ಛತ್ತೀಸ್‌ಗಢದ ಬುಡಕಟ್ಟು ಸಮುದಾಯಗಳು ಹಾಗೂ ಕಾರ್ಮಿಕರ ಹಕ್ಕುಗಳಿಗಾಗಿ ದುಡಿಯುತ್ತಿದ್ದ ವಕೀಲೆ ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಕಡೆಗೂ ಜೈಲಿನಿಂದ ಮುಕ್ತಿ ಪಡೆದಿದ್ದಾರೆ. ಸದ್ಯದ ಮಟ್ಟಿಗಾದರೂ ಅವರು ಸ್ವತಂತ್ರೆ.
ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ತಮ್ಮ ಬಂಧನವಾದಾಗ ದೆಹಲಿಯ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಅವರು ಬೋಧನೆಯಲ್ಲಿ ತೊಡಗಿದ್ದರು. ಮೂರು ವರ್ಷದ ಬಳಿಕ ಅವರಿಗೆ ಡಿಫಾಲ್ಟ್ ಜಾಮೀನು ದೊರೆತಿದೆ. ಪ್ರಕರಣದ 16 ಆರೋಪಿಗಳಲ್ಲಿ ಮೊದಲು ಜಾಮೀನು ದೊರೆತದ್ದು ಸುಧಾ ಅವರಿಗೆ.
ಬಹಳ ಹಿಂದೆ ಅಮೆರಿಕದ ಪೌರತ್ವ ತ್ಯಜಿಸಿ ಕಾರ್ಮಿಕರು ಮತ್ತು ಬುಡಕಟ್ಟು ಜನಾಂಗದವರ ಹಕ್ಕುಗಳಿಗಾಗಿ ಹೋರಾಟ ನಡೆಸಲು ಭಾರತದಲ್ಲೇ ಉಳಿದವರು ಸುಧಾ. ಅವರೊಂದಿಗೆ ʼಬಾರ್ ಅಂಡ್ ಬೆಂಚ್ʼ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. ಅಲ್ಲದೆ ಸಂದರ್ಶನದ ಪೂರ್ಣ ವೀಡಿಯೊವನ್ನು ಕೂಡ ಇಲ್ಲಿ ವೀಕ್ಷಿಸಬಹುದು.
ಈಗ ನಿಮ್ಮ ಯೋಜನೆ ಏನು?
ಪಾಠ ಮಾಡುವುದು ನನಗೆ ತುಂಬಾ ಇಷ್ಟದ ಸಂಗತಿಯಾಗಿತ್ತು. ಆದರೆ ಈ ಪ್ರಕರಣದ ಕಳಂಕದಿಂದಾಗಿ ನನಗೆ ಬೋಧಕಿಯ ಹುದ್ದೆ ದೊರೆಯುತ್ತದೆಯೇ ಎಂಬ ಗಂಭೀರ ಅನುಮಾನವಿದೆ. ಈಗ ನಾನು ಏನು ಯೋಚಿಸುತ್ತಿರುವೆ ಎಂದರೆ (ನ್ಯಾಯಾಲಯಗಳಲ್ಲಿ) ಪ್ರಾಕ್ಟೀಸ್ ಮಾಡುವ ಬಗ್ಗೆ. ಕಾರ್ಮಿಕ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟನೆಗಳೊಂದಿಗೆ ತೊಡಗುವ ಆಲೋಚನೆ ಇದೆ. ನಾನು ಜೈಲಿನಲ್ಲಿದ್ದ ವೇಳೆ ಕಾರ್ಮಿಕ ನ್ಯಾಯಾಲಯಗಳು ಬದಲಾಗಿದ್ದು ಕಾನೂನು ಪರಿಹಾರಗಳ ಬಗ್ಗೆ ಮತ್ತು ಪ್ರಕರಣಗಳಲ್ಲಿ ಹೇಗೆ ತೊಡಗಿಕೊಳ್ಳಬೇಕು ಎಂಬ ಬಗ್ಗೆ ಸಾಕಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಿದೆ ಎಂದನಿಸುತ್ತಿದೆ.
