[ಅನುಸಂಧಾನ] ಕಾನೂನು ಜ್ಞಾನ ನನ್ನ ಸಿನಿಮಾಗಳಿಗೆ ಸಹಜತೆ ಒದಗಿಸಿದೆ: ಚಿತ್ರ ನಿರ್ದೇಶಕ ನಾಗಣ್ಣ

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರೊಂದಿಗಿನ ಮಾತುಕತೆಯೇ ಈ 'ಅನುಸಂಧಾನ'.
[ಅನುಸಂಧಾನ] ಕಾನೂನು ಜ್ಞಾನ ನನ್ನ ಸಿನಿಮಾಗಳಿಗೆ ಸಹಜತೆ ಒದಗಿಸಿದೆ: ಚಿತ್ರ ನಿರ್ದೇಶಕ ನಾಗಣ್ಣ
'

ಚಿಕ್ಕಂದಿನಿಂದಲೂ ಸಿನಿಮಾದೊಂದಿಗೆ ಒಡನಾಡುತ್ತ ಬೆಳೆದವರು ನಿರ್ದೇಶಕ ಬಿ ನಾಗಣ್ಣ. ಹಿರಿಯ ನಿರ್ದೇಶಕ ಕೆ ಎಸ್‌ ಎಲ್‌ ಸ್ವಾಮಿ (ರವಿ) ಅವರ ಬಳಿ ನಿರ್ದೇಶನದ ಪಾಠಗಳನ್ನು ಕಲಿತ ಅವರು ಕಾನೂನು ಪದವಿ ಪಡೆದದ್ದು ಬೆಂಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ. ತಮ್ಮ ಗೆಳೆಯುರೇ ಆಗಿದ್ದ ನ್ಯಾಯವಾದಿಯೊಬ್ಬರ ಬಳಿ ವಕೀಲಿಕೆಯನ್ನು ಅರಿತರಾದರೂ ಅವರ ಚಿತ್ತವೆಲ್ಲಾ ಸಿನಿಮಾದತ್ತಲೇ. ಅದಕ್ಕೆ ಕಾರಣ ಕೆ ಎಸ್‌ ಎಲ್‌ ಸ್ವಾಮಿ. ʼಜ್ಞಾನಾರ್ಜನೆಗಾಗಿ ಕಾನೂನು ಓದಿದ್ದರೂ ಸಿನಿಮಾ ನಿನ್ನ ಲೋಕ ಎಂದು ಅವರು ಪ್ರೇರೇಪಿಸಿದರು.

ವಿಷ್ಣುವರ್ಧನ್‌ ನಟನೆಯ ʼಸಾಮ್ರಾಟ್‌ʼ ಚಿತ್ರದ ಬಳಿಕ ಸ್ವತಂತ್ರ ನಿರ್ದೇಶಕರಾದ ನಾಗಣ್ಣ ʼಲೇಡಿ ಪೊಲೀಸ್‌ʼ, ʼಓ ಪ್ರೇಮವೇʼ, ʼಕೋಟಿಗೊಬ್ಬʼ, ʼವಿಷ್ಣುಸೇನಾʼ, ʼಕ್ರಾಂತಿವೀರ ಸಂಗೊಳ್ಳಿ ರಾಯಣ್ಣʼ, ʼಮುನಿರತ್ನ ಕುರುಕ್ಷೇತ್ರʼ ಚಿತ್ರಗಳ ಮೂಲಕ ಮನೆಮಾತಾಗಿದ್ದಾರೆ, ಗಾಂಧಿನಗರದಲ್ಲಿಯೇ ಇದ್ದ ಅನೇಕ ವಕೀಲರ ಕಚೇರಿಗಳು, ವಕೀಲ ಲೋಕದ ದಿಗ್ಗಜರು ಅವರ ಬದುಕಿಗೆ ಪ್ರೇರಣೆಯಂತೆ. ನ್ಯಾಯಾಲಯದ ಮೆಟ್ಟಿಲೇರಿದ ಅನೇಕ ಪ್ರಕರಣಗಳು ಇವರ ಸಿನಿಮಾಗೆ ಬೇರೆಯದೇ ಮೆರಗು ನೀಡಿವೆ. ʼಜನಪ್ರಿಯತೆ ಮೇಲೆ ನಂಬಿಕೆ ಇಲ್ಲʼ ಎನ್ನುವ ಅವರು ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಕಾನೂನು- ಸಿನಿಮಾ ಕುರಿತ ಅನೇಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ʼಕ್ರಾಂತಿವೀರ ಸಂಗೊಳ್ಳಿ ರಾಯಣ್ಣʼ ಚಿತ್ರಕ್ಕೆ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ದೊರೆತ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಆನಂದ್‌ ಅಪ್ಪುಗೋಳ ಹಾಗೂ ಮಾಜಿ ಸಚಿವ ಹೆಚ್‌ ಆಂಜನೇಯ ಅವರೊಂದಿಗೆ.
ʼಕ್ರಾಂತಿವೀರ ಸಂಗೊಳ್ಳಿ ರಾಯಣ್ಣʼ ಚಿತ್ರಕ್ಕೆ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ದೊರೆತ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಆನಂದ್‌ ಅಪ್ಪುಗೋಳ ಹಾಗೂ ಮಾಜಿ ಸಚಿವ ಹೆಚ್‌ ಆಂಜನೇಯ ಅವರೊಂದಿಗೆ.
Q

