ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡ ಗಾಯಕ ಶಿವಮೊಗ್ಗ ಸುಬ್ಬಣ್ಣ. ಕನ್ನಡ ಸುಗಮ ಸಂಗೀತದ ಪ್ರಪ್ರಥಮ ಧ್ವನಿಸುರುಳಿ ʼನಿತ್ಯೋತ್ಸವʼದಲ್ಲಿ ಹಾಡಿದ ಕೀರ್ತಿ ಕೂಡ ಸುಬ್ಬಣ್ಣನವರಿಗೆ ಸಲ್ಲುತ್ತದೆ. ಇಂತಹ ಮೊದಲುಗಳನ್ನು ಕನ್ನಡಕ್ಕೆ ನೀಡಿದ ಅವರು ದೇಶ- ವಿದೇಶಗಳಲ್ಲಿ ಗೀತೆಗಳನ್ನು ಪಸರಿಸುತ್ತ ಬಂದವರು. ಬಿ ಎ, ಬಿಕಾಂ ಪೂರ್ಣಗೊಳಿಸಿದ ನಂತರ ತೆರಿಗೆ ಸಲಹೆಗಾರರಾಗಿ ಕೆಲಸ ಮಾಡುತ್ತಲೇ ಶಿವಮೊಗ್ಗದ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ಪಡೆದರು. ಬಳಿಕ ವಕೀಲಿಕೆ. ರಾಜ್ಯ ಹೈಕೋರ್ಟ್‌ನಲ್ಲಿ ಸರ್ಕಾರಿ ಪ್ಲೀಡರ್ ಆಗಿ ನೇಮಕಗೊಂಡು 9 ವರ್ಷಗಳ ಕಾಲ ಸೇವೆ. ಚಿಕ್ಕಂದಿನಿಂದಲೂ ಅವರ ಜೊತೆಗಾರನಾಗಿದ್ದ ಹಾಡುಗಾರಿಕೆ ಮತ್ತೊಂದು ಮಜಲಿಗೆ ಸುಬ್ಬಣ್ಣನವರನ್ನು ಕೊಂಡೊಯ್ಯುತ್ತದೆ. ಆಕಾಶವಾಣಿಯ ಗಾಯಕರಾಗಿ ಅವರು ಪ್ರಸಿದ್ಧರಾಗುತ್ತಾರೆ. ನಂತರ ಚಿತ್ರರಂಗ ಪ್ರವೇಶ. ಅಲ್ಲಿಂದ ಮುಂದಿನದ್ದು ಇತಿಹಾಸ.
ಪ್ರಾಯ ಎಂಬತ್ತು ದಾಟಿದರೂ ಹಾಡುವುದೆಂದರೆ ಅವರಿಗೆ ನಿತ್ಯ ಹಬ್ಬ. ಯಾವುದೇ ಸಂಗೀತ ಪರಿಕರಗಳ ಅಗತ್ಯವಿಲ್ಲದೆ, ʼನಿಮಗೊಂದು ಹಾಡು ಕೇಳಿಸುತ್ತೇನೆ ಇರಿʼ ಎಂಬ ನಿರುಮ್ಮಳ ದಾಟಿಯಲ್ಲಿ ಹಾಡಿಗಿಳಿಯುತ್ತಾರೆ. ಕುವೆಂಪು, ಬೇಂದ್ರೆ, ಸಂತ ಶಿಶುನಾಳ ಶರೀಫ, ಗೋಪಾಲ ಕೃಷ್ಣ ಅಡಿಗ, ಕಂಬಾರ, ಎನ್ ಎಸ್ ಲಕ್ಷ್ಮೀನಾರಯಣ ಭಟ್ ಹೀಗೆ ಅವರ ಕಂಠದಲ್ಲಿ ನಲಿಯದ ಕವಿಗಳೇ ಇಲ್ಲ. ಪ್ರಶಸ್ತಿಗಳಿಗೆ ಗೌರವ ತಂದುಕೊಡುವಂತಿರುವ ಸುಬ್ಬಣ್ಣನವರನ್ನು ಅರಸಿಬಂದ ಪ್ರಶಸ್ತಿಗಳು ಅನೇಕ. ಪತ್ನಿ ಶಾಂತಾ, ವಕೀಲಿವೃತ್ತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಮಗ ಶ್ರೀರಂಗ, ಮಗಳು ಖ್ಯಾತ ಪತ್ರಕರ್ತೆ ಬಾಗೇಶ್ರೀ, ಸೊಸೆ ಪ್ರಸಿದ್ಧ ಗಾಯಕಿ ಅರ್ಚನಾ ಉಡುಪ ಅವರೊಂದಿಗೆ ಬದುಕಿನ ಇಳಿಸಂಜೆಯನ್ನು ಕಳೆಯುತ್ತಿದ್ದಾರೆ. ಅವರೊಂದಿಗೆ ʼಬಾರ್ ಅಂಡ್ ಬೆಂಚ್ʼ ನಡೆಸಿದ ʼಅನುಸಂಧಾನʼ ಹೀಗಿದೆ…
ಕಾನೂನನ್ನೇ ಓದಬೇಕು ಅನ್ನಿಸಲು ಇದ್ದ ಕಾರಣಗಳೇನು?
