[ಅನುಸಂಧಾನ] ನನ್ನ ಹೋರಾಟಗಳಿಗೆ ಸ್ಪಷ್ಟತೆ ಒದಗಿಸಿದ್ದು ವಕೀಲಿಕೆ: ಆಶಾ ಕಾರ್ಯಕರ್ತೆಯರ ಧ್ವನಿ ಡಿ ನಾಗಲಕ್ಷ್ಮಿ

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರೊಂದಿಗಿನ ಮಾತುಕತೆಯೇ ಈ 'ಅನುಸಂಧಾನ'.
Nagalakshmi D
Nagalakshmi D

ಡಿ. ನಾಗಲಕ್ಷ್ಮಿ ಅವರು ಕಳೆದ ಹತ್ತಾರು ವರ್ಷಗಳಿಂದ ಮಹಿಳೆಯರನ್ನು ರಾಜ್ಯಮಟ್ಟದಲ್ಲಿ ಸಂಘಟಿಸುತ್ತಿರುವ ದಿಟ್ಟ ಹೋರಾಟಗಾರ್ತಿ. ಪಟ್ಟು ಬಿಡದೆ ನ್ಯಾಯ ಒದಗಿಸಿಕೊಡುವ ಕಾರಣಕ್ಕಾಗಿಯೇ ಆಶಾ ಕಾರ್ಯಕರ್ತೆಯರ ಪಾಲಿನ ಆಶಾದೀಪವಾಗಿ ಅವರು ಕಾಣುತ್ತಾರೆ. ತೋರಣಗಲ್‌ನಲ್ಲಿ ಜನಿಸಿದ ಅವರು ಕಾನೂನು ಅಭ್ಯಾಸ ಮಾಡಿದ್ದು ಬಳ್ಳಾರಿಯ ವುಲ್ಕಿ ಸಣ್ಣರುದ್ರಪ್ಪ ಕಾನೂನು ಕಾಲೇಜಿನಲ್ಲಿ. ತಮ್ಮೂರಿನಲ್ಲೇ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿದ ಬಳಿಕ ಬಳ್ಳಾರಿಯಲ್ಲಿ ನಾಗರಿಕ ಹೋರಾಟ ಸಮಿತಿ ಕಟ್ಟಿಕೊಂಡು ಆ ನಗರದ ಮೂಲಸೌಕರ್ಯಗಳ ಪರ ಧ್ವನಿ ಎತ್ತಿದರು. ಬಳಿಕ ನಾಡಿನ ಮೂಲೆ ಮೂಲೆಯಲ್ಲಿ ಆಶಾ ಕಾರ್ಯಕರ್ತೆಯರ ಸಂಘಟನೆಗೆ ತೊಡಗಿಕೊಂಡರು.

ಸ್ವತಃ ವಕೀಲರೂ ಆಗಿರುವ ಅವರು ತಮ್ಮ ಕಾನೂನು ಅಧ್ಯಯನದ ದಿನಗಳನ್ನು, ವಕೀಲಿಕೆಯ ಅನುಭವಗಳನ್ನು, ಸಂಘಟನೆಯ ಮಹತ್ವವನ್ನು ʼಬಾರ್‌ ಅಂಡ್‌ ಬೆಂಚ್ʼ‌ ಜೊತೆ ಹಂಚಿಕೊಂಡಿದ್ದಾರೆ. ಮಹಿಳೆಯರ ಸುಖ- ದುಃಖಗಳನ್ನು ಚಿಕ್ಕಂದಿನಿಂದಲೇ ಬಲ್ಲ ಅವರು ಕಾನೂನು ಅಧ್ಯಯನವು ತಮ್ಮ ಹೋರಾಟಗಳಿಗೆ ಸ್ಫೂರ್ತಿ ಒದಗಿಸಿದ ಬಗೆಯನ್ನು ವಿವರಿಸಿದ್ದಾರೆ.

ಆಶಾ ಕಾರ್ಯಕರ್ತೆಯರ ಬೃಹತ್‌ ಪ್ರತಿಭಟನಾ ಮೆರವಣಿಗೆ
ಆಶಾ ಕಾರ್ಯಕರ್ತೆಯರ ಬೃಹತ್‌ ಪ್ರತಿಭಟನಾ ಮೆರವಣಿಗೆ
Q

ವಕೀಲ ವೃತ್ತಿಯಿಂದ ನೀವು ಹೋರಾಟದ ಹಾದಿಯತ್ತ ಹೊರಳಿದ್ದು ಹೇಗೆ?

