ಮತ್ತೆ ಲಾಕ್‌ಡೌನ್‌ ಜಾರಿಯಾದರೆ ಉಗ್ರ ಹೋರಾಟ ಅನಿವಾರ್ಯ: ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷ ಎನ್ ದೇವೇಂದ್ರಪ್ಪ

"ಲಸಿಕೆ ಇದ್ದೂ ಲಾಕ್‌ಡೌನ್‌ ಮಾಡುವುದರಲ್ಲಿ ಅರ್ಥ ಇಲ್ಲ. ಹಾಗೆ ಮಾಡುವುದು ಅತಿರೇಕವಾಗುತ್ತದೆ. ಬೆಲೆಗಳು ಏರಿಕೆ ಆಗುತ್ತಿವೆ. ಇತ್ತ ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ ಉಳಿಯುವ ಪ್ರಮಾಣ ಹೆಚ್ಚಿದೆ"
ಮತ್ತೆ ಲಾಕ್‌ಡೌನ್‌ ಜಾರಿಯಾದರೆ ಉಗ್ರ ಹೋರಾಟ ಅನಿವಾರ್ಯ: ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷ ಎನ್ ದೇವೇಂದ್ರಪ್ಪ

ಎನ್‌ ದೇವೇಂದ್ರಪ್ಪ ಮೂಲತಃ ಶಿವಮೊಗ್ಗ ಜಿಲ್ಲೆ ಹಾರನಹಳ್ಳಿ ಹೋಬಳಿ ವಿಟಗೊಂಡನಕೊಪ್ಪ ಗ್ರಾಮದವರು. ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಕಾನೂನು ಅಧ್ಯಯನ ಮಾಡಿದ್ದು ಶಿವಮೊಗ್ಗದ ನ್ಯಾಷನಲ್‌ ಕಾನೂನು ಕಾಲೇಜಿನಲ್ಲಿ. 1982ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡು ಕಳೆದ 39 ವರ್ಷಗಳಿಂದ ಕಾನೂನು ಸೇವೆಯಲ್ಲಿ ತೊಡಗಿದ್ದಾರೆ. ಸಿವಿಲ್‌ ಪ್ರಕರಣಗಳು ಬಗ್ಗೆ ಅವರಿಗೆ ಅಪಾರ ಆಸ್ಥೆ. ವಕೀಲರ ಸಂಘದ ಅಧ್ಯಕ್ಷರಾಗಿ ಮೂರು ಬಾರಿ ಸೇವೆ ಸಲ್ಲಿಸಿದ ಹಿರಿಮೆ ಅವರದು. 2008-09, 2015-16 ಹಾಗೂ 2020-21 ನೇ ಸಾಲಿನಲ್ಲಿ ಅವರು ಸಂಘದ ಚುಕ್ಕಾಣಿ ಹಿಡಿದಿದ್ದಾರೆ.

ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಶಿವಮೊಗ್ಗದ ವಕೀಲರ ಬದುಕು ಹೇಗಿತ್ತು ಎಂಬುದನ್ನು ಅವರು ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಹಂಚಿಕೊಂಡಿದ್ದಾರೆ. ಜೊತೆಗೆ ಇಂತಹ ಸಂದರ್ಭಗಳು ಎದುರಾದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಮ್ಮದೇ ಆದ ಸಲಹೆ ಸೂಚನೆಗಳನ್ನು ಅವರು ನೀಡಿದ್ದಾರೆ.

Q

ಶಿವಮೊಗ್ಗ ಜಿಲ್ಲೆಯ ವಕೀಲರು ಕೋವಿಡ್‌ ಸಾಂಕ್ರಾಮಿಕವನ್ನು ಎದುರಿಸಿದ್ದು ಹೇಗೆ?

A

ಕಳೆದ ವರ್ಷ ಜಿಲ್ಲಾಧಿಕಾರಿಗಳು ಲಾಕ್‌ಡೌನ್‌ ಘೋಷಿಸುವ ಮೊದಲೇ ನ್ಯಾಯಾಲಯಗಳನ್ನು ಬಂದ್‌ ಮಾಡಿದೆವು. ಕಕ್ಷೀದಾರರೆಲ್ಲರಿಗೂ ಕೋವಿಡ್‌ ಅಪಾಯದ ಬಗ್ಗೆ ಮನವರಿಕೆ ಮಾಡಿಕೊಟ್ಟೆವು. ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಜಾರಿಯಾಯಿತು. ಮೂರು ತಿಂಗಳು ಶೇ. 90ರಷ್ಟು ವಕೀಲರು ಕಡುಕಷ್ಟ ಅನುಭವಿಸಿದರು. ಉದಾಹರಣೆಗೆ ಹೇಳುವುದಾದರೆ ಕೇವಲ ಹತ್ತು ವಕೀಲರು ಮಾತ್ರ ಯಾವುದೇ ಬಿಕ್ಕಟ್ಟು ಎದುರಿಸದೇ ಬದುಕಿದರು. ಉಳಿದ ಐನೂರು ಮಂದಿಗೆ ತೊಂದರೆಗಳು ಇದ್ದವು. ಅನೇಕರಿಗೆ ಪಡಿತರ ಸಮಸ್ಯೆ ಉಂಟಾಯಿತು.