ಕಾನೂನು ಇಲ್ಲದೆ ಯಾವುದೂ ಇಲ್ಲ. ದೇಶದಲ್ಲಿರುವ ಪ್ರತಿಯೊಬ್ಬರೂ ಕಾನೂನುಬದ್ಧವಾಗಿಯೇ ನಡೆದುಕೊಳ್ಳಬೇಕಾಗುತ್ತದೆ. ತಪ್ಪಿದರೆ ಶಿಕ್ಷೆ ಇದ್ದೇ ಇರುತ್ತದೆ. ಅಂಥದ್ದೇನಿದೆ ಕಾನೂನಿನಲ್ಲಿ ಎಂಬ ಕೂತೂಹಲ ಅದರ ಅಧ್ಯಯನದಲ್ಲಿ ತೊಡಗುವಂತೆ ಮಾಡಿತು.
ಕಾನೂನು ಓದಲು ನಿಮಗೆ ಪ್ರೇರಣೆಯಾದವರು ಯಾರು?
ನಾನು ಬಿ.ಕಾಂ ಓದಿಕೊಂಡು ಆಡಿಟಿಂಗ್ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದೆ. ನನ್ನ ಹೆಂಡತಿಯ ಸೋದರಮಾವ ರಾಮಚಂದ್ರ ಅಂತ- ಅವರು ಕಾನೂನು ಓದಲು ಪ್ರೇರಣೆ ನೀಡಿದರು. ಕಾನೂನು ಓದುವುದರಿಂದ ತುಂಬಾ ಉಪಯೋಗಗಳಿವೆ ಎಂದು ಹುರಿದುಂಬಿಸೋರು. ನಂತರ ಎಚ್ ಎಸ್ ಜಗದೀಶನ್ ಅಂತ ಹಿರಿಯ ವಕೀಲರೊಬ್ಬರು ಶಿವಮೊಗ್ಗದಲ್ಲಿದ್ದರು. ಅವರು ನನ್ನ ಸ್ನೇಹಿತರು ಕೂಡ. ಅವರಿಂದ ಮಾರ್ಗದರ್ಶನ ಪಡೆದೆ.
ಕಾನೂನು ಅಧ್ಯಯನದ ವೇಳೆ ನಿಮ್ಮ ಮೇಲೆ ಗಾಢ ಪ್ರಭಾವ ಬೀರಿದ ಸಂಗತಿಗಳು ಯಾವುವು?
ನಾನಿ ಫಾಲ್ಖೀವಾಲಾ ನನ್ನ ಮೇಲೆ ಗಾಢ ಪ್ರಭಾವ ಬೀರಿದ ವಕೀಲರಾಗಿದ್ದರು. ಅವರನ್ನು ತುಂಬಾ ಓದಿಕೊಂಡಿದ್ದೆ. ತೆರಿಗೆಗೆ ಸಂಬಂಧಿಸಿದಂತೆ ಅಭೂತಪೂರ್ವ ಜ್ಞಾನ ಅವರಲ್ಲಿತ್ತು. ಸುಮಾರು 9 ವರ್ಷಗಳ ಕಾಲ ತೆರಿಗೆ ಸಂಬಂಧಿತ ವಿಷಯಗಳನ್ನು ನಿಭಾಯಿಸಲು ಅವರು ನನಗೆ ಸ್ಫೂರ್ತಿಯಾದರು.
