ಕಪಿಲ್ ಸಿಬಲ್ ಸಂದರ್ಶನ: ದೇಶದ ವಕೀಲರು ಮೌನ ಮುರಿಯಲಿ

ʼಇನ್ಸಾಫ್‌ʼ ಸಂಘಟನೆಯ ಹಿಂದಿನ ಪರಿಕಲ್ಪನೆ, ಪ್ರಸ್ತುತ ಸರ್ಕಾರದಿಂದ ನಡೆಯುತ್ತಿರುವ ಸರ್ಕಾರಿ ಸಂಸ್ಥೆಗಳ ದುರ್ಬಳಕೆ ಇತ್ಯಾದಿ ವಿಚಾರಗಳ ಕುರಿತು ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಮಾತನಾಡಿದ್ದಾರೆ ಸಿಬಲ್‌.
Senior Advocate Kapil Sibal
Senior Advocate Kapil Sibal

ಅನ್ಯಾಯದ ವಿರುದ್ಧ ಜನಾಂದೋಲನವನ್ನು ರೂಪಿಸುವ ʼಇನ್ಸಾಫ್‌ ಕೆ ಸಫಾಯಿʼ (ನ್ಯಾಯದ ಯೋಧರು) ಎಂಬ ಸಂಘಟನೆಯನ್ನು ಕೇಂದ್ರದ ಮಾಜಿ ಕಾನೂನು ಸಚಿವ ಹಾಗೂ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ಇತ್ತೀಚೆಗೆ ಹುಟ್ಟುಹಾಕಿದ್ದಾರೆ. ನಿನ್ನೆ ಅಂದರೆ ಮಾರ್ಚ್‌ ೧೧ರಂದು ದೆಹಲಿಯ ಜಂತರ್‌ಮಂತರ್‌ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ʼಸಿಪಾಯಿʼಯ ಜಾಲತಾಣವೂ ಲೋಕಾರ್ಪಣೆಗೊಂಡಿತು.

ಇದಕ್ಕೂ ಮುನ್ನ ʼಬಾರ್‌ ಅಂಡ್‌ ಬೆಂಚ್‌ʼನ ಮುಖ್ಯ ಸಂಪಾದಕಿ ಪಲ್ಲವಿ ಸಳುಜಾ ಅವರಿಗೆ ನೀಡಿದ ಸಂದರ್ಶನದಲ್ಲಿ ಸಿಬಲ್‌ ಅವರು ಸಂಘಟನೆಯ ಹಿಂದಿನ ಕಲ್ಪನೆ, ಪ್ರಸ್ತುತ ಸರ್ಕಾರದಿಂದ ನಡೆಯುತ್ತಿರುವ ಸರ್ಕಾರಿ ಸಂಸ್ಥೆಗಳ ದುರ್ಬಳಕೆ ಇತ್ಯಾದಿ ವಿಚಾರಗಳ ಕುರಿತು ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ:  

Q

ನೀವು ಇತ್ತೀಚೆಗೆ ನ್ಯಾಯಕ್ಕಾಗಿ ಜನಾಂದೋಲನ ರೂಪಿಸುವ ಉದ್ದೇಶದಿಂದ ʼಇನ್ಸಾಫ್ ಕೆ ಸಿಪಾಯಿʼ ಎಂಬ ಸಂಘಟನೆಯನ್ನು ಪ್ರಾರಂಭಿಸಿದ್ದೀರಿ . ಇದರ ಹಿಂದಿನ ಕಲ್ಪನೆ ಎಂತಹುದು?

A

ವಿಶೇಷವಾಗಿ (ಕಾಂಗ್ರೆಸ್‌ನ) ಜಿ 23 ರಾಜಕೀಯ ಗುಂಪು ಬೇರ್ಪಟ್ಟ ಬಳಿಕ, ಕಳೆದ ಒಂದೂವರೆ ವರ್ಷಗಳಿಂದ ನಾನು ನಿಜವಾಗಿಯೂ ಯೋಚಿಸುತ್ತಿದ್ದೇನೆ, ದೇಶದಲ್ಲಿ ಹಿಂದೆಂದೂ ಕಾಣದಂತಹ ಒಂದು ಬಗೆಯ ಅನ್ಯಾಯ 2014ರಿಂದ ಗೋಚರಿಸುತ್ತಿದೆ. ನ್ಯಾಯಾಲಯದ ಪ್ರಕರಣಗಳ ಮೇಲೆ ಪ್ರತಿಫಲಿಸುವ ರೀತಿಯ ಅನ್ಯಾಯವನ್ನು ನನ್ನ 50 ವರ್ಷಗಳ ವೃತ್ತಿಯಲ್ಲಿ ಕಂಡಿಲ್ಲ.

ವೈಯಕ್ತಿಕ ಮಟ್ಟದಲ್ಲಿ ಎಸಗುವ ಅನ್ಯಾಯವನ್ನು ಅರ್ಥಮಾಡಿಕೊಳ್ಳಬಲ್ಲೆ, ಆದರೆ ಈಗ ಸರ್ಕಾರ  ಅನ್ಯಾಯ ಎಸಗಲು ಈ ದೇಶದ ಸಾಂಸ್ಥಿಕ ರಚನೆಯನ್ನು ಬಳಸುತ್ತಿದೆ ಎಂದು ಕಂಡುಕೊಂಡಿದ್ದೇನೆ. ಈ ದೇಶದ ಪ್ರಜಾಸತ್ತಾತ್ಮಕ ರಚನೆ, ನ್ಯಾಯ ದಾನ ಮಾಡುವ ಸಾಂಸ್ಥಿಕ ರಚನೆಯನ್ನು (ನ್ಯಾಯಾಲಯಗಳ ಮೂಲಕ ನೀಡುವ ನ್ಯಾಯವನ್ನು ಮಾತ್ರ ನಾನು ಹೇಳುತ್ತಿಲ್ಲ ಬದಲಿಗೆ ಎಲ್ಲಾ ಬಗೆಯ ನ್ಯಾಯಾವನ್ನು) ಕ್ರಮೇಣ ಧ್ವಂಸ ಮಾಡಲಾಗುತ್ತಿದೆ, ಕೆಡವಲಾಗುತ್ತಿದೆ.

ಆದ್ದರಿಂದ ಯಾರೂ ವಿರೋಧಿಸದಂಥದ್ದನ್ನು ನಾನೇನು ಮಾಡಬಹುದು ಎಂದು ಯೋಚಿಸಿದೆ. ನಾನೇನಾದರೂ ರಾಜಕೀಯ ಪಕ್ಷ ಸ್ಥಾಪಿಸಿದರೆ ಅದಕ್ಕೆ ವಿರೋಧ ಬರಬಹುದು. ಇಲ್ಲವೇ ಬೇರೆ ರಾಜಕೀಯ ಪಕ್ಷಕ್ಕೆ ಸೇರಿದರೆ ನನ್ನನ್ನು ಖರೀದಿಸಲಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಹೀಗಾಗಿ ನಾನು ಇನ್ಸಾಫ್‌ನ ಆಲೋಚನೆಯನ್ನು ಮುಂದಿಟ್ಟೆ.

ಇನ್ಸಾಫ್ (ನ್ಯಾಯ) ಕೂಡ ನಮ್ಮ ಸಂವಿಧಾನದ ಮೂಲಾಧಾರವಾಗಿದೆ. (ಸಂವಿಧಾನದ) ಪೀಠಿಕೆಯು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯದ ಬಗ್ಗೆ ಮಾತನಾಡುತ್ತದೆ - ಯಾರೂ ಇದನ್ನು ವಿರೋಧಿಸಲು ಸಾಧ್ಯವಿಲ್ಲ. ʼಇಲ್ಲ, ನಮಗೆ ನ್ಯಾಯ ಬೇಡʼ ಎಂದು ಯಾರಾದರೂ ಹೇಳುವುದುಂಟೆ?

ನಾವು ನೋಡುತ್ತಿರುವ ಅನ್ಯಾಯಗಳ ವಿರುದ್ಧ ಜನರು ಒಗ್ಗೂಡಿ ಹೋರಾಡುವುದು ಸಕಾರಾತ್ಮಕ ಕಾರ್ಯಸೂಚಿಯಾಗಿದೆ. ನಾನು insaafkesipahi.co.in ಎಂಬ ಜಾಲತಾಣವನ್ನು ಕೂಡ ರೂಪಿಸಿದ್ದೇನೆ. ದೇಶದ ಯಾರು ಬೇಕಾದರೂ ಈ ಜಾಲತಾಣ ಬಳಸಿ ಇನ್ಸಾಫ್‌ ಕೆ ಸಿಪಾಯಿ ಆಗಬಹುದು. ಇದು ಆಲೋಚನೆ.

Q

ವಕೀಲರ ಆಂದೋಲನ ಇದರ ಉದ್ದೇಶವೇ? ಸ್ವಾತಂತ್ರ್ಯಪೂರ್ವದಲ್ಲಿ ಕಂಡ ನ್ಯಾಯವಾದಿಗಳ  ಆಂದೋಲನದ ಮಾದರಿಯೇ ಇದು?

A

ಹೌದು! ಭಾರತದಲ್ಲಿ ವಕೀಲರೇಕೆ ಮೌನವಾಗಿದ್ದಾರೆ? ಅವರಲ್ಲಿ ಕೆಲವರು ರಾಜಕೀಯಗೊಂಡಿದ್ದಾರೆ, ನಾನು ಅದನ್ನು ಅರ್ಥಮಾಡಿಕೊಳ್ಳಬಲ್ಲೆ, ಆದರೆ ಬಹುತೇಕ ವಕೀಲರು ರಾಜಕೀಯಗೊಂಡಿಲ್ಲ. ಅವರು ಈಗಲೂ ನ್ಯಾಯದ ಜೊತೆಗೆ ಬೆಸೆದುಕೊಂಡಿದ್ದಾರೆ. ಅವರು ಮಾತನಾಡಲು ತೊಡಗಬೇಕು ಎಂದು ಬಯಸುತ್ತೇನೆ. ಇದನ್ನು ಸಾಧ್ಯವಾಗಿಸಲು ಒಂದು ಮಾರ್ಗ ಎಂದರೆ ಅವರೆಲ್ಲಾ ಈ ಸಂಘಟನೆ ಸೇರುವುದು.

ಇದರ ಹಿಂದಿನ ಇನ್ನೊಂದು ಆಲೋಚನೆಯನ್ನು ಮುಕ್ತವಾಗಿ ಹಂಚಿಕೊಳ್ಳುತ್ತೇನೆ. ಭಾರತದಲ್ಲಿ ಬಿಜೆಪಿ ಹೇಗೆ  ಬಲಿಷ್ಠವಾಯಿತು? ಆರ್‌ಎಸ್‌ಎಸ್‌ ಪ್ರಚಾರ ಮಾಡುವ ವಿಚಾರಧಾರೆಗಳಿಗೆ ಸ್ಥಳೀಯ ಸಾಮಾನ್ಯ ಜನ ಮಾರುಹೋಗಿದ್ದಾರೆ. ಅಷ್ಟರಮಟ್ಟಿಗೆ, ಆ ಸಿದ್ಧಾಂತವನ್ನು ನಂಬುವವರನ್ನು ಅದು ಆಕರ್ಷಿಸುತ್ತದೆ.

ತಮ್ಮ ಪ್ರದೇಶದಲ್ಲಿ ʼಇನ್ಸಾಫ್ ಕೆ ಸಿಪಾಯಿʼ ಆಗಿರುವ ಮಂದಿಯ ವಿಚಾರದಲ್ಲೂ ಇದೇ ಘಟಿಸಬಹುದು.  ಅದು ಆ ಪ್ರದೇಶದ, ಆ ಬೀದಿಯ ಸುತ್ತಮುತ್ತಲಿನ, ಜನ ಸೇರುವೆಡೆಯ, ಶಾಶ್ವತ ರಚನಾತ್ಮಕ ಲಕ್ಷಣವಾಗಿರಬಲ್ಲದು. ಇನ್ಸಾಫ್‌ನ ಈ ಪರಿಕಲ್ಪನೆಯ ಆಧಾರದ ಮೇಲೆ ವಾಸ್ತವವಾಗಿ ನಡೆಯುವ ಅನ್ಯಾಯಗಳಿಗೆ ಪ್ರತಿಯಾಗಿ ಉತ್ತರ ನೀಡಬಲ್ಲ ವಿಚಾರವಾಗಬಹುದು.

Q

ನೀವು ಇತ್ತೀಚಿಗೆ ಜಾರಿ ನಿರ್ದೇಶನಾಲಯವನ್ನು ʼಕೇಂದ್ರ ಸರ್ಕಾರದ ಪ್ರಿಯತಮೆʼ ಎಂದು ಜರೆದಿದ್ದಿರಿ. ಇತ್ತೀಚಿನ ವರ್ಷಗಳಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ಹೇಗೆ ಬದಲಾಗಿದೆ?

A

ನಾವು ಜಾರಿ ನಿರ್ದೇಶನಾಲಯವನ್ನು ಅಸ್ತಿತ್ವಕ್ಕೆ ತಂದಾಗ ಹಾಗೂ 2014ರ ಹಿಂದಿನ ಇತಿಹಾಸ ನೋಡಿದರೆ, ಎಲ್ಲಿಯೂ ಪ್ರತಿಪಕ್ಷಗಳ ವಿರುದ್ಧ ಅದನ್ನು ಬಳಸಿರುವ ದಾಖಲೆ ಸಿಗುವುದಿಲ್ಲ.

ಇ ಡಿ ನಡೆಸುತ್ತಿರುವ 121 ತನಿಖೆಗಳಲ್ಲಿ 115 ತನಿಖೆಗಳು ರಾಜಕೀಯ ವಿರೋಧಿಗಳೆಡೆಗೆ ಬೆರಳು ಮಾಡಿವೆ. ಈ ಮಾಹಿತಿಯೇ ನಿಮಗೆ ಉತ್ತರ ನೀಡುತ್ತಿದೆ. ಇಂದೆಂದೂ ಹೀಗೆ ನಡೆದಿರಲಿಲ್ಲ. ಇ ಡಿಯ ಒಟ್ಟು ತನಿಖೆಗಳಲ್ಲಿ ಶೇ 95ರಷ್ಟು ಪ್ರತಿಪಕ್ಷಗಳ ವಿರುದ್ಧ ಇವೆ. ರಾಜ್ಯದಲ್ಲಾಗಲೀ ಕೇಂದ್ರದಲ್ಲಾಗಲೀ ಇ ಡಿ ತನಿಖೆ ನಡೆಸಿರುವ ಯಾವುದಾದರೂ ಬಿಜೆಪಿ ಸಚಿವನ ಹೆಸರನ್ನು ಹೇಳಿ. ಅಥವಾ ಪಕ್ಷದ ಮಹಾನ್‌ ಮಿತ್ರರಾಗಿರುವ ಉದ್ಯಮಿಗಳನ್ನು ಇ ಡಿಯಾಗಲೀ ಅಥವಾ ಸಿಬಿಐ ಆಗಲೀ ಮುಟ್ಟಿದ್ದಿದೆಯೇ?  

ಈ ಮಾಹಿತಿಯೇ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಖುದ್ದು ವಿವರಿಸುತ್ತದೆ. 2014ರ ಹಿಂದೆಯೂ ಇದು ನಡೆದಿತ್ತು- ಆದರೆ ಕಡಿಮೆ ಪ್ರಮಾಣದಲ್ಲಿ.