ವಿದ್ಯಾರ್ಥಿ ಜೀವನದಲ್ಲಿ ಕಾನೂನು ಶಿಕ್ಷಣದ ಅಧ್ಯಯನ ಮಾಡಬೇಕು ಎಂದು ನಿಮಗೆ ಅನಿಸಲು ಕಾರಣವೇನು?

A

ನಾನು ಓದಿದ್ದು ಬಿ.ಕಾಂ. ನಂತರ ನಮ್ಮ ತಂದೆ- ತಾಯಿ ‘ನೀನು ಡಬಲ್‌ ಗ್ರಾಜುಯೇಟ್‌ ಆಗಬೇಕು’ ಅಂತ ಆಗಾಗ ಹೇಳ್ತಾ ಇದ್ದರು. ಜ್ಞಾನಾರ್ಜನೆ ಮುಖ್ಯ ಅಂತ ನನ್ನ ಗುರುಗಳಾದ ನಿರ್ದೇಶಕ ಕೆ ಎಸ್‌ ಎಲ್‌ ಸ್ವಾಮಿ ಕೂಡ ಹೇಳ್ತಾ ಇದ್ದರು. ಕಾನೂನು ಓದುವುದು ಜೀವನಕ್ಕೆ ಮತ್ತು ಸಿನಿಮಾಗೆ ಎರಡಕ್ಕೂ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಕಾನೂನು ಅಧ್ಯಯನ ಮಾಡಿದೆ.

Q

ಕಾನೂನು ಶಿಕ್ಷಣದ ವೇಳೆ ನಿಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ಸಂಗತಿಗಳು ಯಾವುವು?

A

ನಾನು ನ್ಯಾಯಾಲಯದ ಅನೇಕ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಈಗಲೂ ʼಬಾರ್‌ ಅಂಡ್‌ ಬೆಂಚ್‌ʼ ಸೇರಿದಂತೆ ಅನೇಕ ಕಾನೂನು ಸಂಬಂಧಿ ಜಾಲತಾಣಗಳಿಂದ, ಪತ್ರಿಕೆಗಳಿಂದ ವಿವಿಧ ಪ್ರಕರಣಗಳನ್ನು ಅಧ್ಯಯನ ಮಾಡುತ್ತಿರುತ್ತೇನೆ. ಅಂತಹ ಪ್ರಕರಣಗಳೇ ನನ್ನ ಅನೇಕ ಸಿನಿಮಾಗಳಿಗೆ ಸ್ಫೂರ್ತಿ ಆಗಿವೆ.

ಚಿತ್ರರಂಗದ ದಿಗ್ಗಜರ ಜೊತೆ...
ಚಿತ್ರರಂಗದ ದಿಗ್ಗಜರ ಜೊತೆ...
Q

ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳು ಹೇಗಿದ್ದವು? ಯಾವ ಹಿರಿಯ ವಕೀಲರ ಕೈಕೆಳಗೆ ಪ್ರಾಕ್ಟೀಸ್‌ ಮಾಡಿದಿರಿ?