ನಾನು ಜೈಲಿನಲ್ಲಿದ್ದಾಗ, ನಿಜವಾಗಿಯೂ ಸಾಕಷ್ಟು ಅಸಹಾಯಕ ಸ್ಥಿತಿಯಲ್ಲಿದ್ದ ಬಹಳಷ್ಟು ಕೈದಿಗಳನ್ನು ಭೇಟಿಯಾಗಿದ್ದೆ. ನನ್ನ ಕೈಲಾದಷ್ಟು ಸಹಾಯ ಮಾಡಲು ನಾನು ಬಯಸುತ್ತೇನೆ. ನಾನು ಅರ್ಥಮಾಡಿಕೊಂಡಂತೆ ಇಲ್ಲಿ (ಜಾಮೀನು ಷರತ್ತಿನ ಕಾರಣಕ್ಕೆ ಸುಧಾ ಸದ್ಯ ವಾಸ್ತವ್ಯ ಹೂಡಿರುವುದು ಮುಂಬೈನಲ್ಲಿ), ನನ್ನ ವಕಾಲತ್‌ನಾಮಾದಲ್ಲಿ ನನ್ನೊಂದಿಗೆ ಸ್ಥಳೀಯ ವಕೀಲರಿದ್ದರೆ, ನಾನು (ಪ್ರಾಕ್ಟೀಸ್) ಶುರು ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ, ಕಡಿಮೆ ಮಟ್ಟದ ಪ್ರಾಕ್ಟೀಸ್ ಆದರೂ ನಾನು ಅದನ್ನು ಮಾಡಲು ಬಯಸುತ್ತೇನೆ. ಆದರೆ ನನ್ನ ಜೀವನೋಪಾಯಕ್ಕೆ ಹೇಗೆ ಸಂಪಾದನೆ ಮಾಡುವುದು ಎಂದು ಯೋಚಿಸಬೇಕಾಗಿದೆ. ನಾನು ಕೆಲವು ರೀತಿಯ ಸಂಶೋಧನೆ ಮತ್ತು ಬರವಣಿಗೆಯಲ್ಲಿ ತೊಡಗಿಕೊಳ್ಳಲು ನೋಡುತ್ತಿದ್ದೇನೆ.
ಕಾನೂನು ನೆರವಿಗೆ ಮುಂದಾದ ವಕೀಲರು ಅಥವಾ ಕಾನೂನು ವಿದ್ಯಾರ್ಥಿಗಳಿಗೆ ನಿಮ್ಮ ಸಲಹೆ?
… ಕಾನೂನು ನೆರವಿಗೆ ಮುಂದಾಗುವ ವಕೀಲರಿಗೆ ಸೂಕ್ತ ಹಣ ದೊರೆತರೆ ಸಾಕು ಕಾನೂನು ಸಂಸ್ಥೆಗಳಲ್ಲಿ ದುಡಿಯಲು ತೆರಳುವ ಅನೇಕ ಯುವಕರು ದಾವೆ ಕ್ಷೇತ್ರಕ್ಕೆ, ಕಾನೂನು ಸಹಾಯಕ್ಕೆ ಮುಂದಾಗುತ್ತಾರೆ ಎಂದು ನನಗೆ ಖಾತ್ರಿ ಇದೆ.
ಬಾರ್ ಅಂಡ್ ಬೆಂಚ್ ಜೊತೆ ಈ ಹಿಂದೆ ನಡೆಸಿದ್ದ ಸಂದರ್ಶನವೊಂದರಲ್ಲಿ ಕಾಗದದ ಹೋರಾಟ (ಕಾನೂನು ಸಂಘರ್ಷ) ಮತ್ತು ಬೀದಿ ಹೋರಾಟದ (ಸಾಮಾಜಿಕ ಹೋರಾಟ) ಬಗ್ಗೆ ಮಾತನಾಡಿದ್ದಿರಿ. ಅದರ ಬಗ್ಗೆ ಈಗಲೂ ನಂಬಿಕೆ ಇದೆಯೇ?
