ವಕೀಲರ ಕಲ್ಯಾಣ ನಿಧಿ ಸೂಕ್ತ ರೀತಿಯಲ್ಲಿ ಬಳಕೆಯಾಗಿಲ್ಲ: ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೆ ಎಸ್ ಕವನ್

"65 ವರ್ಷ ಮೇಲ್ಪಟ್ಟ ವಕೀಲರಿಗೆ ವಿಮೆ ಅನ್ವಯಿಸುವುದಿಲ್ಲ ಎಂದು ನಿಯಮ ವಿಧಿಸಲಾಗಿದೆ. ಹಾಗಾದರೆ 65 ವರ್ಷ ಮೇಲ್ಪಟ್ಟ ವಕೀಲರು ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು?"
ವಕೀಲರ ಕಲ್ಯಾಣ ನಿಧಿ ಸೂಕ್ತ ರೀತಿಯಲ್ಲಿ ಬಳಕೆಯಾಗಿಲ್ಲ: ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೆ ಎಸ್ ಕವನ್

1993ರಿಂದಲೇ ವಕೀಲ ವೃತ್ತಿಯಲ್ಲಿ ತೊಡಗಿಕೊಂಡ ಕೆ ಎಸ್‌ ಕವನ್‌ ಜಿಲ್ಲೆಯ ಹಿರಿಯ ವಕೀಲರು ಕೂಡ. ಮಾಜಿ ಸಚಿವರೂ ಆಗಿದ್ದ ನ್ಯಾಯವಾದಿ ಎಂ ಎಂ ನಾಣಯ್ಯ ಅವರ ಗರಡಿಯಲ್ಲಿ ಪಳಗಿದ ಕವನ್‌ ಕಳೆದ ಎರಡು ವರ್ಷಗಳಿಂದ ಮಡಿಕೇರಿ ವಕೀಲರ ಸಂಘದ ಚುಕ್ಕಾಣಿ ಹಿಡಿದಿದ್ದಾರೆ.

“ಮಡಿಕೇರಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿ ಕಾರ್ಯನಿರತ ವಕೀಲರಿದ್ದು ಈವರೆಗೆ ಕೋವಿಡ್‌ಗೆ ಒಬ್ಬ ವಕೀಲರು ಪ್ರಾಣ ತೆತ್ತಿದ್ದಾರೆ. ಇದೇ ವೇಳೆ ಸಾಂಕ್ರಾಮಿಕ ರೋಗ ಬಹಳಷ್ಟು ವಕೀಲರ ಭವಿಷ್ಯದೊಂದಿಗೆ ಚೆಲ್ಲಾಟವಾಡಿದೆ” ಎನ್ನುವ ಕವನ್‌ ಅವರು ಸರ್ಕಾರ ಮತ್ತು ರಾಜ್ಯಮಟ್ಟದ ವಕೀಲರ ಸಂಘಟನೆಗಳು ಕೈಗೊಂಡ ಕ್ರಮಗಳ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ.

Q

ಈ ವರ್ಷದ ಮಾರ್ಚ್‌ ಬಳಿಕ ಮಡಿಕೇರಿ ವಕೀಲ ಸಮುದಾಯದ ಸ್ಥಿತಿಗತಿ ಏನಾಗಿದೆ ತಿಳಿಸುವಿರಾ?

A

ಮಾರ್ಚ್‌ 25ರಂದು ಲಾಕ್‌ಡೌನ್‌ ಜಾರಿ ಮಾಡಲಾಯಿತು. ನಂತರ ಸುಮಾರು ಒಂದು ತಿಂಗಳು ನ್ಯಾಯಾಲಯಗಳ ಚಟುವಟಿಕೆ ಸ್ಥಗಿತಗೊಂಡಿತ್ತು. ನಂತರ ಹೈಕೋರ್ಟ್‌ ನೀಡುತ್ತಿದ್ದ ಎಸ್‌ಒಪಿ (ಪ್ರಮಾಣಿತ ಕಾರ್ಯಾಚರಣಾ ವಿಧಾನ) ಆಧರಿಸಿ ನ್ಯಾಯಾಲಯಗಳು ಕೆಲಸ ಮಾಡಬೇಕಿತ್ತು. ಪ್ರಕರಣಗಳ ಸಂಖ್ಯೆ ಇದ್ದಕ್ಕಿದ್ದಂತೆ ಕುಸಿಯಿತು. ಸಮಾಜದ ದೃಷ್ಟಿಯಿಂದ ಇದು ಒಳ್ಳೆಯದೇ. ಆದರೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾದ ಮೇಲೆ ವಕೀಲರ ಬದುಕಿಗೂ ತೊಂದರೆಯಾಯಿತು. ಜೂನ್‌ ಜುಲೈ ನಂತರ ಪರಿಸ್ಥಿತಿ ಸ್ವಲ್ಪ ತಿಳಿಯಾಯಿತು. ವರ್ಚುವಲ್‌ ಕಲಾಪ, ಭೌತಿಕ ವಿಚಾರಣೆ ಎರಡಕ್ಕೂ ಈಗ ಅವಕಾಶ ಕಲ್ಪಿಸಲಾಗಿದೆ.