Q

ಜಿಲ್ಲಾ ವಕೀಲರ ಸಂಘ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿತು?

A

ಹಣ ಇದ್ದ ವಕೀಲರು ದಾನ ಮಾಡಿದರು. ಹಿರಿಯ ವಕೀಲರು ಒಗ್ಗೂಡಿ ಸಂಕಷ್ಟದಲ್ಲಿದ್ದವರಿಗೆ ಪಡಿತರ ವ್ಯವಸ್ಥೆ ಮಾಡಿದೆವು. ಮೂರು ತಿಂಗಳುಗಳ ಕಾಲ ಆಹಾರ ಕಿಟ್‌ ಒದಗಿಸಿದೆವು. ಯಾರು ಎಷ್ಟೇ ಸಹಾಯ ಮಾಡಿದರೂ ಅದಕ್ಕೊಂದು ಮಿತಿ ಇದ್ದೇ ಇರುತ್ತದೆ. ದಾನ ಎಂದ ಮಾತ್ರಕ್ಕೆ ಎಲ್ಲವನ್ನೂ ಕೊಟ್ಟುಬಿಡಬೇಕು ಎಂದೇನೂ ಇಲ್ಲವಲ್ಲ?

ಲಸಿಕೆ ಲಭ್ಯವಾದ ಬಳಿಕ ಆರೋಗ್ಯ ಇಲಾಖೆಯ ಜೊತೆ ಮಾತನಾಡಿದ್ದೇನೆ. ಅವರು ರಿಯಾಯಿತಿ ದರದಲ್ಲಿ ವಕೀಲರಿಗೆ ಕೋವಿಡ್‌ ಲಸಿಕೆ ನೀಡಲು ಒಪ್ಪಿದ್ದಾರೆ. ಇದನ್ನು ಇನ್ನಷ್ಟೇ ವಕೀಲ ಸಮುದಾಯಕ್ಕೆ ಅಧಿಕೃತವಾಗಿ ತಿಳಿಸುವುದಿದೆ.

ಅಲ್ಲದೆ ವಕೀಲರ ಕಲ್ಯಾಣ ನಿಧಿಗೆ 1000 ಕೋಟಿ ರೂಪಾಯಿ ಒದಗಿಸುವಂತೆ ಸಂಘದ ವತಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲು ಬೆಂಗಳೂರಿಗೆ ಹೊರಟಿದ್ದೇನೆ. ದೇಶಕ್ಕೆ ಸ್ವಾತಂತ್ರ್ಯ ಒದಗಿಸಲು ಮುಂಚೂಣಿಯಲ್ಲಿದ್ದವರು ವಕೀಲರು. ಅವರೆಲ್ಲಾ ಹೋರಾಟ ಮಾಡದಿದ್ದರೆ ಸ್ವಾತಂತ್ರ್ಯ ದೊರೆಯುತ್ತಿರಲಿಲ್ಲ. ಇಂತಹ ಮಹತ್ಕಾರ್ಯ ಮಾಡಿದವರನ್ನು ರಕ್ಷಿಸುವ ಕೆಲಸಕ್ಕೆ ಸರ್ಕಾರ ಒತ್ತು ನೀಡಬೇಕಿದೆ.

Q

ಈಗಲೂ ಲಾಕ್‌ಡೌನ್‌ ಭೀತಿ ಇದ್ದೇ ಇದೆ, ಅಲ್ಲವೇ?

