ಮಹಿಳಾ ಪಿಎಸ್‌ಐಗೆ ಕಪಾಳ ಮೋಕ್ಷ: ಬಿಜೆಪಿ ಶಾಸಕ ಸುರೇಶ್‌ ಗೌಡ ಪುತ್ರಿಗೆ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಮಂಜೂರು

“ಶಾಸಕ ಸುರೇಶ್‌ ಗೌಡ ಪುತ್ರಿ ಐಶ್ವರ್ಯಾ ಪತಿ ಉಪ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದಾರೆ. ಆಕೆಗೆ ಇಬ್ಬರು ಎಳೆಯ ಮಕ್ಕಳಿದ್ದು, ಸುರೇಶ್‌ ಗೌಡ & ಆಕೆ ಸಾರ್ವಜನಿಕವಾಗಿ ಬೇಷರತ್‌ ಕ್ಷಮೆ ಕೋರಿದ್ದಾರೆ” ಎಂದು ಆದೇಶದಲ್ಲಿ ದಾಖಲಿಸಿರುವ ಹೈಕೋರ್ಟ್‌.
Karnataka High Court
Karnataka High Court
Published on: 

ಮಂಡ್ಯ ಜಿಲ್ಲೆಯ ಉಕ್ಕಡ ಮಾರಮ್ಮನ ಸನ್ನಿಧಿಯಲ್ಲಿ ಕರ್ತವ್ಯನಿರತ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ ಮಾಡಿದ ಪ್ರಕರಣದಲ್ಲಿ ತುಮಕೂರು ಗ್ರಾಮಾಂತರದ ಬಿಜೆಪಿ ಶಾಸಕ ಬಿ ಸುರೇಶ್‌ ಗೌಡ ಪುತ್ರಿ ಐಶ್ವರ್ಯಾಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಐಶ್ವರ್ಯಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠವು ಸುರೇಶ್‌ ಗೌಡ ಮತ್ತು ಐಶ್ವರ್ಯಾ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಿರುವುದನ್ನು ಪರಿಗಣಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

Justice S Vishwajith Shetty
Justice S Vishwajith Shetty

“ಐಶ್ವರ್ಯಾ ಅವರು ಶಾಸಕ ಸುರೇಶ್‌ ಗೌಡ ಪುತ್ರಿಯಾಗಿದ್ದು, ಆಕೆಯ ಪತಿ ಉಪ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದಾರೆ. ಆಕೆಯ ಇಬ್ಬರು ಎಳೆಯ ಮಕ್ಕಳಿದ್ದು, ಸುರೇಶ್‌ ಗೌಡ ಮತ್ತು ಆಕೆ ಸಾರ್ವಜನಿಕವಾಗಿ ಬೇಷರತ್‌ ಕ್ಷಮೆ ಕೋರಿದ್ದಾರೆ. ಆರೋಪಿತ ಅಪರಾಧಕ್ಕೆ ಗರಿಷ್ಠ ಎರಡು ವರ್ಷ ಶಿಕ್ಷೆ ಮಾತ್ರ ಆಗಲಿರುವುದರಿಂದ ಹಾಗೂ ಆಕೆಗೆ ಯಾವುದೇ ತೆರನಾದ ಕ್ರಿಮಿನಲ್‌ ಹಿನ್ನೆಲೆ ಇಲ್ಲದೇ ಇರುವುದರಿಂದ ಮತ್ತು ತನಿಖೆ ಸಹಕರಿಸುವ ವಾಗ್ದಾನ ನೀಡಿರುವುದರಿಂದ ಜಾಮೀನು ಮಂಜೂರು ಮಾಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

ಇದನ್ನು ಆಧರಿಸಿ ₹1 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್‌, ಇಬ್ಬರ ಭದ್ರತೆ ಒದಗಿಸುವಂತೆ ಐಶ್ವರ್ಯಾಗೆ ನ್ಯಾಯಾಲಯ ನಿರ್ದೇಶಿಸಿದೆ.

ಮಂಡ್ಯ ಮಹಿಳಾ ಠಾಣೆಯಲ್ಲಿ ಪಿಎಸ್‌ಐ ಆಗಿರುವ ಸವಿತಾ ಪೊಲೀಸ್‌ ಪಾಟೀಲ್‌ ಅವರನ್ನು ಆರತಿ ಉಕ್ಕಡ ಠಾಣೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಐಶ್ವರ್ಯಾ ಜೊತೆಗೆ ಬಂದಿದ್ದ ವ್ಯಕ್ತಿಯೊಬ್ಬರು ದೇವಾಲಯದ ಗರ್ಭಗುಡಿಗೆ ನುಗ್ಗಲು ಯತ್ನಿಸಿದ್ದರು. ಇದನ್ನು ತಡೆಯಲು ಮುಂದಾದಾಗ ಐಶ್ವರ್ಯಾ ತನ್ನನ್ನು ನಿಂದಿಸಿ, ಕೆನ್ನೆಗೆ ಹೊಡೆದರು ಎಂದು ಆರೋಪಿಸಿ ದೂರು ನೀಡಿದ್ದರು. ಇದರ ಅನ್ವಯ ಐಶ್ವರ್ಯಾ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ಗಳಾದ 132, 115(2), 352 and 351(2)ರ ಅಡಿ ಪ್ರಕರಣ ದಾಖಲಿಸಲಾಗಿದೆ.

Attachment
PDF
Aishwarya Vs State of Karnataka
Preview
Kannada Bar & Bench
kannada.barandbench.com