[ಅನುಸಂಧಾನ] ಹಲವು ವಕೀಲರ ವ್ಯಕ್ತಿತ್ವಗಳನ್ನು ಎರಕ ಹೊಯ್ದು ʼಸಿಎಸ್‌ಪಿʼ ಪಾತ್ರ ರೂಪಿಸಿದೆ: ಟಿ ಎನ್‌ ಸೀತಾರಾಂ

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರೊಂದಿಗಿನ ಮಾತುಕತೆಯೇ ಈ 'ಅನುಸಂಧಾನ'.
[ಅನುಸಂಧಾನ] ಹಲವು ವಕೀಲರ ವ್ಯಕ್ತಿತ್ವಗಳನ್ನು ಎರಕ ಹೊಯ್ದು ʼಸಿಎಸ್‌ಪಿʼ ಪಾತ್ರ ರೂಪಿಸಿದೆ: ಟಿ ಎನ್‌ ಸೀತಾರಾಂ

ಕೆಲವು ವ್ಯಕ್ತಿತ್ವಗಳನ್ನು ಚೌಕಟ್ಟೊಂದರಲ್ಲಿ ಹಿಡಿದಿಡಲು ಸಾಧ್ಯವೇ ಆಗದು. ಹಾಗೆ ಅವು ವಿಸ್ತಾರವಾಗಿ ಹರವಿಕೊಂಡಿರುತ್ತವೆ. ಅರಿವಿನ ಹಲವು ಶಾಖೆಗಳಿಗೆ ಮುಖಾಮುಖಿಯಾಗಿರುತ್ತವೆ. ಅಂತಹ ಒಂದು ವಿಶಿಷ್ಟ ವ್ಯಕ್ತಿತ್ವ ಕಿರುತೆರೆ ನಿರ್ದೇಶಕ ಟಿ ಎನ್‌ ಸೀತಾರಾಂ ಅವರದ್ದು. ಬೆಂಗಳೂರಿನ ಶ್ರೀಜಗದ್ಗುರು ರೇಣುಕಾಚಾರ್ಯ ಕಾನೂನು ಕಾಲೇಜಿನಿಂದ ಎಲ್‌ಎಲ್‌ಬಿ ಪದವಿ ಪಡೆದ ಅವರು ಕಾರಣಾಂತರಗಳಿಂದ ವಕೀಲಿಕೆ ಮುಂದುವರೆಸಲಿಲ್ಲ. ಆದರೆ ಅವರ ಪ್ರತಿಭೆ ಕನ್ನಡ ಸಾಂಸ್ಕೃತಿಕ ಲೋಕವನ್ನು ಅನನ್ಯ ಬಗೆಯಲ್ಲಿ ಪೊರೆಯಿತು. ದೃಶ್ಯ ಮಾಧ್ಯಮಕ್ಕೆ ಹೊಸ ನೀರು ಹರಿಯಿತು. ಕಿರುತೆರೆಯ ಸಾಧ್ಯತೆಗಳನ್ನು ವಿಸ್ತರಿಸಿತು.

ಅವರೆಂದರೆ ರಂಗಭೂಮಿ, ಸಿನಿಮಾ, ಸಾಹಿತ್ಯ, ಕಿರುತೆರೆ, ರಾಜಕಾರಣ ಇನ್ನೂ ಏನೇನೊ. ತಾನೊಬ್ಬ ಅಪ್ಪಟ ಧಾರಾವಾಹಿ ಮನುಷ್ಯ ಎಂದು ಕರೆದುಕೊಳ್ಳುವ ಅವರು ರಾಜಕಾರಣದೊಟ್ಟಿಗೆ ತತ್ವಪದವನ್ನೂ, ನಾಗರಿಕತೆಯ ಮಾಯೆಯೊಟ್ಟಿಗೆ ಮನುಷ್ಯತ್ವವನ್ನೂ, ಸೌಂದರ್ಯದೊಟ್ಟಿಗೆ ಸಹಜತೆಯನ್ನೂ ಹದವಾಗಿ ಬೆರೆಸಬಲ್ಲವರು. ಅವರ ಕೋರ್ಟ್‌ ದಿನಗಳ ಸುತ್ತ ʼಬಾರ್‌ ಅಂಡ್‌ ಬೆಂಚ್‌ʼ ಸಂಚರಿಸಿದಾಗ…

Q

ಕಾನೂನು ಶಿಕ್ಷಣ ಪಡೆಯಲಿಕ್ಕೆ ನಿಮಗೆ ಸ್ಫೂರ್ತಿ ನೀಡಿದವರು ಯಾರು?