A

ವಕೀಲ ಬಿ ಜಿ ರಾಜಶೇಖರ್‌ ನಮ್ಮ ಬಾಸ್‌. ಅವರ ಕಚೇರಿ ಬೆಂಗಳೂರಿನ ಗಾಂಧಿನಗರದಲ್ಲಿಯೇ ಇತ್ತು. ರಾಜಶೇಖರ್‌ ವಯಸ್ಸಿನಲ್ಲಿ ನನಗಿಂತಲೂ ಕಿರಿಯರು. ಆದರೆ ವಕೀಲಿಕೆ ಅನುಭವದಲ್ಲಿ ಹಿರಿಯರು. ʼನೀನು, ನನ್ನ ಜೊತೆ ಪ್ರಾಕ್ಟೀಸ್‌ ಮಾಡುʼ ಅಂತ ಕರೆಯುತ್ತಿದ್ದರು. ಆಗ ನಾನು ಅವರ ಪ್ರಕರಣಗಳಲ್ಲಿ ವಾದಿಸಲು ನ್ಯಾಯಾಲಯಕ್ಕೆ ಹೋಗುತ್ತಿದ್ದೆ.

Q

ನೀವು ವಾದ ಮಂಡಿಸಿದ ಮೊದಲ ಕೇಸ್‌ ಯಾವುದು? ಮೆಲುಕು ಹಾಕುವಂತಹ ಪ್ರಸಂಗಗಳನ್ನು ಹಂಚಿಕೊಳ್ಳಬಹುದೇ?

A

ಸಣ್ಣಪುಟ್ಟ ಪ್ರಕರಣಗಳಲ್ಲಿ ವಾದ ಮಾಡಿದ್ದಿದೆ. ಒಂದೂವರೆ ಎರಡು ವರ್ಷಗಳ ಕಾಲ ಅಷ್ಟೇ ನಾನು ಪ್ರಾಕ್ಟೀಸ್‌ ಮಾಡಿದೆ. ಹೆಚ್ಚಾಗಿ ಸಿವಿಲ್‌ ಪ್ರಕರಣಗಳಲ್ಲಿ ವಾದ ಮಂಡಿಸಿದ್ದೆ. ನಂತರ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯೂ ಆದ ಮಂಜುಳಾ ಚೆಲ್ಲೂರ್‌ ಅವರ ಎದುರು ನಾನು ಕೆಲ ಪ್ರಕರಣಗಳ ಪರ ಅರ್ಜಿ ಸಲ್ಲಿಸಿದ್ದೆ.

ನಟ ಗಣೇಶ್‌ ಅವರೊಂದಿಗೆ...
ನಟ ಗಣೇಶ್‌ ಅವರೊಂದಿಗೆ...
Q

ಕಾನೂನು ಓದುತ್ತಿದ್ದಾಗ ನ್ಯಾಯಲೋಕದ ನಿಮ್ಮ ಸ್ಫೂರ್ತಿಯ ವ್ಯಕ್ತಿ ಯಾರಾಗಿದ್ದರು?

A

ಹಿರಿಯ ವಕೀಲರಾದ ಪಿ ಎಚ್‌ ದೇವದಾಸ್‌, ಸಿ ಎಚ್‌ ಹನುಮಂತರಾಯ, ಸಿ ವಿ ನಾಗೇಶ್‌ ಹಾಗೂ ಕೆ ಎಸ್‌ ಹೆಗ್ಡೆ ಅವರ ಕಚೇರಿಯಲ್ಲಿದ್ದ ದೊಡ್ಡ ದೊಡ್ಡ ವಕೀಲರಿಂದಲೂ ನಾನು ಪ್ರಭಾವಿತನಾಗಿದ್ದೆ. ಅವರಲ್ಲಿ ಬಹುತೇಕ ವಕೀಲರ ಕಚೇರಿಗಳು ಗಾಂಧಿನಗರ ಮತ್ತದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುತ್ತಿದ್ದವು.

Q

ವಕೀಲ ವೃತ್ತಿಯಿಂದ ಸಿನಿಮಾದೆಡೆಗೆ ಹೇಗೆ ಬಂದಿರಿ?

A

ನಮ್ಮ ತಂದೆ ಆರ್‌ ಲಕ್ಷ್ಮಣ್‌ ಅವರು ಹೆಸರಾಂತ ನಿರ್ಮಾಪಕರಾಗಿದ್ದರು. ಸಿನಿಮಾ ನನ್ನ ರಕ್ತದಲ್ಲಿಯೇ ಇತ್ತು. ಆದರೆ ನಮ್ಮ ತಂದೆ ತಾಯಿ ನಾನು ಹೆಚ್ಚು ಓದಬೇಕು ಎಂದು ಬಯಸುತ್ತಿದ್ದರು. ಕೆ ಎಸ್‌ ಎಲ್‌ ಸ್ವಾಮಿ ಕೂಡ ʼನೀನು ಓದಿ ನಂತರ ಸಿನಿಮಾ ರಂಗ ಪ್ರವೇಶಿಸುʼ ಎನ್ನುತ್ತಿದ್ದರು. ಕಾನೂನು ಅಧ್ಯಯನ ಮಾಡಿದ ಮೇಲೆ ʼಸರಿ ಇನ್ನು ನಿನ್ನ ಟ್ರ್ಯಾಕ್‌ ಸಿನಿಮಾ ಕಡೆಗೆ ಬದಲಾಗಲಿʼ ಎಂದು ಹುರಿದುಂಬಿಸಿದ್ದು ಕೂಡ‌ ಅವರೇ. ಸ್ವಾಮಿಯವರ ʼಜಿಮ್ಮಿಗಲ್ಲುʼ, ʼಮಿಥಿಲೆಯ ಸೀತೆಯರುʼ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. 1994ರಲ್ಲಿ ʼಸಾಮ್ರಾಟ್‌ʼ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಗುರುತಿಸಿಕೊಂಡೆ.

