ನವೆಂಬರ್ 2ರಂದು ಬಿಡುಗಡೆಯಾದ ಜೈ ಭೀಮ್ ಹೂವು- ಮುಳ್ಳುಗಳೆರಡನ್ನೂ ಒಟ್ಟಿಗೆ ಕಂಡ ಸಿನಿಮಾ. ತೆರೆಯ ಮೇಲೆ ನ್ಯಾ. ಕೆ ಚಂದ್ರು ಅವರನ್ನು ಕಟ್ಟಿಕೊಟ್ಟದ್ದಕ್ಕಾಗಿ ತಮಿಳು ನಟ ಸೂರ್ಯ ಅವರತ್ತ ಪ್ರಶಂಸೆಯ ಮಹಾಪೂರವೇ ಹರಿದಿದೆ.
‘ಬಾರ್ ಅಂಡ್ ಬೆಂಚ್’ಗಾಗಿ ಪತ್ರಕರ್ತ ಆಮಿರ್ ಖಾನ್ ಅವರೊಂದಿಗೆ ನಡೆದ ಸಂದರ್ಶನದಲ್ಲಿ ಹೋರಾಟಗಾರ, ವಕೀಲ, ನ್ಯಾಯಮೂರ್ತಿ ಕೆ ಚಂದ್ರು ಅವರು ʼಜೈ ಭೀಮ್ʼ ಹೇಗೆ ತಮ್ಮ ವೃತ್ತಿ ಬದುಕಿನ ಮೊದಲ ದೊಡ್ಡ ಪ್ರಕರಣವೊಂದನ್ನು ನೈಜವಾಗಿ ಚಿತ್ರಿಸಿದ ಪ್ರಥಮ ತಮಿಳು ಚಿತ್ರ ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ ಸಿನಿಮಾದ ಕಥಾವಸ್ತುವಾಗಿರುವ ಪ್ರಕರಣವೊಂದು ತಮ್ಮನ್ನು ಹೇಗೆ ದಕ್ಷ ನ್ಯಾಯಾಧೀಶರನ್ನಾಗಿ ಕಟ್ಟಿಕೊಟ್ಟಿತು ಎಂಬುದನ್ನು ವಿವರಿಸಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ:
ತಾವು ಹೇಳಬೇಕೆಂದು ಬಯಸಿದ್ದನ್ನು ಜೈ ಭೀಮ್ ಸಿನಿಮಾ ಪ್ರೇಕ್ಷಕರಿಗೆ ದಾಟಿಸಿದೆಯೇ?
ನ್ಯಾ. ಚಂದ್ರು: ಅಪರೂಪಕ್ಕೊಮ್ಮೆ ಚಲನಚಿತ್ರಗಳು ಸಾಮಾಜಿಕ ವಿಷಯ ಹಾಗೂ ಅದರೊಟ್ಟಿಗೆ ಸಂದೇಶವನ್ನು ಒಳಗೊಂಡಿರುತ್ತವೆ. ಆ ನಿಟ್ಟಿನಲ್ಲಿ ʼಜೈ ಭೀಮ್ʼ ಪ್ರೇಕ್ಷಕರಿಗೆ ಹಲವು ಸಂದೇಶಗಳನ್ನು ನೀಡಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಜನರ ಕುಂದುಕೊರತೆ ನಿವಾರಿಸಲು ಕಾನೂನನ್ನು ಅಸ್ತ್ರವಾಗಿ ಬಳಸುವ ಬಗ್ಗೆ ಚಲನಚಿತ್ರ ಮಾತನಾಡಿದೆ. ಸಂತ್ರಸ್ತ ಜನ ಹೇಗೆ ಒಂದು ಆಂದೋಲನವಾಗಿ ಸಂಘಟಿತರಾಗಬೇಕು ಎಂಬುದನ್ನು ಅದು ಹೇಳುತ್ತದೆ. ಜೊತೆಗೆ ಸರ್ಕಾರಕ್ಕೆ ತಮ್ಮ ನಿರ್ದಿಷ್ಟ ಬೇಡಿಕೆಗಳನ್ನಿಟ್ಟು ಹೇಗೆ ಬೀದಿಗಿಳಿದು ಹೋರಾಟ ನಡೆಸಬೇಕು ಎಂಬುದನ್ನು ಸಹ ಇದು ತೋರಿಸಿದೆ.
