕು ಎಂದು ನಿಮಗೆ ಅನಿಸಲು ಕಾರಣವೇನು?

A

ನಮ್ಮ ತಂದೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದವರು. ರಾಜಾಜಿ (ಚಕ್ರವರ್ತಿ ರಾಜಗೋಪಾಲಾಚಾರ್) ಅವರೊಟ್ಟಿಗೆ ಕೆಲಸ ಮಾಡುತ್ತಿದ್ದರು. ಅವರದೊಂದು ಪ್ರಿಂಟಿಂಗ್‌ ಪ್ರೆಸ್‌ ಇತ್ತು. ಸ್ವಾತಂತ್ರ್ಯ ಹೋರಾಟಗಾರರೆಲ್ಲರ ಪುಸ್ತಕಗಳು ನಮ್ಮ ಮನೆಯಲ್ಲಿರುತ್ತಿದ್ದವು. ನನ್ನ ಆರಂಭಿಕ ವ್ಯಾಸಂಗ ನಡೆದದ್ದು ಬೆಂಗಳೂರಿನ ಕಂಟೋನ್ಮೆಂಟ್‌ ಪ್ರದೇಶದ ರಾಗಿ ಮಂಡಿ ಶಾಲೆಯಲ್ಲಿ. 1944- 45ರ ಆಸುಪಾಸು. ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಮೆರವಣಿಗೆಗಳು ನನ್ನ ಶಾಲೆಯ ಮುಂದೆ ಸಾಗುತ್ತಿದ್ದೆವು. ಆಗ ಆ ಶಾಲೆಯ ದೊಡ್ಡ ಗೇಟ್‌ ಹಾರಿ ನಾನು ಜಾಥಾಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಇಂತಹ ಹಿನ್ನೆಲೆ ನನ್ನನ್ನು ಕಾನೂನು ಅಧ್ಯಯನ ಮಾಡಬೇಕೆಂಬ ಆಸೆಗೆ ಹಚ್ಚಿತ್ತು.

ನ್ಯಾಷನಲ್‌ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡಿದೆ. ಡಾ. ಎಚ್ ನರಸಿಂಹಯ್ಯನವರು ಆಗ ಕಾಲೇಜಿನ ಮುಖ್ಯಸ್ಥರು. ಆಗಲೂ ವಿದ್ಯಾರ್ಥಿ ಚಳವಳಿಗಳಲ್ಲಿ ಸಕ್ರಿಯನಾಗಿದ್ದೆ. ಕಾಲೇಜಿನ ಮ್ಯಾನೇಜ್‌ಮೆಂಟ್‌ ವಿರುದ್ಧ ಗುದ್ದಾಡುತ್ತಿದ್ದೆ. ಎಚ್ಚೆನ್‌ ಕರೆಸಿ ʼಏನಯ್ಯಾ ಮ್ಯಾನೇಜ್‌ಮೆಂಟ್‌ ವಿರುದ್ಧ ಹೋಗ್ತೀಯಲ್ಲಯ್ಯʼ ಅನ್ನುತ್ತಿದ್ದರು. ʼಇಲ್ಲ ವಿದ್ಯಾರ್ಥಿಗಳ ಕುಂದುಕೊರತೆ ಹೇಳಿಕೊಳ್ಳೋದು ನಮ್ಮ ಕರ್ತವ್ಯʼ ಎನ್ನುತ್ತಿದ್ದೆ. ಎಚ್ಚೆನ್‌ಗೆ ನಮ್ಮ ಬಗ್ಗೆ ಸಹಾನುಭೂತಿ ಇತ್ತು.

ಅಷ್ಟರಲ್ಲಿ ಧಾರವಾಡದ ಎಲ್‌ಐಸಿ ಕಚೇರಿಯಲ್ಲಿ ನನಗೆ ಆಫೀಸ್‌ ಅಸಿಸ್ಟೆಂಟ್‌ ಆಗಿ ಕೆಲಸ ಸಿಕ್ಕಿತು. ಧಾರವಾಡದಲ್ಲಿ ಕಾನೂನು ಕಾಲೇಜು ಇದೆಯೇ ಎಂದು ಮೊದಲೇ ವಿಚಾರಿಸಿದ್ದೆ. ಇದೆ ಎಂಬ ಉತ್ತರ ಬಂದದ್ದರಿಂದ ಕೆಲಸಕ್ಕೆ ಸೇರಿಕೊಂಡೆ. ಅದು ಬೆಳಗಿನ ಕಾಲೇಜಾದ್ದರಿಂದ ವ್ಯಾಸಂಗಕ್ಕೆ ಮತ್ತು ಕೆಲಸಕ್ಕೆ ಅಡ್ಡಿಯಾಗುತ್ತಿರಲಿಲ್ಲ. ಆದರೆ ನಾನು ಕೆಲಸಕ್ಕೆ ಸೇರಿದ ಕಚೇರಿಯ ವಾತಾವರಣ ಭಯಾನಕವಾಗಿತ್ತು. ಎಲ್‌ಐಸಿ ಸಾರ್ವಜನಿಕ ವಲಯದ ಸಂಸ್ಥೆಯಾಗಿದ್ದರೂ ರಾತ್ರಿ ಹನ್ನೆರಡು ಗಂಟೆಯವರೆಗೂ ನೌಕರರನ್ನು ದುಡಿಸಿಕೊಳ್ಳುತ್ತಿದ್ದರು. ಸಂಬಂಧಿಕರು ಸತ್ತರೆ ಉದ್ಯೋಗಿಗಳಿಗೆ ರಜೆ ಸಿಗುತ್ತಿರಲಿಲ್ಲ. ಇದನ್ನು ಪ್ರತಿಭಟಿಸಲೆಂದು ನೌಕರರನ್ನು ಸಂಘಟಿಸಿದೆ. ಮೇಲಧಿಕಾರಿಗಳಿಗೆ ದೂರು ನೀಡಿದೆ. ಆಗ ತಾನೇ ಆರಂಭವಾಗಿದ್ದ ಹಾವೇರಿ ಶಾಖೆಗೆ ನನ್ನನ್ನು ವರ್ಗಾಯಿಸಿದರು. ನಾನು ಅಲ್ಲಿಗೆ ಹೋಗಲಿಲ್ಲ. ಕೆಲಸದಿಂದ ತೆಗೆದರು. ಅಷ್ಟರಲ್ಲಿ ಕಾನೂನು ಅಧ್ಯಯನವೂ ಪೂರ್ಣಗೊಳ್ಳುತ್ತಾ ಬಂದಿತ್ತು.