ನೀವು ವಾದ ಮಂಡಿಸಿದ ಮೊದಲ ಕೇಸ್ ಯಾವುದು? ಮೆಲುಕು ಹಾಕುವಂತಹ ಪ್ರಸಂಗಗಳನ್ನು ಹಂಚಿಕೊಳ್ಳಬಹುದೇ?
ಹೇಳೋಕೆ ನೆನಪಾಗುತ್ತಿಲ್ಲ. ನಾನು ಶಿವಮೊಗ್ಗದಲ್ಲಿದ್ದವನು ಬೆಂಗಳೂರಿಗೆ ಬಂದ ನಂತರ ಕೋರ್ಟಿಗೆ ಹೋಗಲು ತೊಡಗಿದೆ. ಬಹುಬೇಗ ನೋಟರಿ ಪಬ್ಲಿಕ್ ಆದೆ… ಯಾವುದೋ ಹೈಕೋರ್ಟಿಗೆ ಸಂಬಂಧಿಸಿದ ಪ್ರಕರಣ ಎಂದು ಕಾಣುತ್ತದೆ. ಈಗ ಹೆಚ್ಚು ನೆನಪಿಗೆ ಬರುತ್ತಿಲ್ಲ.
ನ್ಯಾಯಾಲಯದಲ್ಲಿ, ಅಥವಾ ವಕೀಲ ಮಿತ್ರರ ನಡುವೆ ನಿಮ್ಮ ಹಾಡುಗಳನ್ನು ಕೇಳಬೇಕೆಂದು ಬೇಡಿಕೆ ಬಂದದ್ದುಂಟೆ?
ಬೇಕಾದಷ್ಟು ಸಲ ಬಂದಿದೆ. ನ್ಯಾಯಾಲಯಗಳಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಹಾಡಲು ನನ್ನನ್ನು ಕರೆಸುತ್ತಿದ್ದರು. ಮನೆಗೆ ನೋಟರಿ ಕೆಲಸಗಳಿಗೆ ಬರುವವರು ಕೂಡ ಹಾಡುವಂತೆ ದುಂಬಾಲು ಬೀಳುತ್ತಿದ್ದರು. ವಕೀಲರು ಎನ್ನುವುದಕ್ಕಿಂತ ಹೆಚ್ಚಾಗಿ ಹಾಡುಗಾರ ಅಂತ ನನ್ನನ್ನು ಗುರುತಿಸುತ್ತಿದ್ದರು. ನನ್ನ ಹೆಸರು ಮೊದಲು ಜಿ. ಸುಬ್ರಹ್ಮಣ್ಯಂ ಅಂತ ಇತ್ತು. ನೋಟರಿ ಕೆಲಸಗಳಿಗೆ ಬಂದವರಿಗೆ ನನ್ನನ್ನು ನೋಡಿದ ಮೇಲಷ್ಟೇ ಶಿವಮೊಗ್ಗ ಸುಬ್ಬಣ್ಣ ಎಂದು ತಿಳಿಯುತ್ತಿತ್ತು.
ಕಾನೂನು ಕ್ಷೇತ್ರದಿಂದ ಸಂಗೀತ ಲೋಕದೆಡೆಗಿನ ನಿಮ್ಮ ಪಯಣವನ್ನು ಹಂಚಿಕೊಳ್ಳಬಹುದೇ?
ಕಾನೂನು ಕ್ಷೇತ್ರದಿಂದ ಸಂಗೀತದೆಡೆಗೆ ನಾನು ಬಂದದ್ದಲ್ಲ. ಸಂಗೀತ ಲೋಕದಿಂದ ಕಾನೂನು ಜಗತ್ತಿನತ್ತ ಮುಖ ಮಾಡಿದೆ. ಕಾನೂನು ಅಧ್ಯಯನ ಮಾಡಿದ್ದು ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ.
ಇಂದಿಗೂ ಕಾನೂನಿಗೆ ಸಂಬಂಧಿಸಿದ ಪುಸ್ತಕಗಳನ್ನೋ, ಪ್ರಕರಣಗಳನ್ನೋ ಆಸಕ್ತಿಯಿಂದ ಫಾಲೋ ಮಾಡಬೇಕು ಅನ್ನಿಸುತ್ತದೆಯೇ?