ಸಾಕ್ಷರತೆಯ ಪ್ರಶ್ನೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಆರಂಭದಲ್ಲಿ, ನ್ಯಾಯಾಲಯದ ಕಾಗದಗಳ ಮೇಲೆ ಬುಡಕಟ್ಟು ಮಹಿಳೆ ಹೆಬ್ಬೆಟ್ಟು ಒತ್ತುವುದನ್ನು ನೀವು ನೋಡಬಹುದು, ಆದರೆ ಕೊನೆಯಲ್ಲಿ, ಆಕೆಯ ಮಗಳು ವಕೀಲರ ಮನೆಯಲ್ಲಿ ಕುರ್ಚಿಯ ಮೇಲೆ ಆರಾಮವಾಗಿ ಕುಳಿತು ದಿನಪತ್ರಿಕೆ ಓದುವುದು ಕಾಣುತ್ತದೆ.
ಅಂತಿಮ ವಿಮೋಚನೆ ಎಂಬುದು ಸಾಕ್ಷರತೆಯೇ ಆಗಿದೆ ಎನ್ನುವುದನ್ನು ತಿಳಿಸಲು ಇದು ಬಯಸಿದ್ದು ಡಾ. ಅಂಬೇಡ್ಕರ್ ಅವರ ‘ಕಲಿಯಿರಿ, ಕಲಿಸಿರಿ, ಹೋರಾಡಿ’ ಎಂಬ ಪ್ರಸಿದ್ಧ ಸಾಲನ್ನು ಪ್ರೇಕ್ಷಕರಿಗೆ ದಾಟಿಸಿದೆ. ಈ ಸಂದೇಶ ಚೆನ್ನಾಗಿ ನಾಟಿದೆ.
ನೀವು ವಿದ್ಯಾರ್ಥಿ ನಾಯಕ, ವಕೀಲ ಜೊತೆಗೆ ಹೈಕೋರ್ಟ್ ನ್ಯಾಯಮೂರ್ತಿಯಾದಿರಿ. ಒಂದು ಮಜಲಿನಿಂದ ಮತ್ತೊಂದು ಮಜಲಿಗೆ ನೀವು ಪರಿವರ್ತನೆಯಾದ ಬಗೆ ಹಾಗೂ ನಿಮ್ಮ ಆಲೋಚನೆ ಮತ್ತು ಕೆಲಸ ಪ್ರತಿ ಬಾರಿ ಹೇಗೆ ವಿಕಸನಗೊಂಡಿತು ಎಂಬುದರ ಕುರಿತು ಹೇಳುವಿರಾ?
ನ್ಯಾ. ಚಂದ್ರು: ವಿದ್ಯಾರ್ಥಿ ಹೋರಾಟಗಾರನಾಗಿದ್ದ ನಾನು ಕಾರ್ಮಿಕ ಚಳವಳಿಯಲ್ಲಿ ಭಾಗವಹಿಸಿದ್ದೆ ಮತ್ತು ಅವರೊಟ್ಟಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೆ. 1975-77ರ ಅವಧಿಯಲ್ಲಿ ಘೋಷಣೆಯಾದ ರಾಷ್ಟ್ರೀಯ ತುರ್ತು ಪರಿಸ್ಥಿತಿ ನ್ಯಾಯಾಲಯಗಳನ್ನು ದುರ್ಬಲಗೊಳಿಸಿ ಸಂವಿಧಾನ ಒದಗಿಸಿದ್ದ ಮೂಲಭೂತ ಹಕ್ಕುಗಳನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ನಮ್ಮಲ್ಲಿ ಹಲವರ ಕಣ್ಣು ತೆರೆಯಿತು. ಆಗ ನಾನು ಕಾನೂನು ವಿದ್ಯಾರ್ಥಿಯಾಗಿದ್ದು ತರಗತಿಯಲ್ಲಿ ಸಂವಿಧಾನ ಕಾನೂನನ್ನು ಕಲಿಯುತ್ತಿದ್ದೆ.