Q

ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳು ಹೇಗಿದ್ದವು? ಯಾವ ಹಿರಿಯ ವಕೀಲರ ಬಳಿ ಪ್ರಾಕ್ಟೀಸ್‌ ಮಾಡಿದಿರಿ?

A

ಎಲ್‌ಎಲ್‌ಬಿ ಮುಗಿಸಿದ್ದೆ. ಎಲ್‌ಎಲ್‌ಎಂಗೆ ಸೇರಿಕೊಂಡು ಇತ್ತ ಪ್ರಾಕ್ಟೀಸ್‌ ಶುರು ಮಾಡಿದೆ. ಆಗಿನ ಪ್ರತಿಭಾಶಾಲಿ ಕ್ರಿಮಿನಲ್‌ ವಕೀಲರಾಗಿದ್ದ ರಾಮರಾವ್‌ ಜೋಷಿ ಹಾಗೂ ಎಂ ಎಸ್‌ ಪಾಟೀಲರೊಟ್ಟಿಗೆ ಕೆಲಸ ಮಾಡುತ್ತಿದ್ದೆ. ಆದರೆ ಕೆಲ ಕೆಲಸಗಳಾಗಬೇಕಾದರೆ ಅಧಿಕಾರಿಗಳಿಗೆ ಲಂಚಕೊಡಬೇಕಿತ್ತು. ಇದು ಯಾಕೋ ನನಗೆ ಹಿಡಿಸಲಿಲ್ಲ. ರೆಬೆಲ್‌ ಸ್ವಭಾವದ ನನಗೆ ವಕೀಲಿಕೆ ಒಗ್ಗುವುದಿಲ್ಲ ಎನ್ನಿಸಿತು.. ಈ ಮಧ್ಯೆ ಸಂಘಟನೆಗಳ ಸೆಳೆತವೂ ಹೆಚ್ಚಾಗಿತ್ತು. ಧಾರವಾಡದ ಕಾರ್ಖಾನೆಯೊಂದರ ವಿರುದ್ಧ ಕಾರ್ಮಿಕರು ಸಂಘಟಿತರಾಗಿದ್ದರು. ಕೇವಲ ನೂರು ಕಾರ್ಮಿಕರಿದ್ದ ಕಾರ್ಖಾನೆ ಅದು. ಆದರೆ ಪ್ರತಿಭಟನೆ ಹೇಗೆ ಮೂಡಿತ್ತು ಎಂದರೆ ಎರಡು ತಿಂಗಳ ಕಾಲ ಹೋರಾಟ ನಡೆದವು. ಕೇವಲ ನೂರು ಜನರ ಸಲುವಾಗಿ ಇಡೀ ಹುಬ್ಬಳ್ಳಿ ಧಾರವಾಡದಲ್ಲಿ ಒಂದು ದಿನ ಬಂದ್‌ ಆಚರಿಸಲಾಗಿತ್ತು. ಧಾರವಾಡದ ಕಡಪ ಮೈದಾನ ತುಂಬಿ ಹೋಗಿತ್ತು. ಆಗ ಸರ್ಕಾರದ ಆಯಕಟ್ಟಿನ ಸ್ಥಳಗಳಲ್ಲಿದ್ದ ಕೆ ಎಚ್‌ ರಂಗನಾಥ್‌, ಬಸವಲಿಂಗಪ್ಪ ಅಜೀಜ್‌ ಸೇಠ್‌, ಬದ್ರಿ ನಾರಾಯಣ್‌ ಅವರು ನಮ್ಮ ಹೋರಾಟಕ್ಕೆ ಸ್ಪಂದಿಸಿದರು. ಬಹಳ ದೊಡ್ಡ ಚಳವಳಿ ಅದು. ಇದನ್ನು ಕಂಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಮಾರ್ಗದರ್ಶನ ನೀಡುವಂತೆ ನನ್ನನ್ನು ಕೋರಿದರು.

ಈ ಮಧ್ಯೆ ಜೆಎಸ್‌ಎಸ್‌ ಕಲಾ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದೆ. ಇಂಗ್ಲಿಷ್‌ ಹೇಳಿಕೊಡುತ್ತಿದ್ದೆ. ಪತ್ರಿಕೋದ್ಯಮ ಅಧ್ಯಯನದಲ್ಲಿ ತೊಡಗಿದ್ದೆ. ಪತ್ರಿಕೆಯೊಂದಕ್ಕೆ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ಕಾಲೇಜಿನ ಪ್ರಾಂಶುಪಾಲರು ದಿನವೂ ಕಾಲೇಜಿನ ಸುದ್ದಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಹೇಳಿದರು. ಇದಕ್ಕೆ ನನ್ನ ಮನಸ್ಸು ಒಪ್ಪಲಿಲ್ಲ. ಅದೇ ನೆಪವಾಗಿ ಧಾರವಾಡ ವಿವಿಯ ಸಿಂಡಿಕೇಟ್‌ ಸದಸ್ಯರೂ ಆಗಿದ್ದ ಅವರು ನನ್ನದು ಇಂಗ್ಲಿಷ್‌ ಎಂಎ ಆಗಿಲ್ಲ ಎಂಬ ಕಾರಣಕ್ಕೆ ಕೆಲಸದಿಂದ ತೆಗೆಸಿದರು. ಅದನ್ನು ಸವಾಲಾಗಿ ಸ್ವೀಕರಿಸಿ ಇಂಗ್ಲಿಷ್‌ ಎಂ ಎ ಪೂರೈಸಿದೆ. ಇತ್ತ ಎಲ್‌ಎಲ್‌ಎಂ ಪೂರ್ಣಗೊಂಡಿದ್ದರಿಂದ ಅದೇ ಜೆಎಸ್‌ಎಸ್‌ ಸಂಸ್ಥೆಯ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇರಿಕೊಂಡೆ.

Q

ದಿನಗೂಲಿಗಳ ಪರವಾಗಿ ಹೋರಾಡಬೇಕೆಂದು ನಿಮಗೆ ಬಲವಾಗಿ ಅನ್ನಿಸಿದ್ದು ಏಕೆ?