ಹಿರಿಯ ವಕೀಲರು ಕಿರಿಯ ವಕೀಲರು ಎನ್ನದೆ ಎಲ್ಲರಿಗೂ ಕೋವಿಡ್‌ನಿಂದ ಪೆಟ್ಟಾಗಿದೆ. ಕೋವಿಡ್‌ನಿಂದ ಲೋಕದ ಎಲ್ಲರೂ ತಿಂದ ಹೊಡೆತವನ್ನು ವಕೀಲರೂ ತಿಂದಿದ್ದಾರೆ. ವಕೀಲರು ಕೂಡ ದಿನಗೂಲಿಗಳಂತೆ. ಅಂದಂದಿನ ಸಂಪಾದನೆ ಮೇಲೆ ಅವರ ಜೀವನ ನಿಂತಿರುತ್ತದೆ. ಕಕ್ಷೀದಾರರು ನೀಡಿದ ಸಂಭಾವನೆ ಅವಲಂಬಿಸಿ ಬದುಕುವವರು ನಾವು.

Q

ವಿಚಾರಣಾ ಪ್ರಕ್ರಿಯೆ ಮೇಲೆ ಕೋವಿಡ್‌ ಬೀರಿದ ಪರಿಣಾಮ ಯಾವ ರೀತಿಯದು?

A

ಸರಾಗವಾಗಿ ನಡೆಯುತ್ತಿದ್ದ ಪ್ರಕ್ರಿಯೆ ಹಠಾತ್ತನೆ ಸ್ಥಗಿತಗೊಂಡಿದ್ದರಿಂದಾಗಿ ಹಳೆಯ ಪ್ರಕರಣಗಳು ಬಾಕಿ ಉಳಿದವು. ವಿಚಾರಣೆಗೆ ಹಾಜರಾಗುವುದು ಕಡ್ಡಾಯವಲ್ಲ ಎಂದು ಹೇಳಿದ್ದರಿಂದಾಗಿ ಕಕ್ಷೀದಾರರು, ಪ್ರತಿವಾದಿಗಳು ಹಾಗೂ ಸಾಕ್ಷಿಗಳು ನ್ಯಾಯಾಲಯದಿಂದ ದೂರ ಉಳಿದರು. ಕಕ್ಷೀದಾರರ ಆರ್ಥಿಕ ಸ್ಥಿತಿಗತಿ ಮೇಲೆ ಕೋವಿಡ್‌ ಹೊಡೆತ ನೀಡಿದೆ. ಹೀಗಾಗಿ ದಾವೆ ಹೂಡುವ, ಅದನ್ನು ಮುನ್ನಡೆಸುವ ಉತ್ಸಾಹ ಕಕ್ಷೀದಾರರಿಗೆ ಇರುವುದು ಕಡಿಮೆ. ಇದು ಕೂಡ ವಿಚಾರಣೆ ಪ್ರಕ್ರಿಯೆ ಮೇಲೆ ಪ್ರಭಾವ ಬೀರಿತು.

Q

ವಕೀಲರ ಸಂಘದ ಅಧ್ಯಕ್ಷರಾಗಿ ಕೋವಿಡ್‌ ಎದುರಿಸಲು ತಾವು ಕೈಗೊಂಡ ಕ್ರಮಗಳು ಯಾವುವು?

A

ವಕೀಲರ ಸಂಘಗಳು ಸಭೆ ಸೇರುವಂತಿಲ್ಲ ಎಂದು ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಇದರಿಂದಾಗಿ ಸ್ಪಷ್ಟ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಜಿಲ್ಲಾ ನ್ಯಾಯಾಧೀಶರನ್ನು ಹಾಗೂ ಹಿರಿಯ ವಕೀಲರನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸಿದೆವು. ಹಿರಿಯ ನ್ಯಾಯವಾದಿ ಸಜ್ಜನ್‌ ಪೂವಯ್ಯ ಮಡಿಕೇರಿ ಜಿಲ್ಲೆಯ ವಿವಿಧ ವಕೀಲರಿಗೆ ನೆರವಿನ ಹಸ್ತ ಚಾಚಿದರು. ವಕೀಲರ ಸಂಘ ಹೊಸದಾಗಿ ಸಭೆ ಸೇರಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದೆ.

Q

ವರ್ಚುವಲ್‌ ಕಲಾಪ/ ಭೌತಿಕ ಕಲಾಪ ಯಾವುದು ಸೂಕ್ತ?

