[ಅನುಸಂಧಾನ] ವಕೀಲಿಕೆ ಎಂಬುದು ವಿಚಿತ್ರ, ವಿಶಿಷ್ಟ ಅನುಭವ ಕೊಡುವ ವೃತ್ತಿ: ನ್ಯಾಯವಾದಿ, ಲೇಖಕಿ ಬಾನು ಮುಷ್ತಾಕ್

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರೊಂದಿಗಿನ ಮಾತುಕತೆಯೇ ಈ 'ಅನುಸಂಧಾನ'.
[ಅನುಸಂಧಾನ] ವಕೀಲಿಕೆ ಎಂಬುದು ವಿಚಿತ್ರ, ವಿಶಿಷ್ಟ ಅನುಭವ ಕೊಡುವ ವೃತ್ತಿ: ನ್ಯಾಯವಾದಿ, ಲೇಖಕಿ ಬಾನು ಮುಷ್ತಾಕ್

ಎಪ್ಪತ್ತು- ಎಂಬತ್ತರ ದಶಕ… ಕರ್ನಾಟಕ ಕುದಿವ ಪಾತ್ರೆಯಂತಿದ್ದ ಕಾಲ. ಸಾಮಾಜಿಕ- ಸಾಹಿತ್ಯಕ ಚಳವಳಿಗಳು ಜನರನ್ನು ಬಡಿದೆಬ್ಬಿಸಿದ್ದವು. ನೆಲದ ತುಂಬಾ ಹೋರಾಟದ ಕಾವು. ಅನೇಕ ಲೇಖಕರು, ಪತ್ರಕರ್ತರು, ಚಿಂತಕರು, ಸಾಮಾಜಿಕ ಕಾರ್ಯಕರ್ತರಿಗೆ ಬಹುದೊಡ್ಡ ಭೂಮಿಕೆ ಒದಗಿಸಿದ್ದು ಆ ಕಾಲಘಟ್ಟವೇ. ಸಾಮಾಜಿಕ ಹೋರಾಟಗಳಲ್ಲಿ ರೈತ ಚಳವಳಿ, ದಲಿತ ಚಳವಳಿಗಳ ಭೋರ್ಗರೆತ ಒಂದೆಡೆಯಾದರೆ ಸಾಹಿತ್ಯದಲ್ಲಿ ದಲಿತ- ಬಂಡಾಯದ ದನಿ ಮೂಡಿದ್ದ ಹೊತ್ತು ಅದು. ಅಂತಹ ಸಂಕ್ರಮಣ ಸಮಯದಲ್ಲಿ ಒಡಮೂಡಿದವರು ಬಾನು ಮುಷ್ತಾಕ್‌.

ವೈದ್ಯೆಯಾಗಬೇಕಿದ್ದವರು, ಕಾರ್ಯಕ್ರಮ ಉದ್ಘೋಷಕಿಯಾಗಿ ನಂತರ ಶಿಕ್ಷಕಿಯಾಗಿ ಅಲ್ಲಿಂದ ಮುಂದೆ ಪತ್ರಕರ್ತೆಯಾಗಿ, ನಡುವೆ ರಾಜಕಾರಣಿಯಾಗಿ, ಆ ಬಳಿಕ ವಕೀಲೆಯಾಗಿ ತಮ್ಮ ಅನುಭವ ಲೋಕವನ್ನು ವಿಸ್ತರಿಸಿಕೊಳ್ಳುತ್ತಲೇ ಹೋದದ್ದು ಅವರ ಹೆಗ್ಗಳಿಕೆ. ಬಂಡುಕೋರತನದ ದೊಂದಿಯನ್ನು ಸದಾ ಜೊತೆಗೆರಿಸಿಕೊಂಡೇ ನಡೆದ ಅವರು ಕನ್ನಡ ನವ್ಯೋತ್ತರ ಕಾಲಘಟ್ಟದ ಪ್ರಮುಖ ಲೇಖಕಿ. ʼಹೆಜ್ಜೆ ಮೂಡಿದ ಹಾದಿʼ, ʼಬೆಂಕಿ ಮಳೆʼ ʼಎದೆಯ ಹಣತೆʼ, ʼಸಫೀರಾʼ, ʼಬಡವರ ಮಗಳು ಹೆಣ್ಣಲ್ಲʼ ಬಾನು ಅವರ ಕಥಾ ಸಂಕಲನಗಳು. ʼಕುಬ್ರʼ ಕಾದಂಬರಿ. ʼಇಬ್ಬನಿಯ ಕಾವುʼ ಲೇಖನ ಸಂಕಲನ. ʼಒದ್ದೆ ಕಣ್ಣಿನ ಬಾಗಿನʼ ಕವಿತೆಗಳ ಸಂಕಲನ. ಅವರ ʼಕರಿ ನಾಗರಗಳುʼ ಕತೆ ಆಧರಿಸಿ ಖ್ಯಾತ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ʼಹಸೀನಾʼ ಸಿನಿಮಾ ಮಾಡಿದ್ದಾರೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ, ತಾರಿಕ್‌ ಎ ಫೆರಿಸ್ತಾ ಕೃತಿಗಳನ್ನು ಕನ್ನಡಕ್ಕೆ ತಂದಿರುವ ಬಾನು ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸಿ, ಪದ್ಮಭೂಷಣ ಬಿ ಸರೋಜಾದೇವಿ ಪ್ರಶಸ್ತಿ, ಇಂಟರ್‌ನ್ಯಾಷನಲ್‌ ವುಮನ್‌ ಫಾರ್‌ ರೇಡಿಯೊ ಅಂಡ್‌ ಟೆಲಿವಿಷನ್‌ ಬಹುಮಾನ ಹೀಗೆ ಹಲವು ಪ್ರತಿಷ್ಠಿತ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಹಾಗೆಯೇ ಅನೇಕ ಕತೆಗಳು ಹಿಂದಿ, ಮಲೆಯಾಳಂ ಸೇರಿದಂತೆ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ. ಇನ್ನು ಕೆಲವೇ ದಿನಗಳಲ್ಲಿ ಅವರ ಆತ್ಮಕತೆ ಪ್ರಕಟವಾಗಲಿದೆ.

ಒಂದು ವಿರಾಮದ ಘಳಿಗೆ...
ಒಂದು ವಿರಾಮದ ಘಳಿಗೆ...
Q

ಕಾನೂನು ಅಧ್ಯಯನ ಮಾಡಬೇಕು ಎಂದು ನಿಮಗೆ ಅನ್ನಿಸಲು ಕಾರಣ ಏನು?

A

ನನ್ನಪ್ಪ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ನನಗೆ ಮೆಡಿಕಲ್‌ ಓದಬೇಕು ಅಂತ ತುಂಬಾ ಆಸೆ ಇತ್ತು. ನಾನು ತುಂಬಾ ಪ್ರತಿಭಾನ್ವಿತ ವಿದ್ಯಾರ್ಥಿನಿ ಆಗಿದ್ದೆ. ಆದರೆ ಯಾವುದೋ ಕಾರಣಕ್ಕೆ ವೈದ್ಯಕೀಯ ಅಧ್ಯಯನ ಮಾಡಲು ಆಗಲಿಲ್ಲ. ಅಷ್ಟೊತ್ತಿಗೆ ʼಪ್ರಜಾವಾಣಿʼಯಲ್ಲಿ ಒಂದು ಪ್ರಕಟಣೆ ಬಂತು. ಆಲ್‌ ಇಂಡಿಯಾ ರೇಡಿಯೊದಲ್ಲಿಉದ್ಘೋಷಕಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಓದು ಮುಂದುವರೆಸಲು ಆಗಲಿಲ್ಲ. ಅಷ್ಟೊತ್ತಿಗೆ ಸಕಲೇಶಪುರ ಬಳಿಯ ಬೆಳಗೋಡಿನ ಪ್ರೌಢಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಸಿಕ್ಕಿತು. ಖಾಯಂ ಅಲ್ಲದ ಉದ್ಘೋಷಕಿ ವೃತ್ತಿ ಬಿಟ್ಟು ಶಿಕ್ಷಕಿಯಾಗಿ ಸೇರಿಕೊಂಡೆ.

ಮದುವೆಯಾದ ನಂತರ ಆ ವೃತ್ತಿಯನ್ನೂ ಬಿಡಬೇಕಾಯಿತು. ನನ್ನ ಗಂಡ ಮುಷ್ತಾಕ್‌ ಮೊಹಿಯುದ್ದೀನ್‌ ಅವರಿಗೆ ಒಂದು ಆಸೆ ಇತ್ತು. ಅವರ ಮಿತ್ರರ ತಂದೆಯಂದಿರು ದೊಡ್ಡ ದೊಡ್ಡ ವಕೀಲರಾಗಿದ್ದರು. ನಾನೂ ಅವರ ಹಾಗೆಯೇ ವಕೀಲಿ ವೃತ್ತಿ ಮಾಡಬೇಕು ಅನ್ನೋದು ಅವರ ಹಂಬಲವಾಗಿತ್ತು. ಅವರೇನೋ ಎಲ್‌ಎಲ್‌ಬಿ ಮಾಡು ಎಂದರು. ನಾನೂ ಎಂ ಕೃಷ್ಣ ಸಂಜೆ ಕಾನೂನು ಕಾಲೇಜಿನಲ್ಲಿ ಅಧ್ಯಯನದಲ್ಲಿ ತೊಡಗಿದೆ. ಆದರೆ ಕಾನೂನಿನ ಬಗ್ಗೆ ಎಳ್ಳಷ್ಟೂ ಆಸಕ್ತಿ ಇರಲಿಲ್ಲ. ಸುಮ್ಮನೆ ಕಾಲೇಜಿಗೆ ಹೋಗಿ ಬರುತ್ತಿದ್ದೆ. ಪರೀಕ್ಷೆ ತೆಗೆದುಕೊಂಡಿರಲಿಲ್ಲ.

ಎಂಬತ್ತರ ದಶಕ ಎಂದರೆ ಚಳವಳಿಗಳ ಕಾಲ. ದಲಿತ ಚಳವಳಿ, ರೈತ ಹೋರಾಟಗಳು ಪ್ರಬಲವಾಗಿದ್ದ ಕಾಲ. ಹಾಸನ ಜಿಲ್ಲೆಯಂತೂ ಹೋರಾಟಗಳ ಮಡುವಾಗಿತ್ತು. ನಿತ್ಯ ಪ್ರತಿಭಟನೆ, ಪೊಲೀಸರು ಯಾರನ್ನೋ ಬಂಧಿಸಿದರು, ಇನ್ನಾರದೋ ಬೆನ್ನುಮೂಳೆ ಮುರಿದರು ಎಂಬಂತಹ ಸುದ್ದಿಗಳೇ ಬರುತ್ತಿದ್ದವು. ರೈತ ಸಂಘದ ಮುಖವಾಣಿಯಾಗಿದ್ದ ʼಜನತಾ ಮಾಧ್ಯಮʼದೊಂದಿಗೆ ನಾನು ತೊಡಗಿಕೊಂಡಿದ್ದೆ. ಜೊತೆಗೆ ʼಲಂಕೇಶ್‌ ಪತ್ರಿಕೆʼಗೆ ವರದಿ ಮಾಡುತ್ತಿದ್ದೆ. ಸುಮಾರು ಹತ್ತು ವರ್ಷಗಳು ಹೀಗೆಯೇ ಕಳೆದವು. 90ರ ದಶಕದ ಹೊತ್ತಿಗೆ ರೈತಸಂಘ ದೊಡ್ಡಮಟ್ಟದಲ್ಲಿ ಹೋರಾಟದಲ್ಲಿ ತೊಡಗಿಸಿಕೊಂಡಿತ್ತು. ರೈತಸಂಘದ ಅಧ್ಯಕ್ಷರಾಗಿದ್ದ ಪ್ರೊ. ಎಂ ಡಿ ನಂಜುಂಡಸ್ವಾಮಿ ಅವರು ರೈತರಿಗೆ ಜೈಲಿನ ಭಯ ಹೋಗಲಿ ಎಂಬ ಕಾರಣಕ್ಕೆ ಜೈಲ್‌ ಭರೋ ಚಳವಳಿಗಳನ್ನು ನಡೆಸುತ್ತಿದ್ದರು. ಹಾಸನದಲ್ಲಿ ಬಯಲು ಬಂದೀಖಾನೆ ಮಾಡಿ ರೈತರನ್ನು ಮೈದಾನದಲ್ಲಿ ಕೂಡಿಹಾಕುತ್ತಿದ್ದರು. ಇದನ್ನು ಲಂಕೇಶ್‌ ಪತ್ರಿಕೆಗೆ ವರದಿ ಮಾಡಿದೆ. ಮೊದಮೊದಲು ನನ್ನ ವರದಿಗಾರಿಕೆಯನ್ನು ಬಹಳ ಮೆಚ್ಚುತ್ತಿದ್ದ ಪಿ ಲಂಕೇಶರು ಆ ವರದಿಯನ್ನು ಪ್ರಕಟಿಸಲು ನಿರಾಕರಿಸಿದರು. ನಾನು ಹೇಳಿದೆ, "ಇಲ್ಲ ನಿಮ್ಮ ಪತ್ರಿಕೆಗೆ ನಾನು ವರದಿ ಮಾಡೋದಿಲ್ಲ" ಅಂತ. ಲಂಕೇಶ್‌ ವೈಯಕ್ತಿಕ ವಿಚಾರವನ್ನೇ ಸೈದ್ಧಾಂತಿಕ ವಿಷಯವನ್ನಾಗಿ ಮಾಡಿ ಬಿಡೋರು. ನಂಜುಂಡಸ್ವಾಮಿ ಅವರಷ್ಟೇ ಅಲ್ಲದೆ ಸಾಹಿತಿಗಳಾದ ಪೂರ್ಣಚಂದ್ರ ತೇಜಸ್ವಿ ಅಂತಹವರನ್ನೂ ಅವರು ಬಿಡುತ್ತಿರಲಿಲ್ಲ. ನನ್ನನ್ನೂ ಅವರು ಬಿಡಲಿಲ್ಲ. ಅಲ್ಲಿಯವರೆಗೆ ಲಂಕೇಶ್‌ ಪತ್ರಿಕೆಯೇ ನನ್ನ ಪ್ರಪಂಚ ಎಂದುಕೊಂಡಿದ್ದವಳಿಗೆ ಮುಂದೇನು ಎಂಬುದು ತೋಚದಂತಾಯಿತು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಭಾಗವಹಿಸಿ ಕೌನ್ಸಿಲರ್‌ ಕೂಡ ಆಗಿದ್ದೆನಾದರೂ ಏನೋ ಒಂದು ಕೊರತೆ ಕಾಡಲು ಆರಂಭಿಸಿತು.

ಅಷ್ಟರಲ್ಲಾಗಲೇ ಒಂದು ಘಟನೆ ನಡೆದಿತ್ತು. ನಮ್ಮ ಹಾಸನ ಆಗ ದೊಡ್ಡ ಊರೇನೂ ಅಲ್ಲ. ನಾವು ಏನೇ ಮಾಡುತ್ತಿದ್ದರೂ ಬೇರೆಯವರಿಗೆ ಸಹಜವಾಗಿಯೇ ಗೊತ್ತಾಗಿ ಬಿಡುತ್ತಿತ್ತು. ನಾನು ಕಾನೂನು ಕಾಲೇಜಿಗೆ ಹೋಗಿಬರುತ್ತಿದ್ದುದನ್ನು ಕಂಡಿದ್ದ ಕೆಲವರು ನಾನಾಗಲೇ ವಕೀಲೆಯಾಗಿಬಿಟ್ಟಿದ್ದೇನೆ ಎಂದುಕೊಂಡಿದ್ದರು. ಒಂದು ದಿನ ಒಬ್ಬ ಮಹಿಳೆ ಬಂದು ವಿಚ್ಛೇದನ ಕೊಡಿಸುವಂತೆ ಕೇಳಿದಳು. "ಪುರುಷ ವಕೀಲರಿಗಿಂತಲೂ ಮಹಿಳಾ ವಕೀಲರೇ ಸರಿ" ಎಂದು ನಿಮ್ಮ ಬಳಿ ಬಂದಿದ್ದೇನೆ ಎಂದು ಹೇಳಿದಳು. ನಾನು ವಕೀಲೆ ಅಲ್ಲ ಅಂತ ಎಷ್ಟೇ ಹೇಳಿದರೂ ಕೇಳಲಿಲ್ಲ. ಫೀಸ್‌ ಕೊಡುತ್ತೇನೆ ಎಂದು ದುಂಬಾಲು ಬಿದ್ದಳು. ಅದಕ್ಕೆ ನಾನು ಒಪ್ಪದಿದ್ದಾಗ ತನ್ನ ಬಳಿ ಇದ್ದ ದಾಖಲೆಗಳನ್ನೆಲ್ಲಾ ನನ್ನ ಮೇಲೆ ತೂರಿ ಹೋದಳು. ಆಗ ನನಗೆ ಅನ್ನಿಸಿತು. ಜನ ಏನು ನನ್ನಿಂದ ಬಯಸುತ್ತಿದ್ದಾರೆ ನಾನೇನು ಮಾಡುತ್ತಿದ್ದೇನೆ ಎಂಬುದು ಕಾಡತೊಡಗಿತು.

1987ನೇ ಇಸವಿ ಅದು. ನನಗೆ ಮಗ ಹುಟ್ಟಿದ್ದ. ಆಗ ಅರ್ಧಕ್ಕೇ ಬಿಟ್ಟ ಎಲ್‌ಎಲ್‌ಬಿ ಓದು ನೆನಪಾಯಿತು. ಬಾಣಂತಿಯಾಗಿದ್ದರೂ ಹಿಡಿದ ಹಠದದಲ್ಲಿ ಬಾಕಿ ಉಳಿದಿದ್ದ ಪರೀಕ್ಷೆಗಳಲ್ಲೆಲ್ಲಾ ಪಾಸಾದೆ. ಅಮ್ಮನ ಆರೈಕೆಯ ಎಚ್ಚರಿಕೆಗಳನ್ನು ಲೆಕ್ಕಿಸದೇ ಕಾನೂನು ಓದಿ ಮುಗಿಸಿದೆ. ಮೊದಲೇ ಸಮಾಜದೊಂದಿಗೆ ಒಡನಾಟ ಹೊಂದಿದ್ದ ನಾನು ಈಗ ಕಪ್ಪುಕೋಟ್‌ ಧರಿಸಿ ಬಂದಿದ್ದೆ. ಅನೇಕರು ʼಅಂತೂ ನೀವು ವಕೀಲರಾದಿರಲ್ಲಾ” ಎಂದು ಹೆಮ್ಮೆಪಟ್ಟರು.

Q

ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳು ಹೇಗಿದ್ದವು?

A

ನಮ್ಮ ಮನೆಯ ಅಂಗಳದಲ್ಲೇ ಒಂದು ಚಾಪೆ ಹಾಕಿಕೊಂಡು ಕುಳಿತು ಕಕ್ಷೀದಾರರನ್ನು ಮಾತನಾಡಿಸುತ್ತಿದ್ದೆ ಸಣ್ಣದೊಂದು ಡೆಸ್ಕ್‌ ಇಟ್ಟುಕೊಂಡಿದ್ದೆ. ಪ್ರಸಿದ್ಧ ಸಿವಿಲ್‌ ವಕೀಲರಾದ ಎಚ್‌ ಪಿ ನಾಗೇಂದ್ರಯ್ಯ ಅವರ ಜೊತೆ ಪ್ರಾಕ್ಟೀಸ್‌ ಮಾಡೋಣ ಅಂತ ಹೋದೆ. ಅನೇಕರು ಅವರ ಹೆಸರು ಕೇಳಿದರೇ ನಡುಗುತ್ತಿದ್ದರು. ಅಷ್ಟು ದೊಡ್ಡ ವರ್ಚಸ್ಸು ಅವರದ್ದಾಗಿತ್ತು. ಎಚ್‌ ಪಿ ನಾಗೇಂದ್ರಯ್ಯ ಅಲ್ಲ ಅವರು ಬೆಂಕಿ ನಾಗೇಂದ್ರಯ್ಯ ಅಂತ ಕರೆಯೋರು. ಆರು ತಿಂಗಳು ಆಗುವಷ್ಟರಲ್ಲಿ ನನಗೇ ಬಹಳಷ್ಟು ಒಳ್ಳೊಳ್ಳೆ ಕೇಸುಗಳು ಬರತೊಡಗಿದವು. ನಾನು ಅವರ ಬಳಿ ಹೋಗಿ ಹೇಳಿದೆ. ಇನ್ನು ಮುಂದೆ ತಮ್ಮ ಕೈಕೆಳಗೆ ವಕೀಲಿಕೆ ಮಾಡಲು ಆಗುವುದಿಲ್ಲ ಎಂದೆ. ಕೇಸುಗಳೇನೋ ಸಾಕಷ್ಟು ಬಂದವು. ಆದರೆ ಅಧ್ಯಯನಕ್ಕಾಗಿ ನನ್ನ ಬಳಿ ಲೈಬ್ರರಿಯೇ ಇರಲಿಲ್ಲ. ಕಾನೂನು ಗ್ರಂಥಗಳು ಲಭ್ಯ ಇರುವ ಕಡೆ ನನ್ನ ಗಂಡ ಟೂ ವೀಲರ್‌ನಲ್ಲಿ ಕರೆದುಕೊಂಡು ಹೋಗಿ ಅಧ್ಯಯನಕ್ಕೆ ಒತ್ತಾಸೆಯಾಗಿ ನಿಲ್ಲುತ್ತಿದ್ದರು.

ಇಲ್ಲೊಂದು ತಮಾಷೆಯ ಘಟನೆ ಹೇಳಬೇಕು. ಕುರ್ಚಿ, ಪುಸ್ತಕದ ಕಪಾಟುಗಳೇನೋ ಮನೆಗೆ ಬಂದವು. ಆದರೆ ಪುಸ್ತಕಗಳೇ ಇರಲಿಲ್ಲ. ಆಗ ನನ್ನ ಗಂಡನಿಗೆ ಒಂದು ಐಡಿಯಾ ಹೊಳೆಯಿತು. ಹೇಗೂ ಗೆಳೆಯರ ಮನೆಯಲ್ಲಿ ವಕೀಲರ ಕೋಣೆ ಹೇಗಿರುತ್ತದೆ ಎಂದು ನೋಡಿದ್ದರಲ್ಲಾ? ಫೋಟೊಗ್ರಫಿ, ಚಿತ್ರಕಲೆಯಲ್ಲಿ ಆಸಕ್ತಿ ಇದ್ದ ಇವರು ಅಂಥದ್ದೇ ಗ್ರಂಥಾಲಯದ ಪ್ರತಿರೂಪ ಸೃಷ್ಟಿಸಲು ಮುಂದಾದರು. ಬರೀ ಕಾರ್ಡ್‌ಬೋರ್ಡ್‌ ಬಳಸಿ ಪುಸ್ತಕಗಳ ಪ್ರತಿರೂಪ ತಯಾರಿಸಿಯುವುದಾಗಿಯೂ, ಆಗ ಕಕ್ಷೀದಾರರು ವಕೀಲರ ಬಗ್ಗೆ ಇನ್ನಷ್ಟು ಗಂಭೀರವಾಗಿ ನಡೆದುಕೊಳ್ಳುತ್ತಾರೆ ಎಂಬುದಾಗಿಯೂ ತಿಳಿಸಿದರು! ಆದರೆ ನಾನು "ಬೇಡ, ಅದೆಲ್ಲಾ ಶೋಭೆ ತರುವುದಿಲ್ಲ" ಎಂದೆ. ನಿಜವಾಗಿಯೂ ಲೈಬ್ರೆರಿ ಅಗತ್ಯವಿದೆ ಎಂದು ಹೇಳಿದೆ. ಕಡೆಗೆ ಆ ಕಾಲವೂ ಕೂಡಿ ಬಂದು, ಕಾನೂನು ಪುಸ್ತಕಗಳು ನಮ್ಮ ಮನೆಯನ್ನು ಅಲಂಕರಿಸಿದವು.

ಚಿತ್ರದೊಡನೆ ಚಿತ್ರವಾಗಿ...
ಚಿತ್ರದೊಡನೆ ಚಿತ್ರವಾಗಿ...
Q

ನಿಮಗೆ ಸವಾಲೊಡ್ಡಿದಂತಹ ಪ್ರಕರಣಗಳ ಬಗ್ಗೆ ಹೇಳಬಹುದೇ?

A

ಅನೇಕವು ಇವೆ. ಒಂದು ಪ್ರಕರಣವನ್ನು ಇಲ್ಲಿ ಹೇಳಬೇಕು. Law is nothing but common sense. (ಕಾನೂನೆಂದರೆ ಸಾಮಾನ್ಯ ಜ್ಞಾನ ಮತ್ತೇನೂ ಅಲ್ಲ). ಹುಡುಗಿಯೊಬ್ಬಳು ಬಿಜಾಪುರದಲ್ಲಿ ಡಿಪ್ಲೊಮಾ ಮಾಡುತ್ತಿದ್ದಳು. ಹುಡುಗನೊಬ್ಬನ ಪರಿಚಯವಾಗಿತ್ತು. ಒಂದು ದಿನ ಆತ ವ್ಯಾನಿನಲ್ಲಿ ಮದುವೆಯಾಗೋಣ ಬಾ ಎಂದು ಭದ್ರಾವತಿಗೆ ಕರೆದುಕೊಂಡು ಬಂದ. ಅವಳಿಗೆ ಹದಿನೆಂಟು ವರ್ಷವಾಗಿ ಒಂದು ದಿನ ಮಾತ್ರ ಕಳೆದಿತ್ತು. ಮದುವೆಯಾಗಿದ್ದೇವೆಂದು ತಿಳಿಸಿ ಲಾಡ್ಜಿನಲ್ಲಿಯೂ ಉಳಿದರು. ಆದರೆ ಆ ಹುಡುಗನ ವರ್ತನೆ ಸರಿ ಇಲ್ಲ ಎಂಬುದು ಗೊತ್ತಾಗಲು ಆ ಹುಡುಗಿಗೆ ಹೆಚ್ಚು ದಿನ ಬೇಕಾಗಲಿಲ್ಲ. ಅವಳ ಬಂಗಾರದ ಸರವನ್ನೇ ಅವನು ಎಗರಿಸಿದ್ದ. ಜೊತೆಗೆ ಇನ್ನೊಬ್ಬ ಹುಡುಗಿಯೊಂದಿಗೆ ಸಂಬಂಧ ಕೂಡ ಇರಿಸಿಕೊಂಡಿದ್ದ. ಇದೆಲ್ಲಾ ತಿಳಿಯುತ್ತಿದ್ದಂತೆ ಆಕೆ ವಿಚ್ಛೇದನಕ್ಕೆ ಮುಂದಾದಳು. ಅಷ್ಟರಲ್ಲಾಗಲೇ ಆಕೆ ಡಿಪ್ಲೊಮಾ ಮುಗಿಸಿ ಸಾಫ್ಟ್‌ವೇರ್‌ ಎಂಜಿನಿಯರ್‌ ಕೂಡ ಆಗಿದ್ದಳು. ಅವನ ಸಹವಾಸ ಸಾಕು ಎನಿಸಿತ್ತು ಇವಳಿಗೆ. ಆದರೆ ಅವನು ಹದಿನೈದು ಲಕ್ಷ ರೂಪಾಯಿ ಕೊಟ್ಟರೆ ಮಾತ್ರ ವಿಚ್ಛೇದನಕ್ಕೆ ಸಮ್ಮತಿಸಿ ಸಹಿ ಹಾಕುವೆ ಎಂದ. ಪೋಷಕರು ಹೇಗೋ ಹಣ ಹೊಂದಿಸಿಕೊಂಡು ಹೋದರೆ ಇಪ್ಪತ್ತು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ. ಆಗ ಅವರ ತಂದೆ ನನ್ನ ಬಳಿ ಬಂದು ನಡೆದದ್ದನ್ನೆಲ್ಲಾ ಹೇಳಿದರು. ಮರುದಿನ ಹುಡುಗಿಯ ತಾಯಿಯನ್ನೂ ಕರೆದುಕೊಂಡು ಬರುವಂತೆ ಸೂಚಿಸಿದೆ. ಅವರು ತನ್ನ ಭಾವನೆಗಳನ್ನೆಲ್ಲಾ ತೋಡಿಕೊಳ್ಳಲಿ ಎಂದು ಆಕೆ ಹೇಳಿದ್ದನ್ನೆಲ್ಲಾ ಕೇಳಿಸಿಕೊಳ್ಳುತ್ತಾ ಕುಳಿತೆ. ಅವರ ಮಾತುಗಳ ನಡುವೆ ಪ್ರಕರಣಕ್ಕೆ ನೆರವಾಗಬಲ್ಲ ಯಾವುದಾದರೂ ಅಂಶವನ್ನು ಮನಸ್ಸಿನಲ್ಲಿಯೇ ಜಾಲಾಡುತ್ತಿದ್ದೆ.

ಆಗ ಆ ತಾಯಿ ನನ್ನ ಮಗಳನ್ನು ಐದು ತಿಂಗಳು ಮೊದಲೇ ಶಾಲೆಗೆ ಸೇರಿಸಿರುವುದಾಗಿ ತಿಳಿಸಿದಳು. ಇಷ್ಟು ಸಾಕಿತ್ತು ಪ್ರಕರಣ ಗೆಲ್ಲಲು. ಹುಡುಗನಿಗೆ ನೋಟಿಸ್‌ ನೀಡಿದೆ. ಪೊಕ್ಸೊ ಕಾಯಿದೆಯಡಿ ಬಂಧನವಾಗುತ್ತದೆ ಎಂದೆ. ಆತ ಬಂದು ನನ್ನ ಕಾಲಿಗೆ ಬಿದ್ದ. ಹಣದ ಬೇಡಿಕೆ ಇಲ್ಲದೆ ಸುಮ್ಮನೆ ವಿಚ್ಛೇದನಕ್ಕೆ ಸಹಿ ಹಾಕಿದ.

Q

ಸಾಹಿತ್ಯದ ಒಡನಾಟ ಶುರುವಾಗಿದ್ದು ಹೇಗೆ?

A

ಮನೆಯಲ್ಲಿ ಹಿರಿಯ ಮಗಳಾದ ನನಗೆ ಬಾಲ್ಯದಿಂದಲೂ ಓದು- ಬರವಣಿಗೆ ಬಗ್ಗೆ ಬಹಳ ಅಭಿರುಚಿ. ಫುಟ್‌ಪಾತ್‌ ಮೇಲೆ ಬಿದ್ದ ಕಾಗದವನ್ನು ಕೂಡ ತಪ್ಪದೇ ಓದುತ್ತಿದ್ದೆ. ಹಲವು ಸದಸ್ಯರ ಸಂಸಾರದ ಅಗತ್ಯಗಳನ್ನು ಸರಿದೂಗಿಸುವ ಹೊಣೆಗಾರಿಕೆಯ ನಡುವೆಯೂ ನನ್ನಪ್ಪ ನನಗೆ ಪುಸ್ತಕಗಳನ್ನು ತಂದುಕೊಡುತ್ತಿದ್ದರು. ನನ್ನ ಓರಗೆಯವರೆಲ್ಲಾ ಉರ್ದು ಮಾಧ್ಯಮದಲ್ಲಿ ಓದುತ್ತಿದ್ದರೆ (ಅನೇಕರ ಪ್ರತಿರೋಧದ ನಡುವೆಯೂ) ಅಪ್ಪ, ನಾನು ಕನ್ನಡ ಮಾಧ್ಯಮದಲ್ಲಿ ಓದುವಂತೆ ನೋಡಿಕೊಂಡರು. ಅಲ್ಲಿಂದ ನನ್ನದೇ ಸಾಮ್ರಾಜ್ಯ. ಗೋಡೆಯ ಮೇಲೂ ಬರೆಯುತ್ತಿದ್ದೆ ನೆಲದ ಮೇಲೂ ಬರೆಯುತ್ತಿದ್ದೆ.

ನನ್ನ ಹುಟ್ಟುಹಬ್ಬದ ದಿನ. ಆಗ ಎಂಟು- ಒಂಬತ್ತು ವರ್ಷ ಅಂತ ಕಾಣುತ್ತೆ. ಮನೆಯಲ್ಲಿ ಸಡಗರ. ನನಗಾಗಿ ಬಟ್ಟೆ ತಂದಿದ್ದಾರೆ. ಆದರೆ ನನಗೋ ವೈರಾಗ್ಯ ಬಂದು ಬಿಟ್ಟಿದೆ. ಮನೆಯ ರೂಮಲ್ಲಿ ಕಟ್ಟೆ ರೀತಿ ಮಾಡಿಕೊಂಡು ಒಂಟಿಯಾಗಿ ಕುಳಿತಿದ್ದೇನೆ. ಎಲ್ಲರಿಗೂ ಏನೋ ಕಸಿವಿಸಿ. ತಂದ ಬಟ್ಟೆ ಚೆನ್ನಾಗಿಲ್ಲವೋ? ತಿಂಡಿ ಸರಿ ಇಲ್ಲವೋ ಎಂಬ ಬಗ್ಗೆ ಅವರೆಲ್ಲರ ಚಿಂತೆ. ಆದರೆ ನನ್ನ ವೈರಾಗ್ಯಕ್ಕೆ ಕಾರಣ ಬುದ್ಧನ ಕುರಿತು ನಾನು ಓದಿದ್ದ ಒಂದು ಸಣ್ಣ ಪುಸ್ತಕ!

ಒಮ್ಮೆ ಬಾಬಾ ಬುಡನ್‌ ಗಿರಿಗೆ ನನ್ನ ಗಂಡ ಅವರ ಮನೆಯವರೆಲ್ಲರ ಜೊತೆಗೆ ಹೋಗಿದ್ದೆವು. ಆಗಾಗ ಗಿರಿಗೆ ಹೋಗಿ ಬರುವುದು ರೂಢಿ. ನನ್ನ ಗಂಡ ನನ್ನನ್ನು ಕಣ್ಸನ್ನೆ ಕೈಸನ್ನೆ ಮೂಲಕ ಕರೆಯುತ್ತಿದ್ದಾರೆ. ಆದರೆ ನನಗೆ ಇವರೇಕೆ ಹೀಗೆ ಕರೆಯುತ್ತಿದ್ದಾರೆ ಎಂಬ ಪ್ರಶ್ನೆ. ನನ್ನ ಅತ್ತೆಗೆ ಈ ಮನೋವ್ಯಾಪಾರ ಅರ್ಥವಾಯಿತು. ʼಅವನೇನೋ ನಿನ್ನನ್ನು ಕರೆಯುತ್ತಿದ್ದಾನೆ ನೋಡು; ಎಂದರು. ಸರಿ, ಮಾಡುತ್ತಿದ್ದ ಕೆಲಸ ಬಿಟ್ಟು ಹೋದೆ. ಅವರು ಪರ್ವತದ ಒಂದು ಮೂಲೆಗೆ ಕರೆದೊಯ್ದರು. ಅಲ್ಲೊಂದು ಬಂಡೆ ಇತ್ತು. ಅದರ ಮೇಲೆ ಕೂರಿಸಿದರು. ಏನು ಎಂದು ಪ್ರಶ್ನಿಸಿದೆ. ತಕ್ಷಣ ತಮ್ಮ ಜೇಬಿನಿಂದ ಬಿಳಿ ಹಾಳೆಗಳನ್ನೂ, ಪೆನ್ನನ್ನೂ ಕೊಟ್ಟು, " ನೀನು ಬರೆಯಬೇಕು ಅಂದುಕೊಂಡಿದ್ದೆಯಲ್ಲಾ ಬರಿ. ಬರೆಯುವವರಿಗೆ ಇದು ಪ್ರಶಸ್ತ ತಾಣ" ಎಂದರು. ಮೊದಲೇ ಶಿಕ್ಷಕಿ ವೃತ್ತಿ ತೊರೆದು ಮನೆಯಲ್ಲೇ ಬಂದಿಯಾಗಿದ್ದ ನನಗೆ ಅದೆಲ್ಲಿಂದ ಸಿಟ್ಟು ಬಂತೋ ಗೊತ್ತಿಲ್ಲ. ಹಾಳೆಗಳನ್ನೆಲ್ಲಾ ಹರಿದು ಬಿಸುಟಿದೆ. ಕೂಗಾಡಿ ಕಿರುಚಾಡಿದೆ.

ರೈತ ಮುಖಂಡ ಕಡಿದಾಳು ಶಾಮಣ್ಣ, ವೈದ್ಯ ಹಾಗೂ ಚಿಂತಕ ಶ್ರೀನಿವಾಸ ಕಕ್ಕಿಲ್ಲಾಯ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ.
ರೈತ ಮುಖಂಡ ಕಡಿದಾಳು ಶಾಮಣ್ಣ, ವೈದ್ಯ ಹಾಗೂ ಚಿಂತಕ ಶ್ರೀನಿವಾಸ ಕಕ್ಕಿಲ್ಲಾಯ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ.
Q

ನಿಮ್ಮ ವಿರುದ್ಧ ಒಂದು ಸಂದರ್ಭದಲ್ಲಿ ಫತ್ವಾ ಹೊರಡಿಸಲಾಯಿತು. ಆ ಘಟನೆ ಈಗ ಹೇಗೆ ಕಾಣುತ್ತದೆ?

A

ಇಂತಹವು ಒಬ್ಬ ವ್ಯಕ್ತಿಯನ್ನು ಮಾನಸಿಕವಾಗಿ, ಬೌದ್ಧಿಕವಾಗಿ, ದೈಹಿಕವಾಗಿ ಹೇಗೆ ಹಿಂಸಿಸುತ್ತವೆ ಎಂದು ಈಗ ಅನ್ನಿಸುತ್ತದೆ. ಅದು 2000ನೇ ಇಸವಿ. ನನ್ನ ಬೆಂಕಿ ಮಳೆ ಕಥಾಸಂಕಲನ ಆಗಷ್ಟೇ ಬಿಡುಗಡೆಯಾಗಿತ್ತು. ಆ ಕುರಿತು ʼಜನವಾಹಿನಿʼ ಪತ್ರಿಕೆಗೆ ಸಂದರ್ಶನ ನೀಡಿದ್ದೆ. ಏಷ್ಯಾ ಹೊರತುಪಡಿಸಿ ಬೇರೆ ದೇಶಗಳಲ್ಲಿ ಮುಸ್ಲಿಂ ಮಹಿಳೆಯರು ಮಸೀದಿಗೆ ಹೋಗುತ್ತಾರೆ ಎಂದು ಹೇಳಿಕೆ ನೀಡಿದ್ದೆ. ಆಗ ನಮ್ಮ ಜೊತೆಗೇ ಇದ್ದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಿಷಯವನ್ನು ದೊಡ್ಡದು ಮಾಡಿದವು. ಅದನ್ನು ನಂಬಿ "ಮುಸ್ಲಿಂ ಸಮುದಾಯದಲ್ಲಿ ನಡೆಯುವ ಯಾವುದೇ ಸಭೆಗೆ ಬಾನುವನ್ನು ಸೇರಿಸಿಬೇಡಿ, ಆಕೆ ಸತ್ತರೆ ಅವಳನ್ನು ಹೂಳಬೇಡಿ" ಎಂದು ಮೌಲ್ವಿಗಳು ಕರೆನೀಡಿದರು. ಅಲ್ಲದೆ ಎಲ್ಲಾ ರೀತಿಯಲ್ಲಿ ಟ್ರೋಲ್‌ ಮಾಡಲಾಯಿತು. ಫೋನ್‌ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಯಿತು. ಸಂಪೂರ್ಣ ಎರಡು ತಿಂಗಳುಗಳ ಕಾಲ ನಾನು ನ್ಯಾಯಾಲಯಕ್ಕೆ ಹೋಗದಂತಾಯಿತು. ಆಗ ಸಾಹಿತಿ ಬರಗೂರು ರಾಮಚಂದ್ರಪ್ಪ ಮತ್ತಿತರರು ಮೌಲ್ವಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿದರು.

Q

ವಕೀಲಿಕೆ ವೃತ್ತಿಯಿಂದ ನಿಮ್ಮ ಸಾಹಿತ್ಯಕ್ಕೆ ದೊರಕುವ ವಸ್ತುಗಳ ಬಗ್ಗೆ ಕೊಂಚ ಹೇಳಿ…

A

ಎರಡು ಪ್ರಕರಣಗಳ ಮೂಲಕ ಇದನ್ನು ವಿವರಿಸುವೆ. ಚಾಲಕನಾಗಿದ್ದ ಒಬ್ಬ ವ್ಯಕ್ತಿ ನನ್ನೆದುರು ಬಂದ. ಬಂದವನೇ ನನ್ನ ಮಗಳು ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದ. ದೂರು ನೀಡಿದಾಗ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವಂತೆ ತಿಳಿಸಲಾಯಿತು. ಸಾಯಂಕಾಲದ ಹೊತ್ತಿಗೆ ಆ ಚಾಲಕ ಖುಷಿಯಿಂದ ಓಡೋಡಿ ಬಂದ. ʼಮೇಡಂ ವೈದ್ಯಕೀಯ ವರದಿ ಸಿಕ್ಕಿದೆ. ನನ್ನ ಮಗಳು ಅತ್ಯಾಚಾರಕ್ಕೊಳಗಾಗಿರುವುದು ದೃಢಪಟ್ಟಿದೆʼ ಎಂದ. ಒಂದು ಕ್ಷಣ ಅವಾಕ್ಕಾದೆ. ಅವನ ಮುಖವನ್ನೇ ಎಷ್ಟೋ ಹೊತ್ತು ದಿಟ್ಟಿಸುತ್ತಾ ಕುಳಿತೆ.

ಇನ್ನೊಂದು ಸಂಗತಿ ಗಂಡ ಹೆಂಡತಿ ಜಗಳಕ್ಕೆ ಸಂಬಂಧಿಸಿದ್ದು. ತಂದೆಯಿಲ್ಲದ ಮಗುವನ್ನು ಚೆನ್ನಾಗಿ ಬೆಳೆಸಿ ಮನುಷ್ಯನನ್ನಾಗಿ ಮಾಡಿದ್ದಳು ಒಬ್ಬ ತಾಯಿ. ಆ ತಾಯಿಯ ಬಗ್ಗೆ ಮಗನಿಗೆ ಪ್ರೀತಿ ಅಭಿಮಾನ. ಆದರೆ ಇದು ಆತನ ಹೆಂಡತಿಗೆ ಸರಿ ಬರುತ್ತಿಲ್ಲ. ಜಗಳ ವಿಪರೀತಕ್ಕೆ ಹೋಗಿ ಆಕೆ ನಿನ್ನ ತಾಯಿಯನ್ನೇ ಮದುವೆಯಾಗಬೇಕಿತ್ತು ನನ್ನನ್ನೇಕೆ ಮದುವೆಯಾದೆ ಎಂದು ವಿಚ್ಛೇದನ ಬೇಡಿದ್ದಳು. ಈ ಸಂಗತಿಯನ್ನೇ ಆಧರಿಸಿ ʼಹೃದಯದ ತೀರ್ಪುʼ ಎಂಬ ಕತೆ ಬರೆದೆ. ಇಂತಹ ಸಾಕಷ್ಟು ವಿಚಾರಗಳಿವೆ. ವಕೀಲಿಕೆ ಎಂಬುದು ವಿಚಿತ್ರ ಮತ್ತು ವಿಶಿಷ್ಟ ಅನುಭವಗಳನ್ನು ಕೊಡುವ ವೃತ್ತಿ.

ಲೇಖಕಿಯರ ಲೋಕದ ಘಟಾನುಘಟಿಗಳೊಂದಿಗೆ.
ಲೇಖಕಿಯರ ಲೋಕದ ಘಟಾನುಘಟಿಗಳೊಂದಿಗೆ.
Q

ಸೃಜನಶೀಲ ಅವಕಾಶವೊಂದು ನಿಮ್ಮ ಮನಸ್ಸಿನಲ್ಲಿ ಹೇಗೆ ರೂಪುಗೊಳ್ಳುತ್ತದೆ?

A

ನನಗೆ ಮನೆಗೆಲಸ, ಅಡುಗೆ ಮಾಡಬೇಕೆಂಬ ಹೊರೆ ಇಲ್ಲ. ಬಹಳ ಮೊದಲೇ ನನ್ನ ಗಂಡ ಮನೆಗೆಲಸಗಳಿಂದ ನನ್ನನ್ನು ದೂರ ಇಡುವ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ಅವರು ಯಾವುದೇ ಕೆಲಸಗಳನ್ನು ನನಗೆ ಹೇಳದೆ ಖುದ್ದು ಮಾಡಿಕೊಳ್ಳುತ್ತಾರೆ. ನನಗೆ ಅದು ಹೆಚ್ಚು ಸ್ವಾತಂತ್ರ್ಯವನ್ನು ಒದಗಿಸಿದೆ. ಅಲ್ಲದೆ ಒಂದು ವಿಷಯ ನನ್ನೊಳಗೆ ನೆಟ್ಟರೆ ಯಾವುದೇ ಕಾರಣಕ್ಕೂ ಅದರ ಬೆನ್ನು ಬಿಡುವುದಿಲ್ಲ. ಜೊತೆಗೆ ಕಂಪ್ಯೂಟರಿನ ವಿವಿಧ ಅಪ್ಲಿಕೇಷನ್‌ಗಳು ನ್ಯಾಯಾಲಯದ ಕೆಲಸದ ಹೊರೆಯನ್ನು ತಗ್ಗಿಸಿವೆ. ಬೆಳಿಗ್ಗೆಯೇ ಎದ್ದ ತಕ್ಷಣ ಯಾವುದೋ ಕೆಲಸದಲ್ಲಿ ನಾನು ತೊಡಗುವುದಿಲ್ಲ. ಇಂದು ಯಾವ ಯಾವ ಕೆಲಸಗಳನ್ನು ಮಾಡಬೇಕು ಎಂದು ಯೋಜನೆ ರೂಪಿಸಿಕೊಳ್ಳುತ್ತೇನೆ. ನಂತರ ಅಖಾಡಕ್ಕಿಳಿಯುತ್ತೇನೆ.

Q

ಈಗ ನಿಮ್ಮೊಳಗಿನ ಬರಹಗಾರ್ತಿ ಯೋಚಿಸುತ್ತಿರುವುದು ಏನನ್ನು?

A

ಮುಸ್ಲಿಂ ಕಾನೂನು ಕುರಿತು ಸುಮಾರು ಟಿಪ್ಪಣಿಗಳನ್ನು ಮಾಡಿಟ್ಟುಕೊಂಡಿದ್ದೇನೆ. ಅವುಗಳನ್ನೆಲ್ಲಾ ಒಟ್ಟಿಗೆ ಪ್ರಕಟಿಸುವ ಯೋಚನೆ ಇದೆ. ಒಂದು ಕಥಾ ಸಂಕಲನ ಅಚ್ಚಿನಲ್ಲಿದೆ. ಅಲ್ಲದೆ ʼತ್ರಿವಳಿ‌ ತಲಾಖ್‌ʼ ಸೇರಿದಂತೆ ಮತ್ತೊಂದಷ್ಟು ಕಾನೂನು ಸಂಬಂಧಿ ಕೃತಿಗಳನ್ನು ಹೊರತರುತ್ತಿದ್ದೇನೆ. ಇದೆಲ್ಲದರ ಜೊತೆಗೆ ನನ್ನ ಆತ್ಮಕತೆಯೂ ಸಿದ್ಧವಾಗುತ್ತಿದೆ.

Related Stories

No stories found.
Kannada Bar & Bench
kannada.barandbench.com