A

ಧಾರವಾಡದಲ್ಲಿ ʼಲೋಕೋಪಯೋಗಿ ಇಲಾಖೆ ಸುಶಿಕ್ಷಿತ ದಿನಗೂಲಿ ನೌಕರರ ಸಂಘʼ ಎಂಬ ಸಣ್ಣದೊಂದು ಸಂಘಟನೆ ಇತ್ತು. ಅವರೊಂದು ದಿನ ತಮ್ಮ ಹೋರಾಟ ಬೆಂಬಲಿಸುವಂತೆ ಕೇಳಿಕೊಂಡರು. ಏನಪ್ಪಾ ನಿಮ್ಮ ಸಮಸ್ಯೆ ಎಂದೆ. ಅವರು ಈಗ ನಮಗೆ ಐದು ರೂಪಾಯಿ ಸಂಬಳ ಬರುತ್ತಿದೆ. ಅದನ್ನು ಐದು ರೂಪಾಯಿ ಎಂಟಾಣೆಗೆ ಹೆಚ್ಚಿಸಲು ಹೋರಾಟ ನಡೆಸಬೇಕಿದೆ ಎಂದರು. ಆದರೆ ನನಗೆ ಅವರ ಸಮಸ್ಯೆ ಸಂಬಳದ ವಿಚಾರಕ್ಕಿಂತಲೂ ದೊಡ್ಡದಿದೆ ಎನ್ನಿಸಿತ್ತು. ಮೇಲಾಗಿ ಅವರೇ ʼಸುಶಿಕ್ಷಿತʼ ಎಂದು ಹಣೆಪಟ್ಟಿ ಕಟ್ಟಿಕೊಂಡು ತಮ್ಮನ್ನು ತಾವು ಸೀಮಿತಗೊಳಿಸಿಕೊಂಡಿದ್ದರು. ಸುಶಿಕ್ಷಿತ- ಅಶಿಕ್ಷಿತ ಎಂಬ ಬೇಧ ಭಾವವಿಲ್ಲದೇ ಹೋರಾಡುವುದಾದರೆ ಮಾತ್ರ ಪಾಲ್ಗೊಳ್ಳುವುದಾಗಿ ಹೇಳಿದೆ. ಅವರ ಸಮಸ್ಯೆಗಳನ್ನು ವಿಸ್ತಾರವಾಗಿ ಅಧ್ಯಯನ ಮಾಡಿದೆ. ರೈಲ್ವೆ ಗ್ಯಾಂಗ್‌ಮನ್‌ಗಳನ್ನು ಒಂದು ಕಾಮಗಾರಿ ಮುಗಿದ ನಂತರ ಕೆಲಸದಿಂದ ತೆಗೆಯುವ ಪರಿಪಾಠವಿತ್ತು. ಅವರನ್ನು ಕೆಲಸದಲ್ಲಿ ಮುಂದುವರೆಸಿ ಬೇರೆಡೆಗೆ ನಿಯೋಜಿಸಬೇಕಿತ್ತು.

ಮೋಹನ್‌ ಕಾತರಕಿ (ಮುಂದೆ ಅವರು ಸುಪ್ರೀಂಕೋರ್ಟ್‌ನ ಪ್ರಖ್ಯಾತ ವಕೀಲರಾದರು) ನೇತೃತ್ವದ ಕಾನೂನು ವಿದ್ಯಾರ್ಥಿಗಳ ಸಂಘಟನೆಗೆ ದಿನಗೂಲಿಗಳ ಪರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. ಡ್ರಾಫ್ಟ್‌ ತಯಾರಿಸಿ ಸುಪ್ರೀಂಕೋರ್ಟ್‌ನ ಅಂದಿನ ಹಿರಿಯ ನ್ಯಾಯವಾದಿಗಳಾಗಿದ್ದ ಎ ಜಿ ನೂರಾನಿ ಅವರಿಗೆ ಕೊಡಲು ಕಾತರಕಿಗೆ ತಿಳಿಸಿದೆ. ಮೊದಮೊದಲು ನೂರಾನಿ ಅವರು ಇದಕ್ಕೆ ಒಪ್ಪಲಿಲ್ಲ. ʼಕಾನೂನು ಪ್ರೊಫೆಸರ್‌ ಆಗಿ ಹೇಳುತ್ತಿದ್ದೇನೆ ಇದೊಂದು ದೊಡ್ಡ ಸಮಸ್ಯೆʼ ಎಂದಾಗ ಅವರು ವಾದ ಮಂಡಿಸುವುದಾಗಿ ಒಪ್ಪಿದರು. ದಿನಗೂಲಿಗಳನ್ನು ಕೆಲಸದಿಂದ ತೆಗೆಯುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ನಮ್ಮ ಪರವಾಗಿ ತೀರ್ಪು ನೀಡಿತು. ಎಂಥಾ ಮಹತ್ವದ ಆದೇಶ! ಸಾವಿರಾರು ನೌಕರರು ಬದುಕು ದಡ ಸೇರಿತು. ಇದೇ ಕಾರಣವಾಗಿ ಸಾರಿಗೆ ನೌಕರರ ಸಂಘಟನೆಯಿಂದ ದೊರೆತಿದ್ದ ಬಸ್‌ ಪಾಸ್‌ ಬಳಸಿಕೊಂಡು ರಾಜ್ಯಾದ್ಯಂತ ಓಡಾಡಿ ದಿನಗೂಲಿಗಳನ್ನು ಸಂಘಟಿಸಿದೆ. ನಮ್ಮ ಸಂಘಟನೆ ರಾಜಕಾರಣಿಗಳಾದ ಅಜೀಜ್‌ ಸೇಠ್‌, ಹೆಚ್‌ ಡಿ ದೇವೇಗೌಡ ಅವರನ್ನು ಕೂಡ ಸೆಳೆಯಿತು.

