[ಅನುಸಂಧಾನ] ಕೃಷಿ, ಕಾನೂನು, ಕಾವ್ಯ ಹೀಗೆ ಮೂರು ದೋಣಿಗಳಲ್ಲೂ ಕಾಲಿರಿಸಿದವನು ನಾನು: ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರೊಂದಿಗಿನ ಮಾತುಕತೆಯೇ ಈ 'ಅನುಸಂಧಾನ'.
[ಅನುಸಂಧಾನ] ಕೃಷಿ, ಕಾನೂನು, ಕಾವ್ಯ ಹೀಗೆ ಮೂರು ದೋಣಿಗಳಲ್ಲೂ ಕಾಲಿರಿಸಿದವನು ನಾನು: ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಎಪ್ಪತರ ದಶಕ- ಕನ್ನಡ ಕಾವ್ಯದಲ್ಲಿ ಹೊಸ ನೀರು ಹರಿಯುತ್ತಿದ್ದ ಸಮಯ. ಆಗ ಸಾಹಿತ್ಯದ ದೋಣಿ ಏರಿದವರು ಬಾಲಸುಬ್ರಹ್ಮಣ್ಯ ಕಂಜರ್ಪಣೆ. ಕಾನೂನು ಓದುತ್ತಿದ್ದಾಗಲೇ ಅವರಿಗೆ ಕವಿತೆಯ ಗುಂಗು. ʼಸ್ವಯಂಪ್ರಭೆʼ, ʼಒಡೆದ ಪ್ರತಿಮೆಗಳುʼ ʼಅದೃಷ್ಟದ ಹುಡುಗಿʼ, ʼಗರುಡಾವತಾರʼ ಅವರ ಸೃಜನಶೀಲ ಕೃತಿಗಳಾದರೆ ʼಹಳತಿಗೆ ಹೊಳಪುʼ ಸಾಹಿತ್ಯ ಪ್ರಬಂಧಗಳ ಸಂಕಲನ. ಕಾನೂನು ಮತ್ತು ನ್ಯಾಯಸಂಬಂಧಿ ಬರಹಗಳನ್ನುಳ್ಳ ಕೃತಿ ʼತಕ್ಕಡಿ ಮುಳ್ಳುʼ. ನಾಡಿನ ವಿವಿಧ ಪತ್ರಿಕೆಗಳಿಗೆ ಬರೆದ ಹಾಸ್ಯ ಲೇಖನಗಳ ಸಂಗ್ರಹ ʼಎನ್ನ ಕಿವುಡನ ಮಾಡಯ್ಯʼ. ನವಕರ್ನಾಟಕ ʼಸಾಹಿತ್ಯ ಸಂಪದʼ ಮಾಲೆಗೆ ವಿಮರ್ಶಕರಾದ ಜಿ ಎಸ್‌ ಆಮೂರ, ಟಿ ಪಿ ಅಶೋಕ, ಕವಿ ಗೋಪಾಲಕೃಷ್ಣ ಅಡಿಗರ ಕುರಿತಂತೆ ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ಪ್ರಮುಖ ಅಂಕಣಕಾರರಾದ ಅವರಿಗೆ ಅನುವಾದ ಸಾಹಿತ್ಯದಲ್ಲಿ ವಿಶಿಷ್ಟ ಆಸಕ್ತಿ. ವಿಲ್‌ ಡ್ಯುರಂಟ್‌ನ ʼದ ಸ್ಟೋರಿ ಆಫ್‌ ಸಿವಿಲೈಸೇಷನ್‌ʼ ಕೃತಿಯ ಕೆಲ ಅಧ್ಯಾಯಗಳು, ಡಾ. ಬಿ ಆರ್‌ ಅಂಬೇಡ್ಕರ್ ಅವರ ವಿವಿಧ‌ ಬರಹಗಳು, ಕಾವೇರಿ ನ್ಯಾಯಾಧಿಕರಣ ತೀರ್ಪಿನ ಐದನೇ ಸಂಪುಟವನ್ನೂ ಕನ್ನಡಕ್ಕೆ ತಂದಿದ್ದಾರೆ. ಕಂಜರ್ಪಣೆ ಅವರನ್ನು ಅರಸಿಬಂದ ಪ್ರಶಸ್ತಿಗಳೂ ಅಪಾರ.