ಈಗ ಅಷ್ಟೊಂದು ಮಾಡ್ತಾ ಇಲ್ಲ. ಅದನ್ನು ಮಗ ಶ್ರೀರಂಗನಿಗೆ ವಹಿಸಿಬಿಟ್ಟಿದ್ದೇನೆ. ಮಗ ಒಬ್ಬ ಪ್ರಮುಖ ವಕೀಲ. ಹಾಡುಗಳನ್ನು ಕೇಳುತ್ತಾ- ಹಾಡುತ್ತಾ ಇರುವೆ. (ಹಾಡಲು ತೊಡಗುವರು) ಕೋಡಗನ ಕೋಳಿ ನುಂಗಿತ್ತಾ, ನೋಡವ್ವ ತಂಗಿ ಕೋಡಗನ ಕೋಳಿ ನುಂಗಿತ್ತಾ…
ಸಂತ ಶಿಶುನಾಳ ಶರೀಫರು ನಿಮ್ಮ ಕಂಠದಲ್ಲಿ ಕುಣಿದ ಬಗೆಯನ್ನು ವಿವರಿಸಬಹುದೇ?
ಶರೀಫರು ಉತ್ತರ ಕರ್ನಾಟಕದವರಿಗೆ ಹೆಚ್ಚು ಪರಿಚಿತರಿದ್ದರು. ಇಡೀ ಕರ್ನಾಟಕಕ್ಕೆ ಅವರನ್ನು ಪರಿಚಯಿಸಿದ್ದು (ಹಿರಿಯ ಕವಿ) ಎನ್ ಎಸ್ ಲಕ್ಷ್ಮೀನಾರಾಯಣ ಭಟ್. ಸಿ ಅಶ್ವತ್ಥ್ ಅವರ ರಾಗ ಸಂಯೋಜನೆಯಲ್ಲಿ ಶರೀಫರು ಮನೆ ಮನೆಗೂ ತಲುಪುವಂತಾಯಿತು. ಶರೀಫರ ಶೈಲಿ ಜನಪದ, ಹೂರಣ ಅಧ್ಯಾತ್ಮ. ಅವರ ಹಾಡುಗಳನ್ನು ಆಯ್ದುಕೊಳ್ಳಲು ಅದು ಮುಖ್ಯ ಕಾರಣ.
ʼಹಾಡಿನ ಸುಬ್ಬಣ್ಣʼ ಎಂದು ನಿಮ್ಮನ್ನು ಮೊದಲು ಕರೆದವರು ಯಾರು?
ಶಿವಮೊಗ್ಗದಲ್ಲಿದ್ದಾಗ ಎಲ್ಲರೂ ಹಾಗೆ ನನ್ನನ್ನು ಕರೆಯೋರು. ಆಗೆಲ್ಲಾ ದೊಡ್ಡಮಟ್ಟದ ಹಾಡುಗಾರ ಆಗಿರಲಿಲ್ಲ. ಕೆಲವು ಸ್ಪರ್ಧೆಗಳಿಗೆ ಹಾಡುತ್ತಿದ್ದೆ. ಎನ್ ಎಸ್ ಲಕ್ಷ್ಮೀನಾರಯಣ ಭಟ್ಟರು ನನ್ನನ್ನು ಚಂದ್ರಶೇಖರ ಕಂಬಾರರಿಗೆ ಪರಿಚಯ ಮಾಡಿಕೊಟ್ಟರು. ಇಂಥದ್ದೊಂದು ಧ್ವನಿ ಇದೆ. ಇವರ ಕೈಯಲ್ಲಿ ಹಾಡಿಸು ಎಂದು ಹೇಳಿದರು.
ʼಕಾಡು ಕುದುರೆ ಓಡಿ ಬಂದಿತ್ತಾʼ ಹಾಡಿನ ನೆನಪುಗಳನ್ನು ಹಂಚಿಕೊಳ್ಳಿ.