ಖಂಡಿತವಾಗಿಯೂ! ಏಕೆಂದರೆ ಬದಲಾವಣೆ ಎಂಬುದು ಸಾಮಾಜಿಕ ಚಳುವಳಿ ಮತ್ತು ಕಾನೂನು ಪೂರ್ವನಿದರ್ಶನದಿಂದ ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಉದಾಹರಣೆಗೆ (ಸಲಿಂಗ ಕಾಮವನ್ನು ಸಕ್ರಮಗೊಳಿಸುವ) ಐಪಿಸಿ ಸೆಕ್ಷನ್ 377ನ್ನು ಕಾನೂನುಬದ್ಧಗೊಳಿಸುವುದು. ಆದರೆ ಸಮಾಜದ ಜನರ ಆಚರಣೆಯಲ್ಲಿ ಅದು ಪ್ರತಿಫಲಿಸುತ್ತಿಲ್ಲ.
ಕೆಲವೊಮ್ಮೆ ನೀವು ಬಹಳ ಪ್ರಗತಿಪರವಾದ ಕಾನೂನು ಪೂರ್ವನಿದರ್ಶನವನ್ನು ಹೊಂದಿರಬಹುದು. ಉದಾಹರಣೆಗೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ಅಪರಾಧವಲ್ಲ. ಆದರೆ ಸಮಾಜದ ಜನರ ಆಚರಣೆಯಲ್ಲಿ ಅದು ಪ್ರತಿಫಲಿಸುತ್ತಿಲ್ಲ. ಕಾನೂನು ಪೂರ್ವನಿದರ್ಶನವೊಂದೇ ಪರಿಹಾರವಲ್ಲ. ಮತ್ತೊಂದೆಡೆ, ಕೆಲವೊಮ್ಮೆ ಬಹಳ ಮುಖ್ಯವಾದ ಸಾಮಾಜಿಕ ಚಳುವಳಿಗಳು ಇವೆ, ಆದರೆ ಅವುಗಳಿಗೆ ಕಾನೂನಿನ ಬೆಂಬಲವಿಲ್ಲದ ಕಾರಣ, ಅವು ಮುನ್ನಡೆಯಲು ಸಾಧ್ಯವಾಗುವುದಿಲ್ಲ. ಮತ್ತು ಅದು ಸ್ಥಾಪಿತ ಕಾನೂನು ಅಥವಾ ಪೂರ್ವನಿದರ್ಶನದ ಭಾಗವಾಗುವುದಿಲ್ಲ.
(ಕಾನೂನು ಮತ್ತು ಸಾಮಾಜಿಕ ಹೋರಾಟ) ಇವೆರಡೂ ಬಹಳ ಮುಖ್ಯವೆಂದು ನಾನು ಭಾವಿಸುತ್ತೇನೆ. ಇದನ್ನು ನಾನು ಕಾರ್ಮಿಕ ಸಂಘಟನೆಗಳಲ್ಲಿ ಗಮನಿಸಿದ್ದೇನೆ. ಆಂದೋಲನಗಳಾಗಿ ಅನೇಕ ಕಾನೂನುಗಳು ಬಂದಿವೆ- ಮಾಹಿತಿ ಹಕ್ಕು, ಅರಣ್ಯ ಹಕ್ಕುಗಳು, ಹೆಚ್ಚಿನ ಕಾರ್ಮಿಕ ಕಾನೂನುಗಳು ಶತಮಾನಗಳಿಂದ ನಡೆದ ಕಾರ್ಮಿಕ ಹೋರಾಟದ ಫಲ. ಮಹಿಳೆಯರನ್ನು ರಕ್ಷಿಸುವ ಕಾನೂನುಗಳು ಮಹಿಳಾ ಚಳುವಳಿಗಳಿಂದ ಬಂದವು.
ನಮಗೆ ಎರಡೂ ಇರಬೇಕು ಎಂದು ಭಾವಿಸುತ್ತೇನೆ. ಮತ್ತು ನಾನು ಎರಡರೊಂದಿಗೂ ಒಡನಾಟ ಹೊಂದಿದ ಅದೃಷ್ಟಶಾಲಿಯಾಗಿದ್ದೇನೆ. ಖಂಡಿತಾ, ಅವುಗಳೊಂದಿಗೆ ನಂಟು ಹೊಂದಲು ಸಾಧ್ಯವಿಲ್ಲ ಎಂದು ನಾನು ಭಾವಿಸುವೆ. ಏಕೆಂದರೆ ಛತ್ತೀಸ್‌ಗಢದಿಂದ ನಾನು ತುಂಬಾ ದೂರದಲ್ಲಿದ್ದೇನೆ.