ʼವೃತ್ತಿಯ ಕಾರಣಕ್ಕೆ ಮಡಿಕೇರಿ ಬಿಟ್ಟು ಆಚೀಚೆ ಕದಲಲು ಕೂಡ ಆಗದುʼ ಎನ್ನುವ ಅವರು ತಮ್ಮ ಕೃತಿಗಳ ಮೂಲಕ ಸೀಮೋಲ್ಲಂಘನ ಮಾಡಿದವರು. ʼಬಾರ್‌ ಅಂಡ್‌ ಬೆಂಚ್‌ʼ ಜೊತೆಗೆ ಅವರು ನಡೆಸಿದ ʼಅನುಸಂಧಾನʼದ ವೇಳೆ ಶೇಕ್ಸ್‌ಪಿಯರ್‌, ಬೇಂದ್ರೆ, ನಾನಿ ಪಾಲ್ಖಿವಾಲಾ, ಸುಬ್ರಾಯ ಚೊಕ್ಕಾಡಿ, ರಾವಬಹದ್ದೂರರು ಹಾದು ಹೋಗಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ ಸೀಮೆಯ ಸಾಂಸ್ಕೃತಿಕ ಲೋಕವೂ ಮೈದಳೆದಿದೆ. ʼನನ್ನನ್ನು ನನ್ನ ಪಾಡಿಗೆ ಬಿಟ್ಟರೆ ಸಾಹಿತ್ಯದಲ್ಲಿ ಕಳೆದುಹೋಗುತ್ತೇನೆʼ ಎನ್ನುವ ಅವರು ಸಿವಿಲ್‌, ಕ್ರಿಮಿನಲ್‌ ಪ್ರಕರಣಗಳಲ್ಲಿ ಕೈಯಾಡಿಸಿದವರು. ಕಾನೂನಿನಲ್ಲಿ ಸ್ಪೆಷಲೈಸೇಷನ್‌ ಎಂಬುದಿಲ್ಲ, ಕಾನೂನೇ ಒಂದು ಸ್ಪೆಷಲೈಸಡ್‌ ವಿಷಯ ಎನ್ನುವ ಉಮೇದಿನೊಂದಿಗೆ ನ್ಯಾಯಿಕ ಲೋಕದಲ್ಲಿ ಸಂಚರಿಸುತ್ತಿದ್ದಾರೆ.

ʼನಿತ್ಯೋತ್ಸವʼ ಕವಿ ನಿಸಾರ್‌ ಅಹಮದ್‌ ಅವರೊಂದಿಗೆ.
ʼನಿತ್ಯೋತ್ಸವʼ ಕವಿ ನಿಸಾರ್‌ ಅಹಮದ್‌ ಅವರೊಂದಿಗೆ.
Q

ಉಡುಪಿಯಲ್ಲಿ ಕಾನೂನು ಕಲಿಯುತ್ತಿದ್ದ ದಿನಗಳನ್ನು ನೆನೆಸಿಕೊಳ್ಳಬಹುದೇ?