ಕಂಬಾರರ ಮೂರು ಚಿತ್ರಗಳಿಗೆ ನಾನು ಹಾಡಿದೆ. ಅದರಲ್ಲಿ ʼಕಾಡು ಕುದುರೆʼ ಕೂಡ ಒಂದು. ʼಕರಿಮಾಯಿʼಗೆ ಹಾಡಿದಾಗ ನನ್ನ ಹೆಸರು ಜಿ. ಸುಬ್ರಹ್ಮಣ್ಯಂ ಅಂತಲೇ ಇತ್ತು. ಆದರೆ ನನ್ನನ್ನು ಕಾರ್ಯಕ್ರಮಗಳಲ್ಲಿ ಹೆಸರಿಸುವಾಗ ಎಸ್ ಪಿ ಬಾಲಸುಬ್ರಮಣ್ಯಂ ಎಂದು ಕರೆದು ಬಿಡೋರು. ಈ ಗೊಂದಲ ನಿವಾರಿಸಲು ಕಂಬಾರರು ಮತ್ತು ಭಟ್ಟರು ಸೇರಿ ‘ಶಿವಮೊಗ್ಗ ಸುಬ್ಬಣ್ಣ’ ಅಂತ ನಾಮಕರಣ ಮಾಡಿದರು. ಆ ನಂತರ ಕಾನೂನು ರೀತಿಯಲ್ಲಿ ನನ್ನ ಹೆಸರನ್ನು ಶಿವಮೊಗ್ಗ ಸುಬ್ಭಣ್ಣ ಎಂದೇ ಬದಲಿಸಿಕೊಂಡೆ- ಅದು ಬೇರೆ ವಿಚಾರ. ಹಾಡನ್ನೇನೋ ಸಾಂಗವಾಗಿ ಹಾಡಿದೆ. ಆ ಹಾಡಿಗೆ ರಾಷ್ಟ್ರಪ್ರಶಸ್ತಿ ಕೂಡ ಬಂತು. ಆದರೆ ಜಿ. ಸುಬ್ರಹ್ಮಣ್ಯಂ ಎಂದು ಅಲ್ಲಿದ್ದ ಜ್ಯೂರಿಗಳಿಗೆ ಗೊತ್ತಿರಲಿಲ್ಲ. ಆಯ್ಕೆ ಸಮಿತಿಯಲ್ಲಿದ್ದ ಎಸ್ ಎಲ್ ಭೈರಪ್ಪನವರು ಪ್ರೇಮಾ ಕಾರಂತರನ್ನು ವಿಚಾರಿಸಿದ ಬಳಿಕ ಸುಬ್ರಹ್ಮಣ್ಯಂ ಎಂದರೆ ಶಿವಮೊಗ್ಗ ಸುಬ್ಬಣ್ಣ ಎಂದು ಗೊತ್ತಾಯಿತು.
ಶಿವಮೊಗ್ಗೆ ಈಗಲೂ ನಿಮ್ಮನ್ನು ಕಾಡುವುದುಂಟೆ?
ಕಾಡದೇ ಇರುತ್ತದೆಯೇ? ನನ್ನ ಚಿಕ್ಕಂದಿನ ದಿನಗಳನ್ನು ಕಳೆದದ್ದು ಅಲ್ಲಿಯೇ. ಅಲ್ಲಿನ ಕರ್ನಾಟಕ ಸಂಘ, ಗಣಪತಿ ಪೆಂಡಾಲಿನಲ್ಲಿ ಹಾಡುತ್ತಿದ್ದ ಹಾಡುಗಳು… ಕರ್ನಾಟಕ ಸಂಘದ ಎದುರಿಗೇ ನನ್ನ ಕಚೇರಿ ಇತ್ತು. ಅಲ್ಲಿ ಕಾರ್ಯಕ್ರಮ ಇದ್ದಾಗಲೆಲ್ಲಾ ಸಂಘದವರು ನನ್ನನ್ನು ಹಾಡಲು ಕರೆಯುತ್ತಿದ್ದರು.
ʼಕಾನೂನುʼ ಮತ್ತು ʼಕಾಡುಕುದುರೆʼ, ಇವೆರಡನ್ನೂ ಅಕ್ಕ-ಪಕ್ಕ ಇಟ್ಟರೆ ನೀವು ಹೆಚ್ಚು ಇಷ್ಟಪಟ್ಟು ಆಯ್ದುಕೊಳ್ಳುವುದು ಯಾವುದನ್ನು?
ಒಂದು ಹೊಟ್ಟೆಪಾಡಿನ ಕಾಯಕವಾದರೆ ಮತ್ತೊಂದು ವಿಶಿಷ್ಟ ಅನುಭೂತಿಯನ್ನು ತಂದುಕೊಡುತ್ತದೆ. ಪದ ಹಾಡೋದನ್ನೇ ಆಯ್ಕೆ ಮಾಡ್ಕೋತೀನಿ.