A

ವಕೀಲಿಕೆಯಲ್ಲಿ ತೊಡಗಿದ್ದಾಗ ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಅನೇಕ ಪ್ರಕರಣಗಳನ್ನು ಹತ್ತಿರದಿಂದ ಗಮನಿಸುತ್ತಿದ್ದೆ. ಆದರೆ ವೃತ್ತಿಯ ಕಾರಣದಿಂದಾಗಿ ಆ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲಾಗುತ್ತಿಲ್ಲ ಎಂದು ಅನ್ನಿಸಿತ್ತು. ಮಹಿಳೆಯರನ್ನೆಲ್ಲಾ ಸಂಘಟಿಸಿ ಅವರ ಪರವಾಗಿ ಧ್ವನಿ ಎತ್ತೋಣ ಎನ್ನಿಸಿ ಸಂಘಟನಾ ಕ್ಷೇತ್ರವನ್ನು ಆಯ್ದುಕೊಂಡೆ.

Q

ಕಾನೂನು ಶಿಕ್ಷಣ, ವಕೀಲಿಕೆಯ ಹಿನ್ನೆಲೆ ನಿಮ್ಮ ಸಂಘಟನಾ ಶಕ್ತಿ ಮೇಲೆ ಹೇಗೆ ಪರಿಣಾಮ ಬೀರಿತು?

A

ನಿಜ ಹೇಳಬೇಕೆಂದರೆ ನಾನು ಸಂಘಟನೆಯ ಮುಖಾಂತರ ಕಾನೂನು ಶಿಕ್ಷಣದತ್ತ ಹೊರಳಿದವಳು. ಪದವಿ ಓದುತ್ತಿರುವಾಗ ನಮ್ಮೂರು ಬಳ್ಳಾರಿ ಜಿಲ್ಲೆ ತೋರಣಗಲ್ಲಿನ ಬಳಿ ಜಿಂದಾಲ್‌ ಉಕ್ಕಿನ ಕಾರ್ಖಾನೆ ತಲೆ ಎತ್ತುತ್ತಿತ್ತು. ಅಲ್ಲಿ ಇದ್ದದ್ದು ವಲಸೆ ಕಾರ್ಮಿಕರು. ಅಲ್ಲಿ ನೂರಾರು ಮಹಿಳೆಯರ ಗೋಳಿನ ಕತೆಗಳು ಕೇಳಿ ಬರುತ್ತಿದ್ದವು. ಅಂತಹ ಮಹಿಳೆಯರಿಗಾಗಿ ʼನವ್ಯ ದೀಪಿಕಾ ಮಹಿಳಾ ಗುಂಪುʼ ಆರಂಭಿಸಿದೆವು. ಅಷ್ಟರೊಳಗೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘದ (ಏಮ್ಸ್‌) ಪರಿಚಯವಾಗಿತ್ತು. ಅದರ ಸೋದರ ಸಂಘಟನೆ ಎಐಯುಟಿಯುಸಿ ಜೊತೆಯೂ ಸಕ್ರಿಯವಾಗಿ ತೊಡಗಿಕೊಂಡೆ.

ಆದರೆ ನನ್ನ ಹೋರಾಟಗಳಿಗೆ ಸ್ಪಷ್ಟತೆಯನ್ನು ದಕ್ಕಿಸಿಕೊಟ್ಟದ್ದು ಕಾನೂನು ಅಧ್ಯಯನ ಮತ್ತು ವಕೀಲಿಕೆಯ ವೃತ್ತಿ. ನಾನು ಪ್ರಾಕ್ಟೀಸ್‌ ಮಾಡಿದ್ದು ಕೇವಲ ಐದಾರು ವರ್ಷ ಅಷ್ಟೇ. ಆದರೆ ಅದರಿಂದ ಬಹಳಷ್ಟು ಕಲಿತೆ. ಸಂಘಟನೆಯ ಬಗೆಗೆ ತಿಳಿವಳಿಕೆ ಬರಲಿ ಎಂಬ ಕಾರಣಕ್ಕೇ ನಾನು ಕಾನೂನು ಅಧ್ಯಯನದಲ್ಲಿ ತೊಡಗಿದ್ದೆ.