A

ಮತ್ತೇನಾದರೂ ಲಾಕ್‌ಡೌನ್‌ ಘೋಷಿಸಿ, ಎಸ್‌ಒಪಿ ಜಾರಿಯಾದರೆ ವಕೀಲ ಸಮುದಾಯ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಈಗ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಇದ್ದೂ ಲಾಕ್‌ಡೌನ್‌ ಮಾಡುವುದರಲ್ಲಿ ಅರ್ಥ ಇಲ್ಲ. ಹಾಗೆ ಮಾಡುವುದು ಅತಿರೇಕವಾಗುತ್ತದೆ. ಬೆಲೆಗಳು ಏರಿಕೆ ಆಗುತ್ತಿವೆ. ಇತ್ತ ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ ಉಳಿಯುವ ಪ್ರಮಾಣ ಹೆಚ್ಚಿದೆ. ಕೋರ್ಟುಗಳು ಕೂಡ ವಿಪರೀತ ಎಂಬಂತೆ ನಿಯಮಗಳನ್ನು ಪಾಲಿಸುತ್ತಿವೆ. ಕಾರ್ಯಾಂಗ, ಶಾಸಕಾಂಗ ಪಾಲಿಸದ ಕಟ್ಟುನಿಟ್ಟಿನ ನಿಯಮ ನ್ಯಾಯಾಂಗಕ್ಕೆ ಏಕೆ? ಇದನ್ನು ಜಿಲ್ಲಾ ನ್ಯಾಯಾಧೀಶರ ಬಳಿಯೂ ನಾನು ಪ್ರಶ್ನಿಸಿದ್ದೇನೆ. ವಕೀಲರು ಬೆಂಬಲಕ್ಕೆ ನಿಂತರೆ ನ್ಯಾಯಾಲಯ ಕಲಾಪಗಳನ್ನು ತಡೆಯಬಾರದು ಎಂದು ಪ್ರಧಾನಿ ರಾಷ್ಟ್ರಪತಿಯವರ ಗಮನಕ್ಕೂ ತರುತ್ತೇನೆ ಎಂಬುದಾಗಿ ಹೇಳಿದ್ದೇನೆ.

Q

ಕಳೆದ ವರ್ಷ ಪ್ರಕರಣಗಳು ದಾಖಲಾಗುವ ಪ್ರಮಾಣ ಇಳಿಮುಖವಾಗಿತ್ತು. ಆದರೂ ಪ್ರಕರಣಗಳ ಬಾಕಿ ಉಳಿಯುವಿಕೆ ಹೆಚ್ಚಿದೆಯೇ?

A

ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದರೂ ನ್ಯಾಯಾಲಯಗಳು ಸೂಕ್ತವಾಗಿ ಕಾರ್ಯ ನಿರ್ವಹಿಸದೆ ಹಳೆಯ ಪ್ರಕರಣಗಳು ಬಾಕಿ ಉಳಿದಿವೆ. ಜೊತೆಗೆ ಕಳೆದ ಎರಡು ಮೂರು ತಿಂಗಳುಗಳಲ್ಲಿ ಇದ್ದಕ್ಕಿದ್ದಂತೆ ಪ್ರಕರಣಗಳು ದಾಖಲಾಗುವ ಸಂಖ್ಯೆ ಹೆಚ್ಚಿದೆ. ಕೋರ್ಟ್ ಪ್ರೊಸೀಜರ್‌ಗಳ ಆಚೆಗೆ ಲೋಕ ಅದಾಲತ್‌, ಮಧ್ಯಸ್ಥಿಕೆಯನ್ನು ನಡೆಸುತ್ತಿದ್ದರೂ ಪ್ರಕರಣಗಳ ಬಾಕಿ ಉಳಿಯುವಿಕೆ ಹೆಚ್ಚುತ್ತಿವೆ.

Q

ಬಿಕ್ಕಟ್ಟಿನ ಸಂದರ್ಭದಲ್ಲಿ ಕೆಎಸ್‌ಬಿಸಿ ಹಾಗೂ ಬಿಸಿಐ ರೀತಿಯ ಸಂಸ್ಥೆಗಳು ಹೇಗೆ ನೆರವಾದವು?

A

ಯಾವ ಸಂಸ್ಥೆಗಳೂ ನೆರವಿಗೆ ಬಂದಿಲ್ಲ. ಕೆಎಸ್‌ಬಿಸಿ ಪ್ರತಿಯೊಬ್ಬ ವಕೀಲರಿಗೂ ರೂ. 5000 ಸಹಾಯಧನ ಒದಗಿಸಿದೆ ಎಂದೇ ಇಟ್ಟುಕೊಳ್ಳೋಣ. ಅಷ್ಟು ಹಣ ಯಾವುದಕ್ಕೆ ಸಾಲುತ್ತದೆ ಸ್ವಾಮಿ? ಸಂಕಷ್ಟಕ್ಕೊಳಗಾದವರು ಸಾವಿರ ಮಂದಿ ಎಂದುಕೊಂಡರೆ ಕೆಎಸ್‌ಬಿಸಿ ನೆರವು ದೊರೆತಿರುವುದು ಕೇವಲ ಹತ್ತು ಜನರಿಗೆ ಮಾತ್ರ. ಒಬ್ಬ ಸರ್ಕಾರಿ ಜವಾನ ನಿವೃತ್ತಿಯಾಗುವ ಹೊತ್ತಿಗೆ ನಲವತ್ತೋ ಐವತ್ತೋ ಲಕ್ಷ ಮೊತ್ತ ಪಡೆಯುತ್ತಾನೆ. ವಕೀಲರಿಗೆ ಆ ಭಾಗ್ಯವೂ ಇಲ್ಲ. ಅವರನ್ನೇ ನೆಚ್ಚಿಕೊಂಡ ಹೆಂಡತಿ ಮಕ್ಕಳ ಪಾಡೇನು?

Q

ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಯುವ ವಿಚಾರಣೆ ಬಗ್ಗೆ ನಿಮ್ಮ ನಿಲುವು ಏನು ?

A

ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಯುವ ವಿಚಾರಣೆ ಭಾರಿ ಗೊಂದಲ ಸೃಷ್ಟಿಸುತ್ತಿದೆ. ನಾವು ಹೇಳುವುದೊಂದು ಅಲ್ಲಿ ದಾಖಲಾಗುವುದು ಇನ್ನೊಂದು ಎಂಬಂತಾಗುತ್ತಿದೆ. ಅಂತಹ ಸಾಕಷ್ಟು ಘಟನೆಗಳು ನಡೆದಿವೆ. ಸಮಯದ ಅಭಾವದಿಂದ ತೀರ್ಪುಗಳನ್ನು ಕೆಲ ನ್ಯಾಯಾಧೀಶರು ಓದಿ ಹೇಳುತ್ತಿಲ್ಲ. ಇದರಿಂದ ಎರಡೂ ಕಡೆಯ ನ್ಯಾಯವಾದಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಅಲ್ಲದೆ ಬಹುತೇಕ ವಕೀಲರಿಗೆ ವಯಸ್ಸಾಗಿರುತ್ತದೆ. ಕಣ್ಣು- ಕಿವಿ ಸರಿಯಾಗಿ ಕೆಲಸ ಮಾಡದ ವಕೀಲರು ವೀಡಿಯೊ ಕಲಾಪದಿಂದಾಗಿ ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ.

Q

ಕೋವಿಡ್‌ ರೀತಿಯ ಪರಿಸ್ಥಿತಿಯನ್ನು ಜಿಲ್ಲೆ ಅಥವಾ ತಾಲೂಕು ಮಟ್ಟದ ವಕೀಲರ ಸಂಘಗಳೇ ಬಗೆಹರಿಸಿಕೊಳ್ಳಲು ಸಾಧ್ಯ ಇಲ್ಲವೇ?

A

ಅಷ್ಟು ಹಣ ನಮ್ಮ ಸಂಘಗಳಲ್ಲಿ ಇರುವುದಿಲ್ಲ. ಸ್ಟಾಂಪ್‌ನಿಂದ ರೂ 25 ಸಂಗ್ರಹವಾಗುತ್ತದೆ. ನಾನೊಮ್ಮೆ ವಕೀಲರಿಗೆ ಈ ಮೊತ್ತವನ್ನು ರೂ 100ಕ್ಕೆ ಹೆಚ್ಚಿಸೋಣ ಎಂದಿದ್ದೆ. ಆದರೆ ಸಂಘದ ಸದಸ್ಯರು ಇದಕ್ಕೆ ಒಪ್ಪಲಿಲ್ಲ. ಕೇವಲ ರೂ 50ಕ್ಕೆ ಹೆಚ್ಚಿಸಲು ಒಪ್ಪಿಗೆ ಸೂಚಿಸಿದರು. ಒಂದು ಕಾಫಿಗೇ ಇಪ್ಪತ್ತು ರೂಪಾಯಿ ನೀಡಬೇಕಾದ ಕಾಲ ಇದು. ಇನ್ನು ಸಂಘದ ಕಾಗದ ಪತ್ರಗಳು, ಸಿಬ್ಬಂದಿ ವರ್ಗದ ನಿರ್ವಹಣೆ, ಸಭೆ ಸಮಾರಂಭಗಳಿಗೆ ವಿನಿಯೋಗಿಸಲು ಸಾಕಷ್ಟು ಹಣ ಬೇಕಾಗುತ್ತದೆ. ಜಿಲ್ಲಾ ಸಂಘಗಳಲ್ಲಿ 800- 900 ವಕೀಲರಾದರೂ ಇರುತ್ತಾರೆ. ಆದರೆ ತಾಲ್ಲೂಕು ಮಟ್ಟದ ಸಂಘಗಳಲ್ಲಿ ಅವರ ಸಂಖ್ಯೆ ನೂರು ಇದ್ದರೆ ಹೆಚ್ಚು. ಅಲ್ಲಿ ಹಣ ಕ್ರೋಢೀಕರಣ ಇನ್ನೂ ದೊಡ್ಡ ಸವಾಲು.

Related Stories

No stories found.
Kannada Bar & Bench
kannada.barandbench.com