ಸನ್ನಿವೇಶಗಳಿಂದಾಗಿ ಬಡವರು ಮತ್ತು ದೀನದಲಿತರ ರಕ್ಷಣೆಗಾಗಿ ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡಬೇಕೆಂಬ ಕಲ್ಪನೆ ನನ್ನೊಳಗೆ ಮೂಡಿತು. 1976ರಲ್ಲಿ ನಾನು ವಕೀಲನಾಗಿ ಎನ್‌ರೋಲ್ ಆದ ಬಳಿಕ ನನ್ನ ಮೊದಲ ಪ್ರಮುಖ ಪ್ರಕರಣವನ್ನು ಜಸ್ಟೀಸ್ ಇಸ್ಮಾಯಿಲ್ ಆಯೋಗದೆದುರು ಮಂಡಿಸಿದೆ. ಅದು 1976ರಲ್ಲಿ ಮದ್ರಾಸ್ ಸೆಂಟ್ರಲ್ ಜೈಲಿನಲ್ಲಿ ಆಂತರಿಕ ಭದ್ರತೆ ನಿರ್ವಹಣಾ ಕಾಯಿದೆ (ಮೀಸಾ) ಉಲ್ಲಂಘನೆಗಾಗಿ ಸೆರೆಯಾಗಿದ್ದವರಿಗೆ ಸಂಬಂಧಿಸಿದ್ದಾಗಿತ್ತು. ಬಂಧಿತರಲ್ಲಿ ಒಬ್ಬರು ನಮ್ಮ ಈಗಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್.
ಕೈದಿಗಳ ಮೇಲಿನ ದಾಳಿ ಮತ್ತು ಚಿತ್ರಹಿಂಸೆಗೆ ಜೈಲು ಅಧಿಕಾರಿಗಳೇ ಕಾರಣ ಎಂದು ಕಂಡುಕೊಂಡ ಆಯೋಗ ಗಂಭೀರ ಕ್ರಮಕ್ಕೆ ಶಿಫಾರಸು ಮಾಡಿತು. ಆಯೋಗದ ಮುಂದೆ ನಡೆದ ವಿಚಾರಣೆ ಮತ್ತು ಮಾರ್ಕ್ಸ್‌ವಾದಿಗಳಾಗಿದ್ದ ಬಂಧಿತರ ಪರವಾಗಿ ನಾನು ಅದರಲ್ಲಿ ಭಾಗವಹಿಸಿದ್ದು ನನಗೆ ಹೈಕೋರ್ಟ್ ವಲಯದಲ್ಲಿ ಪ್ರಸಿದ್ಧಿ ತಂದಿತು.
ನಾನು ತರುವಾಯ ತಮಿಳುನಾಡು ವಕೀಲರ ಪರಿಷತ್ತಿನ (1983-88) ಸದಸ್ಯನಾಗಿ ಆಯ್ಕೆಯಾದೆ. ಮದ್ರಾಸ್ ಹೈಕೋರ್ಟ್ ವಕೀಲರ ಸಂಘದ ಪದಾಧಿಕಾರಿಯೂ ಆದೆ. ಈ ಅವಧಿಯಲ್ಲಿ ಹಲವಾರು ಆಂದೋಲನಗಳ ನೇತೃತ್ವ ವಹಿಸಿದೆ. ಕಾರಾಗೃಹ ವ್ಯವಸ್ಥೆಯನ್ನು ಕಂಡದ್ದು ಜೈಲುಗಳಲ್ಲಿ ಸುಧಾರಣೆ ತರುವಂತೆ ಸರ್ಕಾರಕ್ಕೆ ಹಲವಾರು ನಿರ್ದೇಶನ ನೀಡಲು ನನಗೆ ಸಹಾಯಕವಾಯಿತು.