A

ನಮ್ಮ ತಂದೆಯವರ ಅಣ್ಣ ತುಂಬಾ ಯಶಸ್ವಿ ವಕೀಲರಾಗಿದ್ದರು. ನಮ್ಮ ತಂದೆಯವರು ಕೂಡ ಕಾನೂನು ಓದುವಂತೆ ಹೇಳುತ್ತಿದ್ದರು. ಅವರ ಪ್ರೇರಣೆ ನನ್ನಲ್ಲಿ ನ್ಯಾಯಿಕ ಲೋಕದ ಕುರಿತು ಆಸಕ್ತಿ ಬೆಳೆಯುವಂತೆ ಮಾಡಿತು.

Q

ಕಾನೂನು ಹೇಳಿಕೊಟ್ಟ ನಿಮ್ಮ ಇಷ್ಟದ ಗುರುಗಳು ಯಾರಾಗಿದ್ದರು?

A

ತುಂಬಾ ಜನ ಇದ್ದಾರೆ. ಎಂ ಆರ್‌ ಜನಾರ್ದನ್‌ ಅಂತ ಇದ್ದರು. ಅವರು ನಮಗೆ ನ್ಯಾಯಶಾಸ್ತ್ರ ಬೋಧಿಸುತ್ತಿದ್ದರು. ಜನತಾ ಪಕ್ಷದ ಅವಧಿಯಲ್ಲಿ ಅವರು ರಾಜ್ಯ ಸರ್ಕಾರದ ಅಡ್ವೊಕೇಟ್‌ ಜನರಲ್‌ ಕೂಡ ಆಗಿದ್ದರು. ದೊಡ್ಡಬಳ್ಳಾಪುರದಲ್ಲಿ ಎಸ್‌ ವಾಸುದೇವನ್ ಅಂತ ಕ್ರಿಮಿನಲ್‌ ವಕೀಲರು ಇದ್ದರು. ನ್ಯಾಯಾಧೀಶರಾಗಿದ್ದ ಅನಂತಮೂರ್ತಿ ಅವರು ಕೂಡ ಮಾರ್ಗದರ್ಶನ ಮಾಡಿದ್ದಾರೆ. ಗೆಳೆಯರಾಗಿ ಸಿ ಎಚ್‌ ಹನುಮಂತರಾಯ, ಪುರುಷೋತ್ತಮ್‌ ರಾವ್‌ ಅವರ ಹೆಸರುಗಳನ್ನೂ ಮರೆಯುವಂತಿಲ್ಲ.

Q

ಕಾನೂನು ಅಧ್ಯಯನದ ವೇಳೆ ನಿಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ಸಂಗತಿಗಳು ಯಾವುವು?

A

ಹಾಗೆ ಒಟ್ಟಾರೆಯಾಗಿ ಹೇಳಲು ಸಾಧ್ಯವಿಲ್ಲ. ಅನೇಕ ಕೃತಿಗಳು ನನ್ನನ್ನು ಪ್ರಭಾವಿಸಿವೆ. ಫ್ರಾನ್ಸಿಸ್‌ ವೆಲ್‌ಮನ್‌ನ ʼಆರ್ಟ್‌ ಆಫ್‌ ಕ್ರಾಸ್‌ ಎಕ್ಸಾಮಿನೇಷನ್‌ʼ ಎಂಬ ಪುಸ್ತಕ, ಅಮೆರಿಕದ ಪ್ರಖ್ಯಾತ ವಕೀಲ ಕ್ಲಾರೆನ್ಸ್‌ ಡೇರೊ ಬಗ್ಗೆ ಬರೆದ ಗ್ರಂಥಗಳು ಹೀಗೆ ಸಾಕಷ್ಟು ಪುಸ್ತಕಗಳಿಂದ ಪ್ರೇರಿತನಾಗಿದ್ದೇನೆ.