ಪ್ರೋತ್ಸಾಹಧನ ವಿತರಣಾ ಸಮಾರಂಭವೊಂದರಲ್ಲಿ...
ಪ್ರೋತ್ಸಾಹಧನ ವಿತರಣಾ ಸಮಾರಂಭವೊಂದರಲ್ಲಿ...
Q

ಆಶಾ ಕಾರ್ಯಕರ್ತೆಯರ ಪರವಾಗಿ ಗಟ್ಟಿಯಾಗಿ ನಿಲ್ಲಬೇಕು ಅನ್ನಿಸಿದ್ದು ಏಕೆ?

A

2008ರಿಂದ 2010ನೇ ಇಸವಿಯವರೆಗೆ ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರನ್ನು ಹಂತ ಹಂತವಾಗಿ ನೇಮಿಸಿಕೊಂಡಿತು. ಸುಮಾರು ಸಮಸ್ಯೆಗಳು ಆಶಾ ಕಾರ್ಯಕರ್ತೆಯರಿಗೆ ಇದ್ದವು. ಅವರನ್ನು ಏಕಕಾಲಕ್ಕೆ ನೇಮಿಸಿಕೊಳ್ಳದಿರುವುದು ಕೂಡ ಒಂದು ಸಮಸ್ಯೆಯಾಗಿತ್ತು. ಆರೇಳು ತಿಂಗಳು ಅವರು ವೇತನ/ ಸಂಭಾವನೆ ಇಲ್ಲದೇ ದುಡಿದಿದ್ದರು. ದಿನವಿಡೀ ದುಡಿಯುವ, ಯಾವ ಸಮಯದಲ್ಲಾದರೂ ಆರೋಗ್ಯ ಸಂಬಂಧಿ ಕಾರ್ಯಗಳನ್ನು ನಿರ್ವಹಿಸುವ, 38 ಬಗೆಯ ಸಾರ್ವಜನಿಕ ಸೇವೆಯಲ್ಲಿ ತೊಡಗುವ ಅವರಿಗೆ ಸರ್ಕಾರ ನೀಡುತ್ತಿದ್ದುದು ಪುಡಿಗಾಸು ಅಷ್ಟೇ. ಅಲ್ಲದೆ ಹಲವು ವೇತನ ಮಾದರಿಗಳನ್ನು ಅನುಸರಿಸಲಾಗುತ್ತಿತ್ತು. ಕೇಂದ್ರ ಸರ್ಕಾರ ಎಷ್ಟು ಸಂಭಾವನೆ ನೀಡಬೇಕು, ಅದರಲ್ಲಿ ರಾಜ್ಯ ಸರ್ಕಾರದ ಪಾಲು ಎಷ್ಟು ಎಂಬುದರ ಸ್ಪಷ್ಟತೆ ಇರಲಿಲ್ಲ. ಹೀಗಾಗಿ ತಾಲೂಕು ಮಟ್ಟ, ಜಿಲ್ಲಾಮಟ್ಟದಲ್ಲಿ ಸಂಘಟನೆಗೆ ಮುಂದಾದೆವು. 2009ರ ಡಿಸೆಂಬರ್‌ 22ರಂದು ಮೊದಲ ಸಂಘಟಿತ ಹೋರಾಟ ಶುರುವಾಯಿತು. ಏಳೆಂಟು ಸಾವಿರ ಆಶಾ ಕಾರ್ಯಕರ್ತೆಯರು ಒಗ್ಗೂಡಿ ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿದರು.

Q

ವಕೀಲಿಕೆಯ ಅಸ್ತ್ರ ಹಿಡಿದೇ ಹೋರಾಟ ಮಾಡಬಹುದಿತ್ತಲ್ಲವೇ? ಸಂಘಟನೆಗೆ ಮುಂದಾಗಿದ್ದರ ವಿಶೇಷತೆ ಏನು?