A

1972ರಿಂದ 75ನೇ ಇಸವಿಯವರೆಗೆ ಉಡುಪಿಯ ಅಜ್ಜರಕಾಡಿನಲ್ಲಿದ್ದ ಉಡುಪಿ ಕಾನೂನು ಕಾಲೇಜಿನಲ್ಲಿ ನಾನು ಅಧ್ಯಯನ ಮಾಡಿದೆ. ಕಾನೂನಿಗಿಂತಲೂ ಹೆಚ್ಚಾಗಿ ಸಾಹಿತ್ಯದ ಬಗ್ಗೆಯೇ ಆಸಕ್ತಿ ಇತ್ತು. ಶೇಕ್ಸ್‌ಪಿಯರ್‌, ವರ್ಡ್ಸ್‌ವರ್ತ್‌, ಮಿಲ್ಟನ್‌ ಹೀಗೆ ಓದಿಕೊಳ್ಳುತ್ತಿದ್ದೆ. ಅಲ್ಲೊಂದು ಗ್ರಂಥಾಲಯ ಇತ್ತು. ನನ್ನ ಪುಣ್ಯಕ್ಕೆ ಅಲ್ಲಿ ಅನೇಕ ಸಾಹಿತ್ಯಿಕ ಗ್ರಂಥಗಳನ್ನು ಸಂಗ್ರಹಿಸಿಡಲಾಗಿತ್ತು. ನಮಗೆ ಬೆಳಿಗ್ಗೆ ಏಳರಿಂದ ಒಂಬತ್ತರವರೆಗೆ ಮತ್ತು ಸಂಜೆ ಆರರಿಂದ ಏಳರವರೆಗೆ ತರಗತಿಗಳು ನಡೆಯುತ್ತಿದ್ದವು. ವಿಶ್ವನಾಥ್‌ ಭಟ್‌ ಅಂತ ಒಬ್ಬ ಗ್ರಂಥಪಾಲಕರಿದ್ದರು. ನಾನು ಓದುತ್ತಿದ್ದ ಪರಿ ನೋಡಿ ಬೆಸ್ಟ್‌ ರೀಡರ್‌ ಪ್ರಶಸ್ತಿ ಕೂಡ ಕೊಟ್ಟಿದ್ದರು. ನಾಟಕ, ಯಕ್ಷಗಾನ, ಚರ್ಚಾಕೂಟ ಅಂತ ಮುಳುಗಿರುತ್ತಿದ್ದೆ. ಕಾಲೇಜಿನ ನಿಯತಕಾಲಿಕವನ್ನು ಕೂಡ ಹೊರತರುತ್ತಿದ್ದೆ. ಪಠ್ಯೇತರ ಚಟುವಟಿಕೆಗಳು ಸೆಳೆಯುತ್ತಿದ್ದವು.

ನಮ್ಮೂರು ಕಂಜರ್ಪಣೆ ಇರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಾದರೂ ಮಡಿಕೇರಿ ಜಿಲ್ಲಾ ಕೇಂದ್ರ ನಮಗೆ ಬಹಳ ಸಮೀಪ. ಹೀಗಾಗಿ 1976ರಿಂದ ನಾನು ಮಡಿಕೇರಿಯಲ್ಲಿ ವಕೀಲಿಕೆ ಶುರು ಮಾಡಿದೆ. ಎಪ್ಪತ್ತನೇ ಇಸವಿ ಹೊತ್ತಿಗೆ ಕವಿತೆಗಳನ್ನು ಬರೆಯಲಾರಂಭಿಸಿದ್ದೆ. 1974ರ ಸುಮಾರಿಗೆ ಕವಿ ಗೋಪಾಲಕೃಷ್ಟ ಅಡಿಗರು ಹೊರತರುತ್ತಿದ್ದ ʼಸಾಕ್ಷಿʼ ಸಾಹಿತ್ಯಿಕ ನಿಯತಕಾಲಿಕದಲ್ಲಿ ನನ್ನ ಕವಿತೆಗಳು ಪ್ರಕಟವಾದವು. ವೃತ್ತಿಯಲ್ಲಿ ತೊಡಗಿಕೊಳ್ಳಬೇಕಾದುದರಿಂದ 78ನೇ ಇಸವಿಯವರೆಗೂ ಬರಹದ ಕಡೆಗೆ ತೊಡಗಿಕೊಳ್ಳಲು ಆಗಲಿಲ್ಲ. ಈ ಮಧ್ಯೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ವೃತ್ತಿದಿನಗಳ ಆರಂಭದ ತೊಡಕಿನಿಂದಾಗಿ ಒಂದು ವರ್ಷ ಕಾಲ ಮಡಿಕೇರಿಯ ಜನರಲ್‌ ಕಾರ್ಯಪ್ಪ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿಯಲ್ಲಿ ತೊಡಗಿದೆ. 1982ರ ಹೊತ್ತಿಗೆ ಕೊಡಗು ಪ್ಲಾಂಟರ್ಸ್‌ ಅಸೋಸಿಯೇಷನ್‌ ಪರವಾಗಿ ವಾದ ಮಂಡಿಸುತ್ತಾ ಒಳ್ಳೆಯ ಹೆಸರು ಮಾಡಿದೆ.

Q

ಕಾನೂನು ಅಧ್ಯಯನ ಮಾಡುತ್ತಿದ್ದಾಗ ನಿಮ್ಮನ್ನು ಪ್ರಭಾವಿಸಿದ ಗುರುಗಳು ಯಾರು?