ಮೂರು ವರ್ಷಗಳ ಜೈಲುವಾಸದಲ್ಲಿ ನೀವು ಕಲಿತ ಜೀವನ ಪಾಠಗಳೇನಾದರೂ ಇವೆಯೇ?
…ನಾನು ನನ್ನನ್ನು ನೋಡಿಕೊಳ್ಳುವುದನ್ನು ಕಲಿತೆ. ಹೀಗಾಗಿ ಮಧುಮೇಹ ನಿಯಂತ್ರಣಕ್ಕೆ ಬಂದಿತು. ತುಂಬಾ ಜನದಟ್ಟಣೆ ಇದ್ದರೂ ವ್ಯಾಯಾಮಕ್ಕೆ ಸ್ಥಳಾವಕಾಶ ದೊರೆಯಿತು.
ನಾನು ಕಂಡುಕೊಂಡ ಮತ್ತೊಂದು ವಿಚಾರ ಎಂದರೆ ನನ್ನ ಸುತ್ತಲಿದ್ದವರು ತುಂಬಾ ಕಡಿಮೆ ಅದೃಷ್ಟವಂತರಾಗಿದ್ದರು. ಅವರಿಗೆ ಸಹಾಯ ಮಾಡಲು ಹೊರಗಿನ ಸ್ನೇಹಿತರಿರಲಿಲ್ಲ. ತಮ್ಮ ಪ್ರಕರಣಗಳಲ್ಲಿ ಏನಾಗುತ್ತಿದೆ ಎಂದು ಅವರಿಗೆ ಅರ್ಥವಾಗುತ್ತಿರಲಿಲ್ಲ. ಆದ್ದರಿಂದ ತಮ್ಮನ್ನು ನಿಭಾಯಿಸಿಕೊಳ್ಳಲು ಅವರಿಗೆ ಬೇರೆ ಬೇರೆ ಮಾರ್ಗಗಳಿದ್ದವು ಎಂದು ಅರಿವಿಗೆ ಬಂತು. ಕೆಲವರು ಪ್ರಾರ್ಥಿಸುತ್ತಾರೆ, ಕೆಲವರು ಸೂಜಿಕೆಲಸ ಮಾಡುತ್ತಾರೆ ಕೆಲವರು ಮತ್ತೊಬ್ಬರ ಸಹಾಯಕ್ಕೆ ಬರುತ್ತಾರೆ. ಅವರೆಲ್ಲರೂ ತಮ್ಮನ್ನು ನಿಭಾಯಿಸಿಕೊಳ್ಳುತ್ತಾರೆ ಮತ್ತು ಕಲಿಯಲು ಬಹಳಷ್ಟು ಇದೆ. ಪ್ರತಿಯೊಬ್ಬ ಖೈದಿಯಿಂದ, ನೀವು ಏನನ್ನಾದರೂ ಕಲಿಯಬಹುದು.
ಅಮೆರಿಕದಲ್ಲಿ ಕೆಲಸ ಮಾಡುವ ಅವಕಾಶವಿದ್ದರೂ ನೀವು ಈ ಆಕರ್ಷಣೆಯಿಂದ ದೂರ ಉಳಿದಿದ್ದು ಹೇಗೆ?
ನಾನು ಅಲ್ಲಿ ಹುಟ್ಟಿದ್ದರಿಂದ ಆಕಸ್ಮಿಕವಾಗಿ ಅಲ್ಲಿಯ ಪೌರತ್ವ ಪಡೆದಿದ್ದೆ. ಒಂದು ವರ್ಷದವಳಿದ್ದಾಗ ಹಿಂತಿರುಗಿದ್ದೆ. ಮತ್ತೆ ನನ್ನನ್ನು 11ನೇ ವಯಸ್ಸಿಗೆ ನನ್ನ ತಾಯಿ ಇಂಗ್ಲೆಂಡ್‌ನ ಕೇಂಬ್ರಿಜ್‌ಗೆ ಕರೆದುಕೊಂಡು ಹೋದರು.