Q

ಕಾನೂನು ಶಿಕ್ಷಣ, ವಕೀಲಿಕೆಯ ಹಿನ್ನೆಲೆ ನಿಮ್ಮ ಸಿನಿಮಾ ಕೃಷಿ ಮೇಲೆ ಹೇಗೆ ಪರಿಣಾಮ ಬೀರಿತು?

A

ಸಿನಿಮಾ ಎಷ್ಟೇ ಕಮರ್ಷಿಯಲ್‌ ಆಗಿದ್ದರೂ ಅದರಲ್ಲಿ ಸಹಜ ಅಂಶಗಳನ್ನು ಬೆರೆಸಬೇಕಾಗುತ್ತದೆ. ನಾವು ಪ್ರೇಕ್ಷಕನಿಗೆ ಏನೇ ಉಣಬಡಿಸಿದರೂ ಅದು ಕಾನೂನಿನ ಚೌಕಟ್ಟಿನೊಳಗೆ ಇರಬೇಕು. ಸಹಜತೆ ಇದ್ದಾಗಲೇ ಜನರಿಗೆ ಹತ್ತಿರವಾಗಲು ಸಾಧ್ಯ. ಆ ಸಹಜತೆಯನ್ನು ಕಾನೂನು ಒದಗಿಸಿಕೊಡುತ್ತದೆ.

ʼಡೆಮಾಲಿಷನ್‌ ಮ್ಯಾನ್‌ʼ ಎಂದೇ ಪ್ರಸಿದ್ಧರಾಗಿದ್ದ ಜಿ ಆರ್‌ ಖೈರ್ನರ್‌ ಅವರು ಮುಂಬೈ ಮಹಾನಗರ ಪಾಲಿಕೆಯ ಉಪ ಆಯುಕ್ತರಾಗಿದ್ದಾಗ ಆ ಮಹಾನಗರದ ಅನೇಕ ಅಕ್ರಮ ಕಟ್ಟಡಗಳನ್ನು ಉರುಳಿಸಿ ಸದ್ದು ಮಾಡಿದ್ದರು. ವಿಷ್ಣುವರ್ಧನ್‌ ಅಭಿನಯಿಸಿರುವ ʼಹಲೋ ಡ್ಯಾಡಿʼ ಚಿತ್ರಕ್ಕೆ ಅವರೇ ಸ್ಫೂರ್ತಿ. ಹಾಗೆಯೇ ನಟಿ ಮಾಲಾಶ್ರೀ ಪ್ರಧಾನ ಭೂಮಿಕೆಯಲ್ಲಿರುವ ಲೇಡಿ ಪೋಲಿಸ್‌, ಲೇಡಿ ಕಮಿಷನರ್‌ ಚಿತ್ರಗಳಲ್ಲಿ ಕೂಡ ನನ್ನ ಕಾನೂನು ಜ್ಞಾನವನ್ನು ದುಡಿಸಿಕೊಂಡಿದ್ದೇನೆ. ಮೊದಲೇ ಹೇಳಿದಂತೆ ನ್ಯಾಯಿಕ ಸಂಗತಿಗಳ ಬಗ್ಗೆ ನಾನು ನಿತ್ಯವೂ ಅಪ್‌ಡೇಟ್‌ ಆಗುತ್ತಿರುತ್ತೇನೆ. ಹಾಗಾಗಿ ಅದರ ಪ್ರಭಾವ ಢಾಳಾಗಿಯೇ ಇರುತ್ತದೆ.

Q

ಈಗಲೂ ಕಾನೂನು ಸಲಹೆ, ವಕೀಲಿಕೆ ಮುಂದುವರೆಸಿದ್ದೀರಾ?