ವಿದ್ಯಾರ್ಥಿ ನಾಯಕನಾಗಿ ನನ್ನ ಹೋರಾಟ ಮತ್ತು ಮಾನವ ಹಕ್ಕು ಪ್ರಕರಣಗಳಲ್ಲಿ ವಕೀಲನಾಗಿ ನಾನುಮಾಡಿದ್ದ ಪ್ರಾಕ್ಟೀಸ್ ನ್ಯಾಯಾಧೀಶನಾಗಲು, ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ವಿಚಾರಣೆ ನಡೆಸಲು ತ್ವರಿತ ಹಾಗೂ ಅನೇಕ ಬಾರಿ ದೊಡ್ಡಮೊತ್ತದ ಪರಿಹಾರ ನೀಡಲು ನನಗೆ ಸಹಾಯ ಮಾಡಿತು. ನನ್ನ ವಿಶ್ವ ದೃಷ್ಟಿಕೋನ ಮತ್ತು ಸಮಾಜದ ಕಾಳಜಿ ದೀನ-ದಲಿತರ ಪ್ರಕರಣಗಳನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ಸಹಾಯ ಮಾಡಿತು.
ತೆರೆ ಮೇಲೆ ನಿಮ್ಮನ್ನು ಪಡಿಮೂಡಿಸುವಾಗ, ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಸೂರ್ಯ ನಟಿಸಿದ್ದಾರೆಯೇ?
ನ್ಯಾ. ಚಂದ್ರು: ಒಂದು ಬಾರಿಗೆ, ಅವರಂತಹ ಬಹುದೊಡ್ಡ ಸಿನಿಮಾ ನಟ ನಿರ್ದೇಶಕರ ಕೂಸಾದರು. ಮತ್ತು ನಿರ್ದೇಶಕರ ಬಯಕೆಯಂತೆ ತಮ್ಮ ಪಾತ್ರ ಮಾಡಿದರು. ವಾಸ್ತವವಾಗಿ, ಚಲನಚಿತ್ರ ವಕೀಲರೊಬ್ಬರ ವೈಯಕ್ತಿಕ ಸಾಹಸವನ್ನು ಬಿಂಬಿಸುವ ಬದಲು, ಅವರನ್ನು ಸಂಯಮದ ವ್ಯಕ್ತಿಯಾಗಿ ಚಿತ್ರಿಸುತ್ತದೆ. ಹೈಕೋರ್ಟ್‌ನಲ್ಲಿ ನಡೆಯುವ ವಿಚಾರಣೆ ನೈಜವಾಗಿದೆ. ಸೂರ್ಯ ಅವರದು ಸಂಪೂರ್ಣ ಸಂಯಮದ ನಟನೆ. ತಮಿಳು ಸಿನಿಮಾವೊಂದು ಹೈಕೋರ್ಟ್ ಕಲಾಪಗಳ ನೈಜ ಚಿತ್ರಣವನ್ನು ತೋರಿಸಿರುವುದು ಇದೇ ಮೊದಲು. ಯಾವುದೇ ಅಲಂಕಾರಿಕ ಡೈಲಾಗ್‌ಗಳು, ಕೋಪಾಟೋಪ ಅಥವಾ ಅಸಮಂಜಸ ಸಂಭಾಷಣೆಗಳಿಲ್ಲ.
ಚಿತ್ರದಲ್ಲಿ ನಿರ್ದಿಷ್ಟ ಸಮುದಾಯಯವನ್ನು ಉದ್ದೇಶಪೂರ್ವಕವಾಗಿ ಸಂಕೇತಿಸಲಾಗಿದೆ ಎಂಬುದರ ಸುತ್ತಲಿನ ವಿವಾದದ ಬಗ್ಗೆ ನೀವು ಏನು ಹೇಳುತ್ತೀರಿ?