ಯಾವುದೇ ಸರ್ಕಾರಗಳು ವ್ಯವಸ್ಥೆಯನ್ನು ಬಳಸಿಕೊಂಡಿಲ್ಲ ಎಂದು ಕ್ಲೀನ್‌ಚಿಟ್‌ ನೀಡಲು ಆಗದು. (ಆದರೆ) ಇದು ಅನ್ಯಾಯದ ಸುನಾಮಿಯಂತಾಗುತ್ತಿದೆ. ಸರ್ಕಾರದ ವಿರುದ್ಧ ಮಾತನಾಡುವ ವಿದ್ಯಾರ್ಥಿಗಳು, ಶಿಕ್ಷಕರು, ಕಲಾವಿದರು, ಪತ್ರಕರ್ತರು, ವಕೀಲರನ್ನು ಗುರಿಯಾಗಿಸಿಕೊಳ್ಳಲು ಪ್ರತಿಯೊಂದು ಸರ್ಕಾರಿ ಸಂಸ್ಥೆಯನ್ನು ಬಳಸಿಕೊಳ್ಳಲಾಗುತ್ತಿದೆ. ಈ ದೇಶ ಎತ್ತ ಸಾಗುತ್ತಿದೆ? ಹೀಗೆಯೇ ಮುಂದುವರಿದರೆ ಸ್ವಾತಂತ್ರ್ಯ ಉಳಿಯುವುದು ಹೇಗೆ?

Q

ಇತ್ತೀಚೆಗೆ, ನ್ಯಾ. ರೋಹಿಂಟನ್ ನಾರಿಮನ್ ತಮ್ಮ ಭಾಷಣದಲ್ಲಿ, "ನನ್ನ ಸ್ನೇಹಿತ ಅರುಣ್ ಜೇಟ್ಲಿ, ಅವರು ಯಾವಾಗಲೂ ವಾಕ್ ಸ್ವಾತಂತ್ರ್ಯದ ಪರ ನಿಲ್ಲುತ್ತಿದ್ದರು" ಎಂದಿದ್ದರು. ಬಿಬಿಸಿ ಸಾಕ್ಷ್ಯಚಿತ್ರವನ್ನು ನಿಷೇಧಿಸುವ ಸಂದರ್ಭದಲ್ಲಿ. ಈ ಮಾತಿನ ಬಗ್ಗೆ ನೀವು ಏನು ಹೇಳುತ್ತೀರಿ?

A

ನ್ಯಾ. ರೋಹಿಂಟನ್‌ ಅವರ ಮಾತುಗಳೇ ನನ್ನವೂ ಕೂಡ.  ಅವರು ಈ ನ್ಯಾಯಾಲಯ ಸೃಜಿಸಿದ ಅತ್ಯುತ್ತಮ ನ್ಯಾಯಮೂರ್ತಿಗಳಲ್ಲಿ ಒಬ್ಬರು. ವಾಸ್ತವದ ಸಂಗತಿಯೆಂದರೆ, ಈ ದೇಶದಲ್ಲಿ ಸ್ವಾತಂತ್ರ್ಯವನ್ನು ದಮನ ಮಾಡಲಾಗುತ್ತಿದ್ದು ನಮ್ಮ ಬದುಕಿನ ಪ್ರತಿಯೊಂದು ವಿಚಾರದಲ್ಲೂ ಪ್ರಾಬಲ್ಯ ಸಾಧಿಸಲು ಬಯಸುವ ಪ್ರಭುತ್ವದ ವಿರುದ್ಧ ನಾವು ಹೋರಾಡಬೇಕಾಗಿದೆ. ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದಾದರೆ, ಧರಣಿ ಮಾಡಿದ್ದಕ್ಕಾಗಿ, ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕಾಗಿ ಕಾನೂನುಬಾಹಿರ ಚಟುವಟಿಕೆಗಳತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಮಕ್ಕಳ (ವಿದ್ಯಾರ್ಥಿಗಳು, ಯುವಜನರು) ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿರುವಾಗ ಯಾವ ಸ್ವಾತಂತ್ರ್ಯ ಉಳಿದಿದೆ ಎನ್ನುತ್ತೀರಿ? ನೀವು ಯಾವ ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದ್ದೀರಿ?

ಸಂದರ್ಶನದ ವೀಡಿಯೊಕ್ಕಾಗಿ ಇಲ್ಲಿ ಕ್ಲಿಕ್ಕಿಸಿ:

Related Stories

No stories found.
Kannada Bar & Bench
kannada.barandbench.com