ಶರ್ಮ ಅವರ ನೇತೃತ್ವದಲ್ಲಿ 1989ರ ಸೆ 10ರಂದು ದಿನಗೂಲಿ ನೌಕರರಿಂದ ಬೆಂಗಳೂರಿನ ವಿಧಾನಸೌಧಕ್ಕೆ ಐತಿಹಾಸಿಕ ಮುತ್ತಿಗೆ.
ಶರ್ಮ ಅವರ ನೇತೃತ್ವದಲ್ಲಿ 1989ರ ಸೆ 10ರಂದು ದಿನಗೂಲಿ ನೌಕರರಿಂದ ಬೆಂಗಳೂರಿನ ವಿಧಾನಸೌಧಕ್ಕೆ ಐತಿಹಾಸಿಕ ಮುತ್ತಿಗೆ.
Q

ರಾಜ್ಯ ದಿನಗೂಲಿ ನೌಕರರ ಮಹಾಮಂಡಳ ಹೆಮ್ಮರವಾಗಿ ಬೆಳೆದದ್ದು ಹೇಗೆ?

A

ರಾಮಕೃಷ್ಣ ಹೆಗಡೆ ಅವರು 10,000 ದಿನಗೂಲಿ ನೌಕರರನ್ನು ಕೆಲಸದಿಂದ ತೆಗೆದುಹಾಕಲು ತೀರ್ಮಾನಿಸಿದ್ದರು. ಹೆಚ್‌ ಡಿ ದೇವೇಗೌಡರಿಗೆ ಸಮಸ್ಯೆ ತಿಳಿಸಿದೆ. ಸುಪ್ರೀಂಕೋರ್ಟ್‌ ಆದೇಶ ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೇಳಿದೆ. ಆದರೆ ಅಂದಿನ ಮುಖ್ಯ ಕಾರ್ಯದರ್ಶಿಯಾಗಿದ್ದ ಸತೀಶ್‌ ಚಂದ್ರ ಇದಕ್ಕೆ ಒಪ್ಪಲಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ಕೇಸು ದಾಖಲಿಸಿದೆ. ಇತ್ತ ನ್ಯಾಯಾಲಯದ ಹೊರಗೂ ಹೋರಾಟ ಆರಂಭವಾಗಿತ್ತು. ದಿನಗೂಲಿಗಳು ಒಂದು ದಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರು. ಲಾಠಿಚಾರ್ಜ್‌ ಆಗಿ ಅನೇಕರ ತಲೆ ಒಡೆದು ದೊಡ್ಡ ಅನಾಹುತವೇ ಸಂಭವಿಸಿತ್ತು. ಈ ಮಧ್ಯೆ ಸುಪ್ರೀಂಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಪಿ ಎಂ ಭಗವತಿ ಅವರು ಮುಖ್ಯ ಕಾರ್ಯದರ್ಶಿಯವರನ್ನು ಜೈಲಿಗೆ ಕಳುಹಿಸಿ ಎಂದು ಆದೇಶಿಸಿದರು. ತಕ್ಷಣ ಬೇಷರತ್ತಾಗಿ ಸರ್ಕಾರ ಕ್ಷಮೆ ಕೇಳಿತು. ನೀಡಿದ ನಿರ್ದೇಶನಗಳನ್ನು ಇಂಗ್ಲಿಷ್‌, ಕನ್ನಡ ದಿನಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿಯಲ್ಲಿ ಪ್ರಸಾರವಾಗುವಂತೆ ನೋಡಿಕೊಳ್ಳಬೇಕು ಎಂಬ ಆದೇಶ ಬಂದಿತು. ಕೆಲಸ ಖಾಲಿ ಇರಲಿ ಇಲ್ಲದೇ ಇರಲಿ ಎಲ್ಲಾ ದಿನಗೂಲಿ ನೌಕರರಿಗೂ ಉದ್ಯೋಗವಕಾಶ ಕಲ್ಪಿಸಬೇಕೆಂದು ಪ್ರತಿ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಲಾಯಿತು.

1990ನೇ ಇಸವಿ ಫೆಬ್ರುವರಿ 23ರಂದು ಹತ್ತು ವರ್ಷದ ಆಧಾರದಲ್ಲಿ ಎಲ್ಲಾ ದಿನಗೂಲಿಗಳನ್ನು ಕಾಯಂ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಮತ್ತೊಂದು ಐತಿಹಾಸಿಕ ತೀರ್ಪು ನೀಡಿತು. ಅಷ್ಟರಲ್ಲಾಗಲೇ ವೀರೇಂದ್ರ ಪಾಟೀಲರ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ತೀರ್ಪಿನ ಪ್ರಕಾರ 1984ರ ನಂತರ ಕೆಲಸಕ್ಕೆ ಸೇರಿದ ದಿನಗೂಲಿಗಳನ್ನು ಸ್ವಯಂಚಾಲಿತವಾಗಿಯೇ ಕೆಲಸದಿಂದ ತೆಗೆದುಹಾಕಲಾಗುತ್ತಿತ್ತು. ಒಂದೆಡೆ ನಮ್ಮ ಪರವಾಗಿ ಬಂದ ಐತಿಹಾಸಿಕ ತೀರ್ಪು, ಮತ್ತೊಂದೆಡೆ ಆಘಾತ. ನನ್ನ ಸಹಪಾಠಿಯಾಗಿದ್ದ ಎಸ್‌ ಬಂಗಾರಪ್ಪನವರನ್ನು ಧಾರವಾಡಕ್ಕೆ ಕರೆಸಿಕೊಂಡು ಪರಿಸ್ಥಿತಿಯನ್ನು ತಿಳಿಸಿದೆ. ಜೊತೆಗೆ ಆಯಾ ನೌಕರರ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗವಕಾಶ ಕಲ್ಪಿಸಬೇಕೆಂದು ಕೋರಿದೆ. ದೊಡ್ಡ ಮನಸ್ಸು ಮಾಡಿದ ಸರ್ಕಾರ ತೀರ್ಪಿಗಿಂತ ಒಂದು ಹೆಜ್ಜೆ ಮುಂದುಹೋಗಿ ದಿನಗೂಲಿಗಳ ಪರ ನಿಂತಿತು. ಎಷ್ಟೋ ಮಂದಿ ದಿನಗೂಲಿ ನೌಕರರು ತಹಶೀಲ್ದಾರ್‌, ಸಬ್‌ರಿಜಿಸ್ಟ್ರಾರ್‌ ಹೀಗೆ ದೊಡ್ಡ ಹುದ್ದೆಗಳಿಗೆ ಬಡ್ತಿ ಪಡೆದು ನಿವೃತ್ತಿಯಾದರು.