Q

ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳು ಹೇಗಿದ್ದವು? ಯಾವ ಹಿರಿಯ ವಕೀಲರ ಕೈಕೆಳಗೆ ಪ್ರಾಕ್ಟೀಸ್‌ ಮಾಡಿದಿರಿ?

A

ನಾನು ಹೈಕೋರ್ಟ್‌ ವಕೀಲನಾಗಿ ಎನ್‌ರೋಲ್‌ ಮಾಡಿಕೊಂಡ ಕೆಲವೇ ದಿನಗಳಲ್ಲಿ ನಮ್ಮ ತಂದೆ ವಿಧಿವಶರಾದರು. ನಾನು ಊರಿಗೆ ಮರಳಬೇಕಾಯಿತು. ಬಹಳ ತೊಂದರೆಗಳು ಎದುರಾದವು. ವಕೀಲಿಕೆಯಿಂದ ಬೇಕಾದಷ್ಟು ಕಲಿತೆ. ಎಸ್ ವಾಸುದೇವನ್, ವೈ ಆದಿನಾರಾಯಣರಾವ್‌ ಅವರ ಕೈಕೆಳಗೆ ಪ್ರಾಕ್ಟೀಸ್‌ ಮಾಡಿದೆ.

Q

ನೀವು ವಾದ ಮಂಡಿಸಿದ ಮೊದಲ ಕೇಸ್‌ ಯಾವುದು? ಮೆಲುಕು ಹಾಕುವಂತಹ ಪ್ರಸಂಗಗಳನ್ನು ಹಂಚಿಕೊಳ್ಳಬಹುದೇ?

A

ಯಾವುದೋ ಒಂದು ಪೆಟಿ ಕೇಸ್‌. ಅದರ ವಿವರ ದೊಡ್ಡದಿದೆ. ಕರ್ನಾಟಕ ಪೊಲೀಸ್‌ ಕಾಯಿದೆಯಡಿ ಮೊಕದ್ದಮೆ ಹೂಡಲಾಗಿತ್ತು. ಸೀನಿಯರ್‌ ವಕೀಲರು ವಾದ ಮಂಡಿಸುವಂತೆ ನನಗೆ ಹೇಳಿ ಹೋದರು. ಕೇಸ್‌ ಗೆದ್ದೆ. ಆ ಬಳಿಕ ಕಕ್ಷೀದಾರ ನನಗೆ 20 ರೂಪಾಯಿ ಸಂಭಾವನೆ ನೀಡಿದರು. ಅದು ನನ್ನ ಮೊದಲ ಪ್ರಕರಣ.

Q

ʼಸಿಎಸ್‌ಪಿʼ ಪಾತ್ರ ಬೇಕೆಂದೇ ಸೃಷ್ಟಿಯಾದದ್ದು ಅಲ್ಲ ಅಲ್ಲವೇ? ಆತ್ಮಕಥಾನಕದಂತಿದ್ದ ಆ ಪಾತ್ರ ಹುಟ್ಟಿದ ಸಂದರ್ಭ ಎಂತಹುದು?

A

ನಾನು ಒಡನಾಟ ಹೊಂದಿದ್ದ ಎಲ್ಲಾ ವಕೀಲರನ್ನೂ ಒಟ್ಟುಗೂಡಿಸಿ ಆ ಪಾತ್ರ ಸೃಷ್ಟಿಸಿದ್ದೆ. ಅವರೆಲ್ಲಾ ಕಟ್ಟುನಿಟ್ಟಿನ, ಮೊನಚು ಮಾತಿನ ನೇರ ನಿಷ್ಠುರ ನಡೆಯ ವ್ಯಕ್ತಿತ್ವದವರಾಗಿದ್ದರು. ವಾಸುದೇವನ್, ವೈ ಆದಿನಾರಾಯಣರಾವ್‌ ಕೂಡ ಆ ಪಾತ್ರಕ್ಕೆ ಸ್ಪೂರ್ತಿ. ಅದರೊಳಗೆ ಬಹುಪಾಲು ನಾನು ಇದ್ದೇನೆ.

Q

ಒಂದೆಡೆ ವಕೀಲ ಬಳಗ, ಮತ್ತೊಂದೆಡೆ ಸಾಂಸ್ಕೃತಿಕ ಒಡನಾಟ, ಜೊತೆಗೆ ಸಿನಿಮಾ ಸಾಂಗತ್ಯ ಅದರಾಚೆಗೆ ರಾಜಕೀಯ ಸ್ನೇಹಿತರು… ಈ ವಲಯದಲ್ಲಿ ಯಾವುದು ಸೀತಾರಾಂ ಅವರನ್ನು ಹೆಚ್ಚು ಕಟೆಯಿತು?

A

ಹಾಗೆ ಹೇಳಲು ಸಾಧ್ಯ ಇಲ್ಲ. ಎಲ್ಲವೂ ನನ್ನನ್ನು ರೂಪಿಸಿವೆ. ರಾಜಕೀಯ ನನ್ನ ಬದುಕಿಗೆ ಹೆಚ್ಚು ರಂಗು ತಂದಿತು ಎನ್ನಬಹುದು. ರಾಮಕೃಷ್ಣ ಹೆಗಡೆ, ಎಚ್‌.ಡಿ. ದೇವೇಗೌಡರು, ಜೀವರಾಜ್‌ ಆಳ್ವ, ಎಂ. ಪಿ. ಪ್ರಕಾಶ್‌, ಜಾರ್ಜ್‌ ಫರ್ನಾಂಡೀಸ್‌ ಮಧು ಲಿಮಿಯೆ, ಮಧು ದಂಡವತೆ, ಲಾಲೂ ಪ್ರಸಾದ್‌ ಯಾದವ್‌, ಎಸ್‌ ವೆಂಕಟರಾಮನ್‌ ಮುಂತಾದವರ ಪರಿಚಯವಿತ್ತು. ಅವರೆಲ್ಲಾ ನಿಗಿ ನಿಗಿ ಕೆಂಡದಂತಿದ್ದವರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಾರ್ಜ್‌ ಫರ್ನಾಂಡಿಸ್‌ ಬೆಂಕಿ ಉಗುಳುತ್ತಿದ್ದರು. 24- 25 ವರ್ಷದವನಾಗಿದ್ದ ನನ್ನ ಮೇಲೆ ಅವರೆಲ್ಲಾ ಗಾಢ ಪ್ರಭಾವ ಬೀರಿದ್ದಾರೆ.

Q

ನೀವೇ ಸೃಜಿಸಿದ ಕೋರ್ಟ್‌ ರೂಮಿನ ಬಗ್ಗೆ ಈಗ ಏನನ್ನಿಸುತ್ತದೆ?

A

ಅನೇಕರು ಕೋರ್ಟ್‌ ದೃಶ್ಯಗಳನ್ನು ನನಗಿಂತಲೂ ಮೊದಲೇ ನಿರೂಪಿಸಿದ್ದಾರೆ. ಮತ್ತು ತುಂಬಾ ಚೆನ್ನಾಗಿ ಮಂಡಿಸಿದ್ದಾರೆ. ನನಗೆ ವಕೀಲ ವೃತ್ತಿಯ ಅನುಭವವೂ ಇದ್ದುದರಿಂದ ಸಹಜತೆಯನ್ನು ತರಲು ಯತ್ನಿಸಿದೆ.

Q

ʼಇಂತಹ ಪ್ರಕರಣದ ಬಗ್ಗೆ ನಾನು ವಾದಿಸಬೇಕಿತ್ತುʼ ಅನ್ನಿಸಿದ, ನೀವು ಕಂಡುಕೇಳಿದ ಕೇಸ್‌ ಯಾವುದು?

A

ಬೇಕಾದಷ್ಟು ಇವೆ. ಕಷ್ಟದ ದಿನಗಳಿಗೆ ನಮ್ಮ ಬದುಕು ಸರಿದಂತೆಲ್ಲಾ ಶ್ರೀಮಂತ ವಕೀಲರು ಮಂಡಿಸಿದ ಯಾವುದಾದರೂ ಪ್ರಕರಣ ನನ್ನ ಕೈಗೆ ಸಿಗಬೇಕಿತ್ತು ಅನ್ನಿಸೋದು. ಈಗ ಹಾಗೆ ವಾದಿಸಬೇಕು ಎಂದು ಅನ್ನಿಸುವುದಿಲ್ಲ.

Q

ʼಮಾಯಾಮೃಗʼ, ʼಮನ್ವಂತರʼ, ʼಮುಕ್ತ ಮುಕ್ತʼ, ʼಮಹಾಪರ್ವʼ ʼಮಗಳು ಜಾನಕಿʼ… ಇವುಗಳಾಚೆಗೆ ಸೀತಾರಾಂ ಅವರು ಏನು?

A

ಅದರಾಚೆಗೆ ಸೀತಾರಾಂ ಏನೂ ಅಲ್ಲ. ಧಾರಾವಾಹಿ ನಮ್ಮೊಳಗೆ ಇರುತ್ತದೆ. ನಾವು ಧಾರಾವಾಹಿಯೊಳಗೆ ಇರುತ್ತೇವೆ. ನಾನೊಬ್ಬ ಧಾರಾವಾಹಿ ಮನುಷ್ಯ. ನನಗೆ ಬುದ್ಧಿ ಪ್ರಾಧಾನ್ಯಕ್ಕಿಂತಲೂ ಭಾವ ಪ್ರಧಾನತೆ ಮುಖ್ಯ. Following the tears ಅನ್ನುತ್ತಾರಲ್ಲಾ ಅದನ್ನು ನಾನು ಮಾಡಿದೆ. ನೋವಿನ ಹಿಂದೆ ಹೋದೆ. ಹೃದಯ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡಿದೆ. ಅಷ್ಟೇ ಅದರಾಚೆಗೆ ಏನೇನೂ ಅಲ್ಲ.

Q

ನೀವು ಸದಾ ಗುನಗಿಕೊಳ್ಳುವ ಕವಿತೆ ಯಾವುದು?

A

(ಕವಿ ಗೋಪಾಲಕೃಷ್ಣ ಅಡಿಗರ ʼನಡೆದು ಬಂದ ದಾರಿʼ ಕವಿತೆಯ ಕೆಲ ಸೊಲ್ಲುಗಳನ್ನು ಸೀತಾರಾಂ ಹೇಳುತ್ತಾರೆ.)

ಗೋಳಗಾಜು ಝಗ್ಗನೊಡೆದು ನಗ್ನ ದೀಪ ಸಂಭ್ರಮ,
ಕೃಷ್ಣ ಬುದ್ಧ ಅಲ್ಲಮ.

ಗೋಳಗಾಜು ಅಂದರೆ ಬಲ್ಬು ಝಗ್ಗನೊಡೆಯಿತಂತೆ, ನಗ್ನ ದೀಪ ಅರಳಿತಂತೆ. ಆ ಬೆಳಕೇ ಕೃಷ್ಣ ಬುದ್ಧ ಅಲ್ಲಮ ಎನ್ನುತ್ತಾರೆ ಕವಿ. ಇಂತಹ ನೂರಾರು ಪದ್ಯಗಳಿವೆ. ಕುವೆಂಪು, ಸಿದ್ದಲಿಂಗಯ್ಯ, ಕೆ ಎಸ್‌ ನರಸಿಂಹ ಸ್ವಾಮಿ…

ನರಸಿಂಹ ಸ್ವಾಮಿಗಳು ಒಂದು ಕಡೆ ಹೇಳ್ತಾರೆ ʼನಗೆ ಕೊಲ್ಲುವಂತೆ ಹಗೆ ಕೊಲ್ಲಲಾರದುʼ. ಎಂಥಾ ಮಾತು !

Related Stories

No stories found.
Kannada Bar & Bench
kannada.barandbench.com