A

ವಕೀಲಿಕೆ ಒಂದು ರೀತಿ ಬುನಾದಿ ಇದ್ದ ಹಾಗೆ. ಅದನ್ನು ಬಳಸಿಕೊಂಡು ಸಂಘಟನೆಯನ್ನು ಇನ್ನಷ್ಟು ಗಟ್ಟಿ ಮಾಡಬಹುದು. ವೃತ್ತಿಯಲ್ಲಿ ತೊಡಗಿಕೊಂಡರೆ ಕಕ್ಷೀದಾರರ ಸಮಸ್ಯೆಗಳನ್ನು ಮಾತ್ರ ಪರಿಹರಿಸಲು ಸಾಧ್ಯವಾಗುತ್ತದೆ. ಒಂದು ವಿಶೇಷ ಕ್ಷೇತ್ರದ ಕಡೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ನಾನು ಸಂಘಟನೆಯನ್ನು ಆಯ್ಕೆ ಮಾಡಿಕೊಂಡೆ.

ಹೋರಾಟದ ಮತ್ತೊಂದು ಮಜಲು
ಹೋರಾಟದ ಮತ್ತೊಂದು ಮಜಲು
Q

ನಿಮ್ಮ ಹೋರಾಟದ ಹಿಂದಿನ ಸ್ಫೂರ್ತಿ ಏನು?

A

ಒಂದೇ ಪದದಲ್ಲಿ ವಿವರಿಸಲು ಆಗದು. ನಮ್ಮ ತಂದೆ ಅಂಗಡಿ ಇಟ್ಟುಕೊಂಡಿದ್ದರು. ಅಲ್ಲಿಗೆ ನೂರಾರು ಜನ ಬರುತ್ತಿದ್ದರು. ಎಲ್ಲರ ಸಮಸ್ಯೆಗಳೂ ಅರ್ಥವಾಗುತ್ತಿತ್ತು. ಚಿಕ್ಕಂದಿನಿಂದ ನೋಡಿದ ಜಾತಿ ವ್ಯವಸ್ಥೆ, ದೇವದಾಸಿ ಪದ್ದತಿ, ಕುಡಿತದ ಸಮಸ್ಯೆ ಇವೆಲ್ಲಾ ಏಕಿವೆ ಎನ್ನುವುದು ನನ್ನ ಎಳೆಯ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿತು. ಒಬ್ಬರಿಗೆ ಒಂದು ನ್ಯಾಯ ಮತ್ತೊಬ್ಬರಿಗೆ ಇನ್ನೊಂದು – ಈ ರೀತಿ ಏಕೆ ಎಂಬ ಪ್ರಶ್ನೆ ಏಳುತ್ತಿತ್ತು. ನಮ್ಮ ತಂದೆ- ತಾಯಿಗೆ ನಾನು ಒಬ್ಬಳೇ ಮಗಳಾಗಿದ್ದರಿಂದ ಚೆನ್ನಾಗಿ ಸಲಹಿದರು. ತುಂಬಾ ಚಟುವಟಿಕೆಯಿಂದ ಜನ ಸಂಪರ್ಕದಲ್ಲಿ ತೊಡಗಿಕೊಳ್ಳಲು ಇಂತಹ ಅನೇಕ ಸಂಗತಿಗಳು ಸ್ಫೂರ್ತಿಯಾದವು.

Q

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಬೆಳೆದು ಬಂದದ್ದು ಹೇಗೆ?

A

ಎಐಯುಟಿಯುಸಿ ಸಂಘಟನೆ ಮೊದಲಿನಿಂದಲೂ ಹಾಸ್ಟೆಲ್‌ ವಿದ್ಯುತ್‌ ಇಲಾಖೆಯ ನೌಕರರು, ರೈತರು, ಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರ ಹೋರಾಟಗಳಲ್ಲಿ ತೊಡಗಿಕೊಂಡಿತ್ತು. ಅದರ ಒಂದು ಟಿಸಿಲಾಗಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಇದೆ. ಸಂಘದ ರಾಜ್ಯಾಧ್ಯಕ್ಷರು ಸೋಮಶೇಖರ್‌ ಯಾದಗಿರಿ. ಸುಮಾರು ಹನ್ನೆರಡು ವರ್ಷಗಳಿಂದ ಇದು ಬೇರುಮಟ್ಟದಿಂದ ಆಶಾ ಕಾರ್ಯಕರ್ತರನ್ನು ಸಂಘಟಿಸುತ್ತಿದೆ.