2006ರಲ್ಲಿ ದಿನಗೂಲಿಗಳಿಗೆ ಕಾಯಂ ಆಗುವ ಹಕ್ಕೇ ಇಲ್ಲ ಅವರೆಲ್ಲಾ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದವರು ಎಂದು ಸರ್ಕಾರ ಆದೇಶಿಸಿತು. ಅದಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದೆ. ಆಗ ವಿಧಾನಸೌಧದಲ್ಲಿ ಅಧಿವೇಶನ ನಡೆಯುತ್ತಿತು. ಜಕ್ಕರಾಯನಕೆರೆ ಆವರಣದಲ್ಲಿ ಬೃಹತ್‌ ಸಭೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹಾಕಿದೆವು. ಮತ್ತೊಂದಷ್ಟು ನೌಕರರಿಗೆ ನ್ಯಾಯ ದೊರೆಯಿತು. 1984 ರಿಂದ 2013ರವರೆಗೆ ನ್ಯಾಯಾಲಯದ ಒಳಗೆ ಹಾಗೂ ಜನಸಮುದಾಯದ ನಡುವೆ ನಡೆದ ಮಹತ್ವದ ಹೋರಾಟ ಇದು. ಮೂವತ್ತು ವರ್ಷಗಳ ಈ ಹೋರಾಟದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನೌಕರರಿಗೆ ನ್ಯಾಯ ದೊರೆತಿದೆ. ಕಾರ್ಮಿಕ ಸಂಘಟನೆಗಳ ಇತಿಹಾಸದಲ್ಲಿ ದಿನಗೂಲಿ ನೌಕರರ ಮಹಾಮಂಡಲ ಬೆಳೆದು ಬಂದ ಬಗೆ ಪ್ರತ್ಯೇಕ ಅಧ್ಯಾಯವಾಗಬಲ್ಲದು.

Q

ಕಾನೂನು ಶಿಕ್ಷಣದ ವೇಳೆ ನಿಮ್ಮ ಮೇಲೆ ಗಾಢ ಪ್ರಭಾವ ಬೀರಿದ ಸಂಗತಿಗಳು ಯಾವುವು?

A

ಕಾನೂನು ಕಲಿಯುವಾಗ ಸಾಮಾನ್ಯ ಜನರಿಗೆ ನೆರವಾಗಬೇಕು ಎಂಬ ಸಂಗತಿ ನನ್ನನ್ನು ಗಾಢವಾಗಿ ಪ್ರಭಾವಿಸಿತ್ತು. ದಿನಗೂಲಿಗಳ ಹೋರಾಟಕ್ಕೆ ಸಂಬಂಧಿಸಿದಂತೆ ಮಸೂದೆ ರೂಪಿಸುವಾಗ ʼಅಲ್ಪವಿರಾಮʼ ʼಮತ್ತುʼ ಎಂಬ ಪದಗಳನ್ನೇ ದಿನಗೂಲಿಗಳ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸಿ ಅಸಂಖ್ಯಾತ ನೌಕರರಿಗೆ ನ್ಯಾಯ ಒದಗಿಸಿಕೊಟ್ಟೆ. ಕಾನೂನು ಅಧ್ಯಯನದ ವೇಳೆ ಕಲಿತದ್ದನ್ನು ಇಲ್ಲಿ ಪ್ರಯೋಗಿಸಿದ್ದೆ. ಅಂದಿನ ಕಾನೂನು ಸಚಿವ ಸುರೇಶ್‌ ಕುಮಾರ್‌ ಈ ವ್ಯಾಖ್ಯಾನವನ್ನು ಒಪ್ಪಿದರು. ಏನೇ ಹೇಳಿದರೂ ಕಾನೂನಿನ ಮೂಲಕವೇ ಹೇಳುತ್ತಾನಲ್ಲಾ ಎಂದು ಅಧಿಕಾರಿಗಳು ದುರುಗುಟ್ಟಿ ನೋಡಿದ್ದರು.

Q

ಕಾನೂನು ಬೋಧನೆಯ ದಿನಗಳ ರಸಪ್ರಸಂಗಗಳನ್ನು ತಿಳಿಸಿ.

A

ದಿನಗೂಲಿ ನೌಕರರಿಗೆ ಸಂಬಂಧಿಸಿದ ಮಸೂದೆಯ ಅಂತಿಮ ರೂಪುರೇಷೆಯ ತಯಾರಿ ನಡೆದಿತ್ತು. ಉಪ ಸಮಿತಿ ಅದಕ್ಕೆ ಸಂಬಂಧಿಸಿದ ರಿಪೋರ್ಟ್‌ ಕೊಟ್ಟಿತ್ತು. ನನ್ನ ಅಂತಿಮ ಅಭಿಪ್ರಾಯ ತಿಳಿಸಲು ಅಡ್ವೊಕೇಟ್‌ ಜನರಲ್‌ ಅವರ ಅಪಾಯಿಂಟ್‌ಮೆಂಟ್‌ ತೆಗೆದುಕೊಂಡು ಅಲ್ಲಿಗೆ ಹೋಗಿದ್ದೆ. ಸರ್ಕಾರಿ ವಕೀಲರ ಸಭೆಯಲ್ಲಿ ಮಗ್ನರಾಗಿದ್ದ ಎಜಿಯವರು ಒಳಗೆ ಬರುವಂತೆ ಕರೆ ಕಳಿಸಿದರು. ಹೋಗುತ್ತಿದ್ದಂತೆ ಅರ್ಧಕ್ಕರ್ಧ ಸರ್ಕಾರಿ ವಕೀಲರು ಎದ್ದು ನಿಂತು ನಮಸ್ಕರಿಸಿದರು. ನೀವು ನಮಗೆ ಪಾಠ ಹೇಳಿಕೊಟ್ಟ ಗುರುಗಳು. ನಿಮ್ಮಿಂದಾಗಿ ನಾವು ಈ ಸ್ಥಾನದಲ್ಲಿದ್ದೇವೆ ಎಂದರು. ಇದಕ್ಕಿಂತ ದೊಡ್ಡ ಸಂಗತಿ ಇನ್ನೇನಿದೆ?

ಜಗದೀಶ್‌ ಶೆಟ್ಟರ್‌, ಬಸವರಾಜ ಹೊರಟ್ಟಿ, ಮೋಹನ ಲಿಂಬಿಕಾಯಿ ಅವರಂತಹ ಅನೇಕರಿಗೆ ನಾನು ಪಾಠ ಮಾಡಿದ್ದೇನೆ. ಯಾರೋ ಒಬ್ಬರು ʼಜಗದೀಶ್‌ ಶೆಟ್ಟರ್‌ ನಿಮ್ಮ ಶಿಷ್ಯ, ಅವರು ಮುಖ್ಯಮಂತ್ರಿಯಾಗಿದ್ದಾರೆʼ ಎಂದರು. ನಾನು ಆಗ ಹೇಳಿದೆ “ಶೆಟ್ಟರ್‌ ನನ್ನ ಶಿಷ್ಯ ಎಂದು ಹೇಳಿಕೊಳ್ಳುವುದು ಮುಖ್ಯ ಅಲ್ಲ. ನಾನು ಕೆ ಎಸ್‌ ಶರ್ಮ ಅವರ ಶಿಷ್ಯ ಎಂದು ಜಗದೀಶ್‌ ಶೆಟ್ಟರ್‌ ಹೇಳಿಕೊಳ್ಳಬೇಕು ಅದು ಹೆಮ್ಮೆಯ ವಿಚಾರ” ಎಂದೆ. ಒಮ್ಮೆ ಬಸ್‌ ಹಿಡಿದು ಹೋಗುತ್ತಿದ್ದೆ. ನಿಂತು ಪಯಣಿಸೋದು ನನ್ನ ಅಭ್ಯಾಸ. ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ʼಬನ್ನಿ ಸರ್‌ ಕೂತ್ಕೊಳ್ಳಿʼ ಎಂದ. ‘ಇಲ್ಲಪ್ಪ ಕೂರಲ್ಲ’ ಎಂದು ಉತ್ತರಿಸಿದೆ. ಆಗ ಅವನು ʼನೀವು ನನಗೆ ‘ಇಂಗ್ಲಿಷ್‌ ಹೇಳಿಕೊಟ್ಟ ಮೇಷ್ಟು. ಈಗಲೂ ನೀವು ಹೇಳಿಕೊಟ್ಟ ಪದ್ಯ ಮರೆತಿಲ್ಲ’ ಎನ್ನುತ್ತಾ ಬಸ್‌ನಲ್ಲೇ ಆ ಪದ್ಯ ಹೇಳ ತೊಡಗಿದ. ಮುಂಬೈನಿಂದ ದೆಹಲಿಗೆ ರೈಲಿನಲ್ಲಿ ಪಯಣಿಸುವಾಗ ಅನಿವಾರ್ಯ ಕಾರಣಕ್ಕೆ ಮಿಲಿಟರಿ ಬೋಗಿ ಏರಿದ್ದೆ. ಅಲ್ಲೊಬ್ಬ ಯೋಧ ಪೊಲೀಟಿಕಲ್‌ ಸೈನ್ಸ್‌ ಪುಸ್ತಕ ಹಿಡಿದಿದ್ದ. ಅವನು ವಾಯುಪಡೆಯಲ್ಲಿ ಕೆಲಸ ಮಾಡುತ್ತಿದ್ದ. ಯಾವುದೋ ಪರೀಕ್ಷೆಗೆ ರಾಜ್ಯಶಾಸ್ತ್ರ ವಿಷಯ ಆರಿಸಿಕೊಂಡಿದ್ದ. ನಾನು ಮುಂಬೈನಿಂದ ದೆಹಲಿಯವರೆಗೆ ಅವನಿಗೆ ರಾಜ್ಯಶಾಸ್ತ್ರವನ್ನು ಸಂಪೂರ್ಣವಾಗಿ ಬೋಧಿಸಿದೆ. ಅವನ ಉದ್ಗಾರ ʼಇನ್ನು ಹತ್ತು ವರ್ಷ ಕಳೆದಿದ್ದರೂ ಇಷ್ಟು ಅಧ್ಯಯನ ಮಾಡಲು ನನ್ನಿಂದ ಆಗುತ್ತಿರಲಿಲ್ಲ ಸರ್‌ ! ನನ್ನ ಚೇಂಬರಿನಲ್ಲಿ ನೇತುಹಾಕಿರುವ ಕಾರ್ಲ್‌ಮಾರ್ಕ್ಸ್‌ ಮತ್ತು ವಿಯೆಟ್ನಾಮಿ ಹೋರಾಟಗಾರ ಹೋ ಚಿ ಮಿನ್ಹ್‌ ಅವರ ರೇಖಾಚಿತ್ರ ಬರೆದುಕೊಟ್ಟಿದ್ದು ದಂತಚೋರ ವೀರಪ್ಪನ್‌ನಿಂದ ಹತ್ಯೆಗೀಡಾದ ಐಪಿಎಸ್‌ ಅಧಿಕಾರಿ ಹರಿಕೃಷ್ಣ.

Q

ಜಗತ್ತಿನ ಬಹುದೊಡ್ಡ ಚಿಂತಕ ಕಾರ್ಲ್‌ ಮಾರ್ಕ್ಸ್‌ ಮತ್ತು ವರಕವಿ ದ.ರಾ. ಬೇಂದ್ರೆ ಅವರ ಒಡನಾಟ ನಿಮ್ಮ ಹೋರಾಟಗಳಿಗೆ ಸ್ಫೂರ್ತಿಯಾದದ್ದು ಹೇಗೆ?