A

ಅಮೀರ್‌ ಅಹಮದ್‌ ಎಂಬ ಬಹಳ ಒಳ್ಳೆಯ ಪ್ರಾಧ್ಯಾಪಕರು ಇದ್ದರು. ಅವರು ಸಂವಿಧಾನ, ಮೂಲಭೂತ ಹಕ್ಕುಗಳ ಬಗ್ಗೆ ರಸವತ್ತಾಗಿ ವಿದ್ಯಾರ್ಥಿಗಳಿಗೆ ಉಣಬಡಿಸುತ್ತಿದ್ದರು. ಮೈಕಿನ ಅವಶ್ಯಕತೆಯೇ ಇಲ್ಲದೆ ಎಲ್ಲರಿಗೂ ಕೇಳುವಂತೆ ಸ್ಪಷ್ಟವಾಗಿ ಅವರ ಮಾತುಗಳು ಇರುತ್ತಿದ್ದವು. ಎಚ್‌ ವಿ ಐತಾಳ್‌ ಎಂಬ ಮತ್ತೊಬ್ಬ ಗುರುಗಳು ಕಾಂಟ್ರಾಕ್ಟ್‌ ಲಾ ಬಗ್ಗೆ ಪಾಠ ಮಾಡುತ್ತಿದ್ದರು. ಇವರಿಬ್ಬರೂ ನನಗೆ ಅಚ್ಚುಮೆಚ್ಚು.

Q

ನೀವು ತುಂಬಾ ಇಷ್ಟಪಡುವ ಕಾನೂನು ಲೋಕದ ಧೀಮಂತ ವ್ಯಕ್ತಿ ಯಾರು?

A

ಮತ್ತಾರೂ ಅಲ್ಲ ಅದು ನಾನಿ ಪಾಲ್ಖಿವಾಲ. ಅವರ ʼವೀ ದ ಪೀಪಲ್‌ʼ ಮತ್ತು ʼವೀ ದ ನೇಷನ್‌ʼ ಕೃತಿಗಳನ್ನು ಓದಿದರೆ ಸಾಕು ಅವರೇನು ಎಂದು ಅರ್ಥವಾಗುತ್ತದೆ. ಅವರು ಕೂಡ ಇಂಗ್ಲಿಷ್‌ ಸಾಹಿತ್ಯದ ವಿದ್ಯಾರ್ಥಿ. ಸಾಹಿತ್ಯ ಓದಿಕೊಂಡ ವಕೀಲರ ಕೃತಿಗಳು ಶುಷ್ಕ ಎನಿಸುವುದೇ ಇಲ್ಲ. ಅವರು ಶೇಕ್ಸ್‌ಪಿಯರ್‌, ಬರ್ನಾಡ್‌ ಷಾ ಮುಂತಾದವರನ್ನು ಉದ್ಧರಿಸಿ ಬರೆಯುತ್ತಿದ್ದ ಸಾಲುಗಳು ರೋಮಾಂಚನ ಹುಟ್ಟಿಸುತ್ತವೆ. ಅಲ್ಲದೆ ಫಾಲಿ ನಾರಿಮನ್‌, ಸೆಟಲ್ವಾಡ್, ಸೋಲಿ ಸೊರಾಬ್ಜಿ ರೀತಿಯ ದೊಡ್ಡ ದೊಡ್ಡ ವ್ಯಕ್ತಿಗಳ ಪ್ರಭಾವ ನನ್ನ ಮೇಲಿದೆ.

Q

ಒಂದೆಡೆ ಕೃಷಿ, ಮತ್ತೊಂದೆಡೆ ಕಾನೂನು, ಇನ್ನೊಂದೆಡೆ ಕವಿತೆ… ಇವುಗಳಲ್ಲಿ ನೀವು ಅತಿ ಹೆಚ್ಚು ಮೆಚ್ಚಿದ ಕ್ಷೇತ್ರ ಯಾವುದು?

A

ನನ್ನಷ್ಟಕ್ಕೇ ನನ್ನನ್ನು ಬಿಟ್ಟರೆ ಸಾಹಿತ್ಯದಲ್ಲಿ ಮುಳುಗಿಬಿಡುತ್ತೇನೆ. ಆದರೆ ವೃತ್ತಿ ಎಂಬುದು, ಹೊಟ್ಟೆ ಎಂಬುದು ಬಿಡಬೇಕಲ್ಲಾ? ಕೃಷಿ, ಕಾನೂನು, ಕಾವ್ಯ ಹೀಗೆ ಮೂರು ದೋಣಿಗಳಲ್ಲೂ ಕಾಲಿರಿಸಿದವನು ನಾನು. ಸಾಹಿತ್ಯ ನಿನ್ನೊಳಗೋ ನೀನು ಸಾಹಿತ್ಯದೊಳಗೋ ಎಂಬಂತೆ ಇರುವವನು.