ಮಾಸಿಕ ವೇತನಕ್ಕಾಗಿ ನಡೆಸುತ್ತಿರುವ ಪ್ರತಿಭಟನೆ
ಮಾಸಿಕ ವೇತನಕ್ಕಾಗಿ ನಡೆಸುತ್ತಿರುವ ಪ್ರತಿಭಟನೆ
Q

ಕಾನೂನು ಶಿಕ್ಷಣದ ವೇಳೆ ನಿಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ಸಂಗತಿಗಳು ಯಾವುವು?

A

ನನ್ನ ಹಿರಿಯ ವಕೀಲರಾದ ನಯೀಂ ಮಿಯಾನ್‌ ಮತ್ತು ಅವರ ಹಿರಿಯ ವಕೀಲರಾಗಿದ್ದ ದಿವಂಗತ ಮನ್ನಾರ್‌ ಅವರು ಮಾಡಿದ ಕಾರ್ಯಗಳು ನನ್ನ ಮೇಲೆ ಗಾಢ ಪ್ರಭಾವ ಬೀರಿವೆ. ಅವರ ಬಳಿ ಬರುತ್ತಿದ್ದವರೆಲ್ಲಾ ಬಡ ಕಕ್ಷೀದಾರರೇ ಆಗಿರುತ್ತಿದ್ದರು. ಯಾರಿಂದಲೂ ಫಲಾಪೇಕ್ಷೆ ಇಲ್ಲದೆ ಅವರು ಕೆಲಸ ಮಾಡುತ್ತಿದ್ದರು.

Q

ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳು ಹೇಗಿದ್ದವು?

A

ಸಂಘಟನೆಯತ್ತಲೇ ಒಲವು ಇದ್ದುದರಿಂದ ನಾನು ಹಿರಿಯ ವಕೀಲರಾದ ನಯೀಂ ಮಿಯಾನ್‌ ಅವರ ಬಳಿ ನೆಪ ಮಾತ್ರಕ್ಕೆ ಕೆಲಸ ಮಾಡುತ್ತಿದ್ದೆ. ಎಷ್ಟೋ ಬಾರಿ ಕಚೇರಿಗೆ ಹೋಗುತ್ತಲೂ ಇರಲಿಲ್ಲ. ಆದರೆ ಅವರೆಂದೂ ಏನನ್ನೂ ಪ್ರಶ್ನಿಸುತ್ತಿರಲಿಲ್ಲ, ಬದಲಿಗೆ ಸಂಘಟನೆಯ ಕೆಲಸಗಳಿಗೆ ನನ್ನನ್ನು ಹುರಿದುಂಬಿಸುತ್ತಿದ್ದರು.

ಎಐಯುಟಿಯುಸಿ ಸಂಘಟಿಸಿದ ಪ್ರತಿಭಟನಾ ಕಾರ್ಯಕ್ರಮದಲ್ಲಿ...
ಎಐಯುಟಿಯುಸಿ ಸಂಘಟಿಸಿದ ಪ್ರತಿಭಟನಾ ಕಾರ್ಯಕ್ರಮದಲ್ಲಿ...
Q

ನೀವು ವಾದ ಮಂಡಿಸಿದ ಮೊದಲ ಕೇಸ್‌ ಯಾವುದು? ಮೆಲುಕು ಹಾಕುವಂತಹ ಪ್ರಸಂಗಗಳನ್ನು ಹಂಚಿಕೊಳ್ಳಬಹುದೇ?

A

ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ಪ್ರಕರಣ ಅದಾಗಿತ್ತು. ಹೆಣ್ಣುಮಗಳೊಬ್ಬಳ ಜೀವನಾಂಶಕ್ಕೆ ಸಂಬಂಧಿಸಿದ ಆ ಕೇಸ್‌ ನನ್ನ ಮೊದಲ ಪ್ರಕರಣ. ವಕೀಲಿಕೆ ವೃತ್ತಿ ಸಿನಿಮಾಗಳಲ್ಲಿ ತೋರಿಸುವಂತೆ ರೋಚಕವಾಗಿಯೇನೂ ಇರುವುದಿಲ್ಲ. ಇಲ್ಲಿ ವೃತ್ತಿಗೆ ಸಂಬಂಧಿಸಿದ ಹಲವು ಸವಾಲುಗಳಿರುತ್ತವೆ. ಒಬ್ಬರು ಸ್ವತಂತ್ರ ವಕೀಲರೆಂದು ಗುರುತಿಸಿಕೊಳ್ಳಲು ಅನೇಕ ವರ್ಷಗಳೇ ಬೇಕಾಗುತ್ತವೆ.