A

ಮಾರ್ಕ್ಸ್‌ ಮತ್ತು ಬೇಂದ್ರೆ ನಡುವೆ ಒಂದು ಸಮಾನ ಅಂಶವಿದೆ. ಅದು ಮಾನವೀಯತೆ. ಆ ಮಾನವೀಯತೆಯೇ ನನ್ನ ಹೋರಾಟಗಳಿಗೆ ಸ್ಫೂರ್ತಿ. ನನ್ನ ಮಾತೃಭಾಷೆ ತೆಲುಗು. ಜಿ ವಿ ಕುಲಕರ್ಣಿ ಅಂತ ಸಂಯುಕ್ತ ಕರ್ನಾಟಕ ಪತ್ರಿಕೆಯ ಪತ್ರಕರ್ತ, ಹೇಗೋ ನನ್ನ ಸಂಪರ್ಕಕ್ಕೆ ಬಂದಿದ್ದರು. ನನ್ನ ಇಂಗ್ಲಿಷ್‌ ಬರಹಗಳನ್ನು ನೋಡಿ ನೀನು ಕನ್ನಡದಲ್ಲಿ ಬರೆಯಬೇಕು ಎಂದರು. ಒಮ್ಮೆ ಬೇಂದ್ರೆ ಮನೆಗೆ ಹೋಗೋಣ ಅಂತ ಕರೆದೊಯ್ದರು. ಆಗ ಬೇಂದ್ರೆ ಸಿಗಲಿಲ್ಲ. ಕೆಲ ದಿನಗಳ ಬಳಿಕ ನಾನು ವಾಸವಿದ್ದ ʼಭಕ್ತ ನಿವಾಸʼದಲ್ಲಿ ಕುಲಕರ್ಣಿ ಅವರ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಇಟ್ಟುಕೊಂಡಿದ್ದೆವು. ಆಗ ಕುಲಕರ್ಣಿ ʼನಾವು ಬೇಂದ್ರೆ ಮನೆಗೆ ಹೋದರೆ ಸಿಗಲಿಲ್ಲ. ಈಗ ಅವರೇ ಶರ್ಮಾ ಮನೆಗೆ ಬರಬೇಕಾಯಿತುʼ ಎಂದುಬಿಟ್ಟ. ಎಂಥಾ ಉದ್ದಟತನದ ಮಾತು ಅದು. ಆದರೆ ಬೇಂದ್ರೆ ತಣ್ಣಗೆ ʼಭಕ್ತ ನಿವಾಸʼ ಎಂದು ಬರೆದಿದ್ದ ಬೋರ್ಡಿನತ್ತ ಬೊಟ್ಟು ಮಾಡಿ ʼನಾನು ಭಕ್ತನ ನಿವಾಸಕ್ಕೆ ಬಂದಿದ್ದೇನಪಾʼ ಎಂದರು. ಮುಂದೆ ಕನ್ನಡದಲ್ಲಿ ನಾನು ಕೃತಿಗಳನ್ನು ಹೊರತರಲು, ಅನುವಾದ ಎಂಬುದು ಹೇಗಿರಬೇಕು ಎಂದು ಅರಿಯಲು ಮಾರ್ಗದರ್ಶಿಯಾದವರು ಬೇಂದ್ರೆ. ಮಾರ್ಕ್ಸಿಸಂ ಕುರಿತು ಫ್ರೆಡರಿಕ್‌ ಏಂಗಲ್ಸ್‌ ಬರೆದಿದ್ದ ಪುಸ್ತಕವನ್ನು ಒಂದಿಡೀ ರಾತ್ರಿ ಓದಿ ಮುಖ್ಯವಾದ ಸಾಲುಗಳನ್ನೆಲ್ಲಾ ಪೆನ್ಸಿಲ್‌ನಲ್ಲಿ ಗೆರೆ ಹಾಕಿ ಸಾಕಷ್ಡು ಮಾತನಾಡಿದ್ದರು. ಬೇಂದ್ರೆಯವರು ಶ್ರಮದ ಕುರಿತಾಗಿ, ಬೆವರಿನ ಕುರಿತಾಗಿ ಬರೆದ ಅನೇಕ ಗೀತೆಗಳು ಜನಕ್ಕೆ ಗೊತ್ತಿಲ್ಲ. “ಬಂಗಾರ ಇರೋದು ಔಷಧ ತಯಾರು ಮಾಡಲಿಕ್ಕ… ಅದನ್ನ ವ್ಯಾಪರಕ್ಕ ಬಳಸಬಾರದು” ಅನ್ನುತ್ತಿದ್ದರು ಅವರು.

ನಮ್ಮ ತಂದೆ ತುಂಬಾ ಆದರ್ಶವಾದಿ. ಅಂದಂದಿನ ದುಡಿಮೆ ಅಂದಂದಿಗೆ ಎಂದು ಬದುಕಿದವರು. ಇತ್ತ ಬಡತನವನ್ನು, ಶೋಷಣೆಯನ್ನು ಬಹಳ ಹತ್ತಿರದಿಂದ ಕಂಡಿದ್ದೆ. ಶ್ರಮವೆಂಬೋ ಶಾಲೆಯಲ್ಲಿ ನಾನು ಕಲಿತದ್ದು ಅಪಾರ. ಪ್ರಚಲಿತ ಸಮಸ್ಯೆಗಳಿಗೆ ಮಾರ್ಕ್ಸ್‌ ಪರಿಹಾರ ಎಂದು ತಿಳಿದಿತ್ತು. ನನ್ನ ಪಿಎಚ್‌ಡಿ ಅಧ್ಯಯನ ಕೂಡ ಮಾರ್ಕ್ಸ್‌ ಕುರಿತಾಗಿಯೇ ಇದೆ. ʼಹೋರಾಟʼ ಎಂಬ ನನ್ನ ನಾಟಕವೊಂದಿದೆ. ಅದು ಶೋಷಣೆ ಮುಕ್ತ ಸಮಾಜ ಕುರಿತಾದದ್ದು. ಅದರಲ್ಲಿ ಜಗದೀಶ್‌ ಶೆಟ್ಟರ್‌ ಮುಖ್ಯ ಪಾತ್ರ ಮಾಡಿದ್ದರು. ಶೋಷಣೆ ವಿರುದ್ಧ ಧ್ವನಿ ಎತ್ತಿದ ನಾಟಕದಲ್ಲಿ ಪಾತ್ರ ಮಾಡಿದ ಜಗದೀಶ್ ಮುಂದೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಇವೆಲ್ಲಾ ನಾನು ಮಾಡಿದ ಪ್ರಯೋಗಗಳು.

Q

ನಿಮ್ಮನ್ನು ಜನ ʼದಿನಗೂಲಿಗಳ ದೇವರುʼ, ʼದಿನಗೂಲಿಗಳ ದಿನಕರʼ ಎಂದು ಕರೆಯುತ್ತಾರೆ. ನಿಮ್ಮ ಫೋಟೊಗಳನ್ನು ತಮ್ಮ ಮನೆಗಳಲ್ಲಿಟ್ಟುಕೊಂಡು ಆರಾಧಿಸುತ್ತಾರೆ. ಆದರೆ ನೀವು ದೇವರನ್ನು ನಂಬುವುದಿಲ್ಲ…!