ಕಂಜರ್ಪಣೆ ಅವರ ಕೃತಿಯೊಂದರ ಮುಖಪುಟ
ಕಂಜರ್ಪಣೆ ಅವರ ಕೃತಿಯೊಂದರ ಮುಖಪುಟ
Q

ಸೃಜನಶೀಲತೆ ಹಾಸುಹೊಕ್ಕಾಗಿದ್ದರೂ ವಕೀಲರುಗಳಿಗೆ ತಮ್ಮ ಪ್ರವೃತ್ತಿಗಳಲ್ಲಿ ತೊಡಗಿಕೊಳ್ಳಲು ಆಗದು ಎಂಬ ಮಾತಿದೆ. ಇದು ನಿಜವೇ?

A

ಅದು ಸುಳ್ಳು. ಒತ್ತಡ ಇದ್ದಾಗ ಮಾತ್ರ ಬರೆಯಲು ಸಾಧ್ಯ. ಆದರೆ ವಕೀಲರ ಸಾಹಿತ್ಯವನ್ನು ಅಕೆಡಮಿಕ್‌ ವಲಯ ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಕೆ ಎಸ್‌ ನರಸಿಂಹಸ್ವಾಮಿ, ಮಾಸ್ತಿ ಮುಂತಾದವರು ಬೋಧಕ ವರ್ಗವೇನೂ ಆಗಿರಲಿಲ್ಲ ಎಂಬುದನ್ನು ಗಮನಿಸಬೇಕು. ಇನ್ನು ವಕೀಲರದ್ದೇ ಕೆಲವು ಸಮಸ್ಯೆಗಳಿವೆ. ಅವರು ಕಾನೂನು ಪುಸ್ತಕಗಳನ್ನು ಅಧ್ಯಯನ ಮಾಡುವುದನ್ನು ಹೊರತುಪಡಿಸಿದರೆ ಬೇರೇನನ್ನೂ ಓದುವುದಿಲ್ಲ. ಮಂಗಳೂರಿನ ಕೆ ಪಿ ವಾಸುದೇವ ರಾವ್‌ ರೀತಿಯ ಅನೇಕರು ಸಾಹಿತ್ಯವನ್ನು ತುಂಬಾ ಓದಿಕೊಂಡಿದ್ದಾರೆ. ಆದರೂ ಸಹ ಅಂತಹವರು ಯಾಕೋ ಬರೆಯುವುದಿಲ್ಲ.

Q

ಕಾವ್ಯದ ಕಡೆ ನೀವು ಹೊರಳಲು ಇದ್ದ ಪ್ರಮುಖ ಕಾರಣವೇನು?

A

ನಾನು ತುಂಬಾ ಭಾವಜೀವಿ ಎನ್ನುವುದು ಒಂದು ಕಾರಣವಾದರೆ ಮತ್ತೊಂದು ಕಾರಣ ನನ್ನೂರಾದ ಬಂಟಮಲೆಯ ನಿಸರ್ಗ. ಅಲ್ಲಿಂದ ವೃತ್ತಿ ಕಾರಣಕ್ಕಾಗಿ ಮಡಿಕೇರಿಗೆ ವಾಪಸ್ಸಾಗುವುದೆಂದರೆ ಹಸುವಿನ ಮಡಿಲಿನಿಂದ ಕರುವನ್ನು ಬಿಡಿಸಿದಂತೆಯೇ ಅನಿಸುತ್ತದೆ. ಗದ್ಯದ ವಿಚಾರಕ್ಕೆ ಬಂದಾಗ ವೈಚಾರಿಕವಾಗಿ ಬರೆಯುತ್ತೇನೆ. ಕಂಪ್ಯೂಟರಿನಲ್ಲಿ ಫೈಲ್‌ಗಳನ್ನು ವಿಂಗಡಿಸಿಟ್ಟಿರುತ್ತಾರಲ್ಲಾ ಹಾಗೆ ಕಾವ್ಯವನ್ನೂ ಗದ್ಯವನ್ನೂ ವಿಂಗಡಿಸಿಟ್ಟುಕೊಂಡಿದ್ದೇನೆ.