A

ಇಲ್ಲ. ಸಿನಿಮಾಕ್ಕೆ ಸಂಬಂಧಿಸಿದ ಬಿಕ್ಕಟ್ಟುಗಳು ಎದುರಾದಾಗ ಚಿತ್ರರಂಗದ ಗಣ್ಯರ ಜೊತೆ ಕುಳಿತು ಕೆಲವೊಮ್ಮೆ ನನಗೆ ತಿಳಿದ ವಿಚಾರಗಳನ್ನು ಹಂಚಿಕೊಂಡಿದ್ದೇನೆ ವಿನಾ ಅಧಿಕೃತವಾಗಿ ಆ ಕಾರ್ಯಕ್ಕೆ ಕೈ ಹಾಕಿಲ್ಲ.

Q

ಸಿನಿಮಾದ ನ್ಯಾಯಾಲಯಗಳಿಗೂ, ವಾಸ್ತವದ ನ್ಯಾಯಾಲಯಗಳಿಗೂ ಇರುವ ವ್ಯತ್ಯಾಸ ಏನು?

A

ಸಿನಿಮಾದಲ್ಲಿ ಉತ್ಪ್ರೇಕ್ಷೆ ಇರುತ್ತದೆ. ಅದರ ಭಾಷೆಯೇ ಬೇರೆ. ಸಿನಿಮಾ ಎಲ್ಲರನ್ನೂ ನಂಬುವಂತೆ ಮಾಡುವ ಮಾಧ್ಯಮ. ಸಿನಿಮಾದಲ್ಲಿ ಪ್ರಕರಣ ಎತ್ತ ಸಾಗುತ್ತದೆ ಎಂದು ಪ್ರೇಕ್ಷಕ ಊಹಿಸಬಲ್ಲ. ಆದರೆ ನಿಜ ಜೀವನದ ನ್ಯಾಯಾಲಯಗಳಲ್ಲಿ ತೀರ್ಪು ಯಾರ ಪರ ಬರುತ್ತದೆ ಎಂದು ಹೇಳಲಾಗದು. ಎಷ್ಟು ಸಮಯ ಮಿತಿಯೊಳಗೆ, ಎಷ್ಟು ಪರಿಣಾಮಕಾರಿಯಾಗಿ ನ್ಯಾಯಾಲಯವನ್ನು ಪ್ರೇಕ್ಷಕರ ಎದುರು ಮಂಡಿಸುತ್ತೀರಿ ಎಂಬುದು ಸಿನಿಮಾ.

Q

ಸಿನಿಮಾ ಮತ್ತು ನ್ಯಾಯಿಕ ಜಗತ್ತುಗಳಲ್ಲಿ ಇರುವ ಜನಪ್ರಿಯತೆಯನ್ನು ನೀವು ಹೇಗೆ ಗ್ರಹಿಸುತ್ತೀರಿ?

A

ನನಗೆ ಜನಪ್ರಿಯತೆಯಲ್ಲಿ ನಂಬಿಕೆ ಇಲ್ಲ. ಆದರೆ ವೃತ್ತಿಪರತೆಯಲ್ಲಿ ವಿಶ್ವಾಸ ಇದೆ. ಸಿನಿಮಾ ಆಗಿರಬಹುದು ಅಥವಾ ವಕೀಲಿಕೆ ಆಗಿರಬಹುದು; ವೃತ್ತಿಪರತೆ ಇದ್ದರೆ ಮಾತ್ರ ಜನಪ್ರಿಯತೆ ಲಭಿಸಬಹುದು. ಸಿನಿಮಾ ರಂಗದಲ್ಲಿ ಅನೇಕ ಬರಹಗಾರರು ಜನಪ್ರಿಯರಲ್ಲ. ಆದರೆ ಅವರು ವೃತ್ತಿಪರರು. ಹಾಗಾಗಿಯೇ ಅನೇಕ ನಿರ್ದೇಶಕರು ಅವರ ಹಿಂದೆ ಬೀಳುತ್ತಾರೆ. ವಕೀಲ ಲೋಕದಲ್ಲಿಯೂ ಜನಪ್ರಿಯರಲ್ಲದ, ಆದರೆ ಸಾಕಷ್ಟು ಪ್ರಕರಣಗಳನ್ನು ಗಟ್ಟಿಯಾಗಿ ನಿಭಾಯಿಸಿದ ವಕೀಲರಿದ್ದಾರೆ.

Related Stories

No stories found.
Kannada Bar & Bench
kannada.barandbench.com