ನನಗೆ 21ನೇ ವಯಸ್ಸಿನಲ್ಲಿ ಆಯ್ಕೆಗೆ ಅವಕಾಶವಿತ್ತು. ಆ ಸಮಯದಲ್ಲಿ, ದ್ವಿಪೌರತ್ವದ ಪರಿಕಲ್ಪನೆಯೂ ಇತ್ತು… ಆ ಹೊತ್ತಿಗಾಗಲೇ, ನಾನು ಕಾರ್ಮಿಕರ ವಿಚಾರಗಳಲ್ಲಿ ಸಾಕಷ್ಟು ತೊಡಗಿಸಿಕೊಂಡಿದ್ದೆ. ನನಗೆ ನೆನಪಿದೆ ಆಗ, ನಾವು ವಿದೇಶಿ ನೋಂದಣಿ ಕಚೇರಿಗೆ ಹೋಗಿ ನೋಂದಾಯಿಸಿಕೊಳ್ಳಬೇಕಾಗಿತ್ತು. ನಾವು ಎಲ್ಲಿಗೆ ಹೋಗುತ್ತಿದ್ದೇವೆ, ಏನು ಮಾಡುತ್ತಿದ್ದೇವೆ ಎಂದು ಅವರಿಗೆ ಹೇಳಬೇಕಾಗಿತ್ತು. ಆದರೂ ನಾನು ನನ್ನ ಸ್ವಂತ ದೇಶದಲ್ಲಿ ನನ್ನ ಸ್ವಂತ ಜನರಿಗಾಗಿ ಏನನ್ನಾದರೂ ಮಾಡಲು ಹೊರಟಿರುವೆ ಎಂದು ಅನ್ನಿಸಿತ್ತು. ಜೊತೆಗೆ ನಾನು ಏನು ಮಾಡುತ್ತಿದ್ದೇನೆ ಎಂದು ಈ ವಿದೇಶಿ ರಾಯಭಾರ ಕಚೇರಿಗೆ ತಿಳಿಸುವುದು ಹಾಸ್ಯಾಸ್ಪದವಾಗಿ ಕಂಡಿತ್ತು (ನನಗೆ)!
ಮತ್ತು ಹೇಗೋ ಹೆಚ್ಚು ಕಡಿಮೆ, ನನ್ನ ಜೀವನವನ್ನು ಸಮಾಜಸೇವೆಗೆ ಮುಡಿಪಾಗಿಡುತ್ತೇನೆ ಎಂದು ನಾನು ಅದಾಗಲೇ ಮನಸ್ಸು ಮಾಡಿದ್ದೆ. ಹಾಗಾಗಿ ಬಹಳ ಅಡ್ಡಿಯಾಗಬಹುದು ಎಂದುಕೊಂಡೆ. ನಾನು ಅದನ್ನು ಎಂದಿಗೂ ಒಂದು ಗಂಭೀರ ಆಯ್ಕೆಯಾಗಿ ಯೋಚಿಸಲಿಲ್ಲ. ಆದ್ದರಿಂದ ಇದು ನಿಜವಾಗಿಯೂ ತ್ಯಾಗವಾಗಿರಲಿಲ್ಲ. (ಭಾರತದಲ್ಲಿರುವುದು) ಹೆಚ್ಚು ಆರಾಮದಾಯಕ ಎಂದು ನಾನು ಭಾವಿಸಿದೆ. ನಾನು ಭಾರತೀಯಳು ಅನ್ನಿಸಿದ್ದರಿಂದ, ಭಾರತದಲ್ಲೇ ಇರಲು ಬಯಸಿದೆ. ಭಾರತದಲ್ಲೇ ಕೆಲಸ ಮಾಡಲು ಇಚ್ಛಿಸಿದೆ. ನಾನು ಅದನ್ನು ಪಡೆಯುವುದು ಎಂಬುದರ ಅರ್ಥವಾದರೂ ಏನು? (ಅಮೆರಿಕ ಪೌರತ್ವ) ನಾನದನ್ನು ತ್ಜಜಿಸಿದ್ದೆ!