ನ್ಯಾ. ಚಂದ್ರು: ಆ ನಿರ್ದಿಷ್ಟ ಸಮುದಾಯದ ಜಾತಿವಾದಿ ನಾಯಕರು ಚಿತ್ರದ ಶೀರ್ಷಿಕೆ ಮತ್ತು ತಮ್ಮದೇ ಸಮುದಾಯದ ಮೇಲೆ ಅದು ಬೀರಬಹುದಾದ ಪ್ರಭಾವದಿಂದ ನಿಜವಾಗಿಯೂ ವಿಚಲಿತರಾಗಿದ್ದಾರೆ. ಆದ್ದರಿಂದ, ಹತಾಶೆಯಿಂದ, ಅವರು ಕೋಮು ಉದ್ವಿಗ್ನತೆ ಉಂಟುಮಾಡುವ ರೀತಿಯ ವಿವಾದಗಳ ಮೊರೆ ಹೋಗಿದ್ದಾರೆ.
ಸಬ್ ಇನ್ಸ್‌ಪೆಕ್ಟರ್ ಮನೆಯಲ್ಲಿ ನೇತು ಹಾಕಿದ್ದ ಕ್ಯಾಲೆಂಡರ್‌ನಲ್ಲಿ ಅವರ ಜಾತಿ ಸಂಘದ ಚಿಹ್ನೆ ಇರುವುದನ್ನು ಗಮನಕ್ಕೆ ತಂದಾಗ, ಚಿತ್ರ ಬಿಡುಗಡೆಯಾದ ಎರಡೇ ದಿನಗಳಲ್ಲಿ ಆ ಕ್ಯಾಲೆಂಡರ್ ಬದಲಾಯಿಸಲಾಯಿತು.
ಅವರು ಇನ್ನೂ ತಪ್ಪುಗಳನ್ನು ಹುಡುಕುತ್ತಿದ್ದು ಚಿತ್ರದಲ್ಲಿ ಇನ್‌ಸ್ಪೆಕ್ಟರ್ ಅನ್ನು ನಿರ್ದಿಷ್ಟ ಹೆಸರಿನೊಂದಿಗೆ ಉಲ್ಲೇಖಿಸಿರುವುದನ್ನು ಪ್ರಶ್ನಿಸಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ, ಅವರ ಪ್ರಕಾರ, ತಮ್ಮ ಮೃತ ನಾಯಕರಲ್ಲಿ ಒಬ್ಬರನ್ನು ಅದು ಉಲ್ಲೇಖಿಸುತ್ತದೆ. ಆದರೆ ಚಿತ್ರ ನೋಡುವವರಿಗೆ ಹಾಗೆ ಅನ್ನಿಸುವುದಿಲ್ಲ. ಬೇರೇನೂ ಕೆಲಸವಿಲ್ಲದೇ ಈಗ ನಟ ಹಾಗೂ ನಿರ್ದೇಶಕರ ವಿರುದ್ಧ ಹೊಸ ಹೋರಾಟ ಆರಂಭಿಸಿದ್ದಾರೆ.
ನ್ಯಾಯಾಲಯಕ್ಕೆ ತೆರಳುವುದಾಗಿ ಅವರು ಒಡ್ಡುತ್ತಿರುವ ಬೆದರಿಕೆ ನಿಜವಾಗಲಿ ಎಂದು ಖುಷಿಯಿಂದ ನಾನು ಬಯಸುತ್ತಿದ್ದು ಇದರಿಂದಾಗಿ ನ್ಯಾಯಾಲಯದ ಎದುರು ನ್ಯಾಯಯುತವಾದ ವಾದ ಮಂಡಿಸಿ ಅವರು ಆರೋಪಿಸಿರುವ ಕುಂದುಕೊರತೆಗಳಿಗೆ ಕಾನೂನು ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ.
ಸಂದರ್ಶನದ ಪೂರ್ಣಪಠ್ಯವನ್ನು ಇಲ್ಲಿ ಓದಿ: