ಸರ್ಕಾರ ಕಾಟಾಚಾರದ ನೆರವು ನೀಡಿದರೆ ಉಪಯೋಗವಾಗದು: ಧಾರವಾಡ ಹೈಕೋರ್ಟ್ ಪೀಠ ವಕೀಲರ ಸಂಘದ ಅಧ್ಯಕ್ಷ ಸಿ ಎಸ್ ಪಾಟೀಲ

“ವಕೀಲ ವೃತ್ತಿ ಸದಾ ಅನಿಶ್ಚಿತತೆಯಿಂದ ಕೂಡಿರ್ತದ… ವಕೀಲರು ಅಂದ್ರ ಕನ್ಯಾ ಕೊಡೂದಿಲ್ಲ, ಮನಿ ಬಾಡಿಗಿ ಕೊಡೂದಿಲ್ಲ. ಈ ಸಮುದಾಯದ ಬಗ್ಗೆ ಸರ್ಕಾರ ರಚನಾತ್ಮಕವಾಗಿ ಮುಂದುವರೀಬೇಕದ...”
ಸರ್ಕಾರ ಕಾಟಾಚಾರದ ನೆರವು ನೀಡಿದರೆ ಉಪಯೋಗವಾಗದು: ಧಾರವಾಡ ಹೈಕೋರ್ಟ್ ಪೀಠ ವಕೀಲರ ಸಂಘದ ಅಧ್ಯಕ್ಷ ಸಿ ಎಸ್ ಪಾಟೀಲ

ನರಗುಂದ, ಹುಬ್ಬಳ್ಳಿ ಧಾರವಾಡಗಳಲ್ಲಿ ವಿದ್ಯಾಭ್ಯಾಸ ಮಾಡಿದ ನ್ಯಾಯವಾದಿ ಸಿ ಎಸ್‌ ಪಾಟೀಲ ಅವರು ಕಾನೂನು ಪದವಿ ಪಡೆದದ್ದು ಬೆಂಗಳೂರಿನ ಎಸ್‌ಜೆಆರ್‌ಸಿ ಕಾಲೇಜಿನಲ್ಲಿ. ನಂತರ ಕರ್ನಾಟಕ ಹೈಕೋರ್ಟ್‌ನ ಬೆಂಗಳೂರು ಪೀಠದಲ್ಲಿ ಬಹುಕಾಲ ಪ್ರಾಕ್ಟೀಸ್‌ ಮಾಡಿದರು. 2006ರಲ್ಲಿ ಹೈಕೋರ್ಟ್‌ನ ಹೆಚ್ಚುವರಿ ಸರ್ಕಾರಿ ವಕೀಲರಾಗಿ ಸೇವೆ ಸಲ್ಲಿಸಿದರು. 2008ರಲ್ಲಿ ಹೈಕೋರ್ಟ್‌ನ ಧಾರವಾಡ ಪೀಠ ಆರಂಭವಾದಾಗ ತಮ್ಮೂರಿನ ಸೆಳೆತ ಬಿಡಲಾರದೆ, ಧಾರವಾಡಕ್ಕೆ ಮರಳಿದರು. ಅಂದಿನ ಅಡ್ವೊಕೇಟ್‌ ಜನರಲ್‌ ಪ್ರೊ. ರವಿವರ್ಮ ಕುಮಾರ್‌ ಅವರ ಒತ್ತಾಸೆಯಂತೆ ಧಾರವಾಡ ಪೀಠದಲ್ಲಿ ಹೆಚ್ಚುವರಿ ಸರ್ಕಾರಿ ವಕೀಲರಾಗಿ ಸೇವೆ ಸಲ್ಲಿಸಿದರು. ಸುಮಾರು ಒಂದು ವರ್ಷ ಕಾಲ ಹೈಕೋರ್ಟ್‌ ಧಾರವಾಡ ಪೀಠದ ವಕೀಲರ ಸಂಘದ ಅಧ್ಯಕ್ಷ ಹುದ್ದೆ ಮತ್ತು ಹೆಚ್ಚುವರಿ ಸರ್ಕಾರಿ ವಕೀಲ ಸ್ಥಾನ ಎರಡರಲ್ಲಿಯೂ ಸೇವೆ ಸಲ್ಲಿಸಿದರು. ನಂತರ ವಕೀಲರ ಸಂಘವನ್ನು ಮುನ್ನಡೆಸಿದರು. ಪ್ರಸ್ತುತ ಸಂಘದ ಅಧ್ಯಕ್ಷರಾಗಿ ಅವರ ಅಧಿಕಾರಾವಧಿ ಪೂರ್ಣಗೊಂಡಿದ್ದು ಚುನಾವಣೆ ನಡೆಯುವವರೆಗೆ ಹಂಗಾಮಿಯಾಗಿ ಮುಂದುವರೆದಿದ್ದಾರೆ.

“ಸರ್ಕಾರ ಧನಸಹಾಯ ಒದಗಿಸುವುದನ್ನಷ್ಟೇ ವಕೀಲ ಸಮುದಾಯ ನಿರೀಕ್ಷಿಸುತ್ತಿಲ್ಲ. ಅದು ಮಾಡಬೇಕಾದ ಕೆಲಸ ಬಹಳಷ್ಟಿದೆ” ಎನ್ನುವ ಅವರು, ಕೋವಿಡ್‌ ಸಂದರ್ಭದಲ್ಲಿ ನ್ಯಾಯವಾದಿಗಳು ಎದುರಿಸಿದ ಸಮಸ್ಯೆಗಳನ್ನು ʼಬಾರ್‌ ಅಂಡ್‌ ಬೆಂಚ್‌ʼ ಜೊತೆಗೆ ಹಂಚಿಕೊಂಡಿದ್ದಾರೆ. ಅನಿಶ್ಚಿತತೆಯಿಂದ ಕೂಡಿರುವ ವೃತ್ತಿ ಆಯ್ದುಕೊಂಡವರಿಗೆ ನೆರವು ನೀಡಬೇಕಾದ ರೀತಿಗಳ ಕುರಿತು ಅವರು ಮಾತನಾಡಿದ್ದಾರೆ.

Q

ಕೋವಿಡ್‌ನಿಂದಾಗಿ ಧಾರವಾಡ ಹೈಕೋರ್ಟ್‌ ವ್ಯಾಪ್ತಿಯ ವಕೀಲರು ಏನೇನು ಕಷ್ಟಗಳನ್ನು ಅನುಭವಿಸಿದರು?

A

ಎಂದಿನಂತೆ ನಡೆಯುತ್ತಿದ್ದ ಕೆಲಸಗಳು ಏರುಪೇರಾದವು. ಮೂರು ತಿಂಗಳ ಕಾಲ ವೀಡಿಯೊ ಕಲಾಪದ ಮೂಲಕವೇ ವಿಚಾರಣೆ ನಡೆಯುತ್ತಿತ್ತು. ಐದು ತಂಡಗಳನ್ನಾಗಿ ಮಾಡಿ ಒಂದು ಸ್ಲಾಟ್‌ನಲ್ಲಿ ತಲಾ ಹತ್ತು ಪ್ರಕರಣಗಳನ್ನು ನ್ಯಾಯಾಲಯ ನಡೆಸಲಾರಂಭಿಸಿತು. ಇದರಿಂದಾಗಿ ನೂರಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ಪೀಠ ಅರ್ಧದಷ್ಟು ಪ್ರಕರಣಗಳನ್ನು ನಿಭಾಯಿಸಲಷ್ಟೇ ಸಾಧ್ಯವಾಯಿತು. ಕಿರಿಯ ವಕೀಲರು, ವಕೀಲ ಗುಮಾಸ್ತರು ತೊಂದರೆ ಅನುಭವಿಸಿದರು. ಅಲ್ಲದೆ ಕಕ್ಷಿದಾರರು ಕೂಡ ತೀವ್ರ ಸಂಕಷ್ಟಕ್ಕೀಡಾದರು. ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳು ಇನ್ನಷ್ಟು ವಿಳಂಬವಾಗುತ್ತವೆ ಎಂಬುದು ಅವರ ಆತಂಕ. ಎಷ್ಟೋ ಪ್ರಕರಣಗಳಲ್ಲಿ ಮಧ್ಯಂತರ ಆದೇಶ ದೊರೆಯದೆ ಕಂಗೆಟ್ಟರು. ಅವರಿಗೆ ಪರಿಸ್ಥಿತಿ ವಿವರಿಸಲು ವಕೀಲರು ಸಾಕಷ್ಟು ಹೆಣಗಾಡಬೇಕಾಯಿತು. ಸುಮಾರು ನಾಲ್ಕು ತಿಂಗಳ ಕಾಲ ಹೀಗೆ ನಡೆಯಿತು. ನ್ಯಾಯವಾದಿಗಳು ಮಾನಸಿಕ ಒತ್ತಡ ಅನುಭವಿಸಿದರು. ಇನ್ನು ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಮೊದಮೊದಲು ಜಾಲ ಕಲಾಪಗಳು ಸಾಂಗವಾಗಿ ನಡೆಯಲಿಲ್ಲ. ವರ್ಚುವಲ್‌ ಕಲಾಪದ ವ್ಯವಸ್ಥೆ ಇದ್ದರೂ ಪ್ರಕರಣಗಳಲ್ಲಿ ಕೆಲವು ಗೊಂದಲಗಳು ಉಂಟಾದಾಗ ನ್ಯಾಯಮೂರ್ತಿಗಳ ಸಮ್ಮುಖದಲ್ಲಿಯೇ ಭೌತಿಕವಾಗಿ ಪರಿಹರಿಸಿಕೊಳ್ಳುವಂತಹ ಸ್ಥಿತಿ ಉದ್ಭವಿಸಿತು.

ಧಾರವಾಡ ಪೀಠ ಇರುವ ಪ್ರದೇಶ ನಗರದಿಂದ ಹದಿನಾಲ್ಕು ಕಿಮೀ ದೂರದಲ್ಲಿದೆ. ಹಲವು ತಿಂಗಳುಗಳ ಕಾಲ ಅಲ್ಲಿ ಕ್ಯಾಂಟೀನ್‌ ವ್ಯವಸ್ಥೆ ಬಂದ್‌ ಆಯಿತು. ವಾಹನ ಸೌಕರ್ಯ ಇಲ್ಲದವರು ತೀವ್ರ ತೊಂದರೆ ಅನುಭವಿಸಿದರು. ನ್ಯಾಯಾಲಯದ ಗ್ರಂಥಾಲಯ ಬಂದ್‌ ಆಗಿದ್ದರಿಂದ ಸಣ್ಣ ಮಾಹಿತಿ ಬೇಕಿದ್ದರೂ ಧಾರವಾಡ ನಗರಕ್ಕೆ ಹೋಗಬೇಕಾಗಿತ್ತು. ಆದರೆ ಮುಖ್ಯ ನ್ಯಾಯಮೂರ್ತಿಗಳು ಹಲವು ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ ಅನುಕೂಲ ಕಲ್ಪಿಸಿದರು.

Q

ಕೋವಿಡ್‌ ಎದುರಿಸಲು ಸಂಘ ಕೈಗೊಂಡ ಕ್ರಮಗಳು ಯಾವುವು?

A

ಯಾವುದೇ ವಕೀಲರ ಸಂಘಗಳು ಸರ್ಕಾರದ ಅನುದಾನ ಮತ್ತು ಕೆಲ ವಕೀಲರ ದೇಣಿಗೆಯ ಮೇಲೆ ನಡೆಯುತ್ತಿರುತ್ತವೆ. ಅವುಗಳಿಗೆ ದೊರೆಯುವ ಧನಸಹಾಯವೂ ಸೀಮಿತ ಸ್ವರೂಪದಲ್ಲಿರುತ್ತದೆ. (ಕೆಎಸ್‌ಬಿಸಿ ಕೂಡ ಸರ್ಕಾರದಿಂದ ನೆರವು ಪಡೆದೇ ಹಣ ಹಂಚಿದೆ.) ಹೀಗಾಗಿ ಸಂಕಷ್ಟಕ್ಕೀಡಾದ ವಕೀಲರ ನೆರವಿಗೆ ನಿಲ್ಲಬೇಕೆಂದು ಹಿರಿಯ ವಕೀಲರಲ್ಲಿ ಮನವಿ ಮಾಡಿದೆವು. ವೈಯಕ್ತಿಕವಾಗಿ ನಾನೇ ಕೆಲ ವಕೀಲರಿಗೆ ನೆರವಾದೆ.

ಧಾರವಾಡ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಕೊಪ್ಪಳ, ಬೆಳಗಾವಿ, ಗದಗ, ಬಾಗಲಕೋಟೆ ಜಿಲ್ಲೆಗಳು ಧಾರವಾಡ ಹೈಕೋರ್ಟ್‌ ಪೀಠದ ವ್ಯಾಪ್ತಿಯಲ್ಲಿವೆ. ತೊಂದರೆ ಅನುಭವಿಸುತ್ತಿರಬಹುದಾದ ಸುಮಾರು ಅರವತ್ತು ಜನ ಕಿರಿಯ ವಕೀಲರನ್ನು ಗುರುತಿಸಿದೆವು. ಅದರಲ್ಲಿ ನಾಲ್ವರು ತೀವ್ರ ಸ್ವರೂಪದ ಸಂಕಷ್ಟಕ್ಕೀಡಾಗಿದ್ದರು. ಅವರಿಗೆಲ್ಲ ವಕೀಲರಿಂದ ನೆರವು ಕೊಡಿಸಿದೆವು. ಉಳಿದಂತೆ ತಮ್ಮ ಕಿರಿಯ ನ್ಯಾಯವಾದಿಗಳಿಗೆ ಅನೇಕ ಹಿರಿಯ ವಕೀಲರು ತಾವಾಗಿಯೇ ದಯೆ ತೋರಿದ್ದಾರೆ.

Q

ಈಗ ಹೈಕೋರ್ಟ್‌ ಪೀಠದಲ್ಲಿ ನ್ಯಾಯಾಲಯದ ಕಲಾಪಗಳು ಹೇಗೆ ನಡೆಯುತ್ತಿವೆ?

A

ಧಾರವಾಡ ಪೀಠದಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇದನ್ನು ಸ್ವತಃ ನ್ಯಾಯಮೂರ್ತಿಗಳೇ ತಿಳಿಸಿದ್ದು ವಕೀಲ ಸಮುದಾಯದ ಸಹಕಾರಕ್ಕಾಗಿ ಅಭಿನಂದಿಸಿದ್ದಾರೆ. ಇನ್ನು ಕೋವಿಡ್‌ ಮುಂಜಾಗ್ರತೆ ಕ್ರಮವಾಗಿ ಥರ್ಮಲ್‌ ಸ್ಕ್ಯಾನಿಂಗ್‌ ಅಳವಡಿಸಲಾಗಿದೆ. ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಕೇಸ್‌ಗಳ ಫೈಲಿಂಗ್‌ಗಾಗಿ ಪ್ರತ್ಯೇಕ ಕೌಂಟರ್‌ ತೆರೆಯಲಾಗಿದೆ. ಕ್ಯಾಂಟೀನ್‌ಗಳಲ್ಲಿ ಪೊಟ್ಟಣ ಕಟ್ಟಿರುವ ಆಹಾರಕ್ಕೆ ಅನುವು ಮಾಡಿಕೊಡಲಾಗಿದೆ.

Q

ಕೋವಿಡ್‌ಗೆ ಸಂಬಂಧಿಸಿದಂತೆ ವಕೀಲ ಸಮುದಾಯ ಸರ್ಕಾರದಿಂದ ಏನನ್ನು ನಿರೀಕ್ಷಿಸುತ್ತಿದೆ?

A

ಸರ್ಕಾರ ಕಾಟಾಚಾರಕ್ಕೆ ಧನಸಹಾಯ ಮಾಡಿದರೆ ಉಪಯೋಗವಾಗದು. ಈಗ ರಾಜ್ಯದ ವಕೀಲರಿಗೆ ಕೊಟ್ಟಿರುವ ಐದು ಕೋಟಿ ರೂಪಾಯಿ ಧನಸಹಾಯ ಯಾವುದಕ್ಕೂ ಸಾಲದು. ವಕೀಲ ವೃತ್ತಿ ಸದಾ ಅನಿಶ್ಚಿತತೆಯಿಂದ ಕೂಡಿರ್ತದ… ವಕೀಲರು ಅಂದ್ರ ಕನ್ಯಾ ಕೊಡೂದಿಲ್ಲ, ಮನಿ ಬಾಡಿಗಿ ಕೊಡೂದಿಲ್ಲ. ಈ ಸಮುದಾಯದ ಬಗ್ಗೆ ಸರ್ಕಾರ ರಚನಾತ್ಮಕವಾಗಿ ಮುಂದುವರೀಬೇಕದ.

ದೆಹಲಿ, ತೆಲಂಗಾಣ ಸರ್ಕಾರಗಳು ವಕೀಲ ಸಮುದಾಯಕ್ಕೆ ಅನೇಕ ಬಗೆಯ ನೆರವು ನೀಡಿವೆ. ಧನಸಹಾಯವನ್ನೇ ನಾವು ನಿರೀಕ್ಷೆ ಮಾಡುತ್ತಿಲ್ಲ. ಬದಲಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ವಕೀಲರಿಗೆಂದೇ ಪ್ರತ್ಯೇಕ ವಾರ್ಡ್‌ ರೂಪಿಸಬಹುದು. ಆರೋಗ್ಯ ಕಾರ್ಡ್‌ಗಳನ್ನು ವಿತರಿಸಬಹುದು, ಬಸ್‌ ಸಂಚಾರದ ವೇಳೆ ರಿಯಾಯ್ತಿ ದರದಲ್ಲಿ ಟಿಕೆಟ್‌ ಕೊಡಿಸಬಹುದು. ವಕೀಲರ ಸಂಘಗಳು ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳೊಂದಿಗೆ ಟೈ ಅಪ್‌ ಮಾಡಿಕೊಂಡು ಸೌಲಭ್ಯಗಳನ್ನು ಪಡೆಯಲು ಅನುಕೂಲ ಕಲ್ಪಿಸಬಹುದು. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕಿದೆ.

Q

ಇಂತಹ ಸಂದರ್ಭ ಭವಿಷ್ಯದಲ್ಲಿ ಎದುರಾಗದಂತೆ ತಡೆಯಲು ವಕೀಲರ ಸಮುದಾಯ ಕೂಡ ಮುಂದಾಗಬಹುದು ಅಲ್ಲವೇ?

A

ಖಂಡಿತ. ಆ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಕೆಎಸ್‌ಬಿಸಿಯಂತಹ ಸಂಸ್ಥೆಗಳತ್ತಲೇ ಸದಾ ಸಹಾಯ ಬೇಡುವ ಬದಲು, ನಮ್ಮ ಸಂಘಗಳಲ್ಲಿಯೇ ವಿಪತ್ತು ನಿಧಿಗಳನ್ನು ಸ್ಥಾಪಿಸುವ ಪರಿಕಲ್ಪನೆ ಮೊಳಕೆಯೊಡೆದಿದೆ. ಪ್ರತಿ ತಿಂಗಳು ಅದಕ್ಕೆಂದೇ ಇಂತಿಷ್ಟು ಎಂದು ಹಣ ಸಂಗ್ರಹಿಸಿ ಆಪತ್ಕಾಲದಲ್ಲಿ ಅದನ್ನು ಕ್ಷಿಪ್ರವಾಗಿ ಬಳಸಿಕೊಳ್ಳಬಹುದಾಗಿದೆ. ಈ ಬಗ್ಗೆ ಸಂಘದ ಸದಸ್ಯರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು.

Related Stories

No stories found.
Kannada Bar & Bench
kannada.barandbench.com