Q

ಈಗಲೂ ಕಾನೂನು ಸಲಹೆ, ವಕೀಲಿಕೆ ಮುಂದುವರೆಸಿದ್ದೀರಾ?

A

ವಕೀಲಿಕೆಯಲ್ಲಿ ನೇರವಾಗಿ ಈಗ ತೊಡಗಿಕೊಂಡಿಲ್ಲ. ಆದರೆ ನಾನು ವಕೀಲೆ ಎಂಬ ಕಾರಣಕ್ಕೆ ಸಂಘಟನೆಯ ಹೆಣ್ಣುಮಕ್ಕಳು ಅನೇಕ ಸಮಸ್ಯೆಗಳನ್ನು ನನ್ನ ಬಳಿ ಹೇಳಿಕೊಳ್ಳುತ್ತಾರೆ. ಅವುಗಳಲ್ಲಿ ಪ್ರಧಾನವಾಗಿ ಕೌಟುಂಬಿಕ ಸಮಸ್ಯೆಗಳು ಇರುತ್ತವೆ. ಅಂತಹವರು ಕೋರ್ಟ್‌ ಮೆಟ್ಟಿಲೇರಬೇಕೆ ಬೇಡವೇ ಎಂಬ ಬಗ್ಗೆ ಸಲಹೆ ಸೂಚನೆಗಳನ್ನು ನೀಡುತ್ತಿರುತ್ತೇನೆ.

Q

ಮುಂದೆ ಯಾವ ದಿಕ್ಕಿನತ್ತ ನಿಮ್ಮ ಹೋರಾಟವನ್ನು ಕೊಂಡೊಯ್ಯಬೇಕು ಎಂದುಕೊಂಡಿದ್ದೀರಿ?

A

ಹಲವು ಏಳು ಬೀಳುಗಳನ್ನು ದಾಟಿ ಇಲ್ಲಿಯುವರೆಗೆ ಸಾಗಿ ಬಂದಿದ್ದೇವೆ. ಇನ್ನೂ ಆಗಬೇಕಾದ ಸಾಕಷ್ಟು ಕೆಲಸಗಳು ಇವೆ. ಆಶಾ ಕಾರ್ಯಕರ್ತೆಯರ ಕೆಲಸಗಳಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅವರು ಹಗಲು ಇರುಳು ಎನ್ನದೇ ಆರೋಗ್ಯ ಸೇವೆಯಲ್ಲಿ ತೊಡಗಿರುವವರು. ಕೊರೊನಾ ಸಮಯದಲ್ಲಿ ಅವರು ಹೇಗೆಲ್ಲಾ ಶ್ರಮಿಸಿದರು ಎಂಬುದು ಎಲ್ಲರಿಗೂ ತಿಳಿದೇ ಇದೆ. ಅವರಿಗೆ ಕನಿಷ್ಠ ವೇತನ, ಉದ್ಯೋಗ ಭದ್ರತೆ ಇತ್ಯಾದಿ ಸವಲತ್ತುಗಳು ದೊರೆಯಬೇಕು. ಅವರಿಗೆ ನ್ಯಾಯ ಸಿಗುವವರೆಗೂ ನಮ್ಮ ಸಂಘದ ಹೋರಾಟ ಮುಂದುವರೆಯಲಿದೆ.

ಆರೋಗ್ಯ ಸಚಿವ ಡಿ ಸುಧಾಕರ್‌ ಅವರಿಗೆ ಮನವಿ ಸಲ್ಲಿಸುತ್ತಿರುವುದು.
ಆರೋಗ್ಯ ಸಚಿವ ಡಿ ಸುಧಾಕರ್‌ ಅವರಿಗೆ ಮನವಿ ಸಲ್ಲಿಸುತ್ತಿರುವುದು.

Related Stories

No stories found.
Kannada Bar & Bench
kannada.barandbench.com