A

ಅದೆಲ್ಲಾ ಜನರ ಭಾವನೆ. ನನ್ನ ಪ್ರಕಾರ ದೇವರು ಎನ್ನುವುದು ತಪ್ಪು ಕಲ್ಪನೆ. ʼದೇವರು- ದೇವರು ಅಂತ ನನ್ನ ತಲೆ ಮೇಲೆ ತೆಂಗಿನಕಾಯಿ ಹೊಡಿಬೇಡಿರೋʼ ಅಂತ ಅವರಿಗೆಲ್ಲಾ ಹೇಳ್ತಾ ಇರುತ್ತೇನೆ. ನನ್ನ ಅಭಿನಂದನಾ ಗ್ರಂಥದಲ್ಲಿ ಕೂಡ ʼGod of the Godless’ ಎಂದು ಕರೆದಿದ್ದಾರೆ. ವಿಧಿ ಮತ್ತು ದೇವರಲ್ಲಿ ನಂಬಿಕೆ ಇಡುವುದು ಭಾರತೀಯರ ದೊಡ್ಡ ದುರಂತ. ದೇವರಿಂದಲೇ ಪರಿಹಾರ ಎಂಬ ಭ್ರಮೆಗೆ ಜನ ಬಿದ್ದಿದ್ದಾರೆ. ನಿಮ್ಮ ಭವಿತವ್ಯ ನಿಮ್ಮ ಕೈಯಲ್ಲಿದೆ ದೇವರ ಕೈಯಲ್ಲಿಲ್ಲ ಎಂದು ಹೇಳುತ್ತಿರುತ್ತೇನೆ.

ಹಿಂದೆ ಸುಪ್ರೀಂಕೋರ್ಟ್‌ ನಮ್ಮ ಪರವಾಗಿ ತೀರ್ಪು ಕೊಟ್ಟಾಗ ದಿನಗೂಲಿ ನೌಕರರು ನಂಜನಗೂಡಿನಲ್ಲಿ ನನ್ನ ಮೆರವಣಿಗೆ ಮಾಡಿದರು. ಅವರಲ್ಲಿ ಕೆಲವರು ನಂಜುಂಡೇಶ್ವರ ದೇಗುಲದಲ್ಲಿ ನನ್ನ ಹೆಸರಲ್ಲಿ ಅಭಿಷೇಕ ಮಾಡುವ ಇಚ್ಛೆ ಹೊಂದಿದ್ದರು. ʼನನಗೆ ಅದರಲ್ಲಿ ನಂಬಿಕೆ ಇಲ್ಲ. ನಾನು ಬರಲ್ಲ. ನೀವು ಹೋಗಿ ಬನ್ನಿʼ ಎಂದು ಹೇಳಿ ನಾನು ದೇವಸ್ಥಾನದ ಹೊರಗೆ ನಿಂತಿದ್ದೆ. ಸ್ವಲ್ಪ ಹೊತ್ತಾದ ಬಳಿಕ ದೇಗುಲದ ಅರ್ಚಕ ನನ್ನ ಬಳಿ ಧಾವಿಸಿ ಬಂದರು. ʼನನ್ನ ಇಬ್ಬರು ಮಕ್ಕಳು ನಿಮ್ಮಿಂದಾಗಿ ಕಾಯಂ ಆಗಿದ್ದಾರೆ. ನೀವು ದೇವರಿಗಿಂತ ದೊಡ್ಡವರುʼ ಎಂದು ಹೇಳಿದರು.

Q

ಸಾರ್ಥಕ ಬದುಕಿನ ಮತ್ತೊಂದು ತುದಿಯಲ್ಲಿದ್ದೀರಿ. ಈಗ ಆ ಇಡೀ ಬದುಕನ್ನು ನೆನೆಯುವಾಗ ನಿಮಗೆ ಅನ್ನಿಸುವುದೇನು?

A

ನನಗೀಗ 87 ವರ್ಷ ವಯಸ್ಸು. ಇವತ್ತಿಗೂ ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದೇನೆ. ಲಾಕ್‌ಡೌನ್‌ ಸಮಯದಲ್ಲಿ ಬೇಂದ್ರೆಯವರ ಸಂದರ್ಶನಗಳನ್ನು ಸಂಕಲಿಸುವುದರಲ್ಲಿ ಮಗ್ನನಾಗಿದ್ದೆ. ನನಗೆ ವಯಸ್ಸು ಒಂದು ಪ್ರಶ್ನೆಯಾಗಿಲ್ಲ. ಸ್ವಸ್ಥವಾಗಿ ಬದುಕುವುದು ಹೇಗೆ ಎಂದು ಕಂಡುಕೊಂಡಿದ್ದೇನೆ. ಬೇಂದ್ರೆಯವರು ʼತಿಂದು ಬಾಳುವುದು ಬದುಕು, ತಿಳಿದು ಬಾಳುವುದು ಬಾಳುʼ ಎಂದಿದ್ದಾರೆ. ತಿಳಿದು ಬಾಳಿದ್ದು ನನ್ನ ಬದುಕು. ನನ್ನ ಜೀವನದ ಬಗ್ಗೆ ನನಗೆ ಸಮಾಧಾನ ಇದೆ. ಸಂತೃಪ್ತಿ ಇಲ್ಲ. ಸಂತೃಪ್ತಿ ಇರಬಾರದು. ಅದು ಬಂದುಬಿಟ್ಟರೆ ಸಮ ಸಮಾಜ ನಿರ್ಮಾಣ ಸಾಧ್ಯವಾಗುವುದಿಲ್ಲ. ಶೋಷಣೆ ರಹಿತ ಸಮಾಜವೊಂದು ಜಗತ್ತಿನೆಲ್ಲೆಡೆ ನಿರ್ಮಾಣವಾಗಬೇಕು ಎನ್ನುವುದು ನನ್ನ ಗುರಿ. ಗುತ್ತಿಗೆ ನೌಕರರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಡಬೇಕೆಂದುಕೊಂಡಿದ್ದೇನೆ. ಅದಕ್ಕೆ ಅಗತ್ಯವಾದ ರೂಪುರೇಷೆ ತಯಾರಿಸುತ್ತಿದ್ದೇನೆ.

Related Stories

No stories found.
Kannada Bar & Bench
kannada.barandbench.com