ವಿಚಾರ ವಿನಿಮಯ ಕಾರ್ಯಕ್ರಮವೊಂದರಲ್ಲಿ...
ವಿಚಾರ ವಿನಿಮಯ ಕಾರ್ಯಕ್ರಮವೊಂದರಲ್ಲಿ...
Q

ನಿಮ್ಮ ಮನೆಯಲ್ಲಿ ಕೂಡ ಸಾಹಿತ್ಯದ ವಾತಾವರಣ ಇತ್ತೆಂದು ತೋರುತ್ತದೆ?

A

ನನ್ನ ತಂದೆ- ತಾಯಿ ಹೆಚ್ಚು ಓದಿದವರಲ್ಲ. ಅವರು ರೈತರು. ಆದರೆ ನಮ್ಮ ತಂದೆ ತುಂಬಾ ಪುಸ್ತಕಗಳನ್ನು ಮನೆಗೆ ತರುತ್ತಿದ್ದರು. ಅವುಗಳನ್ನೆಲ್ಲಾ ಓದುತ್ತಿದ್ದೆ. ಜೊತೆಗೆ ನಮ್ಮೂರಿನ ಸಾಹಿತ್ಯಕ ವಾತಾವರಣ ನನ್ನ ಬರವಣಿಗೆಗೆ ಸ್ಫೂರ್ತಿಯಾಯಿತು. ಸಾಹಿತಿಗಳಾದ ಸುಬ್ರಾಯ ಚೊಕ್ಕಾಡಿ, ಜಿ ಎಸ್‌ ಉಬರಡ್ಕ, ಸತ್ಯಮೂರ್ತಿ ದೇರಾಜೆ, ಸತ್ಯನ್‌ ದೇರಾಜೆ ಹೀಗೆ ನಾವೆಲ್ಲಾ ಒಟ್ಟಿಗೆ ಕುಳಿತು ಸಾಹಿತ್ಯದ ಬಗ್ಗೆ ಮಾತನಾಡುತ್ತಿದ್ದೆವು. ಇವರೆಲ್ಲಾ ನನ್ನ ಬಂಧುಗಳು ಕೂಡ. ನನ್ನ ಕಿರಿಯ ಸಹೋದರ ಕೆ ಪಿ ಸುರೇಶ ಕೂಡ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ.

Q

ನಿಮ್ಮ ಮೇಲೆ ಗಾಢ ಪ್ರಭಾವ ಬೀರಿದ ಸಾಹಿತಿಗಳು ಯಾರು?

A

ಗಾಢವಾಗಿ ಪ್ರಭಾವಿಸಿದ್ದು ಗೋಪಾಲಕೃಷ್ಣ ಅಡಿಗರೇ. ಅವರನ್ನು ʼಒಂದು ಜನಾಂಗದ ಕಣ್ಣು ತೆರೆಸಿದ ಕವಿʼ ಎಂದು ಅತಿರಂಜಿತವಾಗಿ ವರ್ಣಿಸಿ ಹಾಳು ಮಾಡಿದ್ದಾರೆ. ಅವರನ್ನು ಓದಲು ಸಾಧ್ಯವೇ ಇಲ್ಲದಂತಾಗಿಸಿದ್ದಾರೆ. ಅವರೊಬ್ಬ ಭಿನ್ನದೃಷ್ಟಿಯ ಕವಿ. ಹಾಗೆ ಹೊಗಳಲು ಹೋಗಬಾರದು. ಕೃತಿಯನ್ನಷ್ಟೇ ನೋಡಬೇಕು ಕರ್ತೃವನ್ನಲ್ಲ. ʼಗ್ರಾಮಾಯಣʼ ಬರೆದ ರಾವಬಹದ್ದೂರ ನನ್ನ ನೆಚ್ಚಿನ ಕಾದಂಬರಿಕಾರರು.

ಬಿಡುವಿನ ವೇಳೆ...
ಬಿಡುವಿನ ವೇಳೆ...
Q

ಅನುವಾದದ ಬಗ್ಗೆಯೂ ನಿಮಗೆ ಅಪಾರ ಆಸಕ್ತಿ. ಒಬ್ಬ ಕವಿ ಅನುವಾದಕನಾಗಿ ರೂಪಾಂತರಗೊಳ್ಳುವಾಗಿನ ಸವಾಲುಗಳೇನು?