A

ಸೀನಿಯರ್‌ ವಕೀಲರಲ್ಲಿ ಬಹುತೇಕರು ವರ್ಚುವಲ್‌ ಕಲಾಪಗಳಿಗೆ ಬಹುಬೇಗ ಹೊಂದಿಕೊಳ್ಳಲು ಆಗಲಿಲ್ಲ. ಡಿಜಿಟಲ್‌ ಲೋಕ ಬಲ್ಲ ಯುವ ವಕೀಲರಿಗೆ ಇದು ಅನುಕೂಲ ಕಲ್ಪಿಸಿತು. ಆದರೆ ಇಲ್ಲಿ ಇನ್ನೊಂದು ಸಮಸ್ಯೆ ಸೃಷ್ಟಿಯಾಯಿತು. ಭೌತಿಕವಾಗಿ ಒಂದು ವಿಚಾರಣೆ ನಡೆಯುವಾಗ ಅನೇಕ ವಕೀಲರು ನ್ಯಾಯಾಲಯದಲ್ಲಿ ಕುಳಿತಿರುತ್ತಿದ್ದರು. ತಮ್ಮದೇ ಪ್ರಕರಣ ಇಲ್ಲದಿದ್ದರೂ ಅಧ್ಯಯನದ ದೃಷ್ಟಿಯಿಂದ ಅವರಿಗೆ ಆ ಕಲಾಪ ಪ್ರಾಯೋಗಿಕ ಜ್ಞಾನ ಒದಗಿಸುತ್ತಿತ್ತು. ವಾದ ಮಂಡನೆಯ ವಿವಿಧ ಆಯಾಮಗಳನ್ನು ಪ್ರತ್ಯಕ್ಷವಾಗಿ ಅರಿಯಬಹುದಿತ್ತು. ವರ್ಚುವಲ್‌ ಕಲಾಪದಿಂದ ಅದು ಸಾಧ್ಯವಾಗುತ್ತಿಲ್ಲ. ಮುಖ್ಯವಾಗಿ ಕಿರಿಯ ವಕೀಲರಿಗೆ ಇದರಿಂದ ಬಹಳ ಹೊಡೆತ ಬಿದ್ದಿದೆ.

Q

ಸರ್ಕಾರ ಅಥವಾ ರಾಜ್ಯಮಟ್ಟದ ಸಂಘಟನೆಯಿಂದ ವಕೀಲರ ಸಮುದಾಯದ ಪ್ರತಿನಿಧಿಯಾಗಿ ನೀವು ನಿರೀಕ್ಷಿಸುವುದು ಏನನ್ನು?

A

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ಸಾಕಷ್ಟು ಹಣ ಇದೆ. ಅದು ಬಳಕೆಯಾಗಬೇಕಿರುವುದು ವಕೀಲರ ಕಲ್ಯಾಣಕ್ಕಾಗಿ. ಪರಿಹಾರಧನವನ್ನು ವಿಮೆಯಾಗಿ ಪರಿವರ್ತಿಸಲಾಗಿದೆ. 65 ವರ್ಷ ಮೇಲ್ಪಟ್ಟ ವಕೀಲರಿಗೆ ವಿಮೆ ಅನ್ವಯಿಸುವುದಿಲ್ಲ ಎಂದು ನಿಯಮ ವಿಧಿಸಲಾಗಿದೆ. (ಕೋವಿಡ್‌ ವಿಶೇಷವಾಗಿ ದಾಳಿ ಮಾಡುತ್ತಿರುವುದೇ 60 ವರ್ಷ ಮೇಲ್ಪಟ್ಟವರ ಮೇಲೆ.) ಹಾಗಾದರೆ 65 ವರ್ಷ ಮೇಲ್ಪಟ್ಟ ವಕೀಲರು ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು?

ಮತ್ತೊಂದೆಡೆ ಪರಿಹಾರ ಧನ ನೀಡಲು ಪರಿಷತ್ತು ನೂರೆಂಟು ಕಟ್ಟಳೆಗಳನ್ನು ವಿಧಿಸಿದೆ. ಇಂದು ಕಾಲೇಜಿಗೆ ಹೋಗುವ ಹುಡುಗರಿಗೂ ಬೈಕ್‌ ಬೇಕಿರುತ್ತದೆ. ಹೀಗಿರುವಾಗ ಕಷ್ಟಪಟ್ಟು ಸಂಪಾದಿಸಿ ಬೈಕ್‌ ಮಾಲೀಕನಾದ ವಕೀಲನಿಗೆ ಪರಿಹಾರ ಧನ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ಕೊಡುವ ಪರಿಹಾರ ಧನದ ಮೊತ್ತ ಕೇವಲ ಐದು ಸಾವಿರ ರೂಪಾಯಿ. ಇದು ಯಾವುದಕ್ಕೆ ಸಾಲುತ್ತದೆ ಗೊತ್ತಿಲ್ಲ.

Related Stories

No stories found.