A

ಅನುವಾದ ಎಂದರೆ ಮೂಲಕ್ಕೆ ಅನ್ಯಾಯ ಆಗದಂತೆ ನೋಡಿಕೊಳ್ಳುವುದು ಮತ್ತು ಅದನ್ನು ಕನ್ನಡಿಸುವುದು. ಮೂಲಕೃತಿಯನ್ನು ಅನುಭವಿಸಿ ಅನುವಾದಿಸಬೇಕು. ಎರಡೂ ಭಾಷೆಯ ಸೂಕ್ಷ್ಮತೆಗಳು ಗೊತ್ತಿದ್ದಾಗ ಮಾತ್ರ ಒಬ್ಬ ಕವಿ ಒಳ್ಳೆಯ ಅನುವಾದಕನಾಗಬಲ್ಲ.

Q

ಕಾವೇರಿ ಹುಟ್ಟಿ ಹರಿಯುವ ಮಡಿಕೇರಿಯಲ್ಲೇ ವಕೀಲ ವೃತ್ತಿಯಲ್ಲಿ ತೊಡಗಿರುವ ತಾವು ಕಾವೇರಿ ನ್ಯಾಯಾಧಿಕರಣ ತೀರ್ಪಿನ ಐದನೇ ಸಂಪುಟದ ಅನುವಾದ ಕೂಡ ಮಾಡಿದ್ದೀರಿ. ಈ ರೀತಿಯ ಅನುವಾದ ಒಂದು ಭಾವನಾತ್ಮಕ ಬೆಸುಗೆ ಕೂಡ ಅಲ್ಲವೇ?

A

ಖಂಡಿತಾ ಇಲ್ಲ. ಯಾವುದೇ ಭಾವನಾತ್ಮಕ ನಂಟು ಇಟ್ಟುಕೊಳ್ಳದೇ ಅದನ್ನು ಅನುವಾದಿಸಿದೆ. ಕಾವೇರಿ ನಮ್ಮ ತಾಯಿ, ಪೂಜ್ಯನೀಯಳು ಎಂಬ ನೆಲೆಯಲ್ಲಿ ಅನುವಾದ ಮಾಡಿಲ್ಲ.

ತಕ್ಕಡಿಯ ಮುಳ್ಳು ಕೃತಿ
ತಕ್ಕಡಿಯ ಮುಳ್ಳು ಕೃತಿ
Q

ಬದುಕಿನ ಬಹುದೊಡ್ಡ ಯಾನ ಕೈಗೊಂಡವರು ನೀವು. ಮುಂದಿನ ಹಾದಿ ಯಾವ ಕಡೆಗೆ?

A

ನನಗೀಗ 66 ವರ್ಷ. ಇನ್ನೂ ನಾಲ್ಕಾರು ವರ್ಷ ವಕೀಲನಾಗಿ ಮುಂದುವರೆಯಬೇಕು ಎಂದುಕೊಂಡಿದ್ದೇನೆ. ಸಾಹಿತಿಗಳು ಎಂಬತ್ತರ ಹರೆಯದಲ್ಲೂ ಬರೆಯುವಾಗ, ನಾವು ವಕೀಲರಾಗಿ ಇನ್ನೂ ಒಂದಷ್ಟು ಕಾಲ ಪ್ರಾಕ್ಟೀಸ್‌ ಮಾಡಬಹುದೇನೋ ಅನ್ನಿಸುತ್ತದೆ. ವಕೀಲರಿಗೆ ನಿವೃತ್ತಿ ಎಂಬುದು ಬರುವುದಾದರೆ ಅದು ಮೃತ್ಯು, ಅನಾರೋಗ್ಯದ ಕಾರಣಕ್ಕೆ. ದೃಷ್ಟಿ ಮಂದವಾಗುತ್ತಿದ್ದರೆ, ನೆನಪು ಮಾಸುತ್ತಿದ್ದರೆ ವಕೀಲಿಕೆ ಮಾಡಲು ಹೋಗಬಾರದು. ಅದೊಂದು ಪರೋಪಕಾರದ ವೃತ್ತಿ ಹಾಗಾಗಿ.

